ಗುರುವಾರ , ಮೇ 13, 2021
22 °C

ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2011-12ನೇ ಸಾಲಿನಲ್ಲಿ ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲದ ಮೇಲಿನ ಬಡ್ಡಿ  ಮನ್ನಾ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಇದು ಬರಪೀಡಿತ 123 ತಾಲ್ಲೂಕುಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಸರ್ಕಾರದ ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಬರ ನಿರ್ವಹಣೆ ಕುರಿತ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ ಶೇ 1ರ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗಿತ್ತು, ಈಗ ಬಡ್ಡಿಯನ್ನೂ ಮನ್ನಾ ಮಾಡಲಾಗಿದೆ. 2012-13ನೇ ಸಾಲಿನಲ್ಲಿ ಬಡ್ಡಿರಹಿತ ಸಾಲ ನೀಡಲು ಸರ್ಕಾರ ತೀರ್ಮಾನಿಸಿದೆ.ಕಳೆದ ಆರ್ಥಿಕ ವರ್ಷದಲ್ಲಿ ಬರಪೀಡಿತ 123 ತಾಲ್ಲೂಕುಗಳ 12.73 ಲಕ್ಷ ರೈತರು ಒಟ್ಟು 4,273 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಇದರ ಮೇಲಿನ ಶೇ 1ರಷ್ಟು ಬಡ್ಡಿಯನ್ನು ರದ್ದು ಮಾಡಿ, ಅದನ್ನು ಸರ್ಕಾರವೇ ಭರಿಸಲು ತೀರ್ಮಾನಿಸಿದೆ ಎನ್ನಲಾಗಿದೆ.ಬಡ್ಡಿ ಮನ್ನಾ ಜತೆಗೆ ಅಸಲು ವಸೂಲಿಯನ್ನೂ ಮುಂದೂಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಸಲು ಕಟ್ಟದಿದ್ದರೂ ಹೊಸದಾಗಿ ಸಾಲ ನೀಡಬೇಕು. ಮುಂದಿನ ವರ್ಷ ಬೆಳೆ ಕೈಗೆ ಬಂದ ನಂತರವೇ ಅಸಲು ವಸೂಲಿಗೆ ಚಾಲನೆ ನೀಡಬೇಕು ಎನ್ನುವ ಸೂಚನೆ ಕೂಡ ನೀಡಲಾಗಿದೆ.ಸಾಲ ಮನ್ನಾ ವಿಷಯವನ್ನು ಕೇಂದ್ರ ಸರ್ಕಾರದ ಜತೆ ಚರ್ಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.  ಕೇಂದ್ರ ಹಣ ಕೊಟ್ಟರೆ ಆ ಬಗ್ಗೆ ನಿರ್ಧರಿಸೋಣ ಎನ್ನುವ ತೀರ್ಮಾನಕ್ಕೆ ಬರಲಾಯಿತು ಎನ್ನಲಾಗಿದೆ.ವಿದ್ಯುತ್ ಸಂಪರ್ಕ: ಅನೇಕ ಕಡೆ ಕೊಳವೆ ಬಾವಿ ಕೊರೆದರೂ ಹಣ ಕಟ್ಟಲಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ ಎಂಬ ದೂರುಗಳು ಪ್ರವಾಸ ಸಂದರ್ಭದಲ್ಲಿ ಕೇಳಿಬಂದಿವೆ. ಇದಕ್ಕೆ ಕಡಿವಾಣ ಹಾಕಬೇಕು. ಕೊಳವೆ ಬಾವಿ ಕೊರೆದ ತಕ್ಷಣ ವಿದ್ಯುತ್ ಸಂಪರ್ಕ ಕೊಡಬೇಕು. ನಂತರ ಸಂಬಂಧಪಟ್ಟ ಇಲಾಖೆಯಿಂದ ವಿದ್ಯುತ್ ವಿತರಣಾ ಕಂಪೆನಿಗಳು ಹಣ ಸಂಗ್ರಹಿಸಿಕೊಳ್ಳಬೇಕು. ಕುಡಿಯುವ ನೀರಿನ ವಿಷಯದಲ್ಲಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ಸರ್ಕಾರ ಸಲಹೆ ನೀಡಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.