ಕೃಷ್ಣನ ಕಬಡ್ಡಿ ಧ್ಯಾನ...!

ಗುರುವಾರ , ಮೇ 23, 2019
28 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಕೃಷ್ಣನ ಕಬಡ್ಡಿ ಧ್ಯಾನ...!

Published:
Updated:

ಉಗೇ  ಉಗೇ ಉಗೇ ಉಗೇ

ಎತ್ತರ ಎತ್ತರಕ್ಕೆ ಏರಲೆಂಬ ಕಬಡ್ಡಿ

ಉತ್ತರ ಉತ್ತರಕ್ಕೆ ಬೆಳೆಯಲೆಂಬ ಕಬಡ್ಡಿ

ಮಣ್ಣಿನ ಆಟ ಕಬಡ್ಡಿ, ಧೈರ್ಯದ ಆಟ ಕಬಡ್ಡಿ...- ಹೀಗೆ ಕಬಡ್ಡಿ ಆಟದ ವಿಶೇಷತೆಗಳನ್ನು ಹಾಡಿನ ಮೂಲಕ ಕಟ್ಟಿ ಯುವ ಜನಾಂಗದಲ್ಲಿ, ವಿದ್ಯಾರ್ಥಿಗಳಲ್ಲಿ ಈ ಆಟದ ಬಗ್ಗೆ ಆಸಕ್ತಿ ಮೂಡಿಸಬೇಕು. ಆಟದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎನ್ನುವ ಆಸೆ ಕೃಷ್ಣ ಅವರದ್ದು. ಆದ್ದರಿಂದಲೇ ಅವರನ್ನು ಆತ್ಮೀಯರು `ಕಬಡ್ಡಿ ಕೃಷ್ಣ~ ಎಂದೇ ಕರೆಯುತ್ತಾರೆ.ಸ್ವಾತಂತ್ರ್ಯ ಸಂಗ್ರಾಮದ ವೇಳೆ ಯುವ ಜನಾಂಗವನ್ನು ಒಟ್ಟುಗೂಡಿಸಿ ದೇಶ ಭಕ್ತಿಯ ಜ್ವಾಲೆಯನ್ನು ಹೊತ್ತಿಸಿದ ಕಬಡ್ಡಿಗೆ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ. ಈ ಬಗ್ಗೆ ಕೃಷ್ಣ ಅವರಲ್ಲಿ ಒಂದಿಷ್ಟು ಆಸಕ್ತಿ ಕುಂದಿಲ್ಲ. ಅದೇ ಯೌವ್ವನದ ಹುರುಪು. ಕಬಡ್ಡಿ ಬಗ್ಗೆ ನಿರಂತರವಾಗಿ ಮಾತನಾಡಬಲ್ಲಷ್ಟು ಉಲ್ಲಾಸವನ್ನು ಅವರು ಉಳಿಸಿಕೊಂಡಿದ್ದಾರೆ.ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮ ಶತಮಾನೋತ್ಸವದ ಅಂಗವಾಗಿ ಸರ್ಕಾರ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕ್ರೀಡೆಗಳನ್ನು ಆಯೋಜಿಸಿತ್ತು. ಆಗ ಕೊಕ್ಕೊ ಹಾಗೂ ಕಬಡ್ಡಿಯಲ್ಲಿ ಕೃಪ್ಣಪ್ಪನವರಿಗೆ ಪ್ರಶಸ್ತಿ ಸಿಕ್ಕಿತ್ತು. ಅಂದಿನಿಂದ ಇಂದಿನವರೆಗೆ ಕಬಡ್ಡಿ ಮೇಲಿನ ಪ್ರೀತಿ ನಿರಂತರವಾಗಿದೆ. ಈ ಆಟದ ಮೇಲಿನ ಅಪಾರ ಪ್ರೇಮದ ಪರಿಣಾಮವಾಗಿಯೇ ಕರ್ನಾಟಕ ರಾಜ್ಯ ತಂಡದಲ್ಲಿ ಆಡಿದರು. 1980ರಲ್ಲಿ ನಾಯಕರೂ ಆದರು. ಸಿಐಎಲ್‌ನಲ್ಲಿ ಉದ್ಯೋಗಿಯಾಗಿದ್ದರು. 1984ರಲ್ಲಿ ರಾಜ್ಯ ತಂಡಕ್ಕೆ ಮ್ಯಾನೇಜರ್ ಆದರು. ಸತತ 12 ವರ್ಷಗಳ ಕಾಲ ರಾಜ್ಯ ತಂಡದಲ್ಲಿ ಆಡಿದರು.`ಮೈಯಾಗ ಇನ್ನೂ ಕಸುವು ಇದ್ದಿದ್ರಾ ಈಗಲೂ ಆಡ್ತಿದ್ದೆ. ಏನ್ ಮಾಡೋದು ಶಕ್ತಿ ಕುಂದೈತಿ. ಶಾಲಾ ಮಕ್ಳಿಗೆ ಕಬಡ್ಡಿ ಕಲಿಸ್ತೀನಿ~ ಎಂದು ನಗುತ್ತಲೇ ಹೇಳುವ 64 ವರ್ಷದ ಕೃಷ್ಣಪ್ಪನವರ ಕಬಡ್ಡಿ ಪ್ರೇಮ ಎಷ್ಟೆಂಬುದನ್ನು ಲೆಕ್ಕ ಹಾಕಬಹುದು.ಬದುಕಿನ ಇಳಿ ವಯಸ್ಸಿನಲ್ಲಿಯು ಆರಾಮವಾಗಿ ಇರಬೇಕೆಂದು ಅವರಿಗೆ ಎಂದೂ ಅನಿಸಿಲ್ಲ. ಇತ್ತೀಚಿಗೆ ಕ್ರಿಕೆಟ್‌ನ ಅಬ್ಬರದೊಳಗೆ ದೇಶಿ ಕ್ರೀಡೆ ಮಹತ್ವ ಕಡಿಮೆಯಾಗುತ್ತಿದೆ ಎನ್ನುವ ಕೊರಗಿದೆ. ಆದ್ದರಿಂದ `ಕಬಡ್ಡಿ ಉಳಿಸಿ ಕಬಡ್ಡಿ ಬೆಳಸಿ~ ಎನ್ನುವ ಧ್ಯೇಯ ವ್ಯಾಖ್ಯೆದೊಂದಿಗೆ `ಕಬಡ್ಡಿ ಆಡೋಣ ಬನ್ನಿ~ ಎನ್ನುವ ಪುಸ್ತಕ ಬರೆದಿದ್ದಾರೆ. ವಿದ್ಯಾರ್ಥಿಗಳಿಗೆ ಈ ಆಟದ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎನ್ನುವ ಆಸೆಯೊಂದಿಗೆ 1966ರಲ್ಲಿ `ವಿಕ್ರಮ್ ಕಬಡ್ಡಿ ಸಂಸ್ಥೆ~ ಆರಂಭಿಸಿದ್ದಾರೆ. ಈ ಸಂಸ್ಥೆ ಇಂದಿಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ.ಪ್ರಪಂಚದ 65 ದೇಶಗಳಲ್ಲಿ ಸುಮಾರು ಐದು ಕೋಟಿ ಜನ ಕಬಡ್ಡಿ ಆಡುತ್ತಾರೆ. ಇವುಗಳಲ್ಲಿ ಭಾರತ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ, ಜಪಾನ್, ಶ್ರೀಲಂಕಾ, ಥಾಯ್ಲೆಂಡ್, ಮಲೇಷ್ಯಾ, ಇರಾನ್, ಕೆನಡಾ, ಇಂಗ್ಲೆಂಡ್, ಇಟಲಿ, ಟ್ರಿನಿಡ್ಯಾಡ್-ಟೊಬಾಗೊ ಹಾಗೂ ಆಸ್ಟ್ರೇಲಿಯ ಸೇರಿದಂತೆ ಇನ್ನೂ ಕೆಲ ದೇಶಗಳು ವಾರ್ಷಿಕ ರಾಷ್ಟ್ರೀಯ ಪಂದ್ಯಾವಳಿಗಳನ್ನು ಆಯೋಜಿಸುತ್ತವೆ ಎನ್ನುವ ಅಂಶವನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.ಏಷ್ಯನ್ ಕ್ರೀಡೆಗಳಲ್ಲಿ ಕಬಡ್ಡಿ ಸೇರ್ಪಡೆಯಾಗಿದೆ. ಇದರ ನಂತರ ಭಾರತ ಪುರುಷರ ತಂಡ ಸತತ ಚಿನ್ನದ ಪದಕ ಜಯಿಸಿದೆ. ಈ ಸಲದ ಏಷ್ಯನ್ ಕೂಟದಲ್ಲಿ ಇದೇ ಮೊದಲ ಸಲ ಭಾರತ ಮಹಿಳಾ ಕಬಡ್ಡಿ ತಂಡ ಆಡುವ ಅವಕಾಶ ಪಡೆದಿತ್ತು. ಮಹಿಳಾ ತಂಡವೇ ಚಾಂಪಿಯನ್ ಆಗಿತ್ತು. ಆದ್ದರಿಂದ ಭಾರತದಲ್ಲಿ ಕಬಡ್ಡಿ ಆಡುವವರ ಪ್ರತಿಭಾವಂತರ ಸಂಖ್ಯೆ ಹೆಚ್ಚಿದೆ.ಭವಿಷ್ಯದ ದಿನಗಳಲ್ಲಿ ಒಲಿಂಪಿಕ್ ಕ್ರೀಡೆಗಳಲ್ಲೂ ಈ ಆಟ ಸೇರ್ಪಡೆಯಾಗುವ ವಿಶ್ವಾಸವಿದೆ. ಆಗಲೂ ಭಾರತದ್ದೇ ಪಾರಮ್ಯ ಎನ್ನುವ ವಿಶ್ವಾಸ!ಪ್ರಪಂಚದ ತಂಡ ಕ್ರೀಡೆಗಳಲ್ಲಿ ಯಾವುದೇ ಸಲಕರಣೆಗಳಿಲ್ಲದೇ ಆಡಬಹುದಾದ ಕ್ರೀಡೆ ಕಬಡ್ಡಿ. ಕ್ರಿಕೆಟ್, ಫುಟ್‌ಬಾಲ್, ಹಾಕಿ ಕ್ರೀಡೆಗೆ ವಿಶಾಲ ಮೈದಾನ ಅಗತ್ಯ. ಆದರೆ ಕಬ್ಬಡ್ಡಿಗೆ ಅಷ್ಟೊಂದು ಸ್ಥಳಾವಕಾಶದ ಅಗತ್ಯವಿಲ್ಲ.ನಿಯಮಗಳೂ ಸರಳವಾಗಿದ್ದು, ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತವೆ.  ಈ ಎಲ್ಲಾ ಅಂಶಗಳಿಂದ ದೇಶಿ ಕ್ರೀಡೆ ಕಬಡ್ಡಿ ಜನರಿಗೆ ಹತ್ತಿರವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮೋಜಿಗಾಗಿ ಆಡುತ್ತಾರೆ. ಆದ್ದರಿಂದ ಈ ಕ್ರೀಡೆಯನ್ನು ಇನ್ನೂ ಜನರ ಹತ್ತಿರಕ್ಕೆ ಕೊಂಡಯ್ಯಬೇಕು ಎನ್ನುವುದು ಅವರ ಸ್ಪಷ್ಟ ನುಡಿ.ಆದ್ದರಿಂದಲೇ ವಾರದಲ್ಲಿ ಒಂದು ದಿನ ನಿರ್ದಿಷ್ಟ ಶಾಲೆಗಳನ್ನು ಗುರುತಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಕಬಡ್ಡಿ ಬಗ್ಗೆ ಹೇಳಿಕೊಡುವ ಕೆಲಸವನ್ನು ಕೃಷ್ಣ ಅವರು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿಯು ಸಾಕಷ್ಟು ಅನುಭವಿ ಆಟಗಾರರಿದ್ದಾರೆ. ಅವರೂ ಸಹ ಶಾಲೆಗಳನ್ನು ಗುರುತಿಸಿ ವಿದ್ಯಾರ್ಥಿಗಳಿಗೆ ಈ ಕ್ರೀಡೆಯ ಬಗ್ಗೆ ಹೇಳಿಕೊಡುವ ಕೆಲಸ ಮಾಡಬೇಕು.ಇದರಿಂದ ಈ ಕ್ರೀಡೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ. ದೇಶಿ ಕ್ರೀಡೆಯ ಉಳಿವು ಸಾಧ್ಯವಾಗುತ್ತದೆ. ಆದ್ದರಿಂದಲೇ ಇತ್ತೀಚಿಗೆ ಪ್ರೌಢಶಾಲೆಯ ಬಾಲಕ ಹಾಗೂ ಬಾಲಕಿಯರಿಗಾಗಿ ಜಿಲ್ಲಾ ಮಟ್ಟದ ಪಂದ್ಯಗಳನ್ನು ಆಯೋಜಿಸಿದ್ದೆ ಎನ್ನುತ್ತಾರೆ ಕಬಡ್ಡಿ ಕೃಷ್ಣ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry