ಕೃಷಿ ಸಾಲಮನ್ನಾ ಕರಾವಳಿ ರೈತರಿಗೂ ಅನ್ವಯ

7

ಕೃಷಿ ಸಾಲಮನ್ನಾ ಕರಾವಳಿ ರೈತರಿಗೂ ಅನ್ವಯ

Published:
Updated:

ಬ್ರಹ್ಮಾವರ: ರಾಜ್ಯದ 125 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದು, ಅಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಿದೆ. ಕೃಷಿಕರು ಕೃಷಿ ಚಟುವಟಿಕೆಗಳಿಗೆ ತೆಗೆದುಕೊಂಡ 25 ಸಾವಿರ ರೂವರೆಗಿನ ಸಾಲವನ್ನು ಬಡ್ಡಿ ಸಮೇತ ಸರ್ಕಾರ ಮನ್ನಾ ಮಾಡಿದ್ದು, ರಾಜ್ಯದ ಕರಾವಳಿ ರೈತರೂ ಸೇರಿದಂತೆ ಸುಮಾರು 15 ಲಕ್ಷ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಬ್ರಹ್ಮಾವರದ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಎರಡು ದಿನಗಳ ಕಾಲ ನಡೆಯುವ ಕೃಷಿ ಮೇಳಕ್ಕೆ ಅವರು ಸೋಮವಾರ ಚಾಲನೆ ನೀಡಿ ಮಾತನಾಡಿದರು.ಕೃಷಿಕರ ಸಾಲ ಮನ್ನಾದಿಂದ ಸುಮಾರು 3,507 ಕೋಟಿ ರೂ. ಸರ್ಕಾರದ ಬೊಕ್ಕಸದಿಂದ ವೆಚ್ಚವಾಗುತ್ತಿದೆ. ಹೈನುಗಾರಿಕೆಗೆ ಪ್ರೋತ್ಸಾಹ ಧನ ನೀಡುವ ಸಲುವಾಗಿ 1169 ಕೋಟಿ.ರೂ. ವಿನಿಯೋಗಿಸಿದೆ. ಇದೆಲ್ಲವನ್ನೂ ರೈತನ ಹಿತದೃಷ್ಟಿಯಿಂದ ಕೃಷಿ ಅಭಿವೃದ್ಧಿಗೆ ಮಾಡಲಾಗಿದೆ. ಸರ್ಕಾರದ ಅನೇಕ ಯೋಜನೆಗಳು ರೈತರ ಮನೆ ಬಾಗಿಲಿಗೆ ಪ್ರಾಮಾಣಿಕವಾಗಿ ತಲುಪಿಸುವಂತಹ ವ್ಯವಸ್ಥೆಯಾದಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಲು ಸಾಧ್ಯ ಎಂದರು.ಇಂದಿನ ಯುವಕರಲ್ಲಿ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಕೂಲಿ ಆಳುಗಳ ಸಮಸ್ಯೆ, ಅಧಿಕ ವೆಚ್ಚ ಇದೆಲ್ಲವನ್ನು ತಪ್ಪಿಸಲು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು.ಇನ್ನೊಂದೆಡೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೃಷಿಗೆ ಅನೇಕ ಸಬ್ಸಿಡಿಗಳನ್ನು ನೀಡುತ್ತಿವೆಯಾದರೂ ಯುವಕರು ಮಾನಸಿಕವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿಲ್ಲ. ಕುಟುಂಬದ ಒಬ್ಬ ಸದಸ್ಯನಿಂದ ನಿರ್ವಹಿಸಲು ಅನುಕೂಲವಾಗುವಂತಹ ಯಂತ್ರೋಪಕರಣಗಳನ್ನು ಅಭಿವೃದ್ಧಿ ಪಡಿಸುವಲ್ಲಿ ವಿಜ್ಞಾನಿಗಳು ಶ್ರಮಿಸಬೇಕು. ಹೀಗಾದಲ್ಲಿ ಮಾತ್ರ ಯುವಜನತೆ ಕೃಷಿಯತ್ತ ಆಸಕ್ತಿ ಬೆಳೆಸಿಕೊಳ್ಳುತ್ತಾರೆ ಎಂದರು.ಕೃಷಿ ಕಾಲೇಜು: ಕಳೆದ ಸಾಲಿನಲ್ಲಿಯೇ ಕೃಷಿ ಕಾಲೇಜು ಪ್ರಾರಂಭಿಸುವ ಬಗ್ಗೆ ರೂ.5 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಹೇಳಲಾಗಿತ್ತು. ಆದರೆ ಕೆಲವೊಂದು ತಾಂತ್ರಿಕ ತೊಂದರೆಗಳಿಂದ ಅನುದಾನ ಇದುವರೆಗೆ ಬಿಡುಗಡೆಗೊಂಡಿಲ್ಲ. ಇದೇ 12ರ ನಂತರ ಶಾಸಕರನ್ನು ಒಳಗೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಎಲ್ಲಾ ಪ್ರಯತ್ನ ಮಾಡುವ ಭರವಸೆ ನೀಡಿದರು.ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆ ಕುಂಠಿತಗೊಳ್ಳುತ್ತಿದೆ. ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಬಹುದೆನ್ನುವ ಜಾಗೃತಿಯನ್ನು ಯುವಜನತೆಯಲ್ಲಿ ಮೂಡಿಸಬೇಕಾಗಿದೆ.

 

ಈಗಾಗಲೇ ಕೃಷಿ ಕಾಲೇಜನ್ನು ಪ್ರಾರಂಭಿಸಲು ಶಿವಮೊಗ್ಗ ಕೃಷಿ ವಿ.ವಿ ಯಲ್ಲಿ ಪ್ರಥಮ ಸೆಮಿಸ್ಟರ್‌ಗೆ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲು ಯೋಚಿಸಲಾಗಿದ್ದು, ಅದೇ ವಿದ್ಯಾರ್ಥಿಗಳು ದ್ವಿತೀಯ ಸೆಮಿಸ್ಟರ್‌ನ್ನು ಇಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸಿಕೊಡುವ ಯೋಜನೆ ಹಾಕಲಾಗಿದೆ ಎಂದರು.ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೃಷಿ ವಿಜ್ಞಾನ ಕೇಂದ್ರದ ಕಟ್ಟಡ, ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಮಾದರಿ ಹೈನುಗಾರಿಕೆ ಘಟಕ, ಕಾರ್ಕಳ ಶಾಸಕ ಗೋಪಾಲ ಭಂಡಾರಿ ಸಮಗ್ರ ಬಾತುಕೋಳಿ ಮತ್ತು ಮೀನು ಸಾಕಾಣಿಕೆ ಘಟಕಗಳನ್ನು ಉದ್ಘಾಟಿಸಿದರು.ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ನಾರಾಯಣ ಗೌಡ ಅಧ್ಯಕ್ಷತೆ ವಹಿಸಿದ್ದರು.

ಕೃಷಿ ರಸಪ್ರಶ್ನೆ ಪ್ರಶಸ್ತಿ ವಿಜೇತ ರೈತರಿಗೆ ಬೆಂಗಳೂರಿನ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ವಲಯ ಯೋಜನಾ ನಿರ್ದೇಶಕ ಡಾ.ಎಸ್.ಪ್ರಭುಕುಮಾರ್ ಬಹುಮಾನ ವಿತರಿಸಿದರು.ತಾಂತ್ರಿಕ ಕೈಪಿಡಿಗಳ ಬಿಡುಗಡೆ: ಇದೇ ಸಂದರ್ಭದಲ್ಲಿ ಡಾಲರ್ ಬೆಳೆ ಗೇರು ಕೃಷಿ ಪದ್ಧತಿಗಳು, ಭತ್ತವನ್ನು ಬಾಧಿಸುವ ಪ್ರಮುಖ ಕೀಟಗಳು ಮತ್ತು ರೋಗಗಳು ಹಾಗೂ ಅವುಗಳ ಸಮಗ್ರ ಹತೋಟಿ, ಹನಿ ನೀರಾವರಿ ಪದ್ಧತಿ, ಅಡಿಕೆ ಬೆಳೆಯಲ್ಲಿ ಸಸ್ಯ ಸಂರಕ್ಷಣೆ, ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಗೇರು ಸಂಸ್ಕರಣೆ, ಭತ್ತದಬೆಳೆಯಲ್ಲಿ ಯಾಂತ್ರೀಕತೆ, ಸುಧಾರಿತ ಮೀನು ಕೃಷಿ ಪದ್ಧತಿ, ಕರಾವಳಿ ಕೃಷಿ 2ನೇ ತ್ರೈಮಾಸಿಕ ಪತ್ರಿಕೆ ಕೈಪಿಡಿಗಳನ್ನು ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರದ ರಾಜಪ್ಪ, ಡಾ.ಆರ್.ಎಸ್.ಕುಲಕರ್ಣಿ, ಮಂಗಳೂರು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ, ಜಿ.ಪಂ. ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಚಾಂತಾರು ಗ್ರಾ.ಪಂ. ಅಧ್ಯಕ್ಷೆ ಜಯಂತಿ ವಾಸುದೇವ್, ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ದುಗ್ಗೇಗೌಡ, ನಾಗರಾಜ್ ಬಿಡುಗಡೆ ಮಾಡಿದರು.ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಂ.ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕಿ ಡಾ.ಜಯಲಕ್ಷ್ಮೀ ನಾರಾಯಣ ಹೆಗಡೆ ವಂದಿಸಿದರು. ವೈಕುಂಠ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry