ಬುಧವಾರ, ಆಗಸ್ಟ್ 21, 2019
25 °C

ಕೃಷ್ಣಾ ಜಲಾಶಯಕ್ಕೆ ಬಾಗಿನ ಅರ್ಪಣೆ ನಾಳೆ

Published:
Updated:

ಆಲಮಟ್ಟಿ: ಆಲಮಟ್ಟಿಯಲ್ಲಿ ಜಲಾಶಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಆಗಸ್ಟ್ 6ರಂದು ಬಾಗಿನ ಅರ್ಪಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಲಾಶಯ ವ್ಯಾಪ್ತಿಯಲ್ಲಿ ಸಿದ್ಧತೆಗಳು ಬಿರುಸಿನಿಂದ ಸಾಗಿವೆ.ಬಾಗಿನ ಅರ್ಪಣೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪೂರ್ಣಕುಂಭ ಹಾಗೂ ಜಿಲ್ಲೆಯ ಜಾನಪದ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನದೊಂದಿಗೆ ಸ್ವಾಗತಿಸಲಾಗುವುದು ಎಂದು ಕೆಬಿಜೆಎನ್‌ಎಲ್ ಅಧಿಕಾರಿ ಡಾ. ಮಹಾಂತೇಶ ಬಿರಾದಾರ ಹೇಳಿದರು.ಜಾನಪದ ಕಲಾ ತಂಡಗಳಾದ ಶಹನಾಯಿ ವಾದನ, ಡೊಳ್ಳು ಕುಣಿತ, ಕರಡಿ ಮಜಲು, ಕುದುರೆ ಕುಣಿತ, ನವಿಲು ಸೋಗು, 1008 ಮಹಿಳೆಯರು ಹೊತ್ತ ಕುಂಭ ಮೇಳ ಜಲಾಶಯದವರೆಗೆ ಮೆರವಣಿಗೆ ನಡೆಯಲಿದೆ.ಟಕ್ಕಳಕಿಯ ಸುಬ್ರಾಯ ಬನಸೋಡೆ ಹಾಗೂ ಇವಣಗಿಯ ರಾಮಣ್ಣ ಪೂಜಾರಿ ತಂಡದ ಡೊಳ್ಳು ಕುಣಿತ, ಸಾರವಾಡದ ಹನುಮಂತ ಕಸ್ತೂರಿ ತಂಡದ ಕುದುರೆ ಕುಣಿತ, ಮುತ್ತಗಿಯ ಚಂದ್ರಶೇಖರ ಹಾದಿಮನಿ ತಂಡದಿಂದ ಕರಡಿ ಮಜಲು, ಬಾಲಪ್ಪ ಮಾದರ ಅವರಿಂದ ಹಲಗೆ ಮೇಳ ಪ್ರದರ್ಶನ ನಡೆಯಲಿವೆ ಎಂದರು.ಬಾಗಿನ ಅರ್ಪಣೆ ನಂತರ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವರು, ಹಿರಿಯ ಅಧಿಕಾರಿಗಳು  ಪಾಲ್ಗೊಳ್ಳುವರು.

ಶಾಸಕ ಶಿವಾನಂದ ಪಾಟೀಲ ಅಧ್ಯಕ್ಷತೆ ವಹಿಸುವರು. ಸಚಿವರಾದ ಎಂ.ಬಿ. ಪಾಟೀಲ, ಎಸ್.ಆರ್. ಪಾಟೀಲ, ಉಮಾಶ್ರಿ ಭಾಗವಹಿಸುವರು. ಜಿ.ಪಂ ಅಧ್ಯಕ್ಷರಾದ ಕಾವ್ಯಾ ದೇಸಾಯಿ, ಶಾಂತವ್ವ ಭೂಸಣ್ಣವರ, ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ. ಗದ್ದಿಗೌಡರ ಮತ್ತು ಬಾಗಲಕೋಟೆ, ವಿಜಾಪುರ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸುವರು ಎಂದು ಹೇಳಿದರು.ಕೆಬಿಜೆಎನ್‌ಎಲ್ ಅಧೀಕ್ಷಕ ಎಂಜಿನಿಯರ್ ವಿ.ಕೆ. ಪೋತದಾರ, ಎಸ್.ಬಿ. ಕೊಲ್ಹಾರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Post Comments (+)