`ಕೃಷಿ ಮರೆತರೆ ಸರ್ಕಾರಕ್ಕೆ ಉಳಿವಿಲ್ಲ'

7

`ಕೃಷಿ ಮರೆತರೆ ಸರ್ಕಾರಕ್ಕೆ ಉಳಿವಿಲ್ಲ'

Published:
Updated:
`ಕೃಷಿ ಮರೆತರೆ ಸರ್ಕಾರಕ್ಕೆ ಉಳಿವಿಲ್ಲ'

ಬಳ್ಳಾರಿ: ರೈತರನ್ನು ಮರೆಯುವ ದೇಶದಲ್ಲಿ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ಕೃಷಿಯನ್ನು ಕಡೆಗಣಿಸುವ ಸರ್ಕಾರಗಳಿಗೂ ಉಳಿಗಾಲವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಭಿಪ್ರಾಯಪಟ್ಟರು.ನಗರದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜೆಡಿಎಸ್‌ನ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಎರಡು ಅವಧಿಯಿಂದ ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾಗಿರುವ ಡಾ. ಮನಮೋಹನ್ ಸಿಂಗ್, ಆರೂವರೆ ವರ್ಷ ಆಡಳಿತ ನಡೆಸಿದ ಎನ್‌ಡಿಎ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಕೃಷಿ ಕ್ಷೇತ್ರವನ್ನು ಕಡೆಗಣಿಸಿದರು ಎಂದು ಅವರು ದೂರಿದರು.ಶ್ರೀಮಂತ ಉದ್ಯಮಿಗಳಿಗೆ ಸಾಲ ನೀಡಿ ದಿವಾಳಿಯಾಗಿರುವ ಅನೇಕ ಬ್ಯಾಂಕ್‌ಗಳ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ 5.5 ಲಕ್ಷ ಕೋಟಿ ನೆರವು ಘೋಷಿಸಿತು. ಆದರೆ, ಸಂಕಷ್ಟದಲ್ಲಿರುವ ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿಸಿ ಚುನಾವಣೆಯಲ್ಲಿ ಮತ ಗಳಿಸಲು ಹವಣಿಸಿತು ಎಂದು ಟೀಕಿಸಿದ ಅವರು, `ನಮಗೆ ಬಡ್ಡಿರಹಿತ ಕೃಷಿ ಸಾಲ ನೀಡಿ. ನಾವು ದೇಶಕ್ಕೆ ಅನ್ನ ನೀಡುತ್ತೇವೆ' ಎಂದು ಕೋರುವ ರೈತರ ಬೇಡಿಕೆಗೆ ಬೆಲೆಯೇ ಇಲ್ಲವೆಂಬಂತೆ ವರ್ತಿಸುವ ಮುಖಂಡರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.`ನನ್ನದೇ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದ ಎಂ.ಚಿದಂಬರಂ,  ವಾಜಪೇಯಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ ಹಾಗೂ ಹಣಕಾಸು ತಜ್ಞರಾಗಿರುವ ಪ್ರಧಾನಿ ಡಾ.ಸಿಂಗ್ ಅವರಿಗೂ ರೈತರ 24 ಬೇಡಿಕೆಗಳನ್ನು ಒಳಗೊಂಡ ವಿಶೇಷ ಮನವಿ ಸಲ್ಲಿಸಿದ್ದೆ. ಆದರೆ, ಅವುಗಳನ್ನು ಅವರು ಕಡೆಗಣಿಸಿದರು. ಕೃಷಿ ಕ್ಷೇತ್ರ ಶೇ 4ರಷ್ಟೂ ಅಭಿವೃದ್ಧಿ ಸಾಧಿಸದೆ ಹಿಂದುಳಿಯಲು ಈ ಸರ್ಕಾರಗಳ ಧೋರಣೆಯೇ ಕಾರಣ ಎಂದು ಅವರು ಮೂದಲಿಸಿದರು.ಕೃಷಿ ಸಾಲ, ವಿದ್ಯುತ್, ಗೊಬ್ಬರ, ಬೀಜ, ನೀರನ್ನು ಸಕಾಲಕ್ಕೆ ಪೂರೈಸಿದರೆ ರೈತರು ದೇಶಕ್ಕೆ ಅನ್ನ ನೀಡುತ್ತಾರೆ. ಆದರೆ, ಅವರ ಅಲ್ಪ ಪ್ರಮಾಣದ ಸಾಲ ಮನ್ನಾ ಮಾಡಿ ಭಾರಿ ಸಹಾಯ ಮಾಡಿದ್ದಾಗಿ ಪ್ರಚಾರ ಪಡೆಯುವ ಸರ್ಕಾರಗಳಿಂದ ಭಾರಿ ನಿರೀಕ್ಷೆ ಇಟ್ಟುಕೊಳ್ಳುವುದೇ ತಪ್ಪು ಎಂದು ಅವರು ಹೇಳಿದರು.`ಶತ್ರುಗಳು ಬೇರೆಲ್ಲೂ ಇಲ್ಲ. ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ನಿರುದ್ಯೋಗ, ಭ್ರಷ್ಟಾಚಾರವೇ ನಮ್ಮ ದೊಡ್ಡ ಶತ್ರು. ಕೋಟಿಗಟ್ಟಲೆ ಲಂಚವನ್ನು ಚೆಕ್ ಮೂಲಕ ಸ್ವೀಕರಿಸುವವರು ನಮ್ಮನ್ನು ಆಳುವ ರಾಜಕಾರಣಿಗಳಾಗಿದ್ದಾರೆ. ಯುವಜನತೆ ಇದೆಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುವ ಮೂಲಕ ಜಾತಿಯನ್ನು ಕಿತ್ತು ಬಿಸಾಕಬೇಕು. ಶಿಲುಬೆಗೆ ಏರಿಸಿ, ಮೈಯೆಲ್ಲ ಮೊಳೆ ಹೊಡೆದವರನ್ನೂ ಕ್ಷಮಿಸು ಎಂದು ಪ್ರಾರ್ಥಿಸಿದ ಯೇಸು ಕ್ರಿಸ್ತ, ದಯವೇ ಧರ್ಮದ ಮೂಲವಯ್ಯಾ ಎಂದು ಸಾರಿದ ಬಸವಣ್ಣ ಮತ್ತಿತರರ ಸಂದೇಶವನ್ನು ಪಾಲಿಸಬೇಕು' ಎಂದು ಅವರು ಕಿವಿಮಾತು ಹೇಳಿದರು.ಚುನಾವಣೆ ಸಂದರ್ಭ ಅಭ್ಯರ್ಥಿಗಳು ನೀಡುವ ಹಣಕ್ಕೆ ಮಣೆ ಹಾಕದೆ, ಪ್ರಾಮಾಣಿಕವಾದ ದುಡಿಮೆಗೆ ಬೆಲೆ ನೀಡಿ ಎಂದು ಅವರು ಸಲಹೆ ನೀಡಿದರು.

ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ಸೂರ್ಯನಾರಾಯಣ ರೆಡ್ಡಿ, ಮುಂಡ್ರಿಗಿ ನಾಗರಾಜ್ ಮತ್ತಿತರರು ಮಾತನಾಡಿದರು.ಮಾಜಿ ಶಾಸಕ ಕೆ.ವಿ. ರವೀಂದ್ರಬಾಬು, ಹೇಮಯ್ಯ ಸ್ವಾಮಿ, ಮುನ್ನಾಭಾಯಿ, ಮೀನಳ್ಳಿ ತಾಯಣ್ಣ, ಮೀನಳ್ಳಿ ಚಂದ್ರಶೇಖರ್, ಮೌಲಾನಾ ಅಬ್ದುಲ್ ಖುದ್ದೂಸ್, ಎಚ್.ಕೆ. ಮಲ್ಲಿಕಾರ್ಜುನ ಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಮ್ಮ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪಿ.ಭಾಸ್ಕರರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಗ್ಗಲ್ ವೀರೇಶ, ಭಾಗ್ಯಮ್ಮ ಏಕಾಂಬರೇಶ, ಬಳ್ಳೊಳ್ಳಿ ಶೇಖಣ್ಣ, ಡಾ.ಟಿ. ಸತ್ಯನಾರಾಯಣ, ಎಚ್.ಎಸ್. ರಾಕೇಶ, ಹನುಮಂತಪ್ಪ, ಮಹ್ಮದ್ ರಪಿಕ್, ನಜೀರ್ ಅಹಮದ್, ಅಲ್ಲಾ ಬಕಾಶ್, ಜಯರಾಮರೆಡ್ಡಿ, ಟಿ.ಹುಸೇನಸಾಬ್, ತೂರ್ಫು ವೆಂಕಟೇಶ, ಗೋವಿಂದ್, ಖಾದರ್‌ಸಾಬ್, ಶೇಖಮ್ಮ, ಹುಸೇನ್, ಕಿಶೋರಮ್ಮ, ಶಾರದಾ, ಶಿವಕುಮಾರಿ, ಡಾ.ರಾಜು, ಅರುಣಮ್ಮ, ಬಸವರಾಜ, ರಾಮಕ್ಕ, ರಾಮಾಂಜಿ. ವಂಡ್ರಪ್ಪ, ನಾಗಪ್ಪ, ಶೇಕ್ಷಾವಲಿ, ರುದ್ರಮುನಿ ಸ್ವಾಮಿ, ಶ್ರೀನಿವಾಸ್, ನಾಗಪ್ಪ, ವಲ್ಲಿಸಾಬ್, ಜಿ.ಟಿ. ಶಾಂತರಾಜ್, ರುದ್ರಮುನಿ, ಶ್ರೀಮಂತ, ಶರೀಫ ಮತ್ತಿತರರು ಇದೇ ಸಂದರ್ಭ ತಮ್ಮ ಅಪಾರ ಬೆಂಬಲಿಗರೊಂದಿಗೆ ಜೆಡಿಎಸ್‌ಗೆ ಸೇರ್ಪಡೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry