ಕೃಷಿ ವಿವಿ: ಮೀನುಗಾರಿಕೆ ಕ್ಷೇತ್ರೋತ್ಸವ

7

ಕೃಷಿ ವಿವಿ: ಮೀನುಗಾರಿಕೆ ಕ್ಷೇತ್ರೋತ್ಸವ

Published:
Updated:

ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯದ ಧಡೇಸೂಗೂರು ಕೃಷಿ ಸಂಶೋಧನಾ ಕೇಂದ್ರದಲ್ಲಿ ಈಚೆಗೆ ಮೀನುಗಾರಿಕೆ ಕ್ಷೇತ್ರೋತ್ಸವ ನಡೆಯಿತು.ಕ್ಷೇತ್ರೋತ್ಸವ ಉದ್ಘಾಟನೆ ಮಾಡಿದ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಮಾಜಿ ಸದಸ್ಯ ತಿಮ್ಮನಗೌಡ ಮಾತ­ನಾಡಿ, ಧಡೇಸುಗೂರು ಸಂಶೋಧನಾ ಕೇಂದ್ರದ ಕೃಷಿ ತಜ್ಞರು ವಿವಿಧ ಬೆಳೆ ಹಾಗೂ ಬೆಳೆ ಪದ್ಧತಿ ಬಗ್ಗೆ ಹಲವಾರು ಸಂಶೋಧನೆ ನಡೆಸಿದ್ದಾರೆ. ಅವರ ಸಂಶೋಧನೆ ಫಲವಾಗಿ ಮೀನು ಮರಿ ಸಾಕಾಣಿಕೆಯಲ್ಲಿ ಹೊಸ ತಂತ್ರಜ್ಞಾನ ಅನುಷ್ಠಾನಗೊಂಡಿದೆ. ಅದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.ನೇರ ಬತ್ತ ಬಿತ್ತನೆ, ಸಮಗ್ರ ಕೃಷಿ ಪದ್ಧತಿ, ಉನ್ನತ ಬೀಜೋತ್ಪಾದನೆ, ಕಳೆ ನಿರ್ವಹಣೆ, ನೀರು ನಿರ್ವಹಣೆ ಮುಂತಾ­ದವುಗಳನ್ನು ವಿಜ್ಞಾನಿಗಳ ಮಾರ್ಗದರ್ಶ­ನದೊಂದಿಗೆ ಕೈಗೊಂಡರೆ ಆರ್ಥಿಕ ಸುಧಾರಣೆಯಾಗುವುದು ನಿಶ್ಚಿತ ಎಂದು ಹೇಳಿದರು.ಬತ್ತದ ನಾಡಿನಲ್ಲಿ ಮೆಕ್ಕೆ ಜೋಳ, ಹತ್ತಿ, ತೊಗರಿ ಹಾಗೂ ಉಪ­ಕಸುಬು­ಗಳಾದ ಮೀನು ಕೃಷಿ, ಹೈನುಗಾರಿಕೆ ಮುಂತಾದವುಗಳನ್ನು ಆವಿಷ್ಕರಿಸಬೇಕು. ತಂತ್ರಜ್ಞಾನ ರೈತರಿಗೆ ಮನವರಿಕೆ ಮಾಡಿಕೊಡ­ಬೇಕು ಎಂದು ಡಾ.ಅಶೋಕ ಭೂಪಾಲ ತಿಳಿಸಿದರು.ಮುಖ್ಯ ಅತಿಥಿ ನೀಲಕಂಠರಾವ್‌ ಜಹಗೀರದಾರ್ ಮಾತನಾಡಿ, ಅತೀಯಾದ ನೀರಿನ ಬಳಕೆ ಮಾಡಿ ಚಿನ್ನದ ಭೂಮಿ ಸವಳು ಮಾಡಲಾಗಿದೆ. ಭೂಮಿ ಫಲವತ್ತತೆ ಮರಳಿ ಪಡೆಯಲು ಹೇರಳವಾಗಿ ಹಸಿರೆಲೆ ಗೊಬ್ಬರ, ಸಾವಯವ ಗೊಬ್ಬರ ಬಳಕೆ ಮಾಡಬೇಕು. ಇದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.ಅಧ್ಯಕ್ಷತೆವಹಿಸಿದ್ದ ಕೃಷಿ ಸಂಶೋಧನಾ ನಿರ್ದೇಶಕ ಡಾ.ಬಿ.ಎಸ್‌ ಜನಗೌಡರ್ ಮಾತನಾಡಿ, ರೈತರ ಸರ್ವತೋಮುಖ ಏಳ್ಗೆಗೆ ಕೃಷಿ ವಿವಿ ಹಲವು ರೀತಿ ಶ್ರಮವಹಿಸಿದೆ. ಪೌಷ್ಟಿಕ ಆಹಾರ ಭದ್ರತೆ, ಉನ್ನತ ಗುಣಮಟ್ಟದ ಬೋಜೋತ್ಪಾದನೆ, ಕೃಷಿ ಪದ್ಧತಿ, ನಿಖರ ಕೃಷಿ, ಮಣ್ಣಿನ ಪರೀಕ್ಷೆ ಆಧಾರಿತ ಪೋಷಕಾಂಶ ಸಿಫಾರಸು, ನೇರ ಬಿತ್ತನೆ, ಇ–ಸ್ಯಾಪ್‌ ತಂತ್ರಜ್ಞಾನದಿಂದ ಕೀಟ ನಿಯಂತ್ರಣ ಮುಂತಾದವುಗಳ ಜ್ಞಾನ ರೈತರಿಗೆ ಕೊಟ್ಟಿದೆ ಎಂದರು.ಪ್ರಾಸ್ತಾವಿಕ ಮಾತನಾಡಿದ ಕೃಷಿ ವಿವಿ ಮೀನುಗಾರಿಕೆ ವಿಭಾಗದ ವಿಜ್ಞಾನಿ ಡಾ.ಎ.ಎ ಫಜಲ್‌, ಅಗತ್ಯಕ್ಕಿಂತ ಹೆಚ್ಚು ನೀರು ಬಳಕೆ ಮಾಡಿ ಮಣ್ಣಿನ ಗುಣಧರ್ಮ ಹಾಳಾಗಿದೆ. ಇಂಥ ಭೂಮಿಯಲ್ಲಿ ಬೆಳೆ ತೆಗೆಯುವುದು ಕಷ್ಟ. ಮೀನು ಸಾಕಾಣಿಕೆ ಲಾಭದಾಯಕ. ಅದರಲ್ಲೂ ಪಂಜರದಲ್ಲಿ ಮೀನು ಮರಿ ಸಾಕಾಣಿಕೆ ಎಂಬುದು ಕೃಷಿ ವಿವಿ ಧಡೇಸುಗೂರು ಸಂಶೋಧನಾ ಕೇಂದ್ರದ ಕೊಡುಗೆ. ಇದನ್ನು ಅನುಸರಿಸಿದರೆ ಅತೀ ಸಣ್ಣ ಗಾತ್ರದ ಮರಿ ಸಾಕಿದರೂ ಶೇ 75ರಷ್ಟು ಬದುಕಿ ಉಳಿಯುತ್ತವೆ.  ರೈತರು ತಮ್ಮ ಸಣ್ಣ ಕೆರೆಗಳಲ್ಲಿ ಅಳವಡಿಸಲು ಈ ಪ್ರಾತ್ಯಕ್ಷಿಕೆ ಮತ್ತು ಕ್ಷೇತ್ರೋತ್ಸವ ಆಯೋಜಿಸಿದೆ ಎಂದು ವಿವರಿಸಿದರು.ರೈತ ಮುಖಂಡ ಈರಣ್ಣ, ಸಿಂಧನೂರು ತಾ.ಪಂ ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ಧಡೇಸುಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಯೂನೂಸ್‌ ಪಾಷಾ, ತಾ.ಪಂ ಸದಸ್ಯ ಚನ್ನಬಸವ­ರಾಜು ಉಪ್ಪಳ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವಣ್ಣ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಿರಗುಪ್ಪ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಬಸವಣ್ಣೆಪ್ಪ ಎಂ.ಎ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry