ಕೃಷ್ಣ ಮಠಕ್ಕೆ ಮುತ್ತಿಗೆ- ಲಾಠಿ ಪ್ರಹಾರ

7

ಕೃಷ್ಣ ಮಠಕ್ಕೆ ಮುತ್ತಿಗೆ- ಲಾಠಿ ಪ್ರಹಾರ

Published:
Updated:
ಕೃಷ್ಣ ಮಠಕ್ಕೆ ಮುತ್ತಿಗೆ- ಲಾಠಿ ಪ್ರಹಾರ

ಉಡುಪಿ: ಮಡೆಸ್ನಾನ ಮತ್ತು ಪಂಕ್ತಿ ಭೇದ ವಿರೋಧಿಸಿ ಉಡುಪಿಯ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ ಪರಿಣಾಮ ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಗುರುವಾರ ನಡೆಯಿತು.ಘಟನೆಯಲ್ಲಿ 8 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ, ಮುಖಂಡರಾದ ಜಿ.ಎನ್.ನಾಗರಾಜು, ಬಿ. ಮಾಧವ, ಕೆ. ಶಂಕರ್ ಸೇರಿದಂತೆ ಸುಮಾರು 150 ಮಂದಿ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಅವರನ್ನು ಬಂಧಿಸಿದ್ದಾರೆ.ಮಡೆಸ್ನಾನ ಮತ್ತು ಪಂಕ್ತಿಭೇದ ವಿರೋಧಿಸಿ ಸಿಪಿಐಎಂ ಉಡುಪಿಯ ಅಜ್ಜರಕಾಡಿನ ಹುತಾತ್ಮರ ಸ್ಮಾರಕದ ಬಳಿ ಗುರುವಾರ ಬೃಹತ್ ಬಹಿರಂಗ ಸಭೆ ಏರ್ಪಡಿಸಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಮಧ್ಯಾಹ್ನ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಲು ಬಂದರು. ಸಂಸ್ಕೃತ ಪಾಠ ಶಾಲೆಯ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ನಿಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐಎಂನ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ `ನಾವು ಮಠಕ್ಕೆ ಹೋಗಲು ನಿರ್ಧರಿಸಿದ್ದೇವೆ. ಮಠಕ್ಕೆ ಹೋಗುವುದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಪೊಲೀಸರು ನಮ್ಮನ್ನು ತಡೆಯಲು ಯತ್ನಿಸಬಾರದು' ಎಂದು ಮನವಿ ಮಾಡಿದರು.ಇದರಿಂದ ಪ್ರಚೋದನೆಗೊಂಡ ಪ್ರತಿಭಟನಾಕಾರರು ಬ್ಯಾರಿಕೇಡ್ ಹಾರಿ ಮಠಕ್ಕೆ ನುಗ್ಗಲು ಮುಂದಾದರು. ಪೊಲೀಸರು ಪ್ರತಿಭಟನಾಕಾರನ್ನು ತಡೆಯಲು ಹರಸಾಹಸ ಮಾಡಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಜಟಾಪಟಿ ನಡೆಯಿತು.ಪರಿಸ್ಥಿತಿ ಮಿತಿ ಮೀರುವುದನ್ನು ಮನಗಂಡ ಪೊಲೀಸರು ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಿದರು. ಕೆಲವರನ್ನು ಹಿಗ್ಗಾಮುಗ್ಗಾ ಥಳಿಸಿದರು. ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು. ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ತಮ್ಮನ್ನು ಕರೆದೊಯ್ಯುತ್ತಿದ್ದ ಬಸ್‌ನ ಕಿಟಕಿ ಗಾಜುಗಳನ್ನು ಪುಡಿ ಮಾಡಿದರು. ಘಟನೆಯಲ್ಲಿ ಮೂವರು ಪ್ರತಿಭಟನಾಕಾರರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ. ಶಂಕರ್, ಮುಖಂಡರಾದ ಜಿ.ಎನ್. ನಾಗರಾಜ್, ವಿ.ಜಿ.ಕೆ. ನಾಯರ್, ನಿತ್ಯಾನಂದಸ್ವಾಮಿ, ಬಿ. ಮಾಧವ, ಪ್ರಸನ್ನಕುಮಾರ್, ಕೆ.ಆರ್. ಶ್ರೀಯಾನ್, ವರಲಕ್ಷ್ಮಿ, ಮಾರುತಿ ಮಾನ್ಪಡೆ, ಬಸವರಾಜ್, ವಿಶ್ವನಾಥ ರೈ, ಬಾಲಕೃಷ್ಣ ಶೆಟ್ಟಿ, ಬಯ್ಯಾರೆಡ್ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

`ಮಡೆ ಸ್ನಾನ: ಸುಪ್ರೀಂ ಕೋರ್ಟ್‌ಗೆ ಮನವರಿಕೆ'

ಸುಳ್ಯ: `ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಮಡೆ ಮಡೆಸ್ನಾನದ ಕುರಿತು ರಾಜ್ಯ ಸರ್ಕಾರ ತಳೆದಿರುವ ನಿಲುವಿನ ಬಗ್ಗೆ ಹೈಕೋರ್ಟ್ ಒಪ್ಪಿಗೆ ನೀಡಿದ್ದರೂ, ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಹೈಕೋರ್ಟಿಗೆ ರಾಜ್ಯ ಸರ್ಕಾರ ಮನವರಿಕೆ ಮಾಡಿದ ರೀತಿಯಲ್ಲೇ ಸುಪ್ರೀಂ ಕೋರ್ಟಿಗೂ ಮನವರಿಕೆ ಮಾಡಿ ತಡೆ ತೆರವು ಮಾಡಲಾಗುವುದು' ಎಂದು ಮುಜರಾಯಿ ಸಚಿವ ಕೋಟ ಶ್ರಿನಿವಾಸ ಪೂಜಾರಿ ಹೇಳಿದ್ದಾರೆ.

ಗುರುವಾರ ಸುಳ್ಯಕ್ಕೆ ಬಂದಿದ್ದ ಸಚಿವರನ್ನು ಪತ್ರಕರ್ತರು ಮಡೆಸ್ನಾನಕ್ಕೆ ತಡೆ ಕುರಿತು ಪ್ರಶ್ನಿಸಿದಾಗ, `ಮಡೆಸ್ನಾನದ ಬಗ್ಗೆ ಪ್ರಗತಿಪರರು, ಚಿಂತಕರು ಇದೊಂದು ಅನಿಷ್ಟ ಪದ್ಧತಿ ಎಂದು ಹೇಳಿದ್ದು, ಸರ್ಕಾರ ಮಡೆಸ್ನಾನದ ಬದಲು ಎಡೆಸ್ನಾನಕ್ಕೆ ಅವಕಾಶ ನೀಡುವುದಾಗಿ ಹೈಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿತ್ತು.ಹೈಕೋರ್ಟ್ ಸರ್ಕಾರದ ಅಭಿಪ್ರಾಯವನ್ನು ಮನ್ನಿಸಿತ್ತು. ಆದರೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಸರ್ಕಾರ ಸುಪ್ರೀಂ ಕೋರ್ಟಿಗೂ ಮನವರಿಕೆ ಮಾಡಿ ಮಡೆಸ್ನಾನ ಪದ್ಧತಿಯಲ್ಲಿ ಬದಲಾವಣೆ ತರಲಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry