ಸೋಮವಾರ, ಜುಲೈ 26, 2021
24 °C
ಹಳತು ಹೊನ್ನು

ಕೃಷ್ಣಾಚಾರ್ಯರ ‘ಹವ್ಯಪಾಕ ಪದ್ಧತಿ’

ಕೆ.ಎಸ್. ಮಧುಸೂದನ Updated:

ಅಕ್ಷರ ಗಾತ್ರ : | |

ವೈಯಾಕರಣಿ ಗರಣಿ ತಿಮ್ಮಣ್ಣಾಚಾರ್ಯ ಕೃಷ್ಣಾಚಾರ್ಯ್ಯ ಅವರ ‘ಸನಾತನಾರ್ಯ ಧರ್ಮದಲ್ಲಿ ಹವ್ಯಪಾಕ ಪದ್ಧತಿ’ ಕೃತಿಯು 1911ರಲ್ಲಿ ಬೆಂಗಳೂರಿನ ಒಕ್ಕಲಿಗರ ಸಂಘ ಮುದ್ರಣಾಲಯದಲ್ಲಿ ಅಚ್ಚಾಯಿತು. 192 ಪುಟಗಳ ಈ ಪುಸ್ತಕದ ಬೆಲೆ ಹನ್ನೆರಡು ಆಣೆ. 1855ರಿಂದ 1915ರವರೆಗೆ ಜೀವಿಸಿದ್ದ ತುಮಕೂರು ಜಿಲ್ಲೆಯ ಮದ್ದಗಿರಿ ತಾಲೂಕಿನ ಗರಣಿ ಗ್ರಾಮದ ವೈಯಾಕರಣಿ ತಿಮ್ಮಣ್ಣಾಚಾರ್ಯ ಕೃಷ್ಣಾಚಾರ್ಯರು ಕನ್ನಡ, ಸಂಸ್ಕೃತ ಭಾಷೆಗಳೆರಡರೆಲ್ಲಿಯೂ ಬಹುಶ್ರುತ ವಿದ್ವಾಂಸರು. ಬಹುಕಾಲ ಮದರಾಸಿನ ಕ್ರಿಸ್ಚಿಯನ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ, ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಶ್ರೀಯುತರ ಮಾತಾಮಹರು ‘ಮಹೀಶೂರ ಪುರವಾಸಿ ಬ್ರಹ್ಮಶ್ರೀ || ವೈಯಾಕರಣ ವ್ಯಾಸಕೃಷ್ಣಾಚಾರ್ಯ’ ಹಾಗೂ ಅವರ ತಂದೆ ಪರಿಗಿಪುರೀ ಸನ್ನಿಹಿತ ಗರಣಿ ಗ್ರಾಮವಾಸ್ತವ್ಯ ವೈಯಾಕರಣಿ ತಿಮ್ಮಣ್ಣಾಚಾರ್ಯರು. ಗ್ರಂಥಾಂತ್ಯದಲ್ಲಿ ಗ್ರಂಥಕರ್ತರು ಶ್ರೀಮದ್ಧರಿತಸ ಕುಲತಿಲಕ ಶ್ರೀಜಾನಕೀವೇಂಕಟರಮಣಾಚಾರ್ಯವರ್ಯ (ವೇಂಕಟರಮಣ=ತಿಮ್ಮಣ್ಣ)ತನೂಜ ಸುಕವಿ ಕೃಷ್ಣಾಚಾರ್ಯ ಎಂದು ತಮ್ಮನ್ನು ಕುರಿತು ಸೂಚಿಸಿಕೊಳ್ಳುತ್ತಾರೆ.ಡಿ.ವಿ. ಗುಂಡಪ್ಪನವರು ತಮ್ಮ ‘ಜ್ಞಾಪಕ ಚಿತ್ರಶಾಲೆ-1’ರ ‘ಸಾಹಿತಿ ಸಜ್ಜನ ಸಾರ್ವಜನಿಕರು’ ಕೃತಿಯಲ್ಲಿ ಶ್ರೀಯುತರನ್ನು ಕುರಿತು ‘‘ಕೃಷ್ಣಾಚಾರ್ಯರ ಪಾಂಡಿತ್ಯ ಬಹಳ ದೊಡ್ಡದು. ಅದಕ್ಕಿಂತ ದೊಡ್ಡದು ಅವರ ಗುಣಶೀಲಸೌಂದರ್ಯ. ಅವರು ಹೊರಗೂ ಒಳಗೂ ಒಂದೇ ರೀತಿ ಚೊಕ್ಕಟವಾಗಿದ್ದವರು. ಕನ್ನಡ ಸಾಹಿತ್ಯದಲ್ಲಿ ಬೆಂಗಳೂರಿನ ಸಿದ್ಧಾಂತಿ ಸುಬ್ರಹ್ಮಣ್ಯಶಾಸ್ತ್ರಿಗಳು ಅವರ ಗುರುಗಳು. ಈ ಸುಬ್ರಹ್ಮಣ್ಯಶಾಸ್ತ್ರಿಗಳು ಮಹಾವಿದ್ವತ್ಪಂಕ್ತಿಗೆ ಸೇರಿದ್ದವರು. ಅವರ ಮಕ್ಕಳೇ  ಮಹಾಮಹೋಪಾಧ್ಯಾಯ ಸಿದ್ಧಾಂತಿ ಶಿವಶಂಕರಶಾಸ್ತ್ರಿಗಳವರು. ಇವರೂ ಕೃಷ್ಣಾಚಾರ್ಯರವರೂ ಆಪ್ತ ಮಿತ್ರರು. ಕೃಷ್ಣಾಚಾರ್ಯರು ಸ್ವಭಾವದಲ್ಲಿ ಪರಮ ಸಾತ್ವಿಕರು, ಮೃದುಹೃದಯರು ಮತ್ತು ಸರಳಜೀವಿಗಳು. ಒಳ್ಳೆ ಆಜಾನುಬಾಹುವಾದ ಆಕೃತಿ. ಹಾಲುಕೆನೆಯ ಮೈಬಣ್ಣ; ಪ್ರಸನ್ನವಾದ ಮುಖ; ಆಪಾದಮಸ್ತಕವೂ ಶುಭ್ರ ಧವಲ ವರ್ಣದ ಉಡಿಗೆ, ನಿಲುವಂಗಿ, ಉತ್ತರೀಯ ರುಮಾಲುಗಳು; ನೋಡಿದವರ ಮನಸ್ಸಿನಲ್ಲಿ ಕೂಡಲೇ ವಿಶ್ವಾಸವೂ ಗೌರವವೂ ಉದಯಿಸುತ್ತಿದ್ದವು. ಕೃಷ್ಣಾಚಾರ್ಯರ ವಿಸ್ತಾರವಾದ ಮಿತ್ರಮಂಡಲಿಯಲ್ಲಿ ಛಪ್ಪಲ್ಲಿ ವಿಶ್ವೇಶ್ವರಶಾಸ್ತ್ರಿಗಳು, ಮೋಟಗಾನಹಳ್ಳಿ ಶಂಕರ ಶಾಸ್ತ್ರಿಗಳು, ಕರ್ಪೂರ ಶ್ರೀನಿವಾಸರಾಯರು, ರಾ.ರಘುನಾಥರಾಯುರು, ನಂಗಪುರಂ ವೆಂಕಟೇಶಯ್ಯಂಗಾರ್ಯರು- ಮುಖ್ಯರು.ಕಾವ್ಯ ಶಾಸ್ತ್ರ ವಿನೋದ ವಿಚಾರಗಳಲ್ಲಿ ಈ ಗೆಳೆಯರು ಗರಣಿ ಕೃಷ್ಣಾಚಾರ್ಯರ ಮಾತಿಗೆ ಮನ್ನಣೆ ನೀಡುತ್ತಿದ್ದರು. ಕೃಷ್ಣಾಚಾರ್ಯರು ಗಂಭೀರ ಸ್ವಭಾವದವರು. ಅತಿ ಮಾತಿನವರಲ್ಲ. ಮೆಚ್ಚಿಕೆ ಸಂಪಾದಿಸುವುದಕ್ಕಾಗಿಯಾಗಲಿ, ಸ್ವಪ್ರತಿಷ್ಠೆಗಾಗಿಯಾಗಲಿ ಹಾರಾಡಿದವರಲ್ಲ. ಅಧಿಕಾರಸ್ಥರಲ್ಲಿಯೂ ಬಲಿಷ್ಠರಲ್ಲಿಯೂ ‘ಉಪಸರ್ಪಣೆ’ ಮಾಡಿಕೊಂಡು ಹೋಗುವುದು ಅವರ ಸ್ವಭಾವದಲ್ಲಿರಲಿಲ್ಲ’’ ಎಂದು ಚಿತ್ರಿಸಿದ್ದಾರೆ.ಕೃಷ್ಣಾಚಾರ್ಯರು ಸುಮಾರು 25 ಕೃತಿಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ಮುಖ್ಯವಾದವುಗಳು- ‘ಕರ್ಣಾಟಕ ಭಾಷಾ ವಿಷಯವು’ (1891), ‘ಕಾದಂಬರೀ ಕಥೆ’ (1866), ‘ದೀರ್ಘಾಯುಸ್ಸೂತ್ರ’ (1909), ‘ನಾಗಾನಂದ ನಾಟಕಂ’ (1887), ‘ಮೃಚ್ಛಕಟಿಕಪ್ರಕರಣಂ’ (1890), ‘ಸತ್ಕಥಾ’ (1912), ‘ಹವ್ಯಪಾಕಪದ್ಧತಿ’ (1911), ‘ಕರ್ಣಾಟಕ ಕಾವ್ಯಾದರ್ಶ’, ‘ಶೃಂಗಾರ ತರಂಗಿಣೀ’, ‘ಸನಾತನಾರ್ಯಧರ್ಮಸಾರ’, ‘ಸದ್ವೃತ್ತಾನುಷ್ಠಾನ’. ಒಳ್ಳೆಯ ಆಹಾರ ಹಾಗೂ ಸದೃಢವಾದ ಆರೋಗ್ಯವನ್ನು ಕುರಿತು ಆಚಾರ್ಯರು ಗ್ರಂಥಗಳನ್ನು ರಚಿಸಿದ್ದಲ್ಲದೆ ತಾವೇ ಪರಿಕಲ್ಪಿಸಿ ರೂಢಿಗೆ ತಂದಿದ್ದ ಆಹಾರದ ರೀತಿ ಹಾಗೂ ಪಾಕ ವಿಧಾನಗಳನ್ನು ನಾಲ್ಕಾರು ಕಡೆ ಸಭೆಗಳಲ್ಲಿ ಪ್ರತ್ಯಕ್ಷವಾಗಿ ಸಿದ್ಧಪಡಿಸಿ ತೋರಿಸುತ್ತಿದ್ದರು.ಒಂದೆಡೆ ಅವರು ‘‘ಸರ್ವೇ ಯಜಮಾನಸ್ಸರ್ವೇ ಋತ್ವಿಜಃ’ ಎಂಬಂತೆ ಬರಹ ಬಂದವರೆಲ್ಲರೂ ಕವಿಗಳೂ, ಓದಲ್ಬಂದವರೆಲ್ಲರೂ ಉಪನ್ಯಾಸಕರೂ, ಯಕ್ಷಗಾನ ಕಾವ್ಯಮಾಲಾದಿಗಳನ್ನೋದುವ (ಕಾವ್ಯಮಾಲೆ, ಸಂಪಾದಕರು-ರೆ.ಕಿಟ್ಟೆಲ್, 1874) ಶಾಲಾವಿದ್ಯಾರ್ಥಿಗಳೆಲ್ಲರೂ ಪಂಡಿತರೂ, ಪಾಠಶಾಲೆಯಂ ಬಿಟ್ಟು ಬಂದವರೆಲ್ಲರೂ ಒಡನೆಯೇ ಪರೀಕ್ಷಕರೂ, ಮತ್ತೆ ಕೆಲವರು ಏತದ್ಭಾಷಾಲೇಶ ಶೂನ್ಯರಾಗಿದ್ದರೂ ಅದಕ್ಕವರು ವಿಚಾರಕರೂ, ಶೋಧಕರೂ, ನಿಯಾಮಕರೂ, ಕೋಶಾಭಿದಾನಲಕ್ಷಣಕಾರರೂ ಆಗಿರಲು-ತತ್ಪ್ರಾಮಾಣ್ಯವುಳ್ಳ ಆ ಜನಗಳ ನಡುವೆ ಜೀವಿಸುವ ನಮಗೆ ‘ಶ್ವಾನಾರೋಹೇ ಕುತಸ್ಸೌಖ್ಯಂ ಪತನೇ ಕಾsವಮಾನಿತಾ’ (ನಾಯಿಯ ಆರೋಹ ಮಾಡಿದರೆ ಆರೋಹದ ಸುಖವೂ ಇಲ್ಲ, ಬಿದ್ದರೆ ಅವಮಾನವೂ ಇಲ್ಲ) ಎಂಬಂತೆ ಅಕಿಂಚಿತ್ಕರವಾದ ಆ ಕೀರ್ತಿಯ ಅರ್ತಿಯೇತಕ್ಕೆ!  ಎಂದು ಸುಮ್ಮನಿರುವುದೇ ಉತ್ತಮವು’’ ಎಂದು ಹೇಳಿ ಆ ಕಾಲಘಟ್ಟದಲ್ಲಿಯೇ ವಿದ್ವತ್ ಕ್ಷೇತ್ರದಲ್ಲಿ ಗುಣಮಟ್ಟ ಕುಸಿಯುತ್ತಿರುವುದರ ಕಡೆ ವಿಷಾದದಿಂದ ಗಮನ ಸೆಳೆದಿದ್ದಾರೆ.ಕೃತಿಯ ಆರಂಭದಲ್ಲಿ ‘ಹವ್ಯಪಾಕಾವತಾರಿಕೆ’ ಎನ್ನುವ 24ಪುಟಗಳ ಪೀಠಿಕೆ ಇದೆ. ಈ ಪುಸ್ತಕದೊಳಗೆ ಹವ್ಯಪಾಕ ಪದ್ಧತಿ, ದ್ರವ್ಯಗುಣದೋಷನಿರೂಪಣೆ, ತ್ರಿದೋಷಗಳು, ಷಡ್ರಸಗಳು, ಮಧುರರಸ, ಲವಣಗುಣಕರ್ಮಗಳು, ಕಟುತಿಕ್ತರಸಗಳು, ಷಡ್ರಸಮೇಳನಗುಣಗಳು, ರಸವಿಪಾಕಗಳು, ಶಮೀಧಾನ್ಯಗಳು, ಶಾಕವರ್ಗವು, ಫಲವರ್ಗವು, ಆಹಾರಯೋಗೀವ್ಯಂಜನವರ್ಗ ಹಾಗೂ ಅನ್ನಪಾನ ವರ್ಗ ಎನ್ನುವ ಹದಿನಾಲ್ಕು ಅಧ್ಯಾಯಗಳಿವೆ.ಆಹಾರದ ಮಹತ್ವವನ್ನು ಕುರಿತು ಹೇಳುತ್ತಾ ಕೃಷ್ಣಾಚಾರ್ಯರು ಒಂದೆಡೆ ಹೀಗೆ ಹೇಳುತ್ತಾರೆ: ‘‘ಈಗ ನಮ್ಮ ದೇಹದೊಳಗೆ ನಾವು ತೆಗೆದುಕೊಂಡ ಅನ್ನಪಾನಾದ್ಯಾಹಾರ ಪದಾರ್ಥವನ್ನು ಪರಿಪಾಕಮಾಡುವಂತಹ ಭಾವಗಳು ಆರು ಬಗೆಗಳಾಗಿ ಯಾವಾಗಲೂ ಪಾಕಕರ್ಮವನ್ನು ನಡೆಯಿಸುತ್ತಲೇ ಇರುವುದು. 1.ದೇಹೋಷ್ಣವು, 2.ವಾಯುವು, 3.ದ್ರವಾಂಶವು (ನೀರು), 4.ಸ್ನೇಹ, (ಜಿಡ್ಡು), 5.ಕಾಲವು, 6.ಇವುಗಳ ಸಮವಾದ ಸೇರುವಿಕೆಯು. ಈಗ ನಾವು ಉಂಡ ಅನ್ನ ಪಾನಗಳು ಒಳಗೆ ಪಚನವಾಗುವುದಕ್ಕೆ ಈ ಆರೂ ಭಾವಗಳು ಅವಶ್ಯಕ’’. ಹವ್ಯಪಾಕ ಎಂದರೆ ಹಬೆಯಲ್ಲಿ ಸಿದ್ಧಪಡಿಸಿದ ಆಹಾರ. ಅದು ಅತ್ಯಂತ ಜೀರ್ಣಕಾರಿಯಾದುದು ಎಂಬುದು ಲೇಖಕರ ಅಭಿಪ್ರಾಯ.ಹವ್ಯಪಾಕದಿಂದಾಗುವ ಲಾಭ ಲೇಖಕರು ಹೇಳುವಂತೆ– ಕಾಷ್ಠಲಾಭ, ಧಾನ್ಯಲಾಭ, ಪಾತ್ರಲಾಭ, ಆರೋಗ್ಯಲಾಭ, ಕಾಲಲಾಭ, ಕ್ರಿಯಾಸೌಕರ್ಯ, ರುಚಿಕರವಸ್ತುಲಾಭ, ಕ್ಷೀರದ ಸ್ನೇಹಲಾಭ, ಸಾತ್ವಿಕಸೂಕ್ಷ್ಮಾಬುದ್ಧಿ. ಈ ಹವ್ಯಪಾಕಪದ್ಧತಿಯಲ್ಲಿ ಏರ್ಪಡುವ ಪಕ್ವಪದಾರ್ಥಗಳನ್ನು ಕೃತಿಕಾರರು ಹನ್ನೆರಡಾಗಿ ವರ್ಗೀಕರಣ ಮಾಡಿರುತ್ತಾರೆ. ಅವೆಂದರೆ ಅನ್ನಗಳು, ಬೇಳೆಗಳು, ಕಾಳುಗಳು, ಕಾಯಿಗಳು, ಸೊಪ್ಪುಗಳು, ಉಪ್ಪಿಟ್ಟು, ಉಸುಳಿ ಮುಂತಾದುವುಗಳು, ಇಡ್ಡಳಿ ಕಡಬು ದೋಸೆ ಸಂಡಿಗೆ ಇತ್ಯಾದಿ, ಸಜ್ಜಿಗೆ, ಹಾಲುಂಡಿಗೆ ಹಲ್ವ ಬರ್ಫಿ ಮುಂತಾದುವು, ಹುಗ್ಗಿಗಳು, ಪಾಯಸ ಪರಮಾನ್ನ ಕೀರು ಗಂಜಿ ಅಂಬಲಿ ಇತ್ಯಾದಿ, ಕೂಟು ಕಲಸುಮೇಲೋಗರಗಳು, ಬಜ್ಜಿ ಗೊಜ್ಜು ಚಟ್ಟಣಿ ಉಪ್ಪೇರಿ ಇತ್ಯಾದಿ, ಒಡೆ ಗಾರಿಗೆ ಮುಚ್ಚೋರೆ ತೇಂಗುಳು ಮುಸುಕಿನುಂಡೆ ಇತ್ಯಾದಿ.ಲೇಖಕರು ಹೇಳುವಂತೆ ಹವ್ಯಪಾಕವಿಧಾನ ಕ್ರಮವು ಇಂತಿದೆ: ‘’ಅಗಲವಾದ ಬಾಯುಳ್ಳ ಒಂದು ಕೊಳಗದಪ್ಪಲೆಯನ್ನೊ ಪಂಚಪಾತ್ರವನ್ನೊ ಒಲೆಯ ಮೇಲಿರಿಸಿ ಅದರಲ್ಲಿ ಅಷ್ಟಮಾಂಶದಷ್ಟು ನೀರು ಹುಯ್ದು, ಅದರಲ್ಲಿ ಸಮನಾಗಿರುವ ಮೂರು ಸಣ್ಣಕಲ್ಲುಗಳನ್ನು ಮುಕ್ಕೋಣವಾಗಿಟ್ಟು, ಅದರ ಮೇಲೆ ಅಳತೆಯ ಮೇರೆಗೆ ಅಕ್ಕಿ ನೀರು ಕೂಡಿಸಿಟ್ಟಿದ್ದ ಅನ್ನದ ತಪ್ಪಲೆಯನ್ನು ಹೊಂದಿಸಿಡಬೇಕು. ಆ ತಪ್ಪಲೆಯ ಮೇಲೆ ಒಂದು ಪರಾಯತದಲ್ಲಿ ಸುತ್ತಲು ಪಲ್ಯ ಕಾಯಿಗಳನ್ನು ಬೇರೆಬೇರೆಯಾಗಿಟ್ಟು ಮಧ್ಯದಲ್ಲಿ ಒಂದು ಬಟ್ಟಲಲ್ಲಿ ಬೇಗನೆ ಬೇಯತಕ್ಕಂತಹ ಹಿಟ್ಟು ರವೆಗಳನ್ನು ಇಡಬಹುದು.ಆ ಬಟ್ಟಲ ಮೇಲೆ ಮತ್ತೊಂದು ಅರಕಂಚಟ್ಟಿಯಲ್ಲಿ ಬೇಳೆಯನ್ನು ತಕ್ಕಷ್ಟು ನೀರಿನೊಡನೆ ಬೆರಸಿ ತುಪ್ಪ ಹಪ್ಪಳ ಕಾರ ಹಾಕಿಡಬೇಕು. ತಳದ ಕೊಳಗತಪ್ಪಲೆಯ ನೀರಲ್ಲಿಯೂ ಸ್ವಲ್ಪವಾಗಿ ಯಾವುದಾದರೂ ಕಾಳೋ ಕಾಯಿಯೋ ಬೇಳೆಯೋ ಹಾಕಿಡಬಹುದು. ಆದರೆ ನಿರಭ್ಯಂತರವಾಗಿ ಹಬೆ ಹುಟ್ಟುವಂತೆ ಮಾಡಿಡುವುದೇ ಉತ್ತಮವು. ಬಳಿಕ ಆ ಕೊಳಗತಪ್ಪಲೆಯ ಮೇಲೆ ಉಕ್ಕಂದವಾದ ಒಂದು ಪಾತ್ರೆಯನ್ನು ಬೋರಲಾಗಿ ಮುಚ್ಚಿಡಬೇಕು. ಅದರ ಸಂದಿನಲ್ಲಿ ಹೆಚ್ಚಾಗಿ ಹಬೆಯು ಆಚೆಗೆ ಹೋಗುತ್ತಿದ್ದರೆ ಸುತ್ತಲು ಒಂದು ಬಟ್ಟೆಯನ್ನು ತೋಯಿಸಿ ಕಟ್ಟಿಡಬೇಕು. ಪಲ್ಯಕಾಯಿಗಳನ್ನು ಬೇಯಿಸುವುದಕ್ಕೆ ನೀರು ಹಾಕಿಡಬೇಕಾದವಶ್ಯವೇ ಇಲ್ಲ. ಬೇಳೆಗಳನ್ನು ಒಣಕಾಳುಗಳನ್ನು ಬೆರೆಸಿಡುವುದಾಗಿದ್ದರೆ ಆಗ ಆ ಕಾಳುಗಳಿಗೆ ತಕ್ಕಷ್ಟು ನೀರು ಹುಯ್ದು ರುಚಿಗೆ ತಕ್ಕಂತೆ ಲವಣಾದಿ ವ್ಯಂಜನಗಳನ್ನು ಬೆರಸಿ ಬೇರೆಬೇರೆ ಇಡಬೇಕು’’.‘ಆಹಾರಯೋಗೀವ್ಯಂಜನ ವರ್ಗ’ ಎನ್ನುವ ಅಧ್ಯಾಯದಲ್ಲಿ ಲೇಖಕರು 113 ರೀತಿಯ ತರಕಾರಿ, ಗೆಡ್ಡೆಗೆಣಸು, ಸೊಪ್ಪು, ಕಾಯಿ, ಕಡ್ಡಿ ಸಂಬಾರ ಪದಾರ್ಥಗಳ ಗುಣಲಕ್ಷಣಗಳ ಬಗ್ಗೆ ಬರೆಯುತ್ತಾರೆ. ಹೀಗಾಗಿ ನೂರಾರು ತರಕಾರಿಗಳು ತಿಂಡಿ ಅನ್ನಪಾನ ಭಕ್ಷ್ಯ ಭೋಜ್ಯಗಳ ತಯಾರಿಕೆಯನ್ನು ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ. ದೇಹ ಹಾಗೂ ಮನಸ್ಸುಗಳಿಗೆ ಬೇಕಾದ ರುಚಿಯಾದ ಶುಚಿಯಾದ ಆಹಾರ ತಯಾರಿಕಾ ವಿಧಾನವನ್ನು ಹೇಳುವ ಈ ‘ಹವ್ಯಪಾಕ ಪದ್ಧತಿ’ ನಿಜಕ್ಕೂ ಕನ್ನಡದಲ್ಲಿ ಒಂದು ಅಪರೂಪದ ಕೃತಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.