ಸೋಮವಾರ, ಮೇ 10, 2021
26 °C

ಕೃಷಿ ವ್ಯವಸ್ಥೆ ನಾಶಕ್ಕೆ ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: “ಜಾಗತೀಕರಣವನ್ನು ಆಹಾರ ಉತ್ಪಾದನಾ ಕ್ಷೇತ್ರಕ್ಕೂ ತಂದು, ಕೃಷಿ ವಲಯವನ್ನು ಬುಡಮೇಲು ಮಾಡುವ ಹುನ್ನಾರ ನಡೆಯುತ್ತಿದೆ. ಕಾರ್ಪೊರೇಟ್ ಕಂಪೆನಿಗಳ ಕಪಿಮುಷ್ಠಿಗೆ ವ್ಯವಸಾಯವನ್ನು ಒಪ್ಪಿಸುವ ಸಂಚು ರೂಪುಗೊಂಡಿದೆ. ಇದರ ವಿರುದ್ಧ ಸಂಘಟಿತ ಹೋರಾಟ ನಡೆಯದೇ ಹೋದರೆ ಮುಂದಿನ ದಿನಗಳಲ್ಲಿ ಕೃಷಿ ವಲಯವು ಬಹುರಾಷ್ಟ್ರೀಯ ಕಂಪೆನಿಗಳ ವಶಕ್ಕೆ ಸಿಲುಕಲಿದೆ” ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಿದ್ಧನಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದರು.ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಪೊರೇಟ್ ಕಂಪೆನಿಗಳ ಕೈಗೆ ಲಕ್ಷಾಂತರ ಎಕರೆ ಜಮೀನಿನ ಜತೆಗೆ ಆಹಾರ ಉತ್ಪಾದನೆ ಮಾಡುವ ಕೃಷಿ ಕ್ಷೇತ್ರವನ್ನೂ ಒಪ್ಪಿಸಲು ವೇದಿಕೆ ಸಿದ್ಧಗೊಂಡಿದೆ. ಇದರ ವಿರುದ್ಧ ಬೃಹತ್ ಆಂದೋಲನ ಅನಿವಾರ್ಯ ಎಂದರು.ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳಿಗೆ 2005-06ರಿಂದ 2010-11ರವರೆಗೆ ರೂ. 21 ಲಕ್ಷ ಕೋಟಿ ಆದಾಯ ತೆರಿಗೆ ಹಾಗೂ ಸುಂಕ ಮನ್ನಾ ಮಾಡಿದೆ. ಈ ಸಾಲಿನಲ್ಲೂ 5 ಲಕ್ಷ ಕೋಟಿ ರೂಪಾಯಿಗಳಷ್ಟು ತೆರಿಗೆ ಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಕಂಪೆನಿಗಳಿಗೆ ಹೀಗೆ ನೆರವು ನೀಡುವ ಕೇಂದ್ರ ಸರ್ಕಾರ, ಬೆಲೆ ಏರಿಕೆ ನಿಯಂತ್ರಣಕ್ಕೆ ಮುಂದಾಗದಿರುವುದು ಜನರಲ್ಲಿ ಅಘಾತ ಮೂಡಿಸಿದೆ ಎಂದು ಅವರು ತಿಳಿಸಿದರು.ಆಹಾರ ಉತ್ಪಾದನೆ ಕ್ಷೇತ್ರವಾದ ಕೃಷಿ ವಲಯಕ್ಕೆ ನುಗ್ಗಲು ಈಗ ಕಾರ್ಪೊರೇಟ್ ಸಂಸ್ಥೆಗಳು ಹವಣಿಸುತ್ತಿವೆ. ರಾಜ್ಯದಲ್ಲಿ ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಸಿದ್ಧತೆ ನಡೆದಿದೆ. 14 ಜಿಲ್ಲೆಗಳ ಡಿ.ಸಿ. ಹಾಗೂ ಕೃಷಿ ಇಲಾಖೆಗೆ ರಾಜ್ಯ ಸರ್ಕಾರ ಈಗಾಗಲೇ ಪತ್ರ ಬರೆದಿದ್ದು, ಭೂಸ್ವಾಧೀನಕ್ಕೆ ರೈತರ ಅಭಿಮತ ಕೇಳುವಂತೆ ಸೂಚಿಸಿದೆ. ಇದೆಲ್ಲದರ ಪರಿಣಾಮವಾಗಿ ಕಾರ್ಪೊರೇಟ್ ಸಂಸ್ಥೆಗಳು ಕೃಷಿ ವಲಯ ಪ್ರವೇಶಿಸಲು ಭೂಮಿಕೆ ಸಿದ್ಧವಾದಂತಾಗಿದೆ ಎಂದು ಪಾಟೀಲ ಕಳವಳ ವ್ಯಕ್ತಪಡಿಸಿದರು.ಮಹಾಧಿವೇಶನ: ಮುಂದಿನ ಮಾರ್ಚ್ 27ರಿಂದ ಬಿಹಾರ ರಾಜಧಾನಿ ಪಟ್ನಾದಲ್ಲಿ ಪಕ್ಷದ ರಾಷ್ಟ್ರೀಯ ಮಹಾಧಿವೇಶನ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಜನವರಿ 12ರಿಂದ ರಾಜ್ಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಇದಕ್ಕೂ ಮುನ್ನ ಜಿಲ್ಲಾ, ತಾಲ್ಲೂಕು ಮಟ್ಟದ ಸಮಾವೇಶಗಳು ಜರುಗಲಿದ್ದು, ಕೃಷಿ ಕ್ಷೇತ್ರಕ್ಕೆ ಎದುರಾಗಿರುವ ಅಪಾಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದರು.ಕೃಷಿ ಭೂಮಿ ಸಂರಕ್ಷಿಸಲು ಅ. 17ರಂದು ಗದಗನಲ್ಲಿ `ಭೂಸ್ವಾಧೀನ ವಿರೋಧಿ ಸಂಗ್ರಾಮ ಸಮಿತಿ~ ವತಿಯಿಂದ ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. ಮುಖಂಡರಾದ ಶೌಕತ ಅಲಿ ಆಲೂರು, ಮೌಲಾ ಮುಲ್ಲಾ, ಸಿದ್ಧಣ್ಣ ರಾಜವಾಳ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.