ಕೃಷ್ಣ, ಅಂಬರೀಷ್ ನಡೆ: ಹೆಚ್ಚಿದ ಕುತೂಹಲ

7
ಗದ್ದುಗೆ ಗುದ್ದಾಟ 2013

ಕೃಷ್ಣ, ಅಂಬರೀಷ್ ನಡೆ: ಹೆಚ್ಚಿದ ಕುತೂಹಲ

Published:
Updated:
ಕೃಷ್ಣ, ಅಂಬರೀಷ್ ನಡೆ: ಹೆಚ್ಚಿದ ಕುತೂಹಲ

ಮಂಡ್ಯ: ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ಹಾಗೂ ಅಂಬರೀಷ್ ಅವರ ರಾಜಕೀಯ ನಡೆ ಜಿಲ್ಲೆ ಮಾತ್ರವಲ್ಲ, ವಿವಿಧ ರಾಜಕೀಯ ಪಕ್ಷ ಹಾಗೂ ಸಾರ್ವಜನಿಕರಲ್ಲಿಯೂ ಕುತೂಹಲ ಕೆರಳಿಸಿದೆ.ವಿಧಾನಸಭೆ ಚುನಾವಣೆಯಲ್ಲಿ ಕೃಷ್ಣ ಅವರ ಪಾತ್ರ ಏನು  ಹಾಗೂ ಅಂಬರೀಷ್ ಅವರು ಯಾವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುತ್ತಾರೆ ಎಂಬುದು ಈಗಲೂ ಒಗಟಾಗಿ ಉಳಿದಿದೆ.ಎಸ್.ಎಂ. ಕೃಷ್ಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದ ಮೇಲೆ ರಾಜ್ಯದ ಚುನಾವಣೆಯಲ್ಲಿ ಅವರಿಗೆ ವಹಿಸಬಹುದಾದ ಜವಾಬ್ದಾರಿ ಕುರಿತು ಕಾಂಗ್ರೆಸ್ ಪಕ್ಷ ಹಾಗೂ ಸಾರ್ವಜನಿಕ ವಲಯದಲ್ಲಿ ಬಿರುಸಿನ ಚರ್ಚೆ ನಡೆದಿದ್ದರೆ, ಅವರಿಗೆ ನೀಡುವ ಹುದ್ದೆಯ ಮೇಲೆ ಪ್ರತಿಯಾಗಿ ತಂತ್ರ ರೂಪಿಸಲು ಉಳಿದ ಪಕ್ಷಗಳೂ ಕುತೂಹಲದಿಂದ ಕಾಯುತ್ತಿವೆ.ರಾಜೀನಾಮೆ ನೀಡಿ ರಾಜ್ಯಕ್ಕೆ ಆಗಮಿಸಿದಾಗ ಅವರಿಗೆ ವಿಧಾನಸಭಾ ಚುನಾವಣೆ ಸಮನ್ವಯ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗುವುದು ಎಂಬ ಮಾತುಳು ಕೇಳಿ ಬಂದಿದ್ದವು. ಆದರೆ, ಕಾಂಗ್ರೆಸ್ ಪಕ್ಷವು ಇತ್ತೀಚೆಗಷ್ಟೇ ಕೃಷ್ಣ ಅವರನ್ನು ಪಕ್ಷದ ಕಾರ್ಯಕಾರಿಣಿಯ ಕಾಯಂ ಆಹ್ವಾನಿತರನ್ನಾಗಿ ನೇಮಿಸಿದೆ. ಈಗಲೂ ಅವರನ್ನು ಚುನಾವಣಾ ಸಮನ್ವಯ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂಬುದು ಅವರ ಬೆಂಬಲಿಗರ ವಾದ.ಕೃಷ್ಣ ಅವರು ಬೆಂಗಳೂರಿನ ಸದಾಶಿವನಗರದ ಮತದಾರರ ಪಟ್ಟಿಯಲ್ಲಿದ್ದ ತಮ್ಮ ಹಾಗೂ ಪತ್ನಿಯ ಹೆಸರನ್ನು ಮದ್ದೂರು ತಾಲ್ಲೂಕಿನ ಸ್ವಗ್ರಾಮವಾದ ಸೋಮನಹಳ್ಳಿಗೆ ವರ್ಗಾವಣೆ ಮಾಡಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.  ಮದ್ದೂರು ವಿಧಾನಸಭೆ ಕ್ಷೇತ್ರದಿಂದ ರಾಜಕೀಯ ಪಯಣ ಆರಂಭಿಸಿದ್ದ ಅವರು ಈಗ ಮತ್ತೆ ಮದ್ದೂರು ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಂಡಿರುವುದರಿಂದ ಅಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದು ಅವರ ಹಿಂಬಾಲಕರ ಹೇಳಿಕೆ.ಕೇಂದ್ರದ ಇನ್ನೊಬ್ಬ ಮಾಜಿ ಸಚಿವ, ಚಲನಚಿತ್ರ ನಟ ಅಂಬರೀಷ್ ಅವರ ಸಮಸ್ಯೆಯೇ ಬೇರೆ. ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಈಗಲೂ ಯಕ್ಷ ಪ್ರಶ್ನೆಯಾಗಿದೆ.ಶ್ರೀರಂಗಪಟ್ಟಣ, ವಮಂಡ್ಯ, ಮದ್ದೂರು ಕ್ಷೇತ್ರದಿಂದ ಅಂಬರೀಷ್ ಸ್ಪರ್ಧಿಸುತ್ತಾರೆ ಎಂಬುದರ ಜತೆಗೆ, ಮೈಸೂರು ಜಿಲ್ಲೆಯ ಕ್ಷೇತ್ರ ಅಥವಾ ಬೆಂಗಳೂರಿನ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿವೆ.ವಿಧಾನಸಭೆ ಚುನಾವಣೆಯಲ್ಲಿ ಶ್ರೀರಂಗಪಟ್ಟಣದಿಂದ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಸೋತಿದ್ದರು. ಶ್ರೀರಂಗಪಟ್ಟಣದಲ್ಲಿ ಅವರ ಸೋಲಿಗೆ, ಪಕ್ಷದೊಳಗಿನ ಭಿನ್ನಮತವೇ ಕಾರಣವಾಗಿತ್ತು ಎನ್ನುವುದು ಅವರ ಹಿಂಬಾಲಕರ ದೂರು. ಲೋಕಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಅವರಿಗೆ ಮುನ್ನಡೆ ಲಭಿಸಿತ್ತು. ಹೀಗಾಗಿ, ಈ ಬಾರಿ ಅವರು ಶ್ರೀರಂಗಪಟ್ಟಣದಿಂದಲೇ ಸ್ಪರ್ಧಿಸಬೇಕು ಎಂದು ಇತ್ತೀಚೆಗೆ ಮಂಡ್ಯ ತಾಲ್ಲೂಕಿನಲ್ಲಿ ನಡೆದ ಸಮಾವೇಶದಲ್ಲಿ ಆಗ್ರಹಿಸಲಾಗಿತ್ತು.ಯಾವ ಕ್ಷೇತ್ರದಿಂದ ಸ್ಪರ್ಧಿಬೇಕು ಎನ್ನುವುದನ್ನು ಪಕ್ಷ ನಿರ್ಧರಿಸಲಿದೆ. ಪಕ್ಷ ಸೂಚಿಸಿದ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಅಂಬರೀಷ್ ಹೇಳಿದ್ದಾರೆ. ಹೀಗಾಗಿ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಈಗಲೂ ಗುಟ್ಟಾಗಿಯೇ ಉಳಿದಿದೆ.ಕೃಷ್ಣ ಅವರು ರಾಜ್ಯ ರಾಜಕಾರಣಕ್ಕೆ ಆಗಮಿಸುವುದರಿಂದ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಮೇಲುಗೈ ಪಡೆಯಲಿದೆ. ಕೆಪಿಸಿಸಿ ಉಪಾಧ್ಯಕ್ಷರಾದ ಅಂಬರೀಷ್ ಅವರೂ ಜಿಲ್ಲೆಯಲ್ಲಿ ಸ್ಪರ್ಧಿಸುವುದರಿಂದಲೂ ಪಕ್ಷಕ್ಕೆ ಅನುಕೂಲ ಆಗಲಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ  ಎಂ.ಎಸ್. ಆತ್ಮಾನಂದ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry