ಕೃಷಿ ಸಂಶೋಧನಾ ಕೇಂದ್ರಕ್ಕೆ ಶತಮಾನೋತ್ಸವ ಸಂಭ್ರಮ

7

ಕೃಷಿ ಸಂಶೋಧನಾ ಕೇಂದ್ರಕ್ಕೆ ಶತಮಾನೋತ್ಸವ ಸಂಭ್ರಮ

Published:
Updated:

ಬಳ್ಳಾರಿ: ಕಡಿಮೆ ಪ್ರಮಾಣದ ಮಳೆಯನ್ನೇ ಆಧರಿಸಿರುವ ಜಿಲ್ಲೆಯ ವೇದಾವತಿ (ಹಗರಿ) ನದಿ ದಂಡೆಯಲ್ಲಿರುವ ರೈತರ ಕೃಷಿ ಭೂಮಿಯಲ್ಲಿ ಉತ್ತಮ ರೀತಿಯ ಬೇಸಾಯ ಕ್ರಮಗಳನ್ನು ಅಳವಡಿಸ ಲೆಂದೇ ಅಗತ್ಯ ಸಂಶೋಧನೆ ನಡೆಸಲು ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಅಂದರೆ 1906ರಲ್ಲಿ ತಾಲ್ಲೂಕಿನ ಹಗರಿ ಗ್ರಾಮದ ಬಳಿ ಸ್ಥಾಪಿತವಾಗಿರುವ ಕೃಷಿ ಸಂಶೋಧನಾ ಕೇಂದ್ರಕ್ಕೆ ಈಗ ಶತಮಾನೋತ್ಸವದ ಸಂಭ್ರಮ.2006ರಲ್ಲೇ ಶತಮಾನೋತ್ಸವ ಸಮಾರಂಭ ಆಚರಿಸಿಕೊಳ್ಳಬೇಕಿದ್ದ ಈ ಕೇಂದ್ರದಲ್ಲಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ರಾಯಚೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿದ್ದರಿಂದ ಹಾಗೂ ಅತಿವೃಷ್ಟಿ ಯಂತಹ ನೈಸರ್ಗಿಕ ವಿಕೋಪಗಳ ಹಿನ್ನೆಲೆಯಲ್ಲಿ ಐದು ವರ್ಷ ತಡವಾಗಿ ಈ ಸಂಭ್ರಮಾಚರಣೆ ಇದೇ 12ರಿಂದ ಎರಡು ದಿನಗಳ ಕಾಲ ನಡೆಯಲಿದೆ.ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಡೆಸಲಾದ ಅನೇಕ  ಸಂಶೋಧನೆಗಳ ಫಲವಾಗಿ, ಇಲ್ಲಿನ ಹವಾಗುಣ, ಮಣ್ಣು ಮತ್ತು ನೀರಿನ ಗುಣಕ್ಕೆ ತಕ್ಕಂತೆಯೇ ಅಭಿವೃದ್ಧಿಗೊಂಡ ಇಲ್ಲಿ ಆವಷ್ಕರಿಸಲಾದ ಅನೇಕ ಬೆಳೆಗಳು ವಿನೂತನವಾದ ತಳಿಗಳು ಇಳುವರಿಯ ಪ್ರಮಾಣ ಹೆಚ್ಚುವಲ್ಲಿ ಕಾರಣವಾಗಿವೆ.ವರ್ಷದಲ್ಲಿ ಅತ್ಯಂತ ಕಡಿಮೆ ಅಂದರೆ, ಕೇವಲ 531 ಮಿಲಿ ಮೀಟರ್ ಮಳೆ ಸುರಿಯುವ ಬಳ್ಳಾರಿ ಜಿಲ್ಲೆಯಲ್ಲಿ ಕೃಷಿಯು ಅನಿಶ್ಚಿತತೆ ಯೊಂದಿಗೆ ತೊಳಲಾಡುತ್ತಿದ್ದಾಗ ಬರದ ಕಪಿಮುಷ್ಟಿಯಿಂದ ರೈತರನ್ನು ರಕ್ಷಿಸಲು ಯಾವ ಬೇಸಾಯ ಪದ್ಧತಿ ಅಳವಡಿಸಬೇಕು ಎಂಬುದನ್ನು ಅರಿತು ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳಾದ ಜೋಳ, ಹತ್ತಿ, ನವಣೆ, ರಾಗಿ, ಕಡಲೆ, ಕುಸುಬಿ ಹಾಗೂ ಕೊತ್ತಂಬರಿ ತಳಿಗಳನ್ನು ಅಭಿವೃದ್ಧಿಪಡಿಸಿ, ಅಧಿಕ ಇಳುವರಿ ಪಡೆಯುವಂತಾಗಿದ್ದು, ಈ ಕೇಂದ್ರದಲ್ಲಿ ನಡೆಸಲಾದ ಸಂಶೋಧನೆಯ ಫಲವಾಗಿದೆ.

ಇಲ್ಲಿ ಲಭ್ಯ ವಿರುವ ಮಣ್ಣು ಮತ್ತು ನೀರನ್ನು ಯಾವ ರೀತಿ ಸಂರಕ್ಷಣೆ ಮಾಡಬೇಕು  ಎಂಬುದನ್ನೂ ಈ ಕೇಂದ್ರದಲ್ಲೇ ಸಂಶೋಧಿಸಿದಲಾಗಿದೆ. ಎಚ್1 ಎಚ್2 -ನವಣಿ ಹಾಗೂ ಡಬ್ಲೂ 1 ಹತ್ತಿ ತಳಿಯನ್ನು ಅಭಿವೃದ್ಧಿಪಡಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಇತ್ತೀಚೆಗಷ್ಟೇ ಸಂಶೋಧಿಸಲಾದ ಎಸ್‌ಐಎ-2644 ಇನ್ನೂ ಅಧಿಕ ಇಳುವರಿ ನೀಡುವಂತ ತಳಿಯ ನವಣೆಯಾಗಿದ್ದು, ಕೆಲವೇ ದಿನಗಳಲ್ಲಿ ರೈತರಿಗೆ ಲಭ್ಯವಾಗಲಿದೆ.ಮಣ್ಣು ಮತ್ತು ನೀರು ಮಳೆಯಲ್ಲಿ ಕೊಚ್ಚಿ ಹೋಗದಂತೆ ತಡೆಯಲು ಬದುಗಳನ್ನು, ಮಡಿ ಹೊಡ್ಡುಗಳನ್ನು ಹಾಕುವುದಲ್ಲದೇ, ಹಾಳವಾಗಿ ಉಳುಮೆ ಮಾಡುವ ಬೋರು ಹೊಡೆಯುವ ಬೇಸಾಯ ಪದ್ಧತಿ ಯನ್ನು ಈ ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಪರಿಚಯಿಸಿದ ಕೀರ್ತಿ ಈ ಸಂಶೋಧನಾ ಕೇಂದ್ರದ್ದು.ಬೋರು ಹೊಡೆಯುವ ಸಲಕರಣೆ, ಕುಂಟೆ, ಕೂರಿಗೆ ಮತ್ತಿತರರ ಕೃಷಿ ಉಪಕರಣಗಳನ್ನು ಇದೇ ಕೇಂದ್ರದಲ್ಲಿ ಅಭಿವೃದ್ಧಿಪಡಿಸಿರುವುದು ವಿಶೇಷ.ಜಿಲ್ಲೆಯ ರೈತರ ಜಮೀನುಗಳಲ್ಲಿ ಲಭ್ಯವಿರುವ ನೀರು ಮತ್ತು ಮಣ್ಣಿನ ಪರೀಕ್ಷೆ ನಡೆಸುವ ಮೂಲಕ ಪೋಷಕಾಂಶಗಳ ಲಭ್ಯತೆ ಮತ್ತು ಕೊರತೆಯ ಬಗ್ಗೆ ನಿಖರವಾದ ಮಾಹಿತಿ ಒದಗಿಸುವ ಸೇವೆಯು ಕೇಂದ್ರದಿಂದ ದೊರೆಯುತ್ತಿದೆ. ಅನೇಕ ಪ್ರಯೋಗಗಳ ಮೂಲಕ ರೈತನಿಗೆ ನೇರವಾಗುವ ಕಾರ್ಯ ಕೇಂದ್ರದಲ್ಲಿ ಜಾರಿಯಲ್ಲಿದೆ.ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆಯ ಹೊಣೆ ಹೊತ್ತಿರುವ ಕೃ ಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲೇ ಕೆಲಸ ಮಾಡುವ ಹಗರಿ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲೇ 1995ರಲ್ಲಿ ಆರಂಭವಾಗಿರುವ ಕೃಷಿ ವಿಜ್ಞಾನ ಕೇಂದ್ರವು ಕೃಷಿ ಸಂಬಂಧಿ ಪ್ರಯೋಗ ಹಾಗೂ ಸಂಶೋಧನೆಯ ಫಲಿತಾಂಶವನ್ನು ನೇರವಾಗಿ ರೈತರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ.ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಕೀಟ ಹಾಗೂ ರೋಗ ನಿರ್ವಹಣೆ, ಗೃಹ ವಿಜ್ಞಾನ, ಮಣ್ಣಿನ ವಿಜ್ಞಾನ, ಬೇಸಾಯ ಕ್ರಮ, ಕುರಿ ಸಾಕಣೆ, ಮೊಲ ಸಾಕಣೆ, ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಹೈನುಗಾರಿಕೆ ಬಗ್ಗೆ ಕೃಷಿಕರಿಗೆ ಮತ್ತು ಸಾರ್ವಜನಿಕರಿಗೆ ಸೂಕ್ತ ತಿಳಿವಳಿಕೆ ನೀಡುವ ಕಾರ್ಯಕ್ರಮವನ್ನು ಒಂದು ಶತಮಾನದಿಂದ ಈ ಕೇಂದ್ರವು ಅತ್ಯಂತ ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿರುವುದು ಹೆಮ್ಮೆಯ ವಿಷಯ ಎಂದು ಕೇಂದ್ರದ ಮುಖ್ಯಸ್ಥ, ಹಿರಿಯ ಕ್ಷೇತ್ರ ಅಧೀಕ್ಷಕ ಜಿ.ರವಿಶಂಕರ ತಿಳಿಸುತ್ತಾರೆ.

ಇದೇ 12 ಮತ್ತು 13ರಂದು ಕೇಂದ್ರದ ಆವರಣದಲ್ಲಿ ನಡೆಯಲಿರುವ ಶತಮಾನೋತ್ಸವ ಸಮಾರಂಭದಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಮತ್ತಷ್ಟು ಸವಿವರವಾದ ಮಾಹಿತಿ ಒದಗಿಸುವ ಕಾರ್ಯಕ್ರಮ ಗಳು ನಡೆಯಲಿವೆ ಎಂದು ಅವರು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry