ಶುಕ್ರವಾರ, ಏಪ್ರಿಲ್ 23, 2021
31 °C

ಕೃಷ್ಣ ನಗರದಲ್ಲೊಂದು ಕೊಳಚೆ ಗುಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇವರು ಈ ಸಂಕಟ ಅನುಭವಿಸಲು ಆರಂಭವಾಗಿ ಎರಡು ತಿಂಗಳು ಕಳೆದಿವೆ. ಅಸಹನೀಯ ವಾಸನೆ, ಸೊಳ್ಳೆ-ಹಂದಿಗಳ ಕಾಟದಿಂದ ಜೀವನ ದುಸ್ತರವಾಗಿದೆ. ಇಂದಲ್ಲ ನಾಳೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ಭರವಸೆಯಲ್ಲಿ ಅವರು ದಿನಗಳೆಯುತ್ತಿದ್ದಾರೆ.

ಇದು ಎಸ್.ಎಂ. ಕೃಷ್ಣ ನಗರದ ಡಿ ಬ್ಲಾಕ್‌ನ ಒಂದು ತುದಿಯಲ್ಲಿ ವಾಸಿಸುತ್ತಿರುವ ಜನರ ಸಮಸ್ಯೆ. ಇಲ್ಲಿನ ಮೋರಿಯೊಂದು ಒಡೆದು ಮನೆ ಸಮೀಪದ ಗುಂಡಿಯಲ್ಲಿ ನಿಂತಿರುವ ಕೊಳಚೆ ನೀರು ಇಡೀ ಪ್ರದೇಶವನ್ನು ದುರ್ನಾತದ ಗುಂಡಿಯಾಗಿ ಮಾರ್ಪಡಿಸಿದೆ.

`ಎರಡು ತಿಂಗಳ ಹಿಂದೆ ಚರಂಡಿ ಏಕಾಏಕಿ ಉಕ್ಕಿ ಹರಿಯತೊಡಗಿತು. ಕೊಳಚೆ ನೀರು ಬಂದು ಇಲ್ಲಿ ಸಂಗ್ರಹವಾಗತೊಡಗಿತು. ದಿನ ಕಳೆದಂತೆ ಸಮಸ್ಯೆ ಹೆಚ್ಚಾಗತೊಡಗಿತು. ಈಗ ದಿನಗಳೆಯುವುದೇ ಸಾಹಸ ಎಂದಾಗಿದೆ. ಭಾನುವಾರ ಪಾಲಿಕೆ ಸಿಬ್ಬಂದಿ ಬಂದು ಮ್ಯಾನ್‌ಹೋಲ್ ದುರಸ್ತಿ ಮಾಡಿದ್ದರೂ ಕಟ್ಟಿನಿಂತ ಕೊಳಚೆಯ ದುರ್ವಾಸನೆ ಹೋಗಲಿಲ್ಲ~ ಎಂದು ಹೇಳುತ್ತಾರೆ ಸಮೀಪದ ಮನೆಯವರು.

ಇದು ತಗ್ಗು ಪ್ರದೇಶ. ಮೇಲ್ಭಾಗದಿಂದ ಹರಿದು ಬರುವ ಕೊಳಚೆ ನೀರು ಇಲ್ಲಿನ ಶೆಡ್ ಒಂದರ ಬಳಿ ಇರುವ ಗುಂಡಿಯಲ್ಲಿ ಸಂಗ್ರಹವಾಗುತ್ತದೆ. ಗುಂಡಿ ತುಂಬಿದ ನಂತರ ಕೆಳಗೆ ಹರಿಯುವ ನೀರು ದೊಡ್ಡ ಮೋರಿಗೆ ಸೇರಬೇಕು. ಆದರೆ ಅಲ್ಲಿಯೂ ಅಡ್ಡಿಯಾಗುವುದರಿಂದಾಗಿ ನೀರು ಮುಂದೆ ಸಾಗುವುದಿಲ್ಲ. ಹೀಗಾಗಿ ಕೊಳಚೆ ನೀರಿನ ಹರಿವು ಆರಂಭವಾಗುವಲ್ಲಿಂದ ಕೆಳಗಿನ ಗುಂಡಿಯ ತನಕ ಸುಮಾರು ಇನ್ನೂರು ಮೀಟರ್ ಅಂತರದಲ್ಲಿ ವಾಸಿಸುವ ಜನರು ಗಲೀಜು ನೀರಿನ ದರ್ಶನ ಮಾಡುತ್ತಲೇ ದಿನಗಳೆಯಬೇಕಾಗಿದೆ.

`ಕೊಳಚೆ ನೀರು ಎಲ್ಲಿಂದ ಹರಿದು ಬರುತ್ತದೆ ಎಂದು ಪತ್ತೆ ಮಾಡಲಾಗುತ್ತಿಲ್ಲ. ದುರ್ವಾಸನೆಯಿಂದಾಗಿ ಅತ್ತ ಸುಳಿಯಲು ಸಾಧ್ಯವಾಗುತ್ತಿಲ್ಲ. ಅನೇಕ ಬಾರಿ ಸಂಬಂಧಪಟ್ಟವರಿಗೆ ವಿಷಯ ತಿಳಿಸಲಾಗಿತ್ತು. ಒಂದೆರಡು ಬಾರಿ ಪಾಲಿಕೆ ಸಿಬ್ಬಂದಿ ಬಂದು ಕೊಳೆಯನ್ನು ತೆಗೆದು ಹೋದರು. ಆದರೆ ಹೆಚ್ಚಿನ ಪ್ರಯೋಜನವಾಗಲಿಲ್ಲ~ ಎನ್ನುತ್ತಾರೆ ನಿವಾಸಿಗಳು.

ಕೊಳಚೆ ನೀರು ನಿಂತ ಕಾರಣ ಇದು ಸೊಳ್ಳೆಗಳ ಆವಾಸ ತಾಣವಾಗಿಯೂ ಮಾರ್ಪಟ್ಟಿದೆ. ಹಂದಿಗಳು ಕೂಡ ಬಂದು ಇಲ್ಲಿ `ಆಟ~ವಾಡುತ್ತ ಕೊಳೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ನೀರು ಹೆಚ್ಚಾದಂತೆ ಕೊಳಚೆ ನಿಲ್ಲುವ ಜಾಗದ ವ್ಯಾಪ್ತಿಯೂ ವಿಸ್ತಾರವಾಗುತ್ತ ಹೋಗುತ್ತಿದೆ. ಇದರಿಂದಾಗಿ ಸಮಸ್ಯೆಯೂ ಹೆಚ್ಚಾಗುವ ಆತಂಕ ಇಲ್ಲಿನವರನ್ನು ಕಾಡತೊಡಗಿದೆ. 

`ನೀರು ನಿಂತ ಜಾಗವನ್ನು ದಾಟಿ ಆಚೆ ಕಡೆ ಹೋಗಲು ಶ್ರಮಿಸಿದ ಬಾಲಕನೊಬ್ಬ ಈಚೆಗೆ ಗುಂಡಿಯಲ್ಲಿ ಬಿದ್ದಿದ್ದ. ಜನರು ಹೋಗಿ ಆತನನ್ನು ರಕ್ಷಿಸಿದರು. ಭಾರಿ ಅನಾಹುತ ತಪ್ಪಿತು~ ಎಂದು ಮಹಮ್ಮದ್ ಗೌಸ್ ಎಂಬವರು ಹೇಳಿದರು.

`ವಾಸನೆ ಸಹಿಸುತ್ತ ಬದುಕುತಿದ್ದೇವೆ. ಮೊದಲು ಕೆಲವು ದಿನ ಊಟ ಕೂಡ ಸೇರುತ್ತಿರಲಿಲ್ಲ. ಈಗ ರೂಢಿಯಾಗಿದೆ. ಆದರೆ ಇನ್ನಾದರೂ ಸಂಬಂಧಪಟ್ಟವರು ಸಮಸ್ಯೆ ಪರಿಹರಿಸದಿದ್ದಲ್ಲಿ ಸಾಂಕ್ರಾಮಿಕ ರೋಗಗಳು ಹರಡಿ ಜನರು ತೀರ ಸಂಕಷ್ಟಕ್ಕೆ ಒಳಗಾಗಬೇಕಾದೀತು~ ಎಂದು ಸಮೀಪದ ಮನೆಯ ಮಹಿಳೆಯೊಬ್ಬರು ಹೇಳಿದರು. 

ಪಾಲಿಕೆ ಸದಸ್ಯರ ಮಾತಿಗೇ ಬೆಲೆ ಇಲ್ಲ!

`ಎಸ್.ಎಂ.ಕೃಷ್ಣ ನಗರದ ಡಿ ಬ್ಲಾಕ್‌ನಲ್ಲಿ ಕೊಳಚೆ ನೀರು ನಿಂತು ಆಗಿರುವ ತೊಂದರೆಯನ್ನು ಕಣ್ಣಾರೆ ಕಂಡಿದ್ದೇನೆ. ಪರಿಶೀಲನೆ ಮಾಡಿ ತಕ್ಷಣ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೆ ಇಲ್ಲಿಯ ವರೆಗೆ ಅದಕ್ಕೆ ಪೂರಕ ಸ್ಪಂದನೆ ಸಿಕ್ಕಿಲ್ಲ~ ಎಂದು ಪಾಲಿಕೆಯ ಈ ಭಾಗದ ಸದಸ್ಯ ಅಲ್ತಾಫ್ ನವಾಜ್ ಕಿತ್ತೂರ `ಪ್ರಜಾವಾಣಿ~ಗೆ ತಿಳಿಸಿದರು.

`ಸಮಸ್ಯೆ ಪರಿಹಾರಕ್ಕೆ ಈ ಭಾಗದ ಜನರು ಪಾಲಿಕೆಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದಾರೆ. ನನ್ನ ಗಮನಕ್ಕೆ ಬಂದ ಮೇಲೆ ಹೋಗಿ ನೋಡಿದ್ದೇನೆ. ಜೆಟ್ಟಿಂಗ್ ಮೆಷಿನ್ ಮೂಲಕ ನಡೆಯಬೇಕಾದ ಕೆಲಸ ಅದು. ಆದರೆ ಮೆಷಿನ್ ಬರಲಿಲ್ಲ, ಕೆಲಸವೂ ಆಗಲಿಲ್ಲ. ಭಾನುವಾರ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಕೆಲಸ ಆಗಿರುವ ಬಗ್ಗೆ ಸಂಜೆಯ ವರೆಗೂ ಯಾವುದೇ ಮಾಹಿತಿ ನೀಡಲಿಲ್ಲ~ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.