ಕೃಷ್ಣವೇಣಿಯ ಕೇಶ ಶೃಂಗಾರ

7

ಕೃಷ್ಣವೇಣಿಯ ಕೇಶ ಶೃಂಗಾರ

Published:
Updated:

ಸಿಂಹ ರಾಶಿಯ ಅಂಚಿಗೆ ಅಂದರೆ ಸಿಂಹವನ್ನು ಕಲ್ಪಿಸಿಕೊಂಡರೆ ಅದರ ಬಾಲದ ಹತ್ತಿರ ಇರುವ ನಕ್ಷತ್ರಗಳ ಗುಂಪಿಗೆ ‘ಕೋಮಾ ಬೆರೆನ್ಸೀಸ್’ ಎಂಬ ಹೆಸರಿದೆ. ಬೆರೆನ್ಸಿಸ್ ಎಂಬ ಈಜಿಪ್ಟ್ ರಾಣಿ ತನ್ನ ಕೂದಲನ್ನು ತ್ಯಾಗ ಮಾಡಿದಳಂತೆ; ಅವು ಆಕಾಶದಲ್ಲಿ ನಕ್ಷತ್ರಗಳಾಗಿವೆಯಂತೆ.(ಕೂದಲನ್ನು ತ್ಯಾಗ ಮಾಡುವ ಸಂಪ್ರದಾಯ ಭಾರತಕ್ಕೆ ಮಾತ್ರ ಮೀಸಲಾಗಿರಲಿಲ್ಲ ಎಂಬ ಸಂಗತಿಯನ್ನು  ಸಮಾಜಶಾಸ್ತ್ರಜ್ಞರು ಗಮನಿಸಬಹುದು.) ಕೋಮಾ ಎಂದರೆ ಕೂದಲು. (ಧೂಮಕೇತುವಿಗೆ ಕಾಮೆಟ್ ಎಂಬ ಹೆಸರಿರುವುದೂ ಇದೇ ಕಾರಣಕ್ಕೆ) ಈ ನಕ್ಷತ್ರ ಪುಂಜ ಅಷ್ಟೇನೂ ದೊಡ್ಡದಲ್ಲ. ದುರ್ಬೀನಿನಿಂದ ಅರ್ಧದಷ್ಟು ಭಾಗವನ್ನೇ ನೋಡಿ ಬಿಡ ಬಹುದು.  ಹಿಂದೆ ಇದನ್ನು ಬೇರೆಯದೇ ನಕ್ಷತ್ರ ಪುಂಜವನ್ನಾಗಿ ಪರಿಗಣಿಸಿರಲಿಲ್ಲ. ಟಾಲೆಮಿ ಇದನ್ನು ಕೂದಲ ಗಂಟು ಎಂದು ಕರೆದಿದ್ದ. ಆದರೆ ಅದು ಸಿಂಹದ ಬಾಲದ ಕುಚ್ಚು ಎಂಬ ಅರ್ಥದಲ್ಲಿ. ಆದ್ದರಿಂದ ಅದು ಸಿಂಹ ರಾಶಿಯ ಭಾಗವೇ ಆಗಿತ್ತು. ಈ ಪುಂಜದಲ್ಲಿ ಎಂಟು ಸುಂದರ ನೆಬ್ಯುಲಾಗಳನ್ನು (ಗೆಲಾಕ್ಸಿಗಳು) ಚಾರ್ಲ್ಸ್ ಮೆಸಿಯೆ ಗುರುತಿಸಿದ್ದ. ಅಲ್ಲದೇ ಕನ್ಯಾರಾಶಿಯ ಗೆಲಾಕ್ಸಿ ಗುಚ್ಛದ ಕೆಲವು ಕೃಷ್ಣವೇಣಿಯ ವ್ಯಾಪ್ತಿಯೊಳಗೆ ಕಾಣುತ್ತವೆ.  (ನಕ್ಷತ್ರಪುಂಜಗಳಿಗೆ ಹೀಗೆ ಗಡಿಯನ್ನು ಗುರುತು ಮಾಡಿದ್ದು ನಾವೇ. (ಆಕಾಶದಲ್ಲಿ ಗಡಿ ಇಲ್ಲ) ಇದಲ್ಲದೆ ಮೆಸಿಯೆ ಗುರುತಿಸಿಲ್ಲದ ಆದರೆ ದುರ್ಬೀನು ದೂರದರ್ಶಕಗಳಿಗೆ ಕಾಣುವ ಅನೇಕ ಗೆಲಾಕ್ಸಿಗಳು ಈ ಪುಂಜದಲ್ಲಿವೆ.  ಇದಲ್ಲದೆ ದಟ್ಟ ಸಂದಣಿಯ ನಕ್ಷತ್ರ ಗುಚ್ಛಗಳು - ಮುಕ್ತ ಮತ್ತು ಗೋಳಿಯ ಗುಚ್ಛಗಳಿವೆ. ಮುಕ್ತಗುಚ್ಛಗಳೆಂದರೆ ಎಳೆಯ ವಯಸ್ಸಿನ ನೀಲಿ ನಕ್ಷತ್ರಗಳು ಅದರ ಸುತ್ತ ಹರಡಿರುವ ಅನಿಲ ಮತ್ತು ದೂಳು ಸಹ ಕಾಣುತ್ತದೆ. ಬರಿಗಣ್ಣಿಗೆ ಗುಚ್ಛ ಎಂದು ತಿಳಿಯುವುದಾದರೂ ಅದೇಕೋ ಮೆಸಿಯೆ ಸಂಖ್ಯೆ ಇದಕ್ಕೆ ದೊರಕಿಲ್ಲ. ಬಹುಶಃ ಇದು ವಿಸ್ತಾರವಾಗಿ ಹರಡಿರುವುದೇ ಕಾರಣ ಇರಬಹುದು. ಸುಮಾರು ಐದು ಡಿಗ್ರಿ ಅಂದರೆ ಪೂರ್ಣ ಚಂದ್ರನ ಹತ್ತು ಪಟ್ಟು ವಿಸ್ತಾರದ್ದು ಇದು. ಕೇವಲ 270 ಜ್ಯೋತಿರ್ವರ್ಷ ದೂರ (ಹತ್ತಿರ) ಇರುವುದೂ ಇದಕ್ಕೆ ಕಾರಣ. ಇದರ ಅರ್ಥ ತಿಳಿಯಲು ಕೃತ್ತಿಕಾ ಗುಚ್ಛದೊಡನೆ ಹೋಲಿಸಿ. ಅದು ಸುಮಾರು ಪೂರ್ಣ ಚಂದ್ರನಷ್ಟೇ ವಿಸ್ತಾರದ್ದು.  ಕೆಲವೊಮ್ಮೆ ಚಂದ್ರ ಅದನ್ನು ಮರೆಮಾಡಿದಾಗ ಅರ್ಧದಷ್ಟು ನಕ್ಷತ್ರಗಳು ಮರೆಯಾಗುತ್ತವೆ. ಆದರೆ ಕೃಷ್ಣವೇಣಿಯ ಗುಚ್ಛ ಹಾಗಿಲ್ಲ. ನಕ್ಷತ್ರಗಳು ಬಹಳ ವಿರಳವಾಗಿ ಹರಡಿಕೊಂಡಿವೆ.ಸಾಮಾನ್ಯವಾಗಿ ‘ಆಲ್ಫಾ’ ಎಂಬ ಸಂಖ್ಯೆಯನ್ನು ಅತಿ ಪ್ರಕಾಶಮಾನವಾದ ನಕ್ಷತ್ರಕ್ಕೆ ಇಡುತ್ತಾರೆ. ಆದರೆ ಇಲ್ಲಿ ಬೀಟಾ ಎಂಬುದು ಆಲ್ಫಾಗಿಂತ ಹೆಚ್ಚು ಪ್ರಕಾಶಮಾನವಾಗಿದೆ. ಇದರ ರಾಸಾಯನಿಕ ಸಂಯೋಜನೆ ಸಾಮಾನ್ಯ ನಕ್ಷತ್ರಗಳಿಗಿಂತ ಭಿನ್ನವಾಗಿದೆ. ಸಿಲಿಕಾನ್ ಮುಂತಾದ ಧಾತುಗಳು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿವೆ.ಆಲ್ಫಾ ಎಂಬುದು ಯಮಳ ನಕ್ಷತ್ರ. ಆಶ್ಚರ್ಯವೆಂದರೆ ಎರಡೂ ನಕ್ಷತ್ರಗಳು ಒಂದೇ ವರ್ಗದವು. ಇದು ಬಹಳ ಅಪರೂಪ ಎನ್ನಬಹುದು.ಇದಲ್ಲದೆ ಇಲ್ಲಿ ಅತಿ ಹೆಚ್ಚು ದೀಪ್ತಿಯ ಒಂದು ಕ್ವೇಸಾರನ್ನೂ ಗುರುತಿಸಲಾಗಿದೆ. ‘ಕ್ವೇಸಾರ್’ ಎಂಬುದು ಅತಿ ಹೆಚ್ಚು ಪ್ರಕಾಶಮಾನವಾದ ಅತಿ ದೂರದ ಗೆಲಾಕ್ಸಿಗಳು; ಅವುಗಳ ಕೇಂದ್ರದಲ್ಲೊಂದು  ಕಪ್ಪು ಕುಳಿ ಇರಬಹುದು ಎಂಬುದು ಸಿದ್ಧಾಂತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry