ಕೃಷಿ ಮಂಥನ

7

ಕೃಷಿ ಮಂಥನ

Published:
Updated:

ಎಂ.ಎನ್‌.ಹೆಗಡೆ, ಶಿರಸಿ

ನಮ್ಮಲ್ಲಿ ಐದು ಹಸುಗಳಿವೆ. ಇತ್ತೀಚೆಗೆ ಒಂದು ಹಸು ಆಹಾರ ತಿನ್ನದೇ ಮೈಯೆಲ್ಲ ದದ್ದರಿಸಿಕೊಂಡು ಸತ್ತು ಹೋಯಿತು. ಇದಕ್ಕೆ ಏನು ಕಾರಣ. ಮುಂದೆ ಹೀಗಾಗದಂತಿರಲು ಏನು ಮಾಡಬೇಕು.

ಉ: 400 ಕಿ.ಮೀ. ದೂರದಿಂದ ನಿಮ್ಮ ಹಸುವಿನ ಸಾವಿಗೆ ಕಾರಣ ತಿಳಿಸಲಾರೆ. ದಯವಿಟ್ಟು ಹತ್ತಿರದ ಪಶುಸಂಗೋಪನಾ ಇಲಾಖೆಯವರಿಂದ ನಿಮ್ಮ ಉಳಿದ 4 ಹಸುಗಳ ತಪಾಸಣೆ ಮಾಡಿಸಿರಿ.

ಮನೋಜ್‌ಕುಮಾರ್‌ ಎಸ್‌. ಸೂಲಗತ್ತಿ

ಕರಿಮೆಣಸಿನ ಬಳ್ಳಿಗಳು ಬೇರು ಕೊಳೆತು ಒಣಗುತ್ತಿವೆ. ಈ ವರ್ಷ ಮಳೆ ಜಾಸ್ತಿ ಬಂದಿದೆ. ಈ ರೋಗ ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಬರುತ್ತದೆ. ಇದರ ನಿಯಂತ್ರಣ ಹೇಗೆ ತಿಳಿಸಿರಿ. ನಾನು ಸಾವಯವ ಪದ್ಧತಿ ಅನುಸರಿಸುತ್ತಿದ್ದೇನೆ. ಸಾವಯವ ಪದ್ಧತಿಯ ನಿಯಂತ್ರಣ ಕ್ರಮಗಳನ್ನು ತಿಳಿಸಿ.

ಉ: ಕರಿ ಮೆಣಸಿನ ಬಳ್ಳಿಗಳಿಗೆ ಮಳೆಗಾಲದಲ್ಲಿ ಹೆಚ್ಚು ತೇವದ ಬಾಧೆ ಇಲ್ಲದಂತೆ ಎಚ್ಚರವಹಿಸಿ. 2 ತಿಂಗಳಿಗೊಮ್ಮೆ ಮಳೆಗಾಲದಲ್ಲಿ ತಪ್ಪದೆ ಬೋರ್ಡೊ ದ್ರಾವಣ ಸಿಂಪಡಿಸಿರಿ. 200 ಮಿ.ಲೀ. 8 ದಿನ ಹುದುಗಿಸಿದ ಹುಳಿ ಮೊಸರನ್ನು 4 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ.

ಮಾದೇವಪ್ಪ ರಾಜಕುಮಾರ್‌,- ಗೋಣಿಕೊಪ್ಪಲು

ನಮ್ಮ ಭಾಗದಲ್ಲಿ ಬಹಳ ಜನ ನಿಂಬೆ, ಮೂಸಂಬಿ, ಗಜನಿಂಬೆ ಬೆಳೆದಿದ್ದಾರೆ. ಇವುಗಳಿಗೆ ಒಂದು ರೀತಿ ಕಜ್ಜಿ ಕಾಣಿಸಿಕೊಂಡು ಗಿಡವೂ ಬೆಳೆಯುತ್ತಿಲ್ಲ. ಇಳುವರಿಯೂ ಕಡಿಮೆಯಾಗುತ್ತಿದೆ. ನಾವು ಒಂದೆರಡು ಬಾರಿ ಕೀಟನಾಶಕವನ್ನೂ ಸಿಂಪಡಿಸಿದೆವು. ಆದರೂ ಪ್ರಯೋಜನವಾಗಿಲ್ಲ. ಏನು ಮಾಡುವುದು ತಿಳಿಸಿ.

ಉ: ಎಲ್ಲಾ ನಿಂಬೆ ಜಾತಿ (ಸಿಟ್ರಸ್) ಬೆಳೆಗಳಿಗೂ 20 ದಿನಕ್ಕೊಮ್ಮೆ 10 ಲೀಟರ್ ಗಂಜಲದಲ್ಲಿ 100 ಗ್ರಾಂ ಮೈಲು ತುತ್ತವನ್ನು 1 ರಾತ್ರಿ ನೆನೆಸಿಟ್ಟು 50 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಿಸಿ. ಕಾಯಿ ಕಜ್ಜಿ – ಎಲೆ ಮುರುಟಿಕೊಳ್ಳುವ ಬಾಧೆ ನಿವಾರಿಸಬಹುದು.

ರಮ್ಯಾ ಜೆ.ಎಂ,- ಕೊಡಗು

ನಾನು ಸಾವಯವ ಬೇಸಾಯಗಾರ. ಅಜೋಸ್ಪೇರಿಲಂ ಎಂಬ ಗೊಬ್ಬರದ ಬಳಕೆಯನ್ನು ಏಕದಳ ಧಾನ್ಯಗಳಿಗೆ ಬಳಸಿರಿ ಎಂದು ಹೇಳುತ್ತಾರೆ. ಇದು ಹೇಗೆ ವಿವರವನ್ನು ತಿಳಿಸಿ.

ಉ: ಅಜೋಸ್ಪೆರಿಲಂ ಏಕದಳ ಧಾನ್ಯದ ಬೇರುಗಳಲ್ಲಿದ್ದುಕೊಂಡು ವಾತಾವರಣದಿಂದ ಸಾರಜನಕವನ್ನು ಹೀರಿಕೊಂಡು ಬೆಳೆಗೆ ಒದಗಿಸುವ ಸೂಕ್ಷ್ಮಾಣು. ಇದನ್ನು ಬೀಜೋಪಚಾರದಿಂದ, ಬೇರು ಅದ್ದಿ ತೆಗೆದು ನಾಟಿ ಮಾಡುವುದು.

15 ಕೆ.ಜಿ. ಚೆನ್ನಾಗಿ ಕಳಿತ ಗೊಬ್ಬರದ ಜತೆ ಬೆರೆಸಿ ತಂಪಾದ ವಾತಾವರಣದಲ್ಲಿ ಭೂಮಿಗೂ ಸೇರಿಸಬಹುದು.

ದಿನೇಶ್‌ ರಾವ್‌-, ಹುಬ್ಬಳ್ಳಿ

ನಾವು ಇತ್ತೀಚೆಗೆ ಪ್ರತಿ ವರ್ಷವೂ ಶುಂಠಿಯನ್ನು ಬೆಳೆಯುತ್ತೇವೆ. ಈಗಲೂ ಸುಮಾರು ಎರಡು ಎಕರೆ ಶುಂಠಿ ಬೆಳೆದಿದ್ದೇವೆ. ಇದರ ಎಲೆಗಳು ಉದುರಿ ಬೀಳುತ್ತಿವೆ. ಏನು ಮಾಡುವುದು ತಿಳಿಸಿ.

ಉ: ಈಗ ಶುಂಠಿ ಬೆಳೆಯುವ ಹಂತ ಮುಗಿದು ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬೀಳುವ ಕಾಲ. ಒಂದು ವೇಳೆ ಶುಂಠಿ ಬೆಳೆ 5–6 ತಿಂಗಳ ವಯಸ್ಸಿಗೆ ಮೊದಲೇ ಈ ತೊಂದರೆಯಿದ್ದರೆ ರೋಗವಿರಬಹುದು. ರೋಗ ನಾಶಕ ಬಳಸಿರಿ.

ಪಾಟಲಿಪುತ್ರಪ್ಪ-, ತಲಕಾಡು

ನಾನು ಅರ್ಧ ಎಕರೆಯಲ್ಲಿ ಏಲಕ್ಕಿ ಬೆಳೆದಿದ್ದೇನೆ. ಇನ್ನೂ ಒಂದೂವರೆ ಎಕರೆಯಲ್ಲಿ ಬೆಳೆಯಬೇಕೆಂದಿದ್ದೇನೆ. ಸಸಿಗಳನ್ನು ಬೆಳೆಸಿಕೊಳ್ಳುವ ವಿಧಾನ ತಿಳಿಸಿರಿ.

ಉ: ಏಲಕ್ಕಿಯನ್ನು ನೀವು ಬೆಳೆಸಿ ಸಸಿ ಮಾಡುವುದಕ್ಕಿಂತ ಏಲಕ್ಕಿ ಮಂಡಳಿ (ಸ್ಪೈಸ್‌) ಅವರಿಂದ ಉತ್ತಮವಾದ ಸಸಿ ತರುವುದು ವಾಸಿ.

ಮನೋಜ್‌ ಕುಮಾರ್,- ಮಂಗಳೂರು

ನುಗ್ಗೆ ಬೆಳೆಗೆ ಮಿಶ್ರ ಬೆಳೆಯಾಗಿ ಲವಂಗ ಬೆಳೆಯಬಹುದೇ?

ನುಗ್ಗೆ ಗಿಡದ ನೆರಳಲ್ಲಿ ಲವಂಗ ಮಿಶ್ರ ಬೆಳೆಯಾಗಿ ಬೆಳೆಯಬಹುದು. ನುಗ್ಗೆ ಗಿಡ ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಬೇಸಿಗೆಯಲ್ಲಿ 15 ದಿನಕ್ಕೊಮ್ಮೆ ನೀರು ಕೊಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry