ಕೃಷಿ ಮಂಥನ

ಮಂಗಳವಾರ, ಜೂಲೈ 23, 2019
24 °C

ಕೃಷಿ ಮಂಥನ

Published:
Updated:

ಪ್ರಶ್ನೆ:ಸಕಲೇಶಪುರ ತಾಲ್ಲೂಕಿನ ವನಗೂರು ಬಳಿ ನಮ್ಮ ಭೂಮಿ ಇದೆ. ಅದು ಕಾಡು ಪ್ರದೇಶ. ಅಲ್ಲಿ ಹೆಚ್ಚು ಮಳೆ ಬೀಳುತ್ತದೆ. ಅಲ್ಲಿ ರಬ್ಬರ್ ಬೆಳೆಯುವುದೇ?

ಜಿ.ಕೆ. ಚಿನ್ನಸ್ವಾಮಿ ವನಗೂರು, ಸಕಲೇಶಪುರ ತಾಲ್ಲೂಕುಉತ್ತರ:
  ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ರಬ್ಬರ್ ಚೆನ್ನಾಗಿ ಬೆಳೆಯುತ್ತದೆ. ಆದ್ದರಿಂದ ನೀವು ಬೆಳೆಯಬಹುದು. ರಬ್ಬರ್ ಬೆಳೆಯಬೇಕಾದರೆ ಸ್ವಲ್ಪ ಕಾಡು ಕಡಿದು ಗಿಡಗಳ ಮೇಲೆ ಬೀಸಿಲು ಬೀಳುವಂತೆ ಮಾಡಬೇಕು.

 

ಸಾಧ್ಯವಾದ ಕಡೆಗಳಲ್ಲಿ ಭೂಮಿ ಸಮತಟ್ಟು ಮಾಡಿ. 20ಗಿ20 ಅಡಿ ಅಂತರದಲ್ಲಿ ಸುಮಾರು ಎರಡೂವರೆ ಅಡಿ ಚೌಕಾಕಾರ ಅಳತೆ ಗುಂಡಿ ತೆಗೆಯಿರಿ. ಈ ಗುಂಡಿಗಳಿಗೆ ಕೊಟ್ಟಿಗೆ ಗೊಬ್ಬರ, ಹೊಸ ಮಣ್ಣು ಹಾಕಿ. ಜೂನ್ ತಿಂಗಳಲ್ಲಿ ನಿಮಗೆ ಬೇಕಾದ ತಳಿಯನ್ನು ಆಯ್ಕೆ ಮಾಡಿ ನಾಟಿ ಮಾಡಿ. ಆರ್‌ಆರ್‌ಐಐ-105 ಮತ್ತು ಜಿಟಿ-1 ಕಸಿ ಕಟ್ಟಿದ ರಬ್ಬರ್ ಸಸಿಗಳು ತುಂಬ ಉತ್ತಮವಾಗಿ ಬೆಳೆಯುತ್ತವೆ.ಒಂದು ಎಕರೆಗೆ ಸುಮಾರು 200 ಗಿಡಗಳನ್ನು ನಾಟಿ ಮಾಡಬಹುದು. ಗಿಣ್ಣು ಕಟ್ಟಿದ ಸಸಿಗಳನ್ನು ನಾಟಿ ಮಾಡುವುದಾದರೆ ಅವನ್ನು ನರ್ಸರಿಯಿಂದ ತಂದ ಮೇಲೆ ಪಾಲೀಥಿನ್ ಚೀಲಗಳಲ್ಲಿ ಬೆಳೆಸಿಕೊಳ್ಳಿ.

 

ತುಂಬ ಫಲವತ್ತಾದ ಜಮೀನಾಗಿದ್ದರೆ 15ಗಿ15 ಅಡಿ ಅಂತರ ಸಾಕು. ರಬ್ಬರ್ ಮಂಡಳಿ 441, 417, 422 ಹಾಗೂ 430 ಹೆಸರಿನ ತಳಿಗಳ ಸಸಿಗಳನ್ನು ಕೊಡುತ್ತದೆ. ಸಮ ತಟ್ಟಿನ ನೆಲದ ಮೇಲೆ ಮಳೆ ನೀರು ಇಂಗುವಂತೆ ಹಿಮ್ಮುಖವಾಗಿ ಇಳಿಜಾರಿನ ಪ್ರದೇಶ ಅಗೆಯಬೇಕಾಗುತ್ತದೆ.  ರಬ್ಬರ್ ಗಿಡಗಳಿಗೆ ನೀರಾವರಿ ಕಷ್ಟ.ಆದ್ದರಿಂದ ರಬ್ಬರ್ ಗಿಡಗಳನ್ನು ನೆಟ್ಟಿರುವ ಜಾಗದಲ್ಲಿ ಮಳೆ ನೀರನ್ನು ಇಂಗಿಸಿ, ಭೂಮಿಯ ನೀರಿನ ಮಟ್ಟವನ್ನು ಹೆಚ್ಚಿಸಬೇಕಾಗುತ್ತದೆ. ರಬ್ಬರ್ ತೋಟದಲ್ಲಿ ಪ್ರಾರಂಭದ ವರ್ಷದಲ್ಲಿ ನೆಲದ ಮೇಲೆ ಸೂರ್ಯನ ಕಿರಣಗಳು ಬೀಳದಂತೆ ಹಬ್ಬುವ ಹಲಸಂದೆ ಜಾತಿಯ ಬಳ್ಳಿಗಳನ್ನು ಅಥವಾ ಬೇರೆ ಯಾವುದಾದರೂ ಬಳ್ಳಿಗಳನ್ನು ಬೆಳೆಯುವುದು ಸೂಕ್ತ.

ಪ್ರಶ್ನೆ: ಹೆಬ್ಬೇವು ಸಸಿಗಳನ್ನು ಐದು ಎಕರೆ ಜಮೀನಿನಲ್ಲಿ ನೆಡಬೇಕೆಂದು ನಿರ್ಧರಿಸಿದ್ದೇನೆ. ಯಾವ ಅಂತರದಲ್ಲಿ ನಾಟಿ ಮಾಡಬೇಕು. ಯಾವ ಗೊಬ್ಬರ ಕೊಡಬೇಕು. ಮರಗಳು ಎಷ್ಟು ವರ್ಷಗಳಲ್ಲಿ ಕಟಾವಿಗೆ ಬರುತ್ತವೆ?

ಎನ್.ಮಾರುತಿ, ಶಿವನಿ ಕೆ. ಹೊಸಹಳ್ಳಿ ರಸ್ತೆ, ಕಡೂರುಉತ್ತರ:
ಹೆಬ್ಬೇವು ಬಹಳ ಬೇಗ ಬೆಳೆಯುವ ಮರ. ಬಹಳಷ್ಟು ಜನರು ಈಗ ಹೆಬ್ಬೇವು ಮರಗಳನ್ನು ಬೆಳೆಸುತ್ತಿದ್ದಾರೆ.  ನಿಮ್ಮ ಉದ್ದೇಶಕ್ಕೆ ತಕ್ಕಷ್ಟು ಅಂತರ ಕೊಟ್ಟು ಬೆಳೆಸಬಹುದು. ಮರ ಮುಟ್ಟುಗಳಿಗಾಗಿ ಬೆಳೆಯುವುದಾದರೆ 20 ಅಡಿಗಳ ಅಂತರದಲ್ಲಿ ಬೆಳೆಯಿರಿ. ಪದೇ ಪದೇ ಕಟಾವು ಮಾಡುವುದಾದರೆ 15 ಅಡಿ ಅಂತರ ಸಾಕು. ಇದು ಬಹಳ ಬೇಗ ಬೆಳೆಯುವ ಮರಗಳಾದ್ದರಿಂದ ಬಯೋಎಲೆಕ್ಟ್ರಿಕ್ ಉತ್ಪಾದಿಸುವ ಕಂಪೆನಿಗಳು ಇವನ್ನು ಕೊಂಡುಕೊಳ್ಳುತ್ತವೆ.ಹೆಬ್ಬೇವು ಮರಗಳ ಎಲೆಗಳಿಂದ ಸಾವಯವ ಗೊಬ್ಬರ ತಯಾರಿಸಬಹುದು. ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಎನರ್ಜಿ ಪ್ಲಾಂಟೇಷನ್ ಪ್ರಾಜೆಕ್ಟ್ ಇಂಡಿಯಾ ಸಂಸ್ಥೆ ಗುಂಡ್ಲುಪೇಟೆಯಲ್ಲಿ ಮರಗಳನ್ನು ಬೆಳೆಸುತ್ತಿದೆ. ಒಪ್ಪಂದ ಕೃಷಿ ಆಧಾರದಲ್ಲೂ   ರೈತರಿಂದ ಬೆಳಸಿ ಖರೀದಿಸುತ್ತದೆ.ನೀವು ಈ ಸಂಸ್ಥೆಯನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು. ನಂಬರ್: 04575234470, ಮೊ: 094426-35592.ಹೆಬ್ಬೇವು ಮರಗಳ ಗೊಬ್ಬರ ಶ್ರೇಷ್ಠ ಸಾವಯವ ಗೊಬ್ಬರ. ದುರ್ಬಲವಾದ ಮರಗಳಿಗೆ ಮಾತ್ರ ಸ್ವಲ್ಪ ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕಾಗುತ್ತದೆ. ನೆಟ್ಟ ನಾಲ್ಕನೇ ವರ್ಷದಿಂದಲೇ ಕಟಾವ್ ಮಾಡಬಹುದು. ಇಲ್ಲವೇ ದೀರ್ಘಾವಧಿ  ಕಾಲ ಬಿಟ್ಟು ಮರ ಮುಟ್ಟುಗಳಿಗೆ ಉಪಯೋಗಿಸಬಹುದು.ಪ್ರಶ್ನೆ : ಆರು ಮಿಶ್ರ ತಳಿ ಹಸುಗಳನ್ನು ಸಾಕಿದ್ದೇವೆ. ಇದಕ್ಕೆ ಒಳ್ಳೆಯ ಆಹಾರವನ್ನು ಕೊಡುತ್ತಿದ್ದೇವೆ. ಕೆಲವರು ಕಾಕಂಬಿ ಬಿಲ್ಲೆಗಳನ್ನು ನೆಕ್ಕಲು ಕೊಡಿ ಎಂದು ಹೇಳುತ್ತಾರೆ. ಅದರಿಂದ ಏನು ಉಪಯೋಗ?

      ಜಯಮ್ಮ ,ಮೇಲೂರುಉತ್ತರ :
ಹಸುಗಳು ನೆಕ್ಕುವ ಕಾಕಂಬಿ ಬಿಲ್ಲೆಗಳನ್ನು  ಕಾಕಂಬಿಯ ಜೊತೆಗೆ ಯೂರಿಯಾ ಬೆರಸಿ ತಯಾರಿಸುತ್ತಾರೆ. ಇವು ಗುಜರಾತ್ ರಾಜ್ಯದ ಆನಂದ್‌ನ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ಅವಿಷ್ಕಾರ. ಬಿಲ್ಲೆಗಳು ಈಗ ಎಲ್ಲಾ ಹಾಲಿನ ಸಹಕಾರ ಸಂಘಗಳಲ್ಲೂ ದೊರೆಯುತ್ತವೆ. ರಾಸುಗಳಿಗೆ ಇದು ಪುಷ್ಟಿದಾಯಕ. ಬ್ಯಾಕ್ಟೇರಿಯಾಗಳಿಗೆ ಜೀರ್ಣ ಕ್ರಿಯೆಗೆ ಅವಶ್ಯಕವಾದ ಪೌಷ್ಟಿಕತೆಯನ್ನು ಈ ಬಿಲ್ಲೆಗಳು ಸರಿಯಾದ ಪ್ರಮಾಣದಲ್ಲಿ ಒದಗಿಸುತ್ತವೆ.ಹಸುಗಳು ಬಿಲ್ಲೆಯನ್ನು ನೆಕ್ಕಿದಾಗ ಅವುಗಳ ಜೀರ್ಣ ಶಕ್ತಿ ಹೆಚ್ಚಾಗಿ ತಿಂದ ಆಹಾರವನ್ನು ಬ್ಯಾಕ್ಟೇರಿಯಾಗಳು ಶಿಥಿಲಗೊಳಿಸುವುದನ್ನು ತಡೆಗಟ್ಟುತ್ತವೆ. ಇದರ ಉಪಯೋಗವೇನೆಂದರೆ ಒಣ ಮೇವು ಹಾಗೂ ಇತರೆ ಬೆಳೆಗಳ ಕಣಗಳಿಗಿಂತ ಶೇ 50 ಭಾಗಕ್ಕಿಂತ ಹೆಚ್ಚು ಪೌಷ್ಟಿಕತೆ ದೊರೆಯುತ್ತದೆ. ಅಲ್ಲದೆ ಆಹಾರದ ಸೇವನೆ ಪ್ರಮಾಣ ಹೆಚ್ಚಾಗಿ ಶರೀರದ ಬೆಳವಣಿಗೆ ಹೆಚ್ಚಾಗುತ್ತದೆ.ಇದರಿಂದ ಹಾಲು ಉತ್ಪಾದನೆ ಹೆಚ್ಚಾಗುತ್ತದೆ. ಮೇವಿಗೆ ನಾವು ಕೊಡಬೇಕಾದ ಹಣದಲ್ಲಿ ಉಳಿತಾಯವಾಗುತ್ತದೆ. ಈ ಬಿಲ್ಲೆಯಲ್ಲಿ ಸುಣ್ಣ, ತಾಮ್ರ, ರಂಜಕ, ಸತು, ಆಯೋಡಿನ್, ಕೋಬಾಲ್ಟ್, ಮ್ಯೋಂಗನೀಸ್,ಗಂಧಕ ಮುಂತಾದ ಖನಿಜಗಳ ಅಂಶಗಳಿರುವುದರಿಂದ ನಾವು ಆಹಾರದ ಮೂಲಕ ಈ ಖನಿಜಗಳನ್ನು ಕೊಡುವುದರ ಅವಶ್ಯಕತೆ ಇರುವುದಿಲ್ಲ.ಆದ್ದರಿಂದ ಕಾಕಂಬಿ ನೆಕ್ಕುವ ಬಿಲ್ಲೆಯನ್ನು ರಾಸುಗಳು ಇಚ್ಚೆಪಟ್ಟಾಗ ನೆಕ್ಕಲು ಅನುಕೂಲವಾಗುವಂತೆ ಹತ್ತಿರದಲ್ಲಿ ಇಡಬೇಕು. ಜಿಲ್ಲಾ ಒಕ್ಕೂಟಗಳಲ್ಲಿ, ಹಾಲು ಉತ್ಪಾದನಾ ಸಹಕಾರ ಸಂಘಗಳಲ್ಲಿ ಇವನ್ನು ಕೊಳ್ಳಬಹುದು. ಬಿಲ್ಲೆಗಳ ಬೆಲೆ ಕಡಿಮೆ.ಪ್ರಶ್ನೆ: ಜೈವಿಕ ಶಿಲೀಂದ್ರ ನಾಶಕಗಳಾದ ಟ್ರೈಕೋಡರ್ಮ ಮತ್ತು ಸುಡೋಮನಾಸ್ ಬಳಕೆ ಮಾಡಿ ಎಂದು ಕೃಷಿ ತಜ್ಞರು ಹೇಳುತ್ತಾರೆ. ಇವನ್ನು ಬಳಸುವ ವಿಧಾನ ಮತ್ತು ಅದರಿಂದ ಆಗುವ ಪ್ರಯೋಜನಗಳನ್ನು ತಿಳಿಸಿ.

    ಆಂಜನಪ್ಪ, ಬಾಗಲಕೋಟೆಉತ್ತರ:
ಸಸ್ಯ ರೋಗಗಳ ನಿಯಂತ್ರಣದಲ್ಲಿ ಜೈವಿಕ ವಿಧಾನಗಳನ್ನು ಇತ್ತೀಚೆಗೆ ಹೆಚ್ಚು ಅನುಸರಿಸಲಾಗುತ್ತಿದೆ. ಇಂತಹ ಒಂದು ವಿಧಾನ ಟ್ರೈಕೋಡರ್ಮ ಮತ್ತು ಸುಡೋಮನಾಸ್ ಬಳಕೆ. ಇವುಗಳ ಬಳಕೆಯಿಂದ ಮಣ್ಣಿನಲ್ಲಿ ವಾಸಿಸುವ ಅತ್ಯಂತ ಅಪಾಯಕಾರಿ ರೋಗವನ್ನುಂಟು ಮಾಡುವ ಮತ್ತು ಮಣ್ಣಿನಿಂದ ಹರಡುವ ಬೇರು ಕೊಳೆ ರೋಗ, ಸೊರಗು ರೋಗ ಉಂಟು ಮಾಡುವ ಶಿಲೀಂದ್ರಗಳನ್ನು ನಿರ್ವಹಣೆ ಮಾಡಬಹುದು.ಮಣ್ಣಿನಲ್ಲಿ ವಾಸಿಸುವ, ಮತ್ತು ಮಣ್ಣಿನಿಂದ ಹರಡುವ ಎಲೆ ಅಂಗಮಾರಿ ರೋಗ, ದುಂಡಾಣು ಎಲೆ ಅಂಗಮಾರಿ ರೋಗ, ಹಣ್ಣು ಮತ್ತು ಕೊಳೆ ಮತ್ತು ಚಿಬ್ಬು ರೋಗ ಉಂಟು ಮಾಡುವ ಶಿಲೀಂದ್ರಗಳನ್ನು ಇವು ನಿರ್ವಹಣೆ ಮಾಡುತ್ತವೆ. ಇವುಗಳನ್ನು ಬಳಸುವುದರಿಂದ ವಾತಾವರಣದಲ್ಲಿ ಯಾವುದೇ ರೀತಿಯ ಮಾಲಿನ್ಯ ಉಂಟಾಗುವುದಿಲ್ಲ.ನಮಗೆ ಉಪಯುಕ್ತವಾದ ಜೀವಿಗಳ ಮೇಲೆ ಹಾನಿ ಇಲ್ಲ. ಬಹಳ ಕಡಿಮೆ ಖರ್ಚಿನಲ್ಲಿ ರೋಗ ನಿಯಂತ್ರಣ ಮಾಡಬಹುದು. ಮಣ್ಣಿನಲ್ಲಿ ಸಾವಯವ ಪದಾರ್ಥ ಮತ್ತು ತೇವಾಂಶ ಇದ್ದಲ್ಲಿ ಇವು ತಾವಾಗಿಯೇ ಅಭಿವೃದ್ಧಿ ಹೊಂದುತ್ತವೆ. ಟ್ರೈಕೋಡರ್ಮ ಶಿಲೀಂದ್ರವೂ ಬೆಳೆಗಳ ಬೇರುಗಳ ಸಮೀಪದಲ್ಲಿ ಬೆಳೆದು, ಬೇರಿನ ಸುತ್ತಲೂ ಕವಚವನ್ನು ನಿರ್ಮಿಸಿ, ಹಾನಿಕಾರಕ ಶಿಲೀಂದ್ರಗಳಿಂದ ಬೇರನ್ನು ರಕ್ಷಿಸುತ್ತದೆ.ಈ ಹಾನಿಕಾರಕ ಶಿಲೀಂದ್ರಗಳ ಸಂಖ್ಯೆ ಮತ್ತು ಅವುಗಳ ಸಂತಾನೋತ್ಪತ್ತಿಯನ್ನು ಕಡಿಮೆ ಮಾಡುತ್ತದೆ. ಇದನ್ನು ಉಪಯೋಗಿಸುವ ವಿಧಾನ ಹೇಗೆಂದರೆ ಒಂದು ಕಿಲೋ ಗ್ರಾಂ ಟ್ರೈಕೋಡರ್ಮ ಮತ್ತು ಸುಡೋಮನಾಸ್‌ಅನ್ನು ಚೆನ್ನಾಗಿ ಕಳಿತ ಒಂದು ಟನ್ ಕೊಟ್ಟಿಗೆ ಗೊಬ್ಬರದೊಂದಿಗೆ ಬೆರೆಸಿ ಬಳಸಬಹುದು.ಕಳಿತ ಗೊಬ್ಬರ ಹಾಗೂ ಜಿಪ್ಸಂ ಜೊತೆ ಬೆರೆಸಿ ತೋಟದ ಬೆಳೆಗಳಿಗೆ ಕೊಡಬಹುದು. ಇತರೆ ಜೈವಿಕ ಗೊಬ್ಬರಗಳಾದ ರೈಜೋಬಿಯಂ, ಅಜೋಸ್ಪೆರಿಲಂ, ಅಜೆಟೋಬ್ಯಾಕ್ಟರ್ ಹಾಗೂ ರಂಜಕ ಕರಗಿಸುವ ಬ್ಯಾಕ್ಟೇರಿಯಗಳ ಜೊತೆಗೆ ಬೆರೆಸಬಹುದು.ಬೀಜೋಪಚಾರ ಮಾಡುವಾಗ ಒಂದು ಕಿಲೋಗ್ರಾಂ ಬೀಜಕ್ಕೆ ನಾಲ್ಕರಿಂದ ಹತ್ತು ಗ್ರಾಂನಂತೆ ಬೆರೆಸಿ ಬೀಜೋಪಚಾರ ಮಾಡಬೇಕು. ಒಂದು ಲೀಟರ್ ನೀರಿಗೆ ಹತ್ತು ಗ್ರಾಂನಷ್ಟು ಬೆರೆಸಿ ದ್ರಾವಣ ಮಾಡಿಕೊಂಡು ಸಸಿಗಳ ಬೇರುಗಳನ್ನು, ಆಲೂಗೆಡ್ಡೆ ಬೀಜಗಳನ್ನು, ಕಬ್ಬಿನ ತುಂಡುಗಳನ್ನು ಅದರಲ್ಲಿ ಅದ್ದಿ ನಾಟಿ ಮಾಡಬಹುದು.                  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry