ಗುರುವಾರ , ಮೇ 13, 2021
18 °C

ಕೃಷಿ ಭೂಮಿ: ರೈತರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ : ಜಿಲ್ಲೆಯ ಅರ್ಚಕರಹಳ್ಳಿಯಲ್ಲಿ ಉದ್ದೇಶಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಫಲವತ್ತಾದ ಕೃಷಿ ಭೂಮಿಯನ್ನು ಕಡಿಮೆ ಪರಿಹಾರದ ಮೊತ್ತಕ್ಕೆ ನೀಡಲು ಹಿಂದೇಟು ಹಾಕಿರುವ ಗ್ರಾಮದ ಹಲವಾರು ರೈತರು, ಗದಗ ಜಿಲ್ಲೆಯ ಮಾದರಿಯಲ್ಲಿ ಹೋರಾಟ ನಡೆಸಿ ಭೂಮಿ ಉಳಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.`ಜೀವ ಬೇಕಾದರು ಕೊಟ್ಟೇವು ಕಡಿಮೆ ಪರಿಹಾರದ ಮೊತ್ತಕ್ಕೆ ಭೂಮಿ ಕೊಡೆವು~ ಎಂಬ ನಿರ್ಧಾರಕ್ಕೆ ಬಂದಿರುವ ಗ್ರಾಮದ ರೈತರು ರಾಜ್ಯ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ.`ರಾಗಿ, ಮುಸುಕಿನ ಜೋಳ, ಹುರುಳಿ, ತರಕಾರಿ ಬೆಳೆಗಳನ್ನು ಸಮೃದ್ಧಿಯಾಗಿ ಬೆಳೆಯುವ ಫಲವತ್ತಾದ ಕೃಷಿ ಭೂಮಿಯ ಮೇಲೆ ಸರ್ಕಾರದ ವಕ್ರದೃಷ್ಟಿ ಬೀರಿರುವ ಕಾರಣ ಜೀವನ್ಮರಣ ಹೋರಾಟ ಅನಿವಾರ್ಯವಾಗಿದೆ~ ಎಂದು ಗ್ರಾಮದ ಮುಖಂಡರಾದ ಹೊನ್ನಯ್ಯ ಮತ್ತು ಸೋಮಶೇಖರ್ `ಪ್ರಜಾವಾಣಿ~ಗೆ ತಿಳಿಸಿದರು.ಗದಗದಿಂದ `ಪೋಸ್ಕೊ~ ಕಂಪೆನಿಯನ್ನು ತೊಲಗಿಸಲು ಅಲ್ಲಿನ ರೈತರು ನಡೆಸಿದ ಮಾದರಿಯಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ರೂಪರೇಷೆ ರಚಿಸುವ ಸಲುವಾಗಿ ಬುಧವಾರ ಗ್ರಾಮದ ರೈತರು ಮತ್ತು ಪ್ರಾಂತ ರೈತ ಸಂಘದ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗಿದ್ದು, ಮೂರು- ನಾಲ್ಕು ದಿನದಲ್ಲಿ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.`ಸರ್ಕಾರಿ ಜಮೀನಿನ ನಮ್ಮ ಮೇಲೇಕೆ ಕಣ್ಣು~: ಅರ್ಚಕರಹಳ್ಳಿಗೆ ಹೊಂದಿಕೊಂಡಂತೆ ಇರುವ ದೊಡ್ಡಮಣ್ಣುಗುಡ್ಡೆ ಪ್ರದೇಶದಲ್ಲಿ ಲಭ್ಯವಿರುವ 2,500 ಎಕರೆ ಜಮೀನಿನಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ 1,000 ಎಕರೆ ಪ್ರದೇಶವನ್ನು `ಗಾಂಧಿ ಸಿಟಿ ಫಾರ್ ಅಡ್ವಾನ್ಸ್‌ಡ್ ಆರ್ ಅಂಡ್ ಡಿ ಲಿಮಿಟೆಡ್~ಗೆ ವಹಿಸಿದ್ದರು. ಆದರೆ ನಂತರ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು 2008ರ ಆಗಸ್ಟ್ 28ರಂದು ಆ ಕಂಪೆನಿಗೆ ಈ 1000 ಎಕರೆ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳಿಸಲು ಸೂಚಿಸಿ ಆದೇಶಿಸಿದ್ದರು.ಪ್ರಸ್ತುತ ಈ ಜಾಗ ಸರ್ಕಾರದ ವಶದಲ್ಲಿಯೇ ಇರುವುದರಿಂದ ಅಲ್ಲಿಯೇ ಸುಸಜ್ಜಿತವಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪಿಸಬಹುದು. ಆದರೆ ಸರ್ಕಾರಕ್ಕೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಫಲವತ್ತಾದ ಕೃಷಿ ಭೂಮಿಯೇ ಬೇಕಾಗಿರುವುದು ವಿಪರ್ಯಾಸವೇ ಸರಿ ಎಂದು ಅವರು ಅಳಲು ತೋಡಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.