ಕೃಷಿ ಪರಿಕರ ವಿನ್ಯಾಸ; ಶಶಿಧರ ಹವ್ಯಾಸ

7

ಕೃಷಿ ಪರಿಕರ ವಿನ್ಯಾಸ; ಶಶಿಧರ ಹವ್ಯಾಸ

Published:
Updated:

ಅಪ್ಪ ಹಾಕಿದ ಆಲದ ಮರಕ್ಕೆ ತಲೆಕೊಟ್ಟು ಬೇಸಾಯ ಮಾಡುವವರೇ ಇಂದು ಸಾಕಷ್ಟು ಮಂದಿ. ಇದರಿಂದ ಕೃಷಿಗೂ ಲಾಭವಿಲ್ಲ; ತಮ್ಮ ಜೇಬೂ ತುಂಬುವುದಿಲ್ಲ. ಈ ಕಾರಣಕ್ಕೆ ಸಾಕಷ್ಟು ಯುವ ರೈತರು ಕೃಷಿಯಲ್ಲಿ ಲಾಭ ಇಲ್ಲ ಎಂದು ಮನಗಂಡು ಇತರ ಕೆಲಸಗಳತ್ತ ಮನಸ್ಸು ಮಾಡುತ್ತಿದ್ದಾರೆ. ಕೃಷಿ ಕ್ಷೇತ್ರ ಬಿಟ್ಟು ಪಟ್ಟಣದತ್ತ ಮುಖ ಮಾಡುತ್ತಿದ್ದಾರೆ.ಆದರೆ, ಇಲ್ಲೊಬ್ಬ ರೈತ ವೈಜ್ಞಾನಿಕವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಕೃಷಿ ಪರಿಕರ ವಿನ್ಯಾಸಗೊಳಿಸಿ, ಸ್ವತಃ ಬಳಸುವ ಮೂಲಕ ಯಶಸ್ಸಿ ಹಾದಿ ತುಳಿದಿದ್ದಾರೆ.ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಹತ್ತಿರದ ಹಿರೇಜಂಬೂರು ಗ್ರಾಮದ ಕೃಷಿಕ ಶಶಿಧರ ಪಾಟೀಲ್ ರಾಸುಗಳಿಗೆ ಕಟ್ಟಿ ಬೇಸಾಯ ಮಾಡಲು ಬೇಕಾಗುವ ಕೃಷಿ ಸಾಧನಗಳನ್ನು ನಿರ್ಮಾಣ ಮಾಡಿ ವ್ಯವಸಾಯ ಮಾಡುತ್ತಿದ್ದು, ಆ ಕೃಷಿ ಸಾಧನಗಳನ್ನು ಸುತ್ತಮುತ್ತಲ ಗ್ರಾಮದ ಸಾಕಷ್ಟು ಕೃಷಿಕರು ಬಳಸುತ್ತಿದ್ದಾರೆ.8 ಎಕರೆ ಜಮೀನಿನಲ್ಲಿ 5 ಎಕರೆ ಅಡಿಕೆ ತೋಟ ಹೊಂದಿದ್ದು, ಹವಾಮಾನಕ್ಕೆ ತಕ್ಕಂತೆ ಉಳಿದ 3 ಎಕರೆಯಲ್ಲಿ ಬತ್ತ, ಮೆಕ್ಕೆಜೋಳ ಬೆಳೆಯುತ್ತಾರೆ. ಕೇವಲ ಪಿಯುವರೆಗೂ ಓದಿರುವ ಅವರು ಭೌತಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಭೌತಶಾಸ್ತ್ರ ಸಿದ್ಧಾಂತಗಳ ಬಗ್ಗೆ ತಕ್ಕಮಟ್ಟಿಗೆ ಅಧ್ಯಯನ ಮಾಡಿದ್ದಾರೆ. ಅದೇ ಸಿದ್ಧಾಂತ ಬಳಸಿಕೊಂಡು ಕೃಷಿ ಪರಿಕರಗಳಿಗೆ ಆಧುನಿಕ ಲೇಪನ ನೀಡಿದ್ದಾರೆ.ಮಾರುಕಟ್ಟೆಯಲ್ಲಿ ಟ್ರ್ಯಾಕ್ಟರ್, ಟಿಲ್ಲರ್‌ಗಳನ್ನು ಉಪಯೋಗಿಸಿಕೊಂಡು ವ್ಯವಸಾಯ ಮಾಡಲು ಯೋಗ್ಯವಾದ ಉಪಕರಣಗಳು ಲಭ್ಯವಿದೆ. ಆದರೆ, ಬಡ ರೈತ ಎತ್ತುಗಳನ್ನು ಬಳಸಿಕೊಂಡು ವಿವಿಧ ರೀತಿಯ ಹೊಲ-ಗದ್ದೆಗಳ ಕೆಲಸ ಸುಲಭವಾಗಿ ಮಾಡಲುಬೇಕಾಗುವ ಉಪಕರಣಗಳು ಲಭ್ಯವಾಗುವುತ್ತಿಲ್ಲ.ಟ್ರ್ಯಾಕ್ಟರ್, ಟಿಲ್ಲರ್ ಬಳಸಿದರೆ ಇಂಧನದ ಸಮಸ್ಯೆ, ಇಂಧನದ ವೆಚ್ಚ ಬಡ ರೈತನಿಗೆ ಭಯ ಹುಟ್ಟಿಸುತ್ತದೆ. ಇದು ಕೃಷಿ ಕುಟುಂಬಗಳ ಬದುಕು ಶೋಚನೀಯವಾಗಲು ಕಾರಣ. ಅದನ್ನು ಮನಗಂಡ ಹಿರೇಜಂಬೂರು ರೈತ ಶಶಿಧರ ರಾಸುಗಳಿಗಾಗಿ ವಿಶೇಷ ಕುಂಟಿ, ಒಪ್ಪಾರಿ ನೇಗಿಲು, ವಿ-ಆಕಾರದ ನೇಗಿಲು, ರಿಡ್ಜ್ (ಮಡಿಗಳಿಗೆ ಮಣ್ಣು ಎರಿಸುವ ಯಂತ್ರ), ಕೈಕುಂಟೆ, ಹೊಲದ ಹಾಳಿಗಳ ಬದ ಸವರುವುದಕ್ಕೆ ವಿಶೇಷ ಸಾಧನಗಳನ್ನು ಸ್ವಂತ ಕಲ್ಪನೆಯ ಆಕೃತಿ ನೀಡಿ ಸಾಮಾನ್ಯ ರೈತ ಕೂಡ ಎಂಜಿನಿಯರ್ ಆಗಬಲ್ಲ ಎನ್ನುವುದನ್ನು ಜಗತ್ತಿಗೆ ತೋರಿಸಿದ್ದಾರೆ.ಉಪಯೋಗ

ಟ್ರ್ಯಾಕ್ಟರ್ ಹಾಗೂ ಟಿಲ್ಲರ್‌ಗಳಿಗೆ ಜೋಡಿಸಿದಂತೆ ಒಂದೇ ಮಾಧ್ಯಮದಲ್ಲಿ ಜೋಡಣೆ ಮಾಡುವ ಅವಕಾಶ ಕಲ್ಪಿಸಲಾಗಿದ್ದು, ಸಾಂಪ್ರದಾಯಿಕ ಪರಿಕರಗಳಿಗಿಂತ ಖರ್ಚು ಕಡಿಮೆ. ಎಷ್ಟೇ ದೂರಬೇಕಾದರು ಕೇವಲ ಒಬ್ಬ ವ್ಯಕ್ತಿ ಕೊಂಡೊಯ್ಯ ಬಹುದು. ಆದರೆ, ಸಾಂಪ್ರದಾಯಿಕ ಸಾಧನಗಳಲ್ಲಿ ಒಂದು ಚಕ್ಕಡಿಯ ತುಂಬ ಪರಿಕರಗಳನ್ನು ತುಂಬಿ ಒಯ್ಯಬೇಕಾಗಿತ್ತು. ಆಧುನಿಕ ಉಪಕರಣ ಬಳಸುವುದರಿಂದ ಎತ್ತುಗಳಿಗೂ ಭಾರ, ಆಯಾಸ ಆಗುವುದಿಲ್ಲ. ಅಚ್ಚುಕಟ್ಟಾಗಿ ಕೆಲಸಗಳು ಸಾಗುತ್ತವೆ ಎಂದೂ ರೈತರು ಹೇಳುತ್ತಾರೆ.ಮೆಕ್ಕೆಜೋಳಕ್ಕೆ ಡ್ರಿಪ್

ಜಲ ಸಂರಕ್ಷಣೆ ಮಾಡುವ ಉದ್ದೇಶದಿಂದ ಬಳಸುವ ಹನಿನೀರಾವರಿಗೆ ಹೊಸ ಆಯಾಮ ನೀಡಿ ಮೆಕ್ಕೆಜೋಳದ ಬೆಳೆಗಳಿಗೆ ಬಳಸುತ್ತಿದ್ದು, ಅದಕ್ಕಾಗಿ ವಿನೂತನ ಪೈಪ್‌ಗಳ ವಿನ್ಯಾಸ ಮಾಡಿದ್ದಾರೆ. ಆ ರೀತಿ ನೀರು ಹಾಯಿಸುವುದರಿಂದ ಭೂಮಿ ಜೌಗು ಆಗದೇ, ಕಡಿಮೆ ನೀರಿನಲ್ಲಿ ನಾಜೂಕಾಗಿ ತೇವಾಂಶ ಕಾಪಾಡುತ್ತದೆ. ಕಾರ್ಮಿಕರಿಗೆ ನೀಡುವ ಸಂಬಳದ ಖರ್ಚು ಸಹ ಉಳಿತಾಯ ಮಾಡಬಹುದು ಎಂಬುದು ಕೃಷಿಕರ ಅಭಿಪ್ರಾಯ.ಈ ಬಗ್ಗೆ ಶಶಿಧರ ಪಾಟೀಲ್ ಮಾತನಾಡಿ, ಭೌತಶಾಸ್ತ್ರದ ಸಿದ್ಧಾಂತಗಳನ್ನು ಬಳಸಿಕೊಂಡು ಕೃಷಿ ಮಾಡಿದಾಗ ಕೆಲಸದ ವೇಗ ಹೆಚ್ಚಾಗುತ್ತದೆ. ಜತೆಗೆ ಹಣ ಕೂಡ ಉಳಿತಾಯ ಮಾಡಬಹುದು ಎನ್ನುತ್ತಾರೆ.ಈ ಕೃಷಿ ಉಪಕರಣಗಳ ಉಪಯೋಗ ಸಾಕಷ್ಟು ರೈತರು ಪಡೆದಿದ್ದು, ಸ್ವತಃ ಖರೀದಿಗೆ ಕೇಳುತ್ತಿದ್ದಾರೆ. ಆದರೆ, ವರ್ಕ್‌ಶಾಪ್ ಇಲ್ಲದ ಕಾರಣ ಸಿದ್ಧಪಡಿಸಿ ನೀಡಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸಂಪೂರ್ಣ ಸಾಧನಗಳ ನಿರ್ಮಾಣ ಮಾಡಿ, ಕೃಷಿಕರ ಉಪಯೋಗಕ್ಕೆ ನೀಡುವ ಉದ್ದೇಶ ಹೊಂದಿದ್ದಾಗಿ ಅವರು ಹೇಳುತ್ತಾರೆ.ಕೃಷಿ ಕಾರ್ಮಿಕರ ಸಮಸ್ಯೆ ಹೇರಳವಾಗಿದ್ದು, ಸರ್ಕಾರಗಳು ಎನ್‌ಆರ್‌ಇಜಿ ಅಂಥ ಕೆಲಸಗಳನ್ನು ನೆಪಮಾತ್ರಕ್ಕೆ ಮಾಡಿಸುವ ಬದಲು ಕೃಷಿ ಮಾಡುವ ರೈತರಿಗೆ ಶೇ 50ರಷ್ಟು ಸಂಬಳ ನೀಡಲು ಆದೇಶಿಸಿ ಸರ್ಕಾರ ಶೇ 50ರಷ್ಟು ವೆಚ್ಚ ಭರಿಸಿದರೆ ಆ ಕಾರ್ಮಿಕರನ್ನು ಕೃಷಿ ಚಟುವಟಿಕೆಯಲ್ಲಿ ಬಳಸಿಕೊಳ್ಳಬಹುದು. ಆದ್ದರಿಂದ, ರೈತರು ಇನ್ನೂ ಹೆಚ್ಚಿನ ವಾಣಿಜ್ಯ ಬೆಳೆ ಬೆಳೆಯಲು ಸಹಕಾರ ಆಗುತ್ತದೆ. ಕೃಷಿ ಕಾರ್ಮಿಕರಿಗೂ ಹೆಚ್ಚಿನ ವೇತನ ದೊರಕುವ ಜತೆಗೆ ಭಾರತೀಯ ಕೃಷಿ ಜೀವಂತವಾಗಿ ಉಳಿಯುತ್ತದೆ. ಹಾಗಾಗದೇ ಇದ್ದಲ್ಲಿ ವ್ಯವಸಾಯ ಅವನತಿ ಅಂಚಿಗೆ ಸಾಗುತ್ತದೆ ಎಂದು ಅನಿಸಿಕೆ ಹಂಚಿಕೊಂಡರು. (ಮೊಬೈಲ್: 93436 50447) 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry