ಕೃಷ್ಣಾಜಲ ವಿವಾದ:ಎಚ್‌ಕೆ ಆರೋಪ

7

ಕೃಷ್ಣಾಜಲ ವಿವಾದ:ಎಚ್‌ಕೆ ಆರೋಪ

Published:
Updated:

ನವದೆಹಲಿ: ‘ಕರ್ನಾಟಕಕ್ಕೆ ಕೃಷ್ಣಾ ನದಿ ಹೆಚ್ಚುವರಿ ನೀರಿನಲ್ಲಿ 278ಟಿಎಂಸಿ ಸಿಗಬೇಕಿತ್ತು. ಕೇವಲ 177 ಟಿಎಂಸಿ ಹಂಚಿಕೆ ಮಾಡಿ ನ್ಯಾ.ಬ್ರಿಜೇಶ್ ಕುಮಾರ್ ನೇತೃತ್ವದ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ ಅನ್ಯಾಯ ಮಾಡಿದೆ’ ಎಂದು ಮಾಜಿ ಜಲ ಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ್ ಆರೋಪಿಸಿದರು.ಕೃಷ್ಣಾ ನ್ಯಾಯಮಂಡಳಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದರೂ ಸರ್ಕಾರ ಸಂಭ್ರಮಿಸುತ್ತಿದೆ. ಐ ತೀರ್ಪು ಬಂದು ತಿಂಗಳೇ ಕಳೆದಿದ್ದರೂ ತನ್ನ ನಿಲುವು ಪ್ರಕಟಿಸಿಲ್ಲ. ನೀರಾವರಿ ತಜ್ಞರು, ವಿರೋಧ ಪಕ್ಷಗಳು ಹಾಗೂ ಫಲಾನುಭವಿಗಳ ಜತೆ ಚರ್ಚಿಸಿಲ್ಲ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.ಕರ್ನಾಟಕ 2002ರ ಸೆಪ್ಟೆಂಬರ್ 25ರಂದು ‘ಅಂತರ ರಾಜ್ಯ ಜಲ ವಿವಾದ ಕಾಯ್ದೆ’ಅಡಿ ದೂರು ಸಲ್ಲಿಸುವ ಸಂದರ್ಭದಲ್ಲಿ ಕೃಷ್ಣಾ ಕಣಿವೆಯಲ್ಲಿ ಲಭ್ಯವಿರುವ ಹೆಚ್ಚುವರಿ ನೀರು 516 ಟಿಎಂಸಿ ಎಂದು ಅಂದಾಜಿಸಿತ್ತು. ಅದರಂತೆ ಕನಿಷ್ಠ 258 ಟಿಎಂಸಿ ರಾಜ್ಯಕ್ಕೆ ಹಂಚಿಕೆ ಆಗಬೇಕಿತ್ತು ಎಂದು ಪ್ರತಿಪಾದಿಸಿದರು.ಬಚಾವತ್ ಆಯೋಗ ಕೂಡಾ ಇದನ್ನೇ ಹೇಳಿತ್ತು. ಈ ಆಯೋಗದ ‘ಸ್ಕೀಂ ಬಿ’ ಅನ್ನು ನೀಲ ನಕ್ಷೆ ಆಗಿ ಪರಿಗಣಿಸಿ 258 ಟಿಎಂಸಿ ಹಂಚಿಕೆ ಮಾಡಬೇಕಿತ್ತು. ಬ್ರಿಜೇಶ್ ಕುಮಾರ್ ನ್ಯಾಯಮಂಡಳಿ ಯಾವ ಮಾನದಂಡ ಅನುಸರಿಸಿ ಕರ್ನಾಟಕಕ್ಕೆ 101 ಟಿಎಂಸಿ ಕೊರತೆ ಮಾಡಿದೆ ಎಂದು ಪ್ರಶ್ನಿಸಿದರು.ತುಂಗಾಭದ್ರಾ ಉಪ ಕಣಿವೆಯ ಭದ್ರಾ ಮೇಲ್ದಂಡೆ 10 ಟಿಎಂಸಿ, ತುಂಗಾ ಮೇಲ್ದಂಡೆ 12 ಟಿಎಂಸಿ ಹಾಗೂ ಸಿಂಗಟಾಲೂರು 18ಟಿಎಂಸಿ ‘ಸ್ಕೀಂ ಎ’ ಯಲ್ಲೇ ಸೇರಿಸಲಾಗಿದೆ. ಈ ಯೋಜನೆಗಳನ್ನು ಪುನಃ ಹೆಚ್ಚುವರಿ ನೀರಿನಲ್ಲೂ ಪಟ್ಟಿ ಮಾಡಿ 40 ಟಿಎಂಸಿ ನಷ್ಟ ಮಾಡಲಾಗಿದೆ ಎಂದು ವಿವರಿಸಿದರು.ತುಂಗಭದ್ರಾ ಉಪ ಕಣಿವೆಯಲ್ಲಿ ‘ಸ್ಕೀಂ ಬಿ’ ಅಡಿ ಹೆಚ್ಚುವರಿ ನೀರು ಬಳಸಲು ಕರ್ನಾಟಕ ಸಲ್ಲಿಸಿದ ಯಾವುದೇ ಯೋಜನೆಗಳಿಗೆ ಅನುಮೋದನೆ ನೀಡಿಲ್ಲ. ಇದರಿಂದಾಗಿ ಭದ್ರಾ ಮೇಲ್ದಂಡೆ, ವರದಾ ಮುಂತಾದ ಯೋಜನೆಗಳ ಭವಿಷ್ಯ ಅತಂತ್ರವಾಗಿದೆ ಎಂದರು.ನೀರಿನ ಅಭಾವ ಇರುವ ಜೂನ್- ಜುಲೈ ತಿಂಗಳಿನಲ್ಲಿ ಆಂಧ್ರದ ಜುರಾಲ ಅಣೆಕಟ್ಟೆಯಲ್ಲಿ ಸಂಗ್ರಹ ಸಾಮರ್ಥ್ಯವಿದ್ದಾಗ್ಯೂ ಆಲಮಟ್ಟಿಯಿಂದ 8ರಿಂದ 10 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ. ಇದೇ ತತ್ವ ಅನುಸರಿಸಿ ಮಹಾರಾಷ್ಟ್ರಕ್ಕೆ ಯಾವುದೇ ಷರತ್ತು ಹಾಕಿಲ್ಲದಿರುವುದು ವಿಪರ್ಯಾಸ  ಎಂದು ಅತೃಪ್ತಿ ವ್ಯಕ್ತಪಡಿಸಿದರು.ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.25 ಅಡಿಗೆ ಎತ್ತರಿಸುವ ಕರ್ನಾಟಕದ ಬೇಡಿಕೆಗೆ ಷರತ್ತಿನ ಒಪ್ಪಿಗೆ ನೀಡಿದೆ. ಅಣೆಕಟ್ಟೆ ಎತ್ತರ 519.6ರಿಂದ ಎತ್ತರಿಸುವ ಪ್ರಸ್ತಾವ ಹೊಸದಾಗಿ ಪರಿಗಣನೆಗೆ ಒಳಪಡುತ್ತದೆ ಎಂದು ನ್ಯಾಯಮಂಡಳಿ ಹೇಳಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಮತ್ತೊಂದೆಡೆ, ಆಂಧ್ರ ಅಕ್ರಮವಾಗಿ ನಿರ್ಮಿಸಿರುವ ತೆಲುಗುಗಂಗಾ, ಪುಲಿ ಚಿಂತಲ, ಭೀಮ, ಶ್ರೀಶೈಲ ಮುಂತಾದ ಯೋಜನೆಗಳಿಗೆ ಕರ್ನಾಟಕದ ತೀವ್ರ ಆಕ್ಷೇಪ, ಪ್ರತಿಭಟನೆ ನಡುವೆ ಅಧಿಕೃತ ಮುದ್ರೆ ಒತ್ತಲಾಗಿದೆ ಎಂದು ಕಿಡಿ ಕಾರಿದರು.25ಟಿಎಂಸಿ ಕೃಷ್ಣಾ ನೀರನ್ನು ನದಿ ಪಾತ್ರದ ಆಚೆ ವಿದ್ಯುತ್ ಉತ್ಪಾದನೆಗೆ ಬಳಸಲು ಮಹಾರಾಷ್ಟ್ರಕ್ಕೆ ಅನುಮತಿ ನೀಡಿರುವ ನ್ಯಾಯಮಂಡಳಿ ಕ್ರಮವನ್ನು ಎಚ್.ಕೆ. ಪಾಟೀಲ್ ಪ್ರಶ್ನಿಸಿದರು. ಈ ಎಲ್ಲ ಅಂಶ ಕುರಿತು ತಕ್ಷಣ ಸರ್ಕಾರ ನ್ಯಾಯಮಂಡಳಿ ಸ್ಪಷ್ಟೀಕರಣ ಕೇಳಬೇಕು. ಇಲ್ಲವೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry