ಸೋಮವಾರ, ಏಪ್ರಿಲ್ 19, 2021
31 °C

ಕೃಷಿ ಸಾಲ: ನಿಯಮಕ್ಕೆ ತಿದ್ದುಪಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರೈತರು ಮೂರು ಲಕ್ಷ ರೂಪಾಯಿವರೆಗೆ ಕೃಷಿ ಸಾಲ ಪಡೆದುಕೊಂಡರೆ ಮೊದಲ ಒಂದು ಲಕ್ಷ ರೂಪಾಯಿಗೆ ಶೂನ್ಯ ಬಡ್ಡಿ. ನಂತರದ ಎರಡು ಲಕ್ಷ ರೂಪಾಯಿವರೆಗಿನ ಮೊತ್ತಕ್ಕೆ ಶೇ 1ರ ಬಡ್ಡಿ ದರ ವಿಧಿಸಲಾಗುವುದು. ಈ ಸಂಬಂಧ ನಿಯಮಗಳಿಗೆ ತಿದ್ದುಪಡಿ ತರಲಾಗುವುದು~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಧಾನಸಭೆಗೆ ತಿಳಿಸಿದರು.ಜೆಡಿಎಸ್‌ನ ಎಚ್.ಡಿ.ರೇವಣ್ಣ, ಎಚ್.ಸಿ.ಬಾಲಕೃಷ್ಣ, ಬಂಡೆಪ್ಪ ಕಾಶೆಂಪುರ ಮತ್ತಿತರರು ಈ ಸಂಬಂಧ ಸರ್ಕಾರದ ಗಮನ ಸೆಳೆದಾಗ ಮುಖ್ಯಮಂತ್ರಿ ಈ ಉತ್ತರ ನೀಡಿದರು.`ಒಂದರಿಂದ ಮೂರು ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಶೇ 1ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆ ಆಗಿದೆ. ಮೊದಲ ಒಂದು ಲಕ್ಷವನ್ನು ಬಡ್ಡಿ ರಹಿತವಾಗಿ ನೀಡಬೇಕು. ಉಳಿದ ಎರಡು ಲಕ್ಷ ರೂಪಾಯಿಗೆ ಶೇ 1ರಷ್ಟು ಬಡ್ಡಿ ವಿಧಿಸಬೇಕು. ಈ ಸಂಬಂಧ ಈ ಹಿಂದೆ ಹೊರಡಿಸಿದ್ದ ಆದೇಶಕ್ಕೆ ಮರುಜೀವ ನೀಡಬೇಕು~ ಎಂದು ಜೆಡಿಎಸ್ ಸದಸ್ಯರು ಸರ್ಕಾರವನ್ನು ಆಗ್ರಹಪಡಿಸಿದರು.ಆಗ ಮಧ್ಯಪ್ರವೇಶಿಸಿದ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಅವರು, `ಜೆಡಿಎಸ್ ಸದಸ್ಯರ ಬೇಡಿಕೆ ಸರಿ ಇದೆ. ಅದನ್ನು ಪರಿಗಣಿಸಬೇಕು. ರೈತರಿಗೆ ಬಿಜೆಪಿ ಸರ್ಕಾರ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡಿದೆ. ಮೂರು ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಸಾಲ ಪಡೆಯುವವರಿಗೆ ಮೂರು ಲಕ್ಷ ರೂಪಾಯಿ ನಂತರದ ಮೊತ್ತಕ್ಕೆ ಸಾಮಾನ್ಯ ಬಡ್ಡಿ ದರ ವಿಧಿಸಬೇಕು. ಮೊದಲ ಒಂದು ಲಕ್ಷವನ್ನು ಬಡ್ಡಿರಹಿತವಾಗಿ ನೀಡಬೇಕು. ನಂತರದ ಎರಡು ಲಕ್ಷ ರೂಪಾಯಿಗೆ ಶೇ 1ರ ಬಡ್ಡಿ ದರ ವಿಧಿಸಬೇಕು~ ಎಂದು ಸಲಹೆ ನೀಡಿದರು.ಬಿತ್ತನೆ ಬೀಜ ಸಬ್ಸಿಡಿ: `ರಾಜ್ಯ ಸರ್ಕಾರ ಬಿತ್ತನೆ ಬೀಜಕ್ಕೆ ಸಬ್ಸಿಡಿ ನೀಡುತ್ತಿರುವುದು ಕೇವಲ ಶೇ 20ರಷ್ಟು! ಆದರೆ, ಶೇ 50ರಷ್ಟು ರಿಯಾಯಿತಿ ನೀಡುತ್ತಿರುವುದಾಗಿ ಸರ್ಕಾರ ಸುಳ್ಳು ಹೇಳುತ್ತಿದೆ~ ಎಂದು ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಸಭೆಯಲ್ಲಿ ಮಂಗಳವಾರ ನಡೆಯಿತು.`ಪ್ರಯೋಜನಕ್ಕೆ ಬಾರದ ಬಿತ್ತನೆ ಬೀಜಕ್ಕೆ ಶೇ 50ರಷ್ಟು ರಿಯಾಯಿತಿ ನೀಡುವುದಾಗಿ ಸರ್ಕಾರ ಹೇಳುತ್ತದೆ. ಆದರೆ, ವಾಸ್ತವವಾಗಿ ಅಂತಹ ಬೀಜ ಬಳಕೆಗೆ ಯೋಗ್ಯ ಇರುವುದಿಲ್ಲ. ರೈತರು ಬಳಸುವಂತಹ ಬಿತ್ತನೆ ಬೀಜಗಳಿಗೆ ಸರ್ಕಾರ ನೀಡುತ್ತಿರುವುದು ಕೇವಲ ಶೇ 20ರಷ್ಟು ಸಬ್ಸಿಡಿ~ ಎಂದು ಟೀಕಿಸಿದರು.ಇದಕ್ಕೆ ಕೃಷಿ ಸಚಿವ ಉಮೇಶ ಕತ್ತಿ ಉತ್ತರಿಸಿ, `ಬಿತ್ತನೆ ಬೀಜಕ್ಕೆ ಹೆಚ್ಚಿನ ಸಬ್ಸಿಡಿ ನೀಡಿದರೆ, ಅದನ್ನು ರೈತರು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಹೀಗಾಗಿ ಎಲ್ಲ ಮಾದರಿಯ ಬಿತ್ತನೆ ಬೀಜಕ್ಕೂ ಶೇ 50ರಷ್ಟು ಸಬ್ಸಿಡಿ ನೀಡಲು ಸಾಧ್ಯ ಇಲ್ಲ~ ಎಂದರು.ಸಭೆಗೆ ನಿರ್ಧಾರ: ಈ ಪ್ರಕರಣ ಕುರಿತು ಪ್ರತಿಪಕ್ಷಗಳ ಮುಖಂಡರ ಜತೆ ಚರ್ಚಿಸಿ, ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಉಮೇಶ ಕತ್ತಿ ಬಳಿಕ ಸದನಕ್ಕೆ ತಿಳಿಸಿದರು. ಆ ಸಭೆಗೆ ಶಿವಲಿಂಗೇಗೌಡರನ್ನೂ ಆಹ್ವಾನಿಸುವುದಾಗಿ ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.