ಕೃಷ್ಣಯ್ಯಶೆಟ್ಟಿ ತೋರಿದ ದಾರಿ

7

ಕೃಷ್ಣಯ್ಯಶೆಟ್ಟಿ ತೋರಿದ ದಾರಿ

Published:
Updated:

ಕೋಲಾರ ಜಿಲ್ಲೆಯಲ್ಲಿ ಮತದಾರರಿಗೆ ಆಮಿಷವೊಡ್ಡುವ ಕೆಟ್ಟಪರಂಪರೆಯನ್ನು ಪ್ರಾರಂಭಿಸಿದವರು ಮಾಲೂರು ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ. ಲಾಡು, ಗಂಗಾ ತೀರ್ಥ, ಪ್ರವಾಸ, ವಿಮೆ ಸೌಲಭ್ಯ ನೀಡುವ ಮೂಲಕ ಮೊದಲ ಬಾರಿಗೆ ಶಾಸಕರಾದರು.

 

ಅವರು ತೋರಿದ ದಾರಿಯಲ್ಲಿಯೇ ಈಗ ಇತರರು ಸಾಗಿದ್ದಾರೆ. ಮಾಲೂರು, ಮುಳಬಾಗಲು ಮತ್ತು ಬಂಗಾರಪೇಟೆ ಕ್ಷೇತ್ರಗಳು `ಕೊಡುಗೈ ದಾನಿ, ಉದ್ಯಮಿ ರಾಜಕಾರಣಿಗಳ~ ಆಡುಂಬೊಲವಾಗಿ ಹೋಗಿವೆ.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜಿ.ಇ.ರಾಮೇಗೌಡ ತಮ್ಮದೇ ಹೆಸರಿನ ಟ್ರಸ್ಟ್ ಮೂಲಕವೇ 5 ಬಸ್‌ಗಳಲ್ಲಿ ಧರ್ಮಸ್ಥಳಕ್ಕೆ 4 ದಿನಗಳ ಉಚಿತ ಧಾರ್ಮಿಕ ಪ್ರವಾಸ, ರತ್ನ ಕ್ಲಿನಿಕ್, ಕೌಸಲ್ಯ ಆಸ್ಪತ್ರೆಯಲ್ಲಿ ಹೆಲ್ತ್ ಕಾರ್ಡ್ ಆಧಾರಿತ ಉಚಿತ ಆರೋಗ್ಯ ಸೇವೆ ನೀಡುತ್ತಿದ್ದಾರೆ.

 

ಮಾಲೂರಿನ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ಎಲ್ಲ ವಿದ್ಯಾರ್ಥಿಗಳ ಬಸ್ ಪಾಸ್ ಖರ್ಚನ್ನು ಭರಿಸುವುದು, ಪ್ರತಿ ಸ್ತ್ರೀಶಕ್ತಿ ಸಂಘಗಳಿಗೂ ರೂ. 25 ಸಾವಿರ ನೀಡುವ ಯೋಜನೆಗಳೂ ಅವರಲ್ಲಿವೆ. ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಏನು ಮಾಡಿದರೂ ಅದಕ್ಕೆ ಪ್ರತಿಯಾಗಿ ಮುಂದುವರಿಯುವ ಕೋಡಿಹಳ್ಳಿ ಮಂಜುನಾಥ ಎಲ್ಲರಿಗೂ ಗಣಪತಿ ಮೂರ್ತಿಗಳನ್ನು ಹಂಚಿದ್ದಾರೆ. ಆರ್ಕೆಸ್ಟ್ರಾಗಳಿಗೆ ಹಣ ನೀಡಿದ್ದಾರೆ. `ಮಾತೆಯರ ಆಶೀರ್ವಾದ~ ಎಂಬ ಕಾರ್ಯಕ್ರಮ ನಡೆಸಿ ಸುಮಾರು 25 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಅರಿಶಿನ-ಕುಂಕುಮದ ಜೊತೆಗೆ ಬಿಂದಿಗೆ ಕೊಳಗಗಳನ್ನು ನೀಡಿದ್ದಾರೆ.ಪ್ರವಾಸ ಕಾರ್ಯಕ್ರಮವನ್ನು ಆರಂಭಿಸಿದ ಖ್ಯಾತಿಯುಳ್ಳ ಕೃಷ್ಣಯ್ಯಶೆಟ್ಟಿ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರಿಗೆ ಕೊಳಗ -ಗುಂಡಿ, ಸೀರೆ, ಸಫಾರಿ ಹಂಚಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಿ ಪ್ರತಿಯೊಬ್ಬರಿಗೂ ಸ್ವೆಟರ್ ಹಂಚಿದ್ದಾರೆ.ಮುಳಬಾಗಲಿನಲ್ಲಿ ಕೊತ್ತನೂರು ಮಂಜುನಾಥ್ ಉಚಿತ ನೀರು ಟ್ಯಾಂಕರ್ ಪೂರೈಕೆ, ದೇವಾಲಯಗಳಿಗೆ ಹಣ,  ಕೆಲವು ಅನುಯಾಯಿಗಳಿಗೆ ಕಾರು, ಪತ್ರಕರ್ತರಿಗೆ ಬೈಕ್‌ಗಳನ್ನು ಕೊಡಿಸಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ.

 

ಬಂಗಾರಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿರುವ ಎಸ್.ಎನ್.ರೆಸಾರ್ಟ್ ನಾರಾಯಣಸ್ವಾಮಿ ಎಸ್.ಎನ್. ಚಾರಿಟಬಲ್ ಟ್ರಸ್ಟ್‌ನಿಂದ ಸ್ವೆಟರ್, ಟೀ ಶರ್ಟ್‌ಗಳನ್ನು ಹಂಚುತ್ತಿದ್ದಾರೆ.

 

ಎರಡು ಬಸ್ ಖರೀದಿಸಿ ಒಂದು ವಾರದಿಂದ ಜನರನ್ನು ಗೊರವನಹಳ್ಳಿಗೆ ಧಾರ್ಮಿಕ ಪ್ರವಾಸಕ್ಕೂ ಕಳುಹಿಸುತ್ತಿದ್ದಾರೆ. ಕೋಲಾರ ಶಾಸಕ ವರ್ತೂರು ಪ್ರಕಾಶ್ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಿ ವ್ಯಾಪಾರಿಗಳ ಪ್ರತಿಭಟನೆಯನ್ನೂ ಎದುರಿಸಿದ್ದಾರೆ.ಆಕಾಂಕ್ಷಿಗಳ ಪರವಾದ ಸುದ್ದಿಗಳನ್ನು ಜೋರಾಗಿಯೇ ಬರೆಯಲು ಆಸಕ್ತಿ ತೋರಿರುವ ಕೆಲವು ಪತ್ರಕರ್ತರಿಗೆ ಈಗಲೇ ಬೈಕ್‌ಗಳು, ಮೊಬೈಲ್‌ಗಳು ದೊರಕಿವೆ. ಬೈಕ್ ಬೇಡವೆಂದವರಿಗೆ `ಕವರ್~ ಕೊಟ್ಟಿದ್ದಾರೆ. `ಆಸೆಬುರುಕ ಮತದಾರರಂತೂ ದಿಲ್‌ಖುಷ್ ಆಗಿದ್ದಾರೆ. ಯಾರು ಕೊಟ್ಟರೂ ಬೇಡವೆನ್ನದೆ ಕೈಯೊಡ್ಡಿ, ಸೆರಗೊಡ್ಡಿ ಪಡೆಯುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry