ಕೃಷ್ಣಾ, ಮಲಪ್ರಭೆಯಲ್ಲಿ ಪ್ರವಾಹ ಭೀತಿ

ಮಂಗಳವಾರ, ಜೂಲೈ 23, 2019
24 °C
ಶಿವಮೊಗ್ಗ, ಕೊಡಗು ಜಿಲ್ಲೆಯಲ್ಲಿ ಬಿರುಸುಗೊಂಡ ಮಳೆ

ಕೃಷ್ಣಾ, ಮಲಪ್ರಭೆಯಲ್ಲಿ ಪ್ರವಾಹ ಭೀತಿ

Published:
Updated:

ಬೆಂಗಳೂರು: ರಾಜ್ಯದ ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮಂಗಳವಾರ ಮಳೆ ಧಾರಾಕಾರವಾಗಿದ್ದರೆ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ  ಮಳೆ ಕ್ಷೀಣಿಸಿದೆ. ಬಾಗಲಕೋಟೆ, ವಿಜಾಪುರ, ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಜಿಟಿ ಜಿಟಿ ಮಳೆಯಾಗಿದೆ.ನಾರಾಯಣಪುರ ಹಿನ್ನೀರು ಹೆಚ್ಚಳ (ಕೂಡಲಸಂಗಮ ವರದಿ): ಕೃಷ್ಣಾ ಹಾಗೂ ಮಲಪ್ರಭಾ ನದಿಗಳಿಗೆ ಕಳೆದ ಮೂರು ದಿನಗಳಿಂದ ಅಧಿಕ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ನಾರಾಯಣಪುರ ಜಲಾಶಯದ ಹಿನ್ನೀರು ಅಧಿಕಗೊಂಡಿದೆ.ಮಲಪ್ರಭಾ ನದಿಗೆ ಮಂಗಳವಾರ ಅಧಿಕ ಪ್ರಮಾಣದ ನೀರು ಹರಿದು ಬಂದಿದ್ದು, ಇದರಿಂದ ಮಲಪ್ರಭಾ ನದಿ ದಡದ ಕೆಂಗಲ್ಲ, ಕಜಗಲ್ಲ, ವರಗೋಡದಿನ್ನಿ, ಹೂವನೂರ, ನಂದನೂರ, ಗಂಜಿಹಾಳ, ಕೈರವಾಡಗಿ, ಪಾಪತನಾಳ, ಬಿಸನಾಳಕೊಪ್ಪ, ಇದ್ದಲಗಿ, ಅಡವಿಹಾಳ ಹಾಗೂ ಕೃಷ್ಣಾ ನದಿಯ ತುರಡಗಿ, ಕಟಗೂರ ಮುಂತಾದ ಗ್ರಾಮಗಳಲ್ಲಿ ಪ್ರವಾಹಭೀತಿ ಉಂಟಾಗಿದೆ. ಜನರು ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. 2007, 2009 ರಲ್ಲಿ ಇದೇ ಪ್ರಮಾಣದಲ್ಲಿ ಕೃಷ್ಣಾ ಹಾಗೂ ಮಲಪ್ರಭಾ ನದಿಗೆ ನೀರು ಬಂದ ಪರಿಣಾಮ ಪ್ರವಾಹ ಉಂಟಾಗಿತ್ತು. ಮತ್ತೆ ಅದೇ ಪರಿಸ್ಥಿತಿ ಮರುಕಳಿಸುವ ಆತಂಕದಲ್ಲಿ ಜನತೆ ಇದ್ದಾರೆ.7 ಸೇತುವೆ ಸಂಚಾರಕ್ಕೆ ಮುಕ್ತ (ಚಿಕ್ಕೋಡಿ ವರದಿ):

ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಮಳೆ ಪ್ರಮಾಣ ಸ್ವಲ್ಪ ಹೆಚ್ಚಳವಾಗಿದ್ದರೂ ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಿಂದ ಮಳೆ ಪ್ರಮಾಣ ಕ್ಷೀಣಿಸಿದೆ. ತಾಲ್ಲೂಕಿನಲ್ಲಿನ ಕೆಳಮಟ್ಟದ 4 ಸೇತುವೆಗಳು ಮಂಗಳವಾರ ಸಂಚಾರಕ್ಕೆ ತೆರೆದುಕೊಂಡಿದ್ದು, ಇದರೊಂದಿಗೆ ಜಲಾವೃತಗೊಂಡಿದ್ದ ಏಳೂ ಸೇತುವೆಗಳು ಸಂಚಾರಕ್ಕೆ ಮುಕ್ತಗೊಂಡಂತಾಗಿವೆ.ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ನೀರು ಹರಿದು ಬರುತ್ತ್ದ್ದಿದು, ಮಂಗಳವಾರ ಒಳಹರಿವು 56,833 ಕ್ಯೂಸೆಕ್ ಇತ್ತು. ಹಿಪ್ಪರಗಿ ಜಲಾಶಯದ ಹೊರಹರಿವು 85,050 ಕ್ಯೂಸೆಕ್ ಇದ್ದು, ಇದರಿಂದ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳಾದ ದೂಧಗಂಗಾ, ವೇದಗಂಗಾ ನದಿಗಳ ಹರಿವಿನ ಪ್ರಮಾಣ ಇಳಿಮುಖವಾಗಿದೆ. ಇದರಿಂದಾಗಿ ಕಲ್ಲೋಳ-ಯಡೂರ, ಸದಲಗಾ-ಬೋರಗಾಂವ, ಜತ್ರಾಟ-ಭೀವಶಿ ಸಂಚಾರಕ್ಕೆ ತೆರೆದುಕೊಂಡಿವೆ. ಸೋಮವಾರವೇ ಸಿದ್ನಾಳ-ಅಕ್ಕೋಳ, ಭೋಜವಾಡಿ-ಕುನ್ನೂರ, ಕಾರದಗಾ-ಭೋಜ ಮತ್ತು ಮಲಿಕವಾಡ-ದತ್ತವಾಡ ಸಂಚಾರಕ್ಕೆ ಮುಕ್ತಗೊಂಡಿದ್ದವು.ಮುಂದುವರಿದ ಮಳೆ (ಶಿವಮೊಗ್ಗ ವರದಿ): ಜಿಲ್ಲೆಯಾದ್ಯಂತ ಮಂಗಳವಾರ ಜಿಟಿಜಿಟಿ ಮಳೆ ಆಗಿದೆ. ಸೊರಬ, ತೀರ್ಥಹಳ್ಳಿ ಮತ್ತು ಸಾಗರ ತಾಲ್ಲೂಕಿನ ಹಲವೆಡೆ  ನಿರಂತರ ಮಳೆ ಸುರಿದಿದೆ.ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆ ಆಗುತ್ತಿದ್ದು, ಜಲಾಶಯದ ನೀರಿನಮಟ್ಟ ಏರುತ್ತಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಸಾಧಾರಣ ಮಳೆ ಮುಂದುವರಿದಿದೆ. ತುಂಗಾ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋಗಿ ಕೊಚ್ಚಿ ಹೋದ ವ್ಯಕ್ತಿಯ ಶವ ಮಂಗಳವಾರವೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಕೊಡಗಿನಲ್ಲಿ ಮುಂಗಾರು  `ವೈಭವ'

(ಮಡಿಕೇರಿ ವರದಿ):
ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಉತ್ತಮ ಮಳೆ ಸುರಿದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸಾಧಾರಣವಾಗಿದ್ದ ಮಳೆ ತುಸು ಬಿರುಸುಗೊಂಡಿದೆ.ಮಡಿಕೇರಿ, ನಾಪೋಕ್ಲು, ಶಾಂತಳ್ಳಿ, ಸಂಪಾಜೆ, ಭಾಗಮಂಡಲ, ಕೊಡ್ಲಿಪೇಟೆ ಸೇರಿದಂತೆ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಅರಣ್ಯ ಪ್ರದೇಶಗಳಲ್ಲಿ, ಕಾಫಿ ತೋಟಗಳಲ್ಲಿ ಹಾಗೂ ಇಳಿಜಾರಿನ ಪ್ರದೇಶಗಳಲ್ಲಿ ಹರಿಯುತ್ತಿದ್ದ ನೀರಿನ ಸೆಲೆಗಳು ಈಗ ಜಲಧಾರೆಗಳಾಗಿ ಧುಮ್ಮಿಕ್ಕಲಾರಂಭಿಸಿವೆ.ಕೊಡಗು ಜಿಲ್ಲೆಗೆ ಆಗಮಿಸುತ್ತಿದ್ದ ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯುವ ಜೊತೆಗೆ ಜಲಪಾತಗಳನ್ನು ಕಣ್ತುಂಬಿಕೊಳ್ಳಬಹುದು. ಅಬ್ಬಿ ಫಾಲ್ಸ್, ಮಲ್ಲಳ್ಳಿ ಫಾಲ್ಸ್, ಚೆಲಾವರ ಫಾಲ್ಸ್, ಬರಪೊಳೆಯ ಜಲಪಾತ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry