ಕೃಷ್ಣೆಗೆ ಪ್ರವಾಹ

7

ಕೃಷ್ಣೆಗೆ ಪ್ರವಾಹ

Published:
Updated:
ಕೃಷ್ಣೆಗೆ ಪ್ರವಾಹ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಶನಿವಾರ ಮಳೆ ಮುಂದುವರಿದಿದೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ  ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಕೆಳ ಮಟ್ಟದಲ್ಲಿರುವ ಆರು ಸೇತುವೆಗಳು ಮುಳುಗಿವೆ.ಕೃಷ್ಣಾ , ಉಪ ನದಿಗಳಾದ ದೂಧಗಂಗಾ ಹಾಗೂ ವೇದಗಂಗಾದಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಕಲ್ಲೋಳ- ಯಡೂರ, ಸದಲಗಾ- ಬೋರಗಾಂವ, ಕಾರದಗಾ- ಬೋಜ, ಭೋಜವಾಡಿ- ಕುನ್ನೂರ, ಸಿದ್ನಾಳ- ಅಕ್ಕೋಳ, ಜತ್ರಾಟ- ಭೀವಶಿ ಸೇತುವೆಗಳ ಮೇಲೆ ನೀರು ಹರಿಯತೊಡಗಿದೆ. ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದ್ದರಿಂದ ಗ್ರಾಮಸ್ಥರು ಹತ್ತಾರು ಕಿ.ಮೀ. ದೂರದ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತಾಗಿದೆ.ಚಿಕ್ಕೋಡಿ, ಖಾನಾಪುರ ಹಾಗೂ ಬೆಳಗಾವಿ ತಾಲ್ಲೂಕುಗಳಲ್ಲಿ ಶುಕ್ರವಾರ ರಾತ್ರಿಯಿಡಿ ಉತ್ತಮವಾಗಿ ಮಳೆಯಾಗಿದೆ. ಬೆಳಿಗ್ಗೆಯಿಂದ ಆಗಾಗ ಬಿಡುವು ನೀಡಿ, ಮಳೆ ಸುರಿಯುತ್ತಿತ್ತು. ಉಳಿದ ತಾಲ್ಲೂಕಿನಲ್ಲಿ ಆಗಾಗ ಜಿಟಿ ಜಿಟಿ ಮಳೆಯಾಗಿದೆ.ಉತ್ತರ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಜಿಟಿಜಿಟಿ ಮಳೆ ಮುಂದುವರಿದಿತ್ತು. ಕರಾವಳಿಯ ಅಂಕೋಲಾ ಮತ್ತು ಕಾರವಾರದಲ್ಲಿ ಉತ್ತಮ ಮಳೆಯಾದರೆ, ಭಟ್ಕಳ, ಹೊನ್ನಾವರ ಮತ್ತು ಕುಮಟಾದಲ್ಲಿ ಮಳೆ ಕ್ಷೀಣಿಸಿತ್ತು. ಅರೆಬಯಲುಸೀಮೆಯ ಹಳಿಯಾಳ, ದಾಂಡೇಲಿ, ಮುಂಡಗೋಡ ಹಾಗೂ ಮಲೆನಾಡಿನ ಯಲ್ಲಾಪುರ, ಶಿರಸಿ ಮತ್ತು ಸಿದ್ದಾಪುರದಲ್ಲಿ ಜಿಟಿಜಿಟಿ ಮಳೆ ಸುರಿದಿದೆ.ಧಾರವಾಡ ಜಿಲ್ಲೆಯ ಕೆಲವೆಡೆ, ಬಾಗಲಕೋಟೆ ಜಿಲ್ಲೆಯ ಮುಧೋಳ- ಜಮಖಂಡಿ ತಾಲ್ಲೂಕುಗಳಲ್ಲಿ ಮಳೆಯಾಗಿದೆ.

ಕೊಡಗಿನಲ್ಲಿ  ಮಳೆಯಾಗುತ್ತಿದ್ದು ಜಿಲ್ಲೆಯ ನದಿ, ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾದಂತೆ ಪ್ರತಿನಿತ್ಯ ನಾಲೆ ಹಾಗೂ ನದಿಗೆ ನೀರಿನ ಹರಿವನ್ನು ಹೆಚ್ಚಿಸಲಾಗಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರ ಅಬ್ಬರದ ಮಳೆಯಾಗಿದೆ. ಆಗುಂಬೆಯಲ್ಲಿ ಅತ್ಯಧಿಕ 109 ಮಿ.ಮೀ. ಮಳೆ ದಾಖಲಾಗಿದೆ. ಪ್ರಮುಖ ನದಿಗಳಾದ ತುಂಗಾ, ಭದ್ರಾ, ಶರಾವತಿ, ಮಾಲತಿ, ವರದಾ, ಕುಮುದ್ವತಿ, ದಂಡಾವತಿ ನದಿಗಳ ನೀರಿನ ಹರಿವಿನಲ್ಲಿ ದಿಢೀರ್ ಏರಿಕೆಯಾಗಿದೆ.ಕರಾವಳಿ ಪ್ರದೇಶದಲ್ಲಿ ಶನಿವಾರ ಮಳೆಯ ಆರ್ಭಟ ಜೋರಾಗಿತ್ತು. ಬಹುತೇಕ ಕಡೆ ದಿನವಿಡೀ ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪಶ್ಚಿಮ ಘಟ್ಟ ತಪ್ಪಲಿನ ಸುಳ್ಯ, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಹಾಗೂ ಮಂಗಳೂರು ತಾಲ್ಲೂಕಿನಲ್ಲಿ ಮಳೆ ಜೋರಾಗಿತ್ತು. ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ಅತಿ ಹೆಚ್ಚು (82.4 ಮಿ.ಮೀ) ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry