ಕೃಷಿ ಮಿಷನ್ ಬದಲಿಗೆ ಅಮೃತಭೂಮಿ

7

ಕೃಷಿ ಮಿಷನ್ ಬದಲಿಗೆ ಅಮೃತಭೂಮಿ

Published:
Updated:

ಬೆಂಗಳೂರು: ರಾಜ್ಯ ಸಾವಯವ ಕೃಷಿ ಮಿಷನ್ ರದ್ದಾಗಲಿದೆ. ಅದಕ್ಕೆ ಬದಲಾಗಿ ರಾಜ್ಯ ಸರ್ಕಾರ `ಅಮೃತ ಭೂಮಿ ಯೋಜನೆ~ ಎಂಬ ಹೊಸ ಹೆಸರಿನ ಸಂಸ್ಥೆ ಸೃಷ್ಟಿಸಲಿದೆ. ಇದಕ್ಕೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.ಸಾವಯವ ಕೃಷಿಗೆ ಮತ್ತಷ್ಟು ಒತ್ತು ನೀಡುವ ಉದ್ದೇಶದಿಂದ ಅದರ ವ್ಯಾಪ್ತಿಯನ್ನು ಹೆಚ್ಚಿಸಲು ಅಮೃತ ಭೂಮಿ ಯೋಜನಾ ಅನುಷ್ಠಾನ ಘಟಕ ಸ್ಥಾಪಿಸುತ್ತಿದ್ದು, ಅದಕ್ಕೆ ಮುಖ್ಯಮಂತ್ರಿಯೇ ಅಧ್ಯಕ್ಷರಾಗಿರುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಸಂಪುಟ ಸಭೆಯ ತೀರ್ಮಾನಗಳನ್ನು ವಿವರಿಸಿದರು.ಕೃಷಿ, ತೋಟಗಾರಿಕೆ, ರೇಷ್ಮೆ ಸಚಿವರು, ಸಾವಯವ ಕೃಷಿ ಮಿಷನ್‌ನ ಸದಸ್ಯರು ಮತ್ತು ನಾಲ್ಕು ಕಂದಾಯ ವಿಭಾಗಗಳ ಪ್ರಮುಖ ಸಾವಯವ ಕೃಷಿಕರು ಈ ಯೋಜನಾ ಘಟಕದ ಸದಸ್ಯರಾಗಿ ಕೆಲಸ ನಿರ್ವಹಿಸಲಿದ್ದಾರೆ. ಇದಲ್ಲದೆ, ಜಿಲ್ಲಾ ಮಟ್ಟದಲ್ಲೂ ಅನುಷ್ಠಾನ ಸಮಿತಿಗಳನ್ನು ರಚಿಸಲಾಗುವುದು ಎಂದು ವಿವರಿಸಿದರು.ಸಂಪುಟದ ಇತರ ಪ್ರಮುಖ ತೀರ್ಮಾನಗಳು:

* ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ 160 ವರ್ಷಗಳ ಹಿಂದೆ ನಿರ್ಮಿಸಿದ ಮಿರ್ಲೆ- ರಾಮಸಮುದ್ರ ಅಣೆಕಟ್ಟು ಮತ್ತು ಅದರ ನಾಲೆಗಳ ಆಧುನೀಕರಣಕ್ಕೆ ಕಾವೇರಿ ನೀರಾವರಿ ನಿಗಮಕ್ಕೆ 64 ಕೋಟಿ ರೂಪಾಯಿ ಮಂಜೂರು.* ಹಾಸನದಲ್ಲಿ ಲೋಕೋಪಯೋಗಿ ಇಲಾಖೆಯ ಜಿಲ್ಲಾ ಸಂಕೀರ್ಣದ ನಿರ್ಮಾಣ ವೆಚ್ಚವನ್ನು ರೂ 5 ಕೋಟಿಯಿಂದ 8.21 ಕೋಟಿಗೆ ಏರಿಸಲು ಒಪ್ಪಿಗೆ.* ಹಿರೇಕೆರೂರು ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ರೂ 8.73 ಕೋಟಿ ಮಂಜೂರು.* ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಒಳಚರಂಡಿಗೆ ರೂ 22 ಕೋಟಿ ಮಂಜೂರು.* ಬಾಗೇಪಲ್ಲಿ ಪಟ್ಟಣಕ್ಕೆ ಒಳಚರಂಡಿ ಕಲ್ಪಿಸುವ ರೂ 22.14 ಕೋಟಿ ಅಂದಾಜು ವೆಚ್ಚವನ್ನು 17.24 ಕೋಟಿಗೆ ಇಳಿಕೆ.* ಚಿತ್ರದುರ್ಗ ನಗರಕ್ಕೆ ರೂ 96.08 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ. ಈ ನಗರದಲ್ಲಿ 1955ರಲ್ಲಿ ನಿರ್ಮಿಸಿದ ಶೇ 25ರಷ್ಟು ಒಳಚರಂಡಿ ವ್ಯವಸ್ಥೆ ಇದ್ದು, ಅದನ್ನೂ ಸರಿಪಡಿಸಲು ಈ ಹಣ ಬಳಕೆ.* 11ನೇ ಪಂಚವಾರ್ಷಿಕ ಯೋಜನೆಯಡಿ ಪ್ರವಾಹ ನಿರ್ವಹಣೆ ಕಾರ್ಯಕ್ರಮಗಳಿಗಾಗಿ ಕೇಂದ್ರ ಸರ್ಕಾರ ಶೇ 90ರಷ್ಟು ಅನುದಾನ ನೀಡಿದೆ. ಈ ಯೋಜನೆಯಡಿ ಶಿವಮೊಗ್ಗದ ತುಂಗಾನದಿ ದಂಡೆಯಲ್ಲಿ ಪ್ರವಾಹ ನಿಯಂತ್ರಣ ಕಾಮಗಾರಿಗಳಿಗಾಗಿ ರೂ 55.18 ಕೋಟಿ ಮಂಜೂರು.ಹೊಳೆನರಸೀಪುರದ ಹೇಮಾವತಿ ದಂಡೆಯಲ್ಲಿ ರೂ 25.48 ಕೋಟಿ ಮತ್ತು ಮುಧೋಳದಲ್ಲಿ ಘಟಪ್ರಭಾ ನದಿ ದಂಡೆಯಲ್ಲಿ ರೂ 14.98 ಕೋಟಿ ವೆಚ್ಚದಲ್ಲಿ ಕಾಮಗಾರಿ ಹಮ್ಮಿಕೊಳ್ಳಲಾಗುವುದು. ಇದಕ್ಕೆ ರಾಜ್ಯ ಸರ್ಕಾರ ಕೇವಲ ಶೇ 10ರಷ್ಟು ಹಣ ನೀಡಲಿದೆ.* 1987ರ ಜೂನ್ 1ರಿಂದ 1995ರ ಮಾ. 31ರ ಅವಧಿಯಲ್ಲಿ ಆರಂಭವಾದ ಎಸ್‌ಸಿ/ಎಸ್‌ಟಿ ಆಡಳಿತ ಮಂಡಳಿಗಳ 10 ಪದವಿ ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಲು ಒಪ್ಪಿಗೆ. ಇದಕ್ಕೆ ವಾರ್ಷಿಕ 5.02 ಕೋಟಿ ಖರ್ಚಾಗಲಿದೆ.* ಯೋಜನೆಗಳ ಮೌಲ್ಯಮಾಪನ ಸಲುವಾಗಿ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿದ್ದ ಪ್ರೊ.ಎಸ್.ಮಾದೇಶ್ವರನ್ ಅವರಿಗೆ ಸರ್ಕಾರದ ಕಾರ್ಯದರ್ಶಿ ಸ್ಥಾನಮಾನ ನೀಡಲು ಸಂಪುಟ ಒಪ್ಪಿಗೆ ನೀಡಿದೆ.* ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-2ಕ್ಕೆ (ಕೆಶಿಪ್) ಸಂಬಂಧಿಸಿದಂತೆ ಯೋಜನಾ ನಿಯಂತ್ರಣ ಮಂಡಳಿ ರಚಿಸಲು ಒಪ್ಪಿಗೆ ನೀಡಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.* ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 206ರ (ತುಮಕೂರು- ಹೊನ್ನಾವರ) 212ನೇ ಕಿ.ಮೀ.ನಿಂದ 227ನೇ ಕಿ.ಮೀ.ವರೆಗಿನ 16 ಕಿ.ಮೀ. ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು, ಭೂಸ್ವಾಧೀನಕ್ಕಾಗಿ ನಿಗದಿಪಡಿಸಿದ್ದ 9.26 ಕೋಟಿ ರೂಪಾಯಿಗೆ ಬದಲಾಗಿ ರೂ 19.76 ಕೋಟಿ ಮೀಸಲಿಡಲು ಸಂಪುಟದ ಒಪ್ಪಿಗೆ. ಭೂಮಿ ಬೆಲೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಈ ಹೆಚ್ಚಳ ಮಾಡಲಾಗಿದೆ.* 2009-10ನೇ ಸಾಲಿನ ಔಷಧಿ ಖರೀದಿ ಮತ್ತು ಟೆಂಡರ್ ಪ್ರಕ್ರಿಯೆಲ್ಲಿ ಅಕ್ರಮ ನಡೆದಿದೆ ಎಂಬ ದೂರಿನ ಆಧಾರದ ಮೇಲೆ ಲೋಕಾಯುಕ್ತರು ವರದಿ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೀರಾ ಸಕ್ಸೇನಾ ನೇತೃತ್ವದ ಸಮಿತಿ ಕೂಡ ವರದಿ ನೀಡಿದ್ದು, ಅದರಲ್ಲಿ ಅಧಿಕಾರಿಗಳ ವಿರುದ್ಧ ಕ್ರಮದ ಅಗತ್ಯ ಇಲ್ಲ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಸಕ್ಸೇನಾ ಅವರ ವರದಿ ಪ್ರಕಾರ ಅಧಿಕಾರಿಗಳ ವಿರುದ್ಧ ಕ್ರಮ ಇಲ್ಲ.* ನ್ಯಾಯಾಂಗ ಸೇವಾ ನಿಯಮ- 2004ಕ್ಕೆ ತಿದ್ದುಪಡಿ ಮಾಡಿ ಜಿಲ್ಲಾ ನ್ಯಾಯಾಧೀಶರ ಹುದ್ದೆಯಲ್ಲಿ ಶೇ 10ರಷ್ಟು ಹುದ್ದೆಗಳನ್ನು ಐದು ವರ್ಷ ಸೇವೆ ಸಲ್ಲಿಸಿದ ಸಿವಿಲ್ ನ್ಯಾಯಾಧೀಶರಿಂದ ತುಂಬಲು ನಿರ್ಧಾರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry