ಶನಿವಾರ, ಮೇ 8, 2021
18 °C

ಕೃಷ್ಣಾ ಬಿ ಸ್ಕೀಂಗಾಗಿ ಹೋರಾಡಲೂ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಈ ಭಾಗದ ಜನರ ಬದುಕನ್ನು ಹಸಿರಾಗಿಸುವುದಕ್ಕೆ ಕೃಷ್ಣಾ ಕೊಳ್ಳದ `ಬಿ~ ಸ್ಕೀಂನಲ್ಲಿ ಲಭ್ಯವಿರುವ ನೀರು ಬಳಸಿಕೊಳ್ಳುವುದು ಅನಿವಾರ್ಯವಾಗಿದ್ದು ಈ ನಿಟ್ಟಿನಲ್ಲಿ ಜನರು ಮತ್ತು ಜನಪ್ರತಿನಿಧಿಗಳೊಂದಿಗೆ ಹೋರಾಡಲು ಸಿದ್ಧವಿರುವುದಾಗಿ ಭಾನುವಾರ ಚಳಗೇರಿಯಲ್ಲಿ ಒಂದೇ ವೇದಿಕೆಯಲ್ಲಿದ್ದ ವಿವಿಧ ಮಠಾಧೀಶರು ಘೋಷಿಸಿದರು.ಅಲ್ಲಿಯ ಹಿರೇಮಠದ ವತಿಯಿಂದ ನಡೆದ ಸಾಮೂಹಿಕ ಮದುವೆ, ನೂತನ ಶಾಲಾ ಕಾಲೇಜು ಕಟ್ಟಡಗಳ ಉದ್ಘಾಟನೆ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಧರ್ಮಸಭೆ ವೇದಿಕೆ ಮೂಲಕ ಕೃಷ್ಣಾ `ಬಿ~ ಸ್ಕೀಂ ಜಾರಿಗೆ ಒಕ್ಕೊರಲಿನ ನುಡಿಯ ಮೂಲಕ ಸರ್ಕಾರಕ್ಕೆ ಸಂದೇಶ ರವಾನಿಸಿದ ಮಠಾಧೀಶರು, ಈ ವಿಷಯದಲ್ಲಿ ಪ್ರಚಾರಕ್ಕಾಗಿ ರಾಜಕಾರಣಿಗಳು ಭರವಸೆಗಳನ್ನು ನೀಡುವುದು ಸಾಕು ಎಂಬ ಕಠೋರ ನುಡಿಗಳನ್ನೂ ಒಳಗೊಂಡ ಮನವಿಯನ್ನು ಶಾಸಕರಾದ ಅಮರೇಗೌಡ ಬಯ್ಯಾಪುರ, ಹುನುಗುಂದ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ನೀಡಿದರು.ಮಳೆ ಅನಿಶ್ಚಿತತೆ, ಭೀಕರ ಬರದಿಂದಾಗಿ ಇಲ್ಲಿಯ ಜನರು, ರೈತರ ಬದುಕು ದುಸ್ತರವಾಗಿದೆ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಂತೆ ನೀರಾವರಿ ಯೋಜನೆಗಳ ಮಹತ್ವವನ್ನು ಇಲ್ಲಿಯ ಸರ್ಕಾರ ಅರಿಯುತ್ತಿಲ್ಲ, ಈ ಭಾಗದ ಬಹುದಿನಗಳ ಕೂಗಿಗೆ ಬೆಲೆ ದೊರೆತಿಲ್ಲ ಎಂಬ ಮಠಾಧೀಶರ ಅಸಮಾಧಾನವನ್ನು ತಮ್ಮ ನಾಂದಿನುಡಿಯ ಮೂಲಕ ಹಂಪಿಯ ಸಾವಿರದೇವರ ಸಂಸ್ಥಾನಮಠದ ವಾಮದೇವ ಮಹಾಂತ ಸ್ವಾಮೀಜಿ ಹೊರಹಾಕಿದರು.ಜಲಜಾಗೃತಿಗೆ ಕೈ ಎತ್ತಿ: ಅಲ್ಲದೇ ಉತ್ತರ ಕರ್ನಾಟಕದಲ್ಲಿ ನೀರಿನ ಅಭಾವ ಹೆಚ್ಚುತ್ತಿದೆ, ಮಳೆ ಮತ್ತು ಅಂತರ್ಜಲದ ಸಮರ್ಪಕ ಬಳಕೆ ಮಾಡಿಕೆ ಮಾಡಿಕೊಳ್ಳಲು `ಜಲಜಾಗೃತಿ~ ನಡೆಯಬೇಕಿದೆ. ಹಾಗಾಗಿ ಮಠಾಧೀಶರೆಲ್ಲ ಸಮಾಜದ ಜೊತೆಯಾಗಿ, ಸಮಾಜದ ನೆರಳಾಗಿ ಇರುತ್ತೇವೆ ಎಂದು ಸಂಕಲ್ಪಿಸಲು ಕೈ ಎತ್ತುವಂತೆ ವಾಮದೇವ ಸ್ವಾಮೀಜಿ ಮಾಡಿದ ಮನವಿಗೆ ವೇದಿಕೆಯಲ್ಲಿದ್ದ ಎಲ್ಲ ಮಠಾಧೀಶರು ಕೈ ಎತ್ತಿ ಸಮ್ಮತಿಸಿದರು.ರಂಭಾಪುರಿ, ಕಾಶಿ, ಉಜ್ಜಯನಿ ಪೀಠದ ಜಗದ್ಗುರುಗಳು, ವಿರೂಪಾಕ್ಷಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಹಲವಾರು ಮಠಾಧೀಶರು, ಶಾಸಕರಾದ ಅಮರೇಗೌಡ ಬಯ್ಯಾಪುರ, ದೊಡ್ಡನಗೌಡ ಪಾಟೀಲ, ಮಾಜಿ ಶಾಸಕರಾದ ಹಸನ್‌ಸಾಬ್, ದೊಡ್ಡನಗೌಡ, ಅನೇಕ ಚುನಾಯಿತ ಪ್ರತಿನಿಧಿಗಳು, ವಿವಿಧ ಸಮಾಜಗಳ ಗಣ್ಯರು ವೇದಿಕೆಯಲ್ಲಿದ್ದರು.ಅವಿಭಕ್ತ ಕುಟುಂಬದ ಸಾವಯವ ಕೃಷಿಕರಾದ ಹನುಮಮ್ಮ ರಾಮಣ್ಣ ಮೇಟಿಗೌಡರ್, ಜೆಡಿಎಸ್ ಮುಖಂಡ ಸೂರ್ಯನಾರಾಯಣರೆಡ್ಡಿ, ಸಮಾಜ ಸೇವಕ ಚಂದ್ರಶೇಖರ ಭಟ್ ಅವರಿಗೆ ಮಠದ ಪದವಿ ಪ್ರದಾನ ಮಾಡಲಾಯಿತು. ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಮಠದ ಪರವಾಗಿ ಸತ್ಕರಿಸಲಾಯಿತು.

ಲಿಂಗದೀಕ್ಷೆ, ಅಯಾಚಾರ, ಉಜ್ಜಯನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ವಿವಿಧ ಕಲಾಮೇಳದವರು ಉತ್ಸವಕ್ಕೆ ಮೆರಗು ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.