ಕೃಷ್ಣಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ

7

ಕೃಷ್ಣಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ

Published:
Updated:
ಕೃಷ್ಣಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರ ನಿವಾಸ, ಪಾಲುದಾರನ ನಿವಾಸ ಮತ್ತು ಎರಡು ಕಚೇರಿಗಳ ಮೇಲೆ ಗುರುವಾರ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, 20 ವಸತಿ ಬಡಾವಣೆಗಳ ನಕ್ಷೆಗಳು, ಒಂದು ಕೆ.ಜಿ. ಚಿನ್ನಾಭರಣ, ಎಂಟು ಕೆ.ಜಿ. ಬೆಳ್ಳಿ, ಏಳು ಲಕ್ಷ ರೂಪಾಯಿ ನಗದು, ಐಷಾರಾಮಿ ಕಾರುಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.ರಾಜಾಜಿನಗರ ನಿವಾಸಿಯಾಗಿರುವ ವಕೀಲ ಎಚ್.ಸಿ.ಪ್ರಕಾಶ್ ಎಂಬುವರು ಕೃಷ್ಣಪ್ಪ, ಅವರ ಪುತ್ರ ಹಾಗೂ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ, ಪತ್ನಿ ಪ್ರಿಯದರ್ಶಿನಿ, ಮತ್ತೊಬ್ಬ ಪುತ್ರ ಪ್ರದೀಪ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಈ ಸಂಬಂಧ ಜನವರಿ 30ರಂದು ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು.ಪ್ರಕರಣದ ತನಿಖೆಯ ಭಾಗವಾಗಿ ಗುರುವಾರ ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ನಾಲ್ವರು ಡಿವೈಎಸ್‌ಪಿಗಳ ನೇತೃತ್ವದಲ್ಲಿ ನಾಲ್ಕು ಪ್ರತ್ಯೇಕ ತಂಡಗಳು ದಾಳಿಯಲ್ಲಿ ಪಾಲ್ಗೊಂಡಿದ್ದು, ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ವಿಜಯನಗರದ ಸರ್ವೀಸ್ ರಸ್ತೆಯಲ್ಲಿರುವ ಕೃಷ್ಣಪ್ಪ ಅವರ ನಿವಾಸದ ಮೇಲೆ ನಡೆದ ದಾಳಿಯ ನೇತೃತ್ವವನ್ನು ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಅಬ್ದುಲ್ ಅಹದ್ ವಹಿಸಿದ್ದು, ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಇನ್ಸ್‌ಪೆಕ್ಟರ್ ಶಿವಶಂಕರ್ ಅವರು ಶೋಧನಾ ಕಾರ್ಯ ನಡೆಸಿದರು.ಸಂಜೆಯವರೆಗೂ ತನಿಖಾ ತಂಡ ಈ ಮನೆಯಲ್ಲಿ ಪರಿಶೀಲನೆ ನಡೆಸಿತು.ಕೃಷ್ಣಪ್ಪ ಅವರ ಒಡೆತನದ ರಿಯಲ್ ಎಸ್ಟೇಟ್ ಕಂಪೆನಿಗಳು ವಿವಿಧ ಕಡೆಗಳಲ್ಲಿ ನಿರ್ಮಿಸಿರುವ ಹಾಗೂ ನಿರ್ಮಿಸುತ್ತಿರುವ 20 ವಸತಿ ಬಡಾವಣೆಗಳ ನಕ್ಷೆಗಳು ತನಿಖಾ ತಂಡಕ್ಕೆ ದೊರೆತಿವೆ. ಇಲ್ಲಿಯೇ ಒಂದು ಕೆ.ಜಿ. ಚಿನ್ನ, ಎಂಟು ಕೆ.ಜಿ.ಬೆಳ್ಳಿಯ ವಸ್ತುಗಳು, ರೂ 7 ಲಕ್ಷ ನಗದು, ಆರ್‌ಪಿಸಿ ಬಡಾವಣೆಯಲ್ಲಿರುವ ನಿವೇಶನದ ದಾಖಲೆಗಳನ್ನು ವಶಪಡಿಸಿ ಕೊಳ್ಳಲಾಗಿದೆ. ವಿವಿಧ ಕಂಪೆನಿಗಳ ಐಷಾರಾಮಿ ಕಾರುಗಳು, ಚಿನ್ನ, ಬೆಳ್ಳಿಯ ಆಭರಣಗಳು, ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳನ್ನು ಮೌಲ್ಯ ಮಾಪನ ಮಾಡಲಾಗಿದೆ. ತಾಂತ್ರಿಕ ತಜ್ಞರ ನೆರವಿನಲ್ಲಿ ಮನೆಯ ಮೌಲ್ಯಮಾಪನವನ್ನೂ ಮಾಡಲಾಗಿದೆ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ಅವರು ತಿಳಿಸಿದ್ದಾರೆ.ಕೃಷ್ಣಪ್ಪ ಅವರ ವ್ಯಾವಹಾರಿಕ ಪಾಲುದಾರರಾಗಿರುವ ಅಶೋಕ್ ಗೌಡ ಎಂಬುವರ ವಿಜಯನಗರ ನಿವಾಸದ ಮೇಲೆ ಡಿವೈಎಸ್‌ಪಿ ಎಸ್.ಗಿರೀಶ್ ನೇತೃತ್ವದ ತಂಡ ದಾಳಿ ನಡೆಸಿತು. ಮನೆಯಲ್ಲಿ ಲಭ್ಯವಾದ ಕೆಲವು ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ಅಲ್ಲಿದ್ದ ಪೀಠೋಪಕರಣ ಮತ್ತು ಗೃಹೋಪಯೋಗಿ ವಸ್ತುಗಳ ಮೌಲ್ಯಮಾಪನವನ್ನೂ ನಡೆಸಲಾಗಿದೆ.ಕಚೇರಿ ಮೇಲೆ ದಾಳಿ: ವಿಜಯನಗರದ ಎರಡು ಮನೆಗಳಲ್ಲಿ ಶೋಧ ಕಾರ್ಯ ನಡೆಯುತ್ತಿರುವಾಗಲೇ ಡಿವೈಎಸ್‌ಪಿಗಳಾದ ಎಚ್.ಎಸ್.ಮಂಜುನಾಥ್ ಮತ್ತು ಪ್ರಸನ್ನ ವಿ.ರಾಜು ನೇತೃತ್ವದ ಎರಡು ತಂಡಗಳಲ್ಲಿ ಬಸವೇಶ್ವರ ವೃತ್ತದ ಹೈ-ಪಾಯಿಂಟ್ ಕಟ್ಟಡದಲ್ಲಿರುವ ಕೃಷ್ಣಪ್ಪ ಅವರ ಕಚೇರಿಗಳ ಮೇಲೆ ದಾಳಿ ನಡೆಯಿತು. ಈ ಕಟ್ಟಡದ ಐದನೇ ಮಹಡಿಯಲ್ಲಿರುವ ಲಕ್ಷ್ಮಿ ನರಸಿಂಹ ಎಂಟರ್‌ಪ್ರೈಸಸ್‌ನ ಕಚೇರಿಯಲ್ಲಿ ಮಂಜುನಾಥ್ ಅವರು ಶೋಧ ಕಾರ್ಯ ಕೈಗೊಂಡರು. ಒಂಬತ್ತನೇ ಮಹಡಿಯಲ್ಲಿರುವ ಇದೇ ಕಂಪೆನಿಯ ಮತ್ತೊಂದು ಕಚೇರಿಯಲ್ಲಿ ಪ್ರಸನ್ನ ವಿ.ರಾಜು ನೇತೃತ್ವದ ತಂಡ ಶೋಧ ನಡೆಸಿತು.ಒಂಬತ್ತನೇ ಮಹಡಿಯ ಕಚೇರಿಯಲ್ಲಿ ಬ್ಯಾಂಕ್ ದಾಖಲಾತಿಗಳು, ಕಂಪೆನಿಯು ಬಳ್ಳಾರಿ, ಚಿತ್ರದುರ್ಗ, ರಾಯಚೂರು ಮತ್ತಿತರ ಕಡೆಗಳಲ್ಲಿ ನಿರ್ಮಿಸುತ್ತಿರುವ ಪವನ ವಿದ್ಯುತ್ ಘಟಕಗಳಿಗೆ ಸಂಬಂಧಿಸಿದ ದಾಖಲೆಗಳು, ಮರ್ಸಿಡಿಸ್ ಬೆಂಜ್ ಕಾರಿನ ದಾಖಲೆ ಮತ್ತು ಕೆಲ ವಸತಿ ಬಡಾವಣೆಗಳ ನಕ್ಷೆಗಳು ದೊರೆತಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.

 

ಐದನೇ ಮಹಡಿಯಲ್ಲಿರುವ ಕಚೇರಿಯಲ್ಲೂ ಕೆಲ ದಾಖಲೆಗಳು ದೊರೆತಿವೆ ಎಂದು ಸತ್ಯನಾರಾಯಣ ರಾವ್ ಪ್ರಕಟಣೆಯಲ್ಲಿ ವಿವರಿಸಿದ್ದಾರೆ. ಇನ್ನೂ ಎರಡು ಸ್ಥಳಗಳಲ್ಲಿ ದಾಖಲೆಗಳಿರುವ ಬಗ್ಗೆ ಮಧ್ಯಾಹ್ನದ ವೇಳೆಗೆ ತನಿಖಾ ತಂಡಕ್ಕೆ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಈ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಅಲ್ಲಿ ಯಾವುದೇ ದಾಖಲೆಗಳು ಅಥವಾ ಆಸ್ತಿ ಪತ್ತೆಯಾಗಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

 

ಎಲ್ಲ ಪ್ರಶ್ನೆಗಳಿಗೂ ಉತ್ತರ
ಬೆಳಿಗ್ಗೆ ಆರು ಗಂಟೆಯಿಂದಲೇ ಲೋಕಾಯುಕ್ತ ಪೊಲೀಸರು ದಾಳಿ ಆರಂಭಿಸಿದ್ದರು. ಡಿವೈಎಸ್‌ಪಿ ಅಬ್ದುಲ್ ಅಹದ್ ಮತ್ತು ಇನ್‌ಸ್ಪೆಕ್ಟರ್ ಶಿವಶಂಕರ್ ಅವರು ವಿಜಯನಗರದ ನಿವಾಸದಲ್ಲಿ ಶೋಧಕ್ಕೆ ತೆರಳಿದಾಗ ಎಂ.ಕೃಷ್ಣಪ್ಪ ಮತ್ತು ಪ್ರಿಯಕೃಷ್ಣ ಅವರು ಮನೆಯಲ್ಲೇ ಇದ್ದರು. ದಿನವಿಡೀ ಮನೆಯಲ್ಲೇ ಇದ್ದ ಇಬ್ಬರೂ, ತನಿಖಾ ತಂಡಕ್ಕೆ ಪೂರ್ಣ ಸಹಕಾರ ನೀಡಿದರು ಎಂದು ಲೋಕಾಯುಕ್ತದ ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.`ಪ್ರಕಾಶ್ ಅವರು ಖಾಸಗಿ ದೂರಿನಲ್ಲಿ ಉಲ್ಲೇಖಿಸಿರುವ ಆರೋಪ ಗಳಿಗೆ ಸಂಬಂಧಿಸಿದಂತೆ ಇಬ್ಬರೂ ತನಿಖಾ ತಂಡಕ್ಕೆ ಸಂಯಮದಿಂದ ಉತ್ತರ ನೀಡಿದರು. ವಿವಿಧ ದಾಖಲೆ ಗಳಲ್ಲಿ ಪ್ರಸ್ತಾಪವಾಗಿದ್ದ ವಿಷಯಗಳು, ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿ ಕುರಿತ ಎಲ್ಲ ಪ್ರಶ್ನೆಗಳಿಗೂ ಅವರು ತಾಳ್ಮೆಯಿಂದ ಉತ್ತರ ನೀಡಿ ದರು~ ಎಂದು ಮೂಲಗಳು ಹೇಳಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry