ಕೃಷಿ ಬಜೆಟ್: ಸಿ.ಎಂ.ಗೆ ಬೆಳ್ಳಿ ನೇಗಿಲು

7

ಕೃಷಿ ಬಜೆಟ್: ಸಿ.ಎಂ.ಗೆ ಬೆಳ್ಳಿ ನೇಗಿಲು

Published:
Updated:

ಹಾವೇರಿ: ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕೃಷಿ ಬಜೆಟ್ ಮಂಡನೆ ಮಾಡಿದ ಹಾಗೂ ಜಿಲ್ಲೆಯ ಶಿಗ್ಗಾಂವಿಯಲ್ಲಿ ಜಾನಪದ ವಿವಿ ಸ್ಥಾಪಿಸುವ ನಿರ್ಧಾರ ಪ್ರಕಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶನಿವಾರ ರಾಜ್ಯದ ರೈತರ ಪರವಾಗಿ ಬೆಳ್ಳಿಯ ನೇಗಿಲು ನೀಡಿ ಸನ್ಮಾನಿಸಲಾಯಿತು.ತಾಲ್ಲೂಕಿನ ನವಮಣ್ಣೂರು ಗ್ರಾಮದಲ್ಲಿ ಶನಿವಾರ ನಡೆದ ಪ್ರವಾಹ ಸಂತ್ರಸ್ತ ಫಲಾನುಭವಿಗಳಿಗೆ ಮನೆಗಳ ಹಸ್ತಾಂತರ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಹಸಿರು ಶಾಲು ಹೊದಿಸಿ, ಕೆಂಪು ರುಮಾಲು ಸುತ್ತಿ ಫಲಪುಷ್ಪದೊಂದಿಗೆ ಸುಮಾರು ಆರು ಕೆಜಿ ತೂಕದ ಬೆಳ್ಳಿಯ ನೇಗಿಲನ್ನು ಕಾಣಿಕೆಯಾಗಿ ನೀಡಿದರು.ಈ ಸಂದರ್ಭದಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ರಾಜ್ಯದ ರೈತರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಮುಖ್ಯಮಂತ್ರಿಗಳು ಕೃಷಿ ಬಜೆಟ್ ಮಂಡನೆ ಮಾಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಹಾವೇರಿ ಜಿಲ್ಲೆಗೆ ಮುಖ್ಯಮಂತ್ರಿಗಳು ಜಾನಪದ ವಿವಿ ನೀಡುವ ಮೂಲಕ ದಾರ್ಶನಿಕರ ನಾಡಿನ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಹೇಳಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನಾಡಿನ ರೈತ ಬೇರೆಯವರ ಬಳಿ ಕೈಚಾಚದೇ ಸ್ವಾವಲಂಬಿಯಾಗಿ ಜೀವನ ಸಾಗಿಸುವಂತಾಗಬೇಕು ಎಂಬುದೇ ಈ ಕೃಷಿ ಬಜೆಟ್ ಉದ್ದೇಶ ಎಂದರು.ಸಚಿವ ಸಿ.ಎಂ. ಉದಾಸಿ, ಶಾಸಕ ನೆಹರೂ ಓಲೇಕಾರ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಟಾಟಾ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ನೆರೂರ್ಕರ ಮತ್ತಿತರರು ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry