ಕೃಷ್ಣಾ ನದಿಗೆ ಸೇತುವೆ ನಿರ್ಮಿಸಲು ಆಗ್ರಹ

ಯಾದಗಿರಿ: ದೇವರ ದರ್ಶನ ಸಿಗುವುದು ಸುಲಭವಲ್ಲ. ಅದಕ್ಕಾಗಿ ಕಠಿಣ ತಪಸ್ಸು ಮಾಡಬೇಕು ಎಂದೆಲ್ಲ ಹೇಳಲಾಗುತ್ತದೆ. ಜಿಲ್ಲೆಯ ಗಡ್ಡೆಬಸವೇಶ್ವರ ಭಕ್ತರಿಗೆ ಮಾತ್ರ ಇದು ಅಕ್ಷರಶಃ ನಿಜ ಎನ್ನುವಂತಾಗಿದೆ.
ಜಿಲ್ಲೆಯ ಶಹಾಪುರ ತಾಲ್ಲೂಕಿನ ಕೋಡಾಲ ಗ್ರಾಮದ ಗಡ್ಡೆಬಸವೇಶ್ವರ ದೇವಸ್ಥಾನಕ್ಕೆ ತೆರಳಲು ಭಕ್ತರಿಗೆ ತೆಪ್ಪವೇ ಗತಿಯಾಗಿದೆ. ಕೃಷ್ಣಾ ನದಿಯಲ್ಲಿ ಇರುವ ದೇವಸ್ಥಾನಕ್ಕೆ ಹೋಗಲು ಭಕ್ತರು ತೆಪ್ಪವನ್ನು ಅವಲಂಬಿಸಬೇಕಾಗಿದೆ.
ಕೋಡಾಲ ಗ್ರಾಮದ ಪಕ್ಕದಲ್ಲಿಯೇ ಕೃಷ್ಣಾ ನದಿ ಹರಿಯುತ್ತದೆ. ಇಲ್ಲಿ ನಡುಗಡ್ಡೆಯೊಂದು ನಿರ್ಮಾಣವಾಗಿದ್ದು, ಈ ನದಿಯು ಇಬ್ಭಾಗವಾಗಿ ಹರಿಯುತ್ತಿದೆ. ಈ ನಡುಗಡ್ಡೆಯಲ್ಲಿ ಪುರಾತನ ಗಡ್ಡೆಬಸವೇಶ್ವರ ದೇವಸ್ಥಾನವಿದೆ. ನಡುಗಡ್ಡೆಯಲ್ಲಿ ದೇವಸ್ಥಾನ ಇರುವುದರಿಂದ ಗಡ್ಡೆ ಬಸವೇಶ್ವರ ಎಂಬ ಹೆಸರು ಬಂದಿದೆ ಎಂದು ಭಕ್ತರು ಹೇಳುತ್ತಾರೆ.
ದೇವಸ್ಥಾನದ ಎರಡು ಬದಿಯಲ್ಲಿ ಕೃಷ್ಣಾ ನದಿಯು ಭೋರ್ಗರಿಯುತ್ತದೆ. ಈ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಆಗಿಲ್ಲ. ಹೀಗಾಗಿ ಭಕ್ತರೆಲ್ಲರೂ ದೇವಸ್ಥಾನಕ್ಕೆ ಹೋಗಬೇಕಾದರೆ ತೆಪ್ಪವನ್ನು ಉಪಯೋಗಿಸುವುದು ಅನಿವಾರ್ಯವಾಗಿದೆ. ಇದರಿಂದ ಭಕ್ತರು ಅನೇಕ ಸಮಸ್ಯೆಯನ್ನು ಎದುರಿಸಬೇಕಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಕೃಷ್ಣಾ ನದಿಯಲ್ಲಿ ಬಹಳಷ್ಟು ಮೊಸಳೆಗಳಿವೆ. ಪ್ರತಿ ವರ್ಷ ಬೇಸಿಗೆಯಲ್ಲಿ ಮೊಸಳೆಗಳು ದನ ಕರುಗಳಿಗೆ ಹಾಗೂ ಮನುಷ್ಯರಿಗೆ ತೊಂದರೆ ಮಾಡಿವೆ. ತೆಪ್ಪದಲ್ಲಿ ಕುಳಿತು ನದಿಯನ್ನು ದಾಟುವಾಗ ಏನಾದರೂ ಅನಾಹುತವಾದರೆ, ಜೀವ ಹಾನಿಯಾಗಬಹುದು. ಈ ಹಿನ್ನೆಲೆಯಲ್ಲಿ ನದಿಗೆ ಸೇತುವೆ ನಿರ್ಮಾಣ ಮಾಡುವಂತೆ ಜಿಲ್ಲಾಡಳಿತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಭೀಮು ಕೋಡಾಲ ಹೇಳುತ್ತಾರೆ.
ಪ್ರತಿವರ್ಷ ಫೆಬ್ರುವರಿ ತಿಂಗಳಲ್ಲಿ ಗಡ್ಡೆ ಬಸವೇಶ್ವರರ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಜಾತ್ರೆಗೆ ಸುತ್ತಲಿನ ಗ್ರಾಮಸ್ಥರಲ್ಲದೇ, ಪಕ್ಕದ ಜಿಲ್ಲೆಯಾದ ರಾಯಚೂರು, ಗುಲ್ಬರ್ಗ ಹಾಗೂ ನೆರೆ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ನದಿಗೆ ಅಡ್ಡಲಾಗಿ ಸೇತುವೆ ಇಲ್ಲದೇ ಇರುವುದರಿಂದ ಇವರೆಲ್ಲರೂ ತೆಪ್ಪದಲ್ಲಿ ಕುಳಿತು ನದಿಯನ್ನು ದಾಟಬೇಕು. ನಂತರವಷ್ಟೇ ದೇವರ ದರ್ಶನ ಮಾಡಬೇಕು ಎಂದು ಹೇಳುತ್ತಾರೆ.
ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕು. ಗಡ್ಡೆಬಸವೇಶ್ವರ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಾಣ ಮಾಡಬೇಕು. ಇದರಿಂದ ಭಕ್ತರಿಗೆ ಅನುಕೂಲವಾಗುತ್ತದೆ ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.