ಕೃಷಿ ಸಮಸ್ಯೆ ಪರಿಹರಿಸಲು ಸಿಎಂಗೆ ರೈತರ ಆಗ್ರಹ

7

ಕೃಷಿ ಸಮಸ್ಯೆ ಪರಿಹರಿಸಲು ಸಿಎಂಗೆ ರೈತರ ಆಗ್ರಹ

Published:
Updated:

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿಯಾದ ನಂತರ ಜಿಲ್ಲೆಗೆ ಮೊದಲ ಬಾರಿಗೆ ಸೆಪ್ಟೆಂಬರ್‌ 20ರಂದು ಆಗಮಿಸುತ್ತಿರುವ ಸಿದ್ದರಾಮಯ್ಯ ಅವರು ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ.ನಾಲ್ಕು ವರ್ಷಗಳ ಬರಗಾಲದಿಂದ ತತ್ತರಿಸಿರುವ ರೈತರ ಬದುಕನ್ನು ಹಸನು ಮಾಡಲು ಮತ್ತು ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಕೋರಿ ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.ಕೆರೆ ಮತ್ತು ಕೊಳವೆಬಾವಿಗಳು ಸಂಪೂರ್ಣವಾಗಿ ಬತ್ತಿ ಹೋಗಿರುವ ಕಾರಣ ಅಂತರ್ಜಲ ಮಟ್ಟ ಕುಸಿಯತೊಡಗಿದೆ. ಕುಡಿಯಲು ಮತ್ತು ಕೃಷಿ ಚಟುವಟಿಕೆ ಕೈಗೊಳ್ಳಲು ನೀರಿಲ್ಲದಂತಹ ಪರಿಸ್ಥಿತಿ ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಿದೆ. ಇದರ ಹಿನ್ನೆಲೆಯಲ್ಲಿ ನೀರಾವರಿ ತಜ್ಞ ಜಿ.ಎಸ್‌.ಪರಮಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಗೊಳಿಸಲು ಕ್ರಮ ತೆಗೆದುಕೊಳ್ಳಬೇಕು.ಜಿಲ್ಲೆಯ ಜನರ ಹಿತದೃಷ್ಟಿಯಿಂದ ಈ ಯೋಜನೆ ತುಂಬಾ ಮುಖ್ಯ ಎಂದು ರೈತ ಮುಖಂಡ ಪುರುದಗಡ್ಡೆ ಕೃಷ್ಣಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಹೈನುಗಾರಿಕೆಗೆ ಸಂಬಂಧಿಸಿದಂತೆ ಭರವಸೆ ನೀಡಿರುವಂತೆ ಮೇ ತಿಂಗಳಿನಿಂದ ಬಾಕಿಯಿರುವ ಹಾಲಿನ ಪ್ರೋತ್ಸಾಹ ಧನವನ್ನು ಈ ಕೂಡಲೇ ಬಿಡುಗಡೆಗೊಳಿಸಬೇಕು ಮತ್ತು ನಂದಿ ಕ್ರಾಸ್‌ ಬಳಿ ನಿರ್ಮಿರ್ಸಲಾಗುತ್ತಿರುವ ಮೆಗಾ ಡೇರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ತಿಳಿಸಿದರು.ರೈತ ಮುಖಂಡ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಸಂಕಷ್ಟದಲ್ಲಿರುವ ರೇಷ್ಮೆ  ಮತ್ತು ದ್ರಾಕ್ಷಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಹನಿ ನೀರಾವರಿಗೆ ಮತ್ತು ಯಾಂತ್ರೀಕೃತ ಸಲಕರಣೆಗಳಿಗೆ ಶೇ 90ರಷ್ಟು ರಿಯಾಯಿತಿ ನೀಡಬೇಕು. ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ಇರುವ ರೈತರ ಸಾಲ ಮನ್ನಾ ಮಾಡಬೇಕು. ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ಕೆರೆ ಮತ್ತು ಪೋಷಕ ಕಾಲುವೆಗಳನ್ನು ಪುನಶ್ಚೇತನಗೊಳಿಸಬೇಕು ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಸೊಣ್ಣೇನಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ಅಂತರ್ಜಲ ಕುಸಿತ ಮತ್ತು ಕೆರೆ ಬತ್ತಲು ಕಾರಣವಾಗಿರುವ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಅಕ್ರಮ ಮರಳು ಗಣಿಗಾರಿಕೆ ಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಕಲ್ಲು ಗಣಿಗಾರಿಕೆಯಿಂದಲೂ ಪರಿಸರಕ್ಕೆ ಹಾನಿಯಾಗುತ್ತಿದ್ದು, ಇದಕ್ಕೆ ಸಂಬಂಧಿಸಿ ದಂತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ–7ರ ನಿರ್ಮಾ ಣಕ್ಕಾಗಿ ಐದು ವರ್ಷಗಳ ಹಿಂದೆ ಜಮೀನು ಕಳೆದುಕೊಂಡಿರುವ ರೈತರಿಗೆ ಇದುವರೆಗೆ ಪರಿಹಾರ ನೀಡದೇ ನಿರ್ಲಕ್ಷ್ಯ ತೋರಲಾಗುತ್ತಿದೆ. ತಾಲ್ಲೂಕು ಕಚೇರಿಗಳಲ್ಲಿ ಪಹಣಿ ಮತ್ತು ಇತರ ದಾಖಲೆಪತ್ರಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ರೈತರಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದು, ಈ ಸಮಸ್ಯೆಯನ್ನೂ ಕೂಡ ಪರಿಹರಿಸಬೇಕು ಎಂದು ಒತ್ತಾಯಿಸಿದರು.ರೈತ ಮುಖಂಡರಾದ ರಾಮಚಂದ್ರಪ್ಪ, ಅಶ್ವತ್ಥನಾರಾಯಣರೆಡ್ಡಿ, ನಾರಾಯಣಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry