ಕೃಷಿ ಮೇಳ: ಭರದ ಸಿದ್ಧತೆ

7

ಕೃಷಿ ಮೇಳ: ಭರದ ಸಿದ್ಧತೆ

Published:
Updated:

ಧಾರವಾಡ: ಕೃಷಿ ಮೇಳ ಆರಂಭವಾಗಲು ಇನ್ನೊಂದೇ ಬಾಕಿ ಉಳಿದಿದ್ದು, ಇಲ್ಲಿನ ಕೃಷಿ ವಿ.ವಿ. ಆವರಣದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.ಆಡಳಿತ ಕಚೇರಿಯ ಮುಂಭಾಗದ ಬೆಳೆ ಪ್ರಾತ್ಯಕ್ಷಿಕೆ ತಾಕುಗಳಿಗೆ ಹೊಂದಿಕೊಂಡಂತೆ ಇರುವ ವೇದಿಕೆಯ ಮುಂಭಾಗದಲ್ಲಿ ಬೃಹತ್‌ ಪೆಂಡಾಲ್‌ ಹಾಕುವ ಕಾರ್ಯವೂ ಗುರುವಾರ ಬಹುತೇಕ ಅಂತಿಮ ಹಂತ­ದಲ್ಲಿತ್ತು. ಫೈಬರ್‌ ಕವಚವುಳ್ಳ ಹೈಟೆಕ್‌ ಮಳಿಗೆಗಳು, ಸಾಮಾನ್ಯ ಮಳಿಗೆಗಳು, ತೋಟಗಾರಿಕೆ, ಜಲಾನಯನ ಇಲಾಖೆಯ ಪ್ರಾತ್ಯಕ್ಷಿಕೆಗಳು ಇರುವ ಮಳಿಗೆಗಳಲ್ಲಿ ಕೃತಕ ಸಸಿಗಳನ್ನು ನೆಡುವ ಕಾರ್ಯವೂ ನಡೆಯಿತು. ಜಿಲ್ಲಾ ಪಂಚಾಯಿತಿಯ ತೋಟಗಾರಿಕೆ ಹಾಗೂ ಜಲಾ­ನ­ಯನ ಇಲಾಖೆಗಳ ಅಧಿಕಾರಿಗಳು ಖುದ್ದು ಮುಂದೆ ನಿಂತು ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದರು.ಆವರಣದಲ್ಲಿ ಕೃಷಿ ಮೇಳಕ್ಕೆ ಸಂಬಂಧಿಸಿದ ಫ್ಲೆಕ್ಸ್‌ಗಳನ್ನು ಹಾಕುವಲ್ಲಿ ಕಾರ್ಮಿಕರು ತೊಡಗಿಕೊಂಡಿದ್ದರು. ವಿ.ವಿ. ದ್ವಾರ ಬಾಗಿಲಿಗೆ ಬೃಹತ್‌ ಗಾತ್ರದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ.

‘ಆಹಾರ ಭದ್ರತೆಗಾಗಿ ಜಲಸಂರಕ್ಷಣೆ’ ಎಂಬ ಆಶಯದೊಂದಿಗೆ ನಡೆಯಲಿರುವ ಈ ಕೃಷಿ ಮೇಳದಲ್ಲಿ ಜಲಸಂರಕ್ಷಣೆಯ ವಿಧಾನಗಳನ್ನು ತಿಳಿಸಿಕೊಡಲು ವಿ.ವಿ.ಯ ಆರು, ಕೇಂದ್ರೀಯ ಅಂತರ್ಜಲ ಮಂಡಳಿ ಹಾಗೂ ಜಲಾನಯನ ಇಲಾಖೆಯ ತಲಾ ಎರಡು ಮಳಿಗೆಗಳನ್ನು ಮುಖ್ಯ ಸ್ಥಳದಲ್ಲಿ ಸ್ಥಾಪಿಸುವ ಕೆಲಸವೂ ಪ್ರಗತಿಯಲ್ಲಿತ್ತು. ಕೃಷಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ­ಗಳ ಹಲವು ತಂಡಗಳನ್ನು ರಚಿಸಲಾಗಿದ್ದು, ಮೇಳದ ಸಂದರ್ಭದಲ್ಲಿ ವಿವಿಧ ಮಳಿಗೆಗಳ ಬಳಿ ಇರಲು ಪಾಳಿ ಪ್ರಕಾರ ಕೆಲಸ ನಿರ್ವಹಿಸುವಂತೆ ತಂಡಗಳಿಗೆ ಆಯಾ ವಿಭಾಗಗಳ ಮುಖ್ಯಸ್ಥರು ಸೂಚನೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry