ಮಂಗಳವಾರ, ನವೆಂಬರ್ 12, 2019
24 °C

ಕೃಷ್ಣಮೂರ್ತಿ, ಅಂಜಲಿ ಪರ ಪರಮೇಶ್ವರ್ ಪತ್ರ

Published:
Updated:

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಾಲಿಕೆ ಸದಸ್ಯ ಮುನಿರತ್ನ ಬದಲಿಗೆ 2008ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಪಿ.ಎನ್.ಕೃಷ್ಣಮೂರ್ತಿ ಅವರಿಗೇ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

2010ರಲ್ಲಿ ಗಂಗಾನಗರದಲ್ಲಿ ಕಾಂಪೌಂಡ್ ಕುಸಿದು ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದ ಪ್ರಕರಣದ ತನಿಖೆ ಲೋಕಾಯುಕ್ತದಲ್ಲಿ ಬಾಕಿ ಇರುವುದನ್ನು ಆಧರಿಸಿ ಮುನಿರತ್ನ ಅವರಿಗೆ ಟಿಕೆಟ್ ನೀಡದಂತೆ ಇದೇ 1ರಂದು ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ. ಕೊರಟಗೆರೆ ಮೂಲದವರಾದ ಕೃಷ್ಣಮೂರ್ತಿ ಅವರಿಗೆ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಟಿಕೆಟ್ ನಿರಾಕರಿಸಿದರೆ ತಮ್ಮ ಗೆಲುವಿಗೆ ಅಡ್ಡಿಯಾಗುತ್ತದೆ ಎಂಬ ಆತಂಕವನ್ನೂ ಹೊರಹಾಕಿದ್ದಾರೆ.`ಕೇಂದ್ರ ಚುನಾವಣಾ ಸಮಿತಿಯು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಮುನಿರತ್ನ ಅವರ ಹೆಸರನ್ನು ಶಿಫಾರಸು ಮಾಡಿದೆ. ಆದರೆ, ಅವರ ವಿರುದ್ಧ ಗಂಭೀರ ಸ್ವರೂಪದ ಆರೋಪವುಳ್ಳ ಪ್ರಕರಣವೊಂದರ ತನಿಖೆ ಲೋಕಾಯುಕ್ತದಲ್ಲಿ ಬಾಕಿ ಇದೆ. ಮುನಿರತ್ನ ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರು' ಎಂದು ಪರಮೇಶ್ವರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.`ಕಳೆದ ಚುನಾವಣೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕೃಷ್ಣಮೂರ್ತಿ ಐದು ವರ್ಷಗಳಿಂದಲೂ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇವರು ಕೊರಟಗೆರೆ ಮೂಲದವರು. ಕೃಷ್ಣಮೂರ್ತಿ ಅವರಿಗೆ ಟಿಕೆಟ್ ನಿರಾಕರಿಸಿದರೆ, ನಾನು ಸ್ಪರ್ಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಮೇಲೆ ತೀರಾ ಕೆಟ್ಟ ಪರಿಣಾಮ ಬೀರುತ್ತದೆ. ಈ ಅಂಶಗಳನ್ನೂ ಪರಿಗಣಿಸಿ ಕೃಷ್ಣಮೂರ್ತಿ ಅವರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.ಅಂಜಲಿ ನಿಂಬಾಳ್ಕರ್‌ಗೆ ಬೆಂಬಲ: ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ರಫೀಕ್ ಖತಲ್‌ಸಾಬ್ ಖಾನಾಪುರಿ ಬದಲಿಗೆ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಅವರ ಪತ್ನಿ ಅಂಜಲಿ ನಿಂಬಾಳ್ಕರ್‌ಗೆ ಟಿಕೆಟ್ ನೀಡಬೇಕು ಎಂಬ ಶಿಫಾರಸನ್ನೂ ಅವರು ಇದೇ ಪತ್ರದಲ್ಲಿ ಮಾಡಿದ್ದಾರೆ. ರಫೀಕ್ ವಿರುದ್ಧ ಕೆಲವು ಆರೋಪಗಳು ಇರುವುದರಿಂದ ಅವರಿಗೆ ಟಿಕೆಟ್ ನೀಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.ಪರಮೇಶ್ವರ್ ಅವರು ಸೋನಿಯಾ ಅವರಿಗೆ ಬರೆದಿರುವ ಪತ್ರ ಸೋರಿಕೆಯಾಗಿದೆ. ಪತ್ರದಲ್ಲಿ ಪ್ರಸ್ತಾಪಿಸಿರುವ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಮೊದಲ ಪಟ್ಟಿಯಲ್ಲಿ ಪ್ರಕಟವಾಗಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿದ ಪರಮೇಶ್ವರ್, `ಕೆಲವು ಆಕಾಂಕ್ಷಿಗಳ ಕುರಿತು ಎಐಸಿಸಿ ಮಾಹಿತಿ ಕೋರಿತ್ತು. ಈ ಕಾರಣಕ್ಕಾಗಿ ಪತ್ರ ಬರೆದಿದ್ದೇನೆ' ಎಂದರು.ಮುನಿರತ್ನ ಅಸಮಾಧಾನ: ತಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ಬಾಕಿ ಇದೆ ಎಂಬುದಾಗಿ ಪತ್ರ ಬರೆದಿರುವುದಕ್ಕೆ ಮುನಿರತ್ನ ಅಸಮಾಧಾನ ಹೊರಹಾಕಿದ್ದಾರೆ. ಟಿಕೆಟ್ ತಪ್ಪಿಸುವುದಕ್ಕಾಗಿಯೇ ಕೆಲವರು ಕೆಪಿಸಿಸಿ ಅಧ್ಯಕ್ಷರಿಗೆ ಸುಳ್ಳುಮಾಹಿತಿ ನೀಡಿ ಪತ್ರ ಬರೆಸಿದ್ದಾರೆ ಎಂದು ಆರೋಪಿಸಿದ್ದಾರೆ.`ನನ್ನ ವಿರುದ್ಧ ಗಂಭೀರ ಸ್ವರೂಪದ ಯಾವುದೇ ಆರೋಪ ಇಲ್ಲ. ಗಂಗಾನಗರದಲ್ಲಿ ಸಂಭವಿಸಿದ ಗೋಡೆ ಕುಸಿತ ಪ್ರಕರಣ ನನಗೆ ಸಂಬಂಧಿಸಿದ್ದಲ್ಲ. ಅದೊಂದು ಆಕಸ್ಮಿಕ ಘಟನೆ. ಗಂಭೀರ ಸ್ವರೂಪದ ಯಾವುದೇ ಆರೋಪ ನನ್ನ ವಿರುದ್ಧ ಇದ್ದಿದ್ದರೆ ನಾನು ಟಿಕೆಟ್‌ಗೆ ಅರ್ಜಿಯನ್ನೇ ಸಲ್ಲಿಸುತ್ತಿರಲಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)