ಕೃಷಿ ಮಂಥನ ,

7

ಕೃಷಿ ಮಂಥನ ,

Published:
Updated:

ಪ್ರಶ್ನೆ: ನನ್ನ ನಾಲ್ಕು ಎಕರೆ ಜಮೀನಿನಲ್ಲಿ ಕುಸುಬೆಯಿಂದ ಒಳ್ಳೆ ಇಳುವರಿ ಬಂದಿದೆ. ಇದರ ಎಣ್ಣೆ ತೆಗೆದ ನಂತರ ಹಿಂಡಿಯನ್ನು ರಾಸುಗಳಿಗೆ ಹಾಕಬಹುದೇ? ಇದರಿಂದ ಪ್ರಯೋಜನವಿದೆಯೇ? ಸಿದ್ದರಾಮೇಶ್ವರ ಬಸವನ ಬಾಗೇವಾಡಿ 

 
ಉತ್ತರ: ಕುಸುಬೆ ಉತ್ತಮ ಮತ್ತು ಪ್ರಮುಖ ಎಣ್ಣೆ ಕಾಳಿನ ಬೆಳೆ. ಇದು ಔಷಧಿಯುಕ್ತವೂ ಹೌದು. ಇದರ ಹೂವಿನಿಂದ ಬಣ್ಣ ತೆಗೆದು, ಅನೇಕ ಖಾದ್ಯ ಪದಾರ್ಥಗಳಲ್ಲಿ ಮತ್ತು ಬಣ್ಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.

 

ಕುಸುಬೆಯಲ್ಲಿ ಶೇ 70ರಷ್ಟು ಲಿನೋ ಲೇಯಿಕ್ ಎಂಬ ಕೊಬ್ಬಿನ ಅಂಶ ಇದೆ. ಇದರ ಬಳಕೆಯಿಂದ ರಕ್ತದಲ್ಲಿನ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ.ಎಣ್ಣೆಯನ್ನು ತೆಗೆದು ಹಿಂಡಿ ಉಪಯೋಗಿಸುವುದರಲ್ಲಿ ಯಾವುದೇ ತೊಂದರೆ ಇಲ್ಲ. ಬೀಜದ ಮೇಲಿನ ಬಿಳಿ ಕವಚವನ್ನು ತೆಗೆಯುವುದು ಅಥವಾ ಸಿಪ್ಪೆ ಸಮೇತ ಎಣ್ಣೆಯನ್ನು ತೆಗೆಯುವುದು; ಹೀಗೆ ಎರಡು ರೀತಿ ಎಣ್ಣೆ ತೆಗೆಯಬಹುದು. ಇದರಿಂದ ಬರುವ ಹಿಂಡಿಯನ್ನು ದನಗಳಿಗೆ ಬಳಸುವುದರಲ್ಲಿ ತಪ್ಪೇನಿಲ್ಲ.ಉಳಿದ ಹಿಂಡಿಯನ್ನು ನೇರವಾಗಿ ಜಮೀನಿಗೆ ಅಥವಾ ಎರೆಗೊಬ್ಬರ, ಕಾಂಪೋಸ್ಟ್ ಗೊಬ್ಬರದಲ್ಲಿ ಬಳಸಬಹುದು. ಕುಸುಬೆಯಲ್ಲಿ ಶೇ 7.9 ರಷ್ಟು ಸಾರಜನಕ, 1.9 ರಷ್ಟು ಪೋಟ್ಯಾಷ್ ಮತ್ತು ಶೇ 2ಕ್ಕೂ ಅಧಿಕ ರಂಜಕಾಮ್ಲ ಇರುತ್ತದೆ. ಈ ಹಿಂಡಿ ಗೊಬ್ಬರ  ಭೂಮಿಯ ಭೌತಿಕ ಗುಣಕ್ಕೆ ಸಹಕಾರಿ.ಸಿಪ್ಪೆ ಬೇರ್ಪಡಿಸದೇ ಬಂದ ಹಿಂಡಿಯಲ್ಲಿ ಶೇ  20 ರಿಂದ 25 ರಷ್ಟು ಕಚ್ಚಾ ಪ್ರೋಟೀನ್ ಇರುತ್ತದೆ. ಇದು ರಾಸುಗಳಿಗೆ ನಾರಿನ ಅಂಶವನ್ನು ಒದಗಿಸಿ, ಪಚನಕ್ರಿಯೆ ಸುಧಾರಿಸುತ್ತದೆ. ಹಂದಿ, ಕೋಳಿ, ದುಡಿಯುವ ಪ್ರಾಣಿಗಳಿಗೂ ಬಳಸಬಹುದು.

 

ಮೀನು ಸಾಕಣೆಯಲ್ಲೂ ಇದು ಉಪಯುಕ್ತ. ಸಿಪ್ಪೆಯಲ್ಲಿ ಗ್ಲೂಕೋಸ್, ರೆಪಿನೋಸ್, ಸುಕ್ರೋಸ್ ಮುಂತಾದ ಸಕ್ಕರೆ ಅಂಶಗಳು ಇರುವುದರಿಂದ ಪ್ರಾಣಿಗಳ ಶರೀರ ಯಾವಾಗಲೂ ಲವಲವಿಕೆಯಿಂದ ಕೂಡಿರುತ್ತದೆ.ಹಾಲು ಕರೆಯುವ ಹಸುಗಳಿಗೆ ಒಂದು ದಿನಕ್ಕೆ ಸುಮಾರು ಕಾಲು ಕಿಲೊ ಹಿಂಡಿ ಆಹಾರದ ಜೊತೆ ಮಿಶ್ರಣ ಮಾಡಿ ಇಲ್ಲವೆ ನೇರವಾಗಿ ಕೊಡಬಹುದು. ಸಿಪ್ಪೆಯನ್ನು ಬೇರ್ಪಡಿಸಿ ಎಣ್ಣೆಯನ್ನು ತೆಗೆದರೆ ಈ ಸಿಪ್ಪೆಯನ್ನೂ ಕೂಡ ಆಹಾರವಾಗಿ ದನಗಳಿಗೆ ಬಳಸಬಹುದು.ಕೃತಕ ಬೆಣ್ಣೆ ತಯಾರಿಕೆ, ಹಸಿ ದ್ರಾಕ್ಷಿ ಒಣಗಿಸಲು, ಅಲರ್ಜಿ ನಿವಾರಣೆ, ಸಾಬೂನು ತಯಾರಿಕೆ ಮುಂತಾಗಿ ಹಲವು ರೀತಿಯಲ್ಲಿ ಇದನ್ನು ಉಪಯೋಗಿಸುತ್ತಾರೆ.

ಪ್ರಶ್ನೆ: ನನ್ನ 2 ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ ಎಲೆಗಳೆಲ್ಲ ಮುದುಡಿ, ಬಣ್ಣ ಕಳೆದುಕೊಂಡು ಹುಳುವಿಗೆ ಹಾಕಲು ಅಯೋಗ್ಯವಾಗಿವೆ. ಅಕ್ಕಪಕ್ಕದ ತೋಟಗಳಲ್ಲೂ ಹೀಗಾಗಿದೆ. ನಾವು ಇದರ ನಿವಾರಣೆಗೆ ಕಾರ್ಬನ್‌ಡೈಜಿನ್ ಸಿಂಪರಣೆ ಮಾಡಿದರೂ ಪ್ರಯೋಜನವಾಗಿಲ್ಲ. ಏನು ಮಾಡುವುದು ತಿಳಿಸಿ. ಕೆಂಪರಾಜು, ಕೆಳಗಿನ ದೊಡ್ಡಿ, ಕನಕಪುರ. 

ಉತ್ತರ:
ನೀವು ಬರೆದಿರುವ ಲಕ್ಷಣ ನೋಡಿದರೆ  ಇದು `ರೋಗ~ವಲ್ಲ. ಆದರೆ ನೀವು ರೋಗಕ್ಕೆ ಔಷಧಿಯನ್ನು ಸಿಂಪರಣೆ ಮಾಡಿದ್ದೀರಿ. 1995ರಿಂದ ರಾಜ್ಯದ ಅನೇಕ ಕಡೆ ಈ ರೀತಿಯ ತೊಂದರೆಯಾಗಿದೆ.

 

ಇದು ಎಲೆ ಸುರುಳಿ `ಕೀಟ~ದ ಹಾವಳಿ. ಈ ಕೀಟಗಳು ಸಾಮಾನ್ಯವಾಗಿ ವರ್ಷದ ಎಲ್ಲಾ ಕಾಲದಲ್ಲಿದ್ದರೂ, ಜೂನ್ ಜುಲೈ ಮತ್ತು ಬೇಸಿಗೆಯಲ್ಲಿ ಹೆಚ್ಚು ಹಾವಳಿ ಮಾಡುತ್ತವೆ. ಕೀಟದ ಮರಿ ಹಿಪ್ಪುನೇರಳೆ ಎಲೆಯ ಕುಡಿ ಭಾಗದಲ್ಲಿ ಇಲ್ಲವೆ ಎಲೆಯ ಎಳೆಗಳ ಅಂಚಿನಲ್ಲಿ ಒಂದು ರೀತಿಯ ಬಿಳಿ ದ್ರವವನ್ನು ವಿಸರ್ಜಿಸಿ, ದಾರದಂತೆ ಮಾಡುತ್ತದೆ.

 

ಇದರ ಒಳ ಭಾಗದಲ್ಲಿ ಸುರುಳಿ ಹುಳುಗಳು ಸೇರಿಕೊಂಡು ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ಇದರಿಂದ ಎಲೆಗಳು ಸುರುಳಿ ಕಟ್ಟುತ್ತವೆ.ಈ ಕೀಟಕ್ಕೆ ರೇಷ್ಮೆ ಹುಳುಗಳಿಗೆ  ಬರುವ ಗಂಟು ರೋಗ ಮತ್ತು ಸುಣ್ಣ  ಕಟ್ಟುವ ರೋಗವನ್ನು ಸೊಪ್ಪುಗಳ  ಮೂಲಕ ಹರಡುವ ಗುಣವಿದೆ. ಹೆಣ್ಣು ಚಿಟ್ಟೆ ಸುಮಾರು 100 ಮೊಟ್ಟೆಗಳನ್ನಿಡುವ ಸಾಮರ್ಥ್ಯ ಹೊಂದಿದೆ.

 

ಸಸ್ಯದ ಕುಡಿ ಭಾಗದಲ್ಲಿ ಒಂದು ಎರಡು ಮೊಟ್ಟೆಗಳನ್ನಿಡುತ್ತದೆ. ಮೂರು ನಾಲ್ಕು ದಿನಗಳಲ್ಲಿ ಮೊಟ್ಟೆಯಿಂದ ಮರಿ ಹೊರ ಬಂದು ಸುಮಾರು 15 ದಿನಗಳ ಕಾಲ ಸೊಪ್ಪನ್ನು ತಿನ್ನುತ್ತದೆ. ಅನಂತರ 8 ರಿಂದ 10 ದಿನಗಳು ಕೋಶಾವಸ್ಥೆಯಲ್ಲಿದ್ದು, ಜೀವನ ಚಕ್ರವನ್ನು ಪೂರ್ಣಗೊಳಿಸುತ್ತದೆ.ಬಾಧೆಗೆ ಒಳಗಾದ  ಸಸ್ಯದ ಕುಡಿ ಭಾಗಗಳನ್ನು ಕಿತ್ತು, ಸಾಬೂನು ದ್ರಾವಣದಲ್ಲಿ ಅದ್ದಿ ಮರಿಗಳನ್ನು ನಾಶಪಡಿಸಬೇಕು. ಇಲ್ಲವೆ ಸಸ್ಯದ ಕುಡಿ ಭಾಗ ಹಾಗೂ ಎಲೆಗಳ  ಮೇಲೆ ಚೆನ್ನಾಗಿ ಬೀಳುವಂತೆ ಸಸ್ಯ ಜನ್ಯ ಕೀಟನಾಶಕಗಳನ್ನು ಅಂದರೆ ಬೇವಿನ ಕಷಾಯ ಅಥವಾ ಬೆಳ್ಳುಳ್ಳಿ, ಮೆಣಸಿನ ಕಷಾಯ ಸಿಂಪಡಿಸಿ ನಿವಾರಿಸಬಹುದು. ಒಮ್ಮೆ ಸಿಂಪಡಿಸಿದ ನಂತರ 10 ರಿಂದ 15 ದಿನ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ನೀಡಬಾರದು.ನೀವು ರೋಗವೆಂದು ಭಾವಿಸಿ, ಶಿಲೀಂಧ್ರ ನಾಶಕ ಸಿಂಪಡಿಸಿರುತ್ತೀರಿ. ಯಾವಾಗಲೂ, ಸರಿಯಾಗಿ ತಿಳಿದು, ಸರಿಯಾದ ಕಾಲದಲ್ಲಿ, ಸರಿಯಾದ ಔಷಧಿಯನ್ನು ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗೆ ರೇಷ್ಮೆ ಕೃಷಿ ತಾಂತ್ರಿಕ ಸೇವಾ ಕೇಂದ್ರದವರನ್ನು ಸಂಪರ್ಕಿಸಿರಿ. 

ಪ್ರಶ್ನೆ: ನಾನು  ಸುಮಾರು ಎರಡು ಎಕರೆ ಪುದಿನಾ ಬೆಳೆಯಬೇಕೆಂದಿದ್ದೇನೆ. ಇದಕ್ಕೆ ಬೇಡಿಕೆ ಇದೆಯೇ, ಮಾರಾಟ ಎಲ್ಲಿ ಮಾಡಬೇಕು ತಿಳಿಸಿರಿ.

  

 ಚನ್ನಕೇಶವ  ಬಾಗೂರು, ಚನ್ನರಾಯಪಟ್ಟಣ ತಾಲ್ಲೂಕು.

ಉತ್ತರ:
  ಪುದಿನಾ ಒಂದು ಉತ್ತಮ ಬೆಳೆ. ಪುದಿನಾ ಸಸ್ಯದ ಕಂದುಗಳನ್ನು ತಂದು ಬೆಳೆಸಬಹುದು. ಇದರ ಎಲೆ ಯಾವಾಗಲೂ ಹಸಿರಾಗಿರುತ್ತದೆ. ಇದನ್ನು ಭಟ್ಟಿ ಇಳಿಸಿ, ಸುಗಂಧದ್ರವ್ಯ ತೆಗೆಯುತ್ತಾರೆ. ಹಲವಾರು ಔಷಧಿಗಳಲ್ಲಿ ಬಳಕೆ ಮಾಡುತ್ತಾರೆ. ಖಾದ್ಯ ಪದಾರ್ಥಗಳಲ್ಲಿ ಸುವಾಸನೆಗಾಗಿ ಉಪಯೋಗಿಸುತ್ತಾರೆ.ಬಾಯಾರಿಕೆ ನಿವಾರಿಸುವ ಗುಣವಿರುವುದರಿಂದ ಉತ್ತರ ಭಾರತದಲ್ಲಿ ಬೇಸಿಗೆಯಲ್ಲಿ ಪುದಿನಾ ಬೆರೆಸಿದ ನೀರನ್ನು ಹೇರಳವಾಗಿ ಉಪಯೋಗಿಸುತ್ತಾರೆ. ಶರೀರವನ್ನು ತಂಪಾಗಿಡುವ ಗುಣ ಇದಕ್ಕಿದೆ. ಪೆಪ್ಪರ್‌ಮೆಂಟ್, ಬಿಸ್ಕಿಟ್, ಚಾಕೊಲೇಟ್ ಮುಂತಾದವುಗಳಲ್ಲಿ ಪುದಿನಾ ಬಳಸುವುದುಂಟು.ಇದನ್ನು ಬೆಳೆಯಲು ಆಳವಾದ ಸಾವಯವಯುಕ್ತ ಮಣ್ಣು ಬಹಳ ಯೋಗ್ಯ. ನೀರು ಹಿಡಿದಿಟ್ಟುಕೊಳ್ಳುವ ಗುಣ ಮಣ್ಣಿಗಿರಬೇಕು. ಇದರಲ್ಲಿ ಜಪಾನೀಸ್, ಬರ್ಗಾಮಾರ್ಟ್ ಮತ್ತು ಪೆಪ್ಪರ್ ಪುದಿನಾ ಎಂಬ ತಳಿಗಳಿವೆ. ಚೆನ್ನಾಗಿ ಉಳುಮೆ ಮಾಡಿ, ಕುಂಟೆ ಹೊಡೆದು, ಸಸಿ ನೆಡುವ ಮುನ್ನ ಕಳೆಗಳನ್ನು ಸಂಪೂರ್ಣವಾಗಿ ತೆಗೆಯಬೇಕು.ಇದನ್ನು  ವಿಶ್ವಾದ್ಯಂತ ಬಳಸುತ್ತಾರೆ. ಪ್ರತಿ ದಿನದ ಬಳಕೆಗೆ ಸಾಕಷ್ಟು ಬೇಡಿಕೆ ಇದೆ. ನೀವು ಎರಡು ಎಕರೆ ಜಮೀನಿನಲ್ಲಿ ಬೆಳೆದರೆ ಒಂದೇ  ಸಾರಿ ಮಾರುಕಟ್ಟೆ ದೊರೆಯುವುದು ಕಷ್ಟವಾಗಬಹುದು. ಆದ್ದರಿಂದ ಎರಡು ಎಕರೆಯನ್ನು ನಾಲ್ಕು ಭಾಗ ಮಾಡಿ  ಒಂದು ಭಾಗಕ್ಕೂ ಮತ್ತೊಂದು ಭಾಗಕ್ಕೂ 15 ದಿನಗಳ ಅಂತರ ಕೊಟ್ಟು ಬೆಳೆಯಿರಿ.ಸಾಮಾನ್ಯವಾಗಿ 100 ದಿನದ ವೇಳೆಗೆ ಕೆಳಗಿನ ಎಲೆಗಳು ಹಳದಿಯಾಗಲು ಬಂದಾಗ ಕೊಯ್ಲು ಪ್ರಾರಂಭಿಸಬೇಕು. ಸ್ಥಳೀಯ ಮಾರುಕಟ್ಟೆಗಿಂತ ಔಷಧಿ ತಯಾರಿಸುವ ಅನೇಕ ಕಂಪೆನಿಗಳಲ್ಲಿ ಒಪ್ಪಂದ ಮಾಡಿಕೊಂಡು ಬೆಳೆಸುವುದು ಒಳ್ಳೆಯದು.ಚೆನ್ನಾಗಿ ಬೆಳೆದ ಪುದಿನಾ ಪ್ರತಿ ಹೆಕ್ಟೇರಿಗೆ ಸುಮಾರು 50 ಸಾವಿರ ಕಿಲೊ ಸೊಪ್ಪನ್ನು ಕೊಡುತ್ತದೆ. ಒಂದು ಹೆಕ್ಟೇರಿಗೆ  ಸುಮಾರು 50 ರಿಂದ 70 ಕಿಲೊ ಎಣ್ಣೆ ಪಡೆಯಬಹುದು.ಇದರ ಬೇಸಾಯ ಸುಲಭ. ಕೀಟಗಳ ಹಾವಳಿ ಇಲ್ಲ. ಜಪಾನೀಸ್ ತಳಿ ಬೆಳೆದರೆ ತುಂಬಾ ಒಳ್ಳೆಯದು. ಮಾಹಿತಿಗೆ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry