ಕೃಷಿ ಮಂಥನ

7

ಕೃಷಿ ಮಂಥನ

Published:
Updated:

ಟಿ.ವಿ.ಪಾಟೀಲ್, ಧಾರವಾಡ

ನಮ್ಮ ಗದ್ದೆಯಲ್ಲಿ ಮಾವಿನ ಗಿಡಗಳ ನಡುವೆ ಕಬ್ಬು ಬೆಳೆಯಬೇಕೆಂದುಕೊಂಡಿದ್ದೇವೆ. ಎರಡನ್ನೂ ಒಟ್ಟಿಗೆ ಹೇಗೆ ಬೆಳೆಯಬೇಕು?

ಉ: ಕಬ್ಬಿನ ಗದ್ದೆಯಾಗಲೀ, ಭತ್ತದ ಗದ್ದೆಯಾಗಲೀ ಪೂರ್ವ ಹಾಗೂ ಪಶ್ಚಿಮಕ್ಕೆ 70 ರಿಂದ 80 ಅಡಿ ಅಂತರದಲ್ಲಿ 6-7 ಅಡಿ ಅಗಲ 4 ಅಡಿ ಎತ್ತರದ ಬದು ನಿರ್ಮಿಸಿ. ಮಾವಿನ ಗಿಡಗಳನ್ನು ಬದುಗಳಲ್ಲಿ 15 ಅಡಿಗೊಂದರಂತೆ ನೆಡಿ.

ಸಾಕಮ್ಮ,ಶಿಕಾರಿಪುರ

ನುಗ್ಗೆ ಗಿಡದ ಎಲೆಗಳು ಮಳೆ ಹೆಚ್ಚಿರುವ ಕಾರಣ ಕೆಂಪು ಬಣ್ಣಕ್ಕೆ ತಿರುತ್ತಿವೆ. ಇದಕ್ಕೆ ಏನು ಮಾಡಬೇಕು?


ಉ: ನುಗ್ಗೆ ಗಿಡಗಳು ಹೆಚ್ಚು ತೇವ ಸಹಿಸಿಕೊಳ್ಳಲಾರವು. ಬಸಿ ಕಾಲುವೆ ತೋಡಿ ನೀರು ಬಸಿದು ಹೋಗಲು ಅನುವು ಮಾಡಿಕೊಡಿ. ಸಾಧ್ಯವಿದ್ದರೆ ಗಿಡದ ಬುಡಕ್ಕೆ ಮಣ್ಣು ಏರಿಸಿರಿ.

ಐ.ಪಿ.ರವೀಂದ್ರ, ಶಿವಮೊಗ್ಗ

10 ಎಕರೆಯಲ್ಲಿ 500 ಚಿಕ್ಕು (ಸಪೋಟಾ) ಗಿಡಗಳಿವೆ. ಇಲ್ಲಿ ಮಳೆಯ ನೀರು ನಿಲ್ಲದೇ ಬಸಿದು ಹೋಗುತ್ತದೆ. ಗಿಡಕ್ಕೆ ಎಲೆಚುಕ್ಕಿ ಮತ್ತು ತೊಡಗೆ ರೋಗ ಬರುತ್ತಿದೆ. ರಾಸಾಯನಿಕ ಔಷಧ ಸಿಂಪಡನೆ ಮಾಡಿದರೂ ರೋಗ ಕಡಿಮೆ ಆಗಿಲ್ಲ. ಏನು ಮಾಡಬೇಕು?


ಉ: ನಾಲ್ಕು ಮರಕ್ಕೊಂದರಂತೆ ಬದು ನಿರ್ಮಿಸಿ. ಮಣ್ಣಿನ ಸಾವಯವ ಇಂಗಾಲದ ಅಂಶವನ್ನು ಹೆಚ್ಚಿಸಿ. ಮೇ ಕೊನೆ ವಾರದಲ್ಲಿ ಮಳೆ ಬಿಡುವು ಕೊಟ್ಟರೆ ಜುಲೈಯಲ್ಲೊಮ್ಮೆ, ಸೆಪ್ಟೆಂಬರ್‌ನಲ್ಲೊಮ್ಮೆ ಬೋರ್ಡೊ ದ್ರಾವಣ ಸಿಂಪಡಿಸಿ.

ತಿಮ್ಮೇಗೌಡ, ಗುಬ್ಬಿ- ತುಮಕೂರು

ತೊಗರಿ ಗಿಡ ಹಾಕಿದ್ದೇವೆ. ಅದು ಚೆನ್ನಾಗಿ ಬೆಳೆದಿದೆ. ಅದರ ತುದಿಯನ್ನು ತುಂಡರಿಸಿದರೆ ಗಿಡ ಚೆನ್ನಾಗಿ ಬೆಳೆಯುತ್ತದೆ ಎನ್ನುತ್ತಾರೆ. ಇದು ನಿಜವೇ?


ಉ: ತೊಗರಿ ಗಿಡದ ತುದಿಗಳನ್ನು ಅರ್ಧ ಸೆಂ.ಮೀ. ನಷ್ಟು ಪ್ರತಿ 15 ದಿನಕ್ಕೊಮ್ಮೆ ಚಿವುಟಿದರೆ ಒಂದು ಗಿಡದಲ್ಲಿ 150 ರಿಂದ 250 ಕವಲನ್ನು ಪಡೆದು ತೊಗರಿ ಇಳುವರಿ ಹೆಚ್ಚಿಸಿಕೊಳ್ಳಬಹುದು.

ಜನಾರ್ದನ ಕಂದಿಕೊಂಡ, ಇಳಕಲ್, ಬಾಗಲಕೋಟೆ

ನಾಟಿ ಮಾಡಿರುವ ಅಂಜೂರದ ಗಿಡಗಳಲ್ಲಿನ ಕಾಯಿಗಳು ಬಾಡಿ ಹೋಗುತ್ತಿವೆ. ಪರಿಹಾರ ಏನು?


ಉ: ಸಾಕಷ್ಟು ಸೂರ್ಯನ ಬೆಳಕು (ಬಿಸಿಲು) ದೊರೆಯುತ್ತಿದೆಯೇ ನೋಡಿ. ಒಂದು ಕಟ್ಟಿನಲ್ಲಿ 10 ಕೆ.ಜಿ. ವಿವಿಧ ಬಗೆಯ ಹಸಿರು ಸೊಪ್ಪು, 5 ಕೆ.ಜಿ. ಹಸಿ ಸಗಣಿ ಮತ್ತು ಭರ್ತಿಯಾಗುವಷ್ಟು ನೀರು ತುಂಬಿಸಿ. ಇದನ್ನು 10 ದಿನಗಳವರೆಗೆ ಹುದುಗಿಸಿ ಇಡಿ. ನಂತರ ಆ ನೀರನ್ನು ಎಲ್ಲಾ ಗಿಡಗಳಿಗೆ ನೀಡಿ. ಇದರ ನಂತರ ಪುನಃ ಅದೇ ಕಳಿತ ಸೊಪ್ಪಿಗೆ ಸಗಣಿ ನೀರು ತುಂಬಿಸಿ 10 ದಿನಗಳ ನಂತರ ಆ ನೀರನ್ನು ಕೊಡಿ. ಇದೇ ರೀತಿ ಮೂರು ಬಾರಿ ಮಾಡಿ. ನಾಲ್ಕನೆಯ ಬಾರಿ ಹೊಸ ಸೊಪ್ಪನ್ನು ಬಳಸಿ. ಇಷ್ಟು ಮಾಡಿದರೆ ನಿಮಗೆ ಯಾವ ಗೊಬ್ಬರದ ಅವಶ್ಯಕತೆಯೂ ಬೇಕಾಗದು.

ರಘು ರಾಮಾನುಜಂ

ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯಾದ ನಾನು ಹೈನುಗಾರಿಕೆಯಲ್ಲಿಯೇ ಭವಿಷ್ಯ ಕಂಡುಕೊಳ್ಳಬೇಕೆಂದುಕೊಂಡಿದ್ದೇನೆ. ದಯವಿಟ್ಟು ಸೂಕ್ತ ಮಾರ್ಗದರ್ಶನ ನೀಡಿ.


ಉ: ಸಾಕಷ್ಟು ಹಸಿರು ಮೇವು ಬೆಳೆಸಿ. ಇದರ ಜೊತೆಗೆ (ಒಂದು ಹಸುವಿಗೆ) ನಾಲ್ಕು ಚದರ ಮೀಟರ್ ಜಾಗದಲ್ಲಿ ಅಜೋಲ ಬೆಳೆಸಿ. ಹೀಗೆ ಮಾಡಿದರೆ ಅತ್ಯಂತ ಲಾಭದಾಯಕ. ನಿಮಗೆ ಈ ಬಗ್ಗೆ ಹೆಚ್ಚಿನ ತರಬೇತಿಯನ್ನು ತುಮಕೂರು ಜಿಲ್ಲೆಯ ತಿಪಟೂರಿನ `ಬೈಫ್' ಸಂಸ್ಥೆ ನೀಡಬಲ್ಲದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry