ಕೃಷ್ಣರಾಜ ಒಡೆಯರ್‌ಗೆ ಭಾರತರತ್ನ ಪ್ರಶಸ್ತಿ ನೀಡಲು ಆಗ್ರಹ

7

ಕೃಷ್ಣರಾಜ ಒಡೆಯರ್‌ಗೆ ಭಾರತರತ್ನ ಪ್ರಶಸ್ತಿ ನೀಡಲು ಆಗ್ರಹ

Published:
Updated:

ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಮರಣೋತ್ತರ ಗೌರವ ಡಾಕ್ಟರೇಟ್ ನೀಡಲು ಕೈಗೊಂಡಿರುವ ನಿರ್ಣಯಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದರು. ಮೈಸೂರು ಕನ್ನಡ ವೇದಿಕೆಯು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮೈಸೂರು  ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡುತ್ತಿರುವುದು ಸೂಕ್ತವೇ? ವಿಷಯ ಕುರಿತು ನಟರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಮತ್ತು ಸಂವಾದದಲ್ಲಿ ಭಿನ್ನ, ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾದವು.ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಗಾಂಧೀಜಿ ನೀಡಿರುವ ರಾಜರ್ಷಿ ಬಿರುದಿಗೆ ಯಾವ ಗೌರವ, ಪ್ರಶಸ್ತಿಗಳು ಸರಿಸಾಟಿಯಲ್ಲ. ಇಷ್ಟು ವರ್ಷದ ಬಳಿಕ ಗೌರವ ಡಾಕ್ಟರೇಟ್ ನೀಡಿ ಅವರನ್ನು ಅವಮಾನಿಸಬಾರದು. ಬದಲಿಗೆ ನಿರ್ಣಯನ್ನು ಕೈಬಿಟ್ಟು ಭಾರತ ರತ್ನ ನೀಡುವಂತೆ ಸರ್ಕಾರಕ್ಕೆ ವಿಶ್ವವಿದ್ಯಾನಿಲಯ ಶಿಫಾರಸು ಮಾಡಲಿ ಎಂದು ಬಹುತೇಕರು ಅಭಿಪ್ರಾಯಪಟ್ಟರು. ಡಾಕ್ಟರೇಟ್ ನೀಡಲು ಸ್ಪರ್ಧೆ: ‘ವಿಶ್ವವಿದ್ಯಾನಿಲಯಗಳು ಪ್ರತಿ ವರ್ಷ ಗೌರವ ಡಾಕ್ಟರೇಟ್ ನೀಡಬೇಕು ಎನ್ನುವ ನಿಯಮವೇನೂ ಇಲ್ಲ.  ಆದರೆ ಈಗ ಗೌರವ ಡಾಕ್ಟರೇಟ್ ನೀಡಲು ವಿಶ್ವವಿದ್ಯಾನಿಲಯಗಳು ಸ್ಪರ್ಧೆಗೆ ಇಳಿದಿವೆ ಎಂದು ಕುವೆಂಪು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪಿ.ವೆಂಕಟರಾಮಯ್ಯ ವಿಷಾದ ವ್ಯಕ್ತಪಡಿಸಿದರು.‘ವಿಶ್ವವಿದ್ಯಾನಿಲಯ ಕೈಗೊಂಡಿರುವ ನಿರ್ಣಯದಿಂದ ರಾಜ್ಯಪಾಲರಿಗೆ ಮುಜುಗರ ಉಂಟಾಗಿದೆ. ವಿವಿ ನೀಡುವ ಗೌರವ ಡಾಕ್ಟರೇಟ್‌ಗೆ ಅನುಮತಿ ನೀಡುವಂತೆಯೂ ಇಲ್ಲ, ಬಿಡುವಂತೆಯೂ ಇಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ ಹಿರಿಮೆಗೆ ಭಾರತ ರತ್ನ ಪ್ರಶಸ್ತಿ ಕೂಡ ಕಡಿಮೆ. ಒಂದು ವೇಳೆ ವಿಶ್ವವಿದ್ಯಾನಿಲಯವು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಗೌರವ ಡಾಕ್ಟರೇಟ್ ನೀಡಬೇಕೆಂದಿದ್ದರೆ ಬೇರೆಯವರೊಂದಿಗೆ  ನೀಡುವ ಅಗತ್ಯವಿರಲಿಲ್ಲ. ಹೀಗಾಗಿ ಡಾಕ್ಟರೇಟ್ ನೀಡಬೇಕೆನ್ನುವ ನಿರ್ಧಾರವನ್ನು ಸಿಂಡಿಕೇಟ್ ತಡೆ ಹಿಡಿಯುವ ನಿರ್ಣಯ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ವಿವಿಯದು ತಪ್ಪಲ್ಲ: ‘ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಗೌರವ ಡಾಕ್ಟರೇಟ್ ಬೇಡದಾಗಿತ್ತು. ಹಾಗಂತ ಡಾಕ್ಟರೇಟ್ ನೀಡುವ  ವಿಶ್ವವಿದ್ಯಾನಿಲಯದ ನಿರ್ಧಾರವನ್ನು ತಪ್ಪು ಎಂದು ಹೇಳಲಾಗದು. ಅದು ವಿವಿಗೆ ತಪ್ಪು ಎಂದು ಅರಿವಾದರೆ  ಭಾರತ ರತ್ನ ನೀಡಬೇಕು ಎಂಬ ನಿರ್ಣಯ ಕೈಗೊಳ್ಳಲಿ. ರಾಜರು ಬರಬಹುದು, ಹೋಗಬಹುದು ಆದರೆ  ನಮ್ಮೆಲ್ಲರ ಮನಸ್ಸಿನಲ್ಲಿ ನಾಲ್ವಡಿ ರಾಜರ್ಷಿಯಾಗಿ ನೆಲಸಿದ್ದಾರೆ’ ಎಂದು ಹಿರಿಯ ಪತ್ರಕರ್ತ ಕೃಷ್ಣವಟ್ಟಂ ಅಭಿಪ್ರಾಯಪಟ್ಟರು.ವಿವಿಗೆ ನಾಲ್ವಡಿ ಹೆಸರಿಡಿ: ಮೈಸೂರು ವಿಶ್ವವಿದ್ಯಾನಿಲಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಬೇಕು ಎಂದು ಬಹುಜನ  ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಎನ್.ಮಹೇಶ್ ಒತ್ತಾಯಿಸಿದರು. ವಿಶ್ವವಿದ್ಯಾನಿಲಯ ಸ್ಥಾಪನೆ  ಮಾಡಿದ ನಾಲ್ವಡಿ ಅವರ ಹೆಸರನ್ನು ವಿಶ್ವವಿದ್ಯಾನಿಲಯಕ್ಕೆ ನಾಮಕರಣ ಮಾಡುವುದು ಸೂಕ್ತ. ತನ್ನ ಪ್ರತಿ ಭೆಯನ್ನು ಹತ್ತಾರು ಕೋಟಿಗೆ ಹರಾಜು ಹಾಕಿಕೊಳ್ಳುವ ಸಚಿನ್ ತೆಂಡುಲ್ಕರ್ ಅವರೊಂದಿಗೆ ನಾಲ್ವಡಿ ಅವರಿಗೆ  ಡಾಕ್ಟರೇಟ್ ನೀಡುವುದು ನಾಡಿನ ಜನತೆಯನ್ನು ಅವಮಾನಿಸಿದಂತೆ ಎಂದರು.ಅವಿವೇಕದ ನಿರ್ಣಯ: ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಇಷ್ಟು ವರ್ಷದ ಬಳಿಕ ಗೌರವ ಡಾಕ್ಟರೇಟ್ ನೀಡಬೇಕು  ಎನ್ನುವುದು ಅವಿವೇಕದ ನಿರ್ಣಯ. ವಿಶ್ವವಿದ್ಯಾನಿಲಯದ ಸ್ಥಾಪಕರಾದ ಅವರಿಗೆ ಗೌರವ ನೀಡಬೇಕು  ಎಂದಿದ್ದರೆ  ಅವರು ಮರಣಹೊಂದಿದ ಸಮಯದಲ್ಲಿ ನೀಡಬೇಕಿತ್ತು. ಹೀಗಾಗಿ 2016ಕ್ಕೆ ವಿವಿ ಸ್ಥಾಪನೆಯಾಗಿ 100 ವರ್ಷ  ಕಳೆಯುತ್ತದೆ. ಆಗ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಬೇಕು’ ಎಂದು  ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಸತ್ಯನಾರಾಯಣ್ ರಾವ್ ಸಲಹೆ ನೀಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry