ಗುರುವಾರ , ಜನವರಿ 23, 2020
27 °C

ಕೃಷ್ಣ ವಿರುದ್ಧ ಲೋಕಾಯುಕ್ತ ತನಿಖೆಗೆ ಸುಪ್ರೀಂ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

 ನವ ದೆಹಲಿ (ಐಎಎನ್ಎಸ್): ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದಾಗ ಕೆಲವು ಮೀಸಲು ಅರಣ್ಯ ಪ್ರದೇಶಗಳನ್ನು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಿಂದ ಹೊರಗಿಟ್ಟು, ಆ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಪರವಾನಗಿ ನೀಡಿದ ಆರೋಪದ ಮೇಲೆ ಹಾಲಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ವಿರುದ್ಧ ಕರ್ನಾಟಕ ಲೋಕಾಯುಕ್ತ ಪೊಲೀಸರ  ಆರಂಭಿಸಿದ್ದ ತನಿಖೆಗೆ ಸುಪ್ರೀಂ ಕೋರ್ಟ್  ಶುಕ್ರವಾರ ತಡೆಯಾಜ್ಞೆ ನೀಡಿದೆ.

ಎಸ್.ಎಂ.ಕೃಷ್ಣ ಅವರು 1999-2004ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 11,620 ಚದರ ಕಿಲೋ ಮೀಟರ್ ಮಿಸಲು ಅರಣ್ಯ ಪ್ರದೇಶವನ್ನು ಮೀಸಲು ಅರಣ್ಯ ವ್ಯಾಪ್ತಿಯಿಂದ ಕೈಬಿಟ್ಟು, ಅಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲು ಅನುವು ಮಾಡಿಕೊಡಲಾಗಿದೆ ಎಂಬ ಆರೋಪದ ಕುರಿತು ಕರ್ನಾಟಕ ಲೋಕಾಯುಕ್ತ ಪೊಲೀಸರು ತನಿಖೆಗೆ ಮುಂದಾಗಿದ್ದರು.

ನ್ಯಾಯಮೂರ್ತಿಗಳಾದ ಅಲ್ತಮಾಸ್ ಕಬೀರ್ ಹಾಗೂ ಗ್ಯಾನ್ ಸುಧಾ ಮಿಶ್ರ ಅವರ ವಿಭಾಗೀಯ ಪೀಠದ ಎದುರು ~ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ವ್ಯಕ್ತಿಯೊಬ್ಬರನ್ನೇ ಗುರಿಯಾಗಿಸಬಾರದು~ ಎಂದು ಹಿರಿಯ ವಕೀಲ ಕೆ.ಕೆ.ವೇಣುಗೋಪಾಲ್ ವಾದ ಮಂಡಿಸಿದ್ದರು.

ಸಚಿವ ಕೃಷ್ಣ ಪರ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ~ಸಂತೋಷ್ ಹೆಗ್ಡೆ ಅವರು ಕರ್ನಾಟಕದ ಲೋಕಾಯುಕ್ತರಾಗಿದ್ದ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ನೀಡಿದ ವರದಿಯ ಮೇಲೆ ಮುಂಬರುವ ಪೂರಕ ವರದಿಯನ್ನು ಪರಿಶೀಲಿಸಿದ ನಂತರವಷ್ಟೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು~ ಎಂದು ಹೇಳಿದೆ.

ಪ್ರತಿಕ್ರಿಯಿಸಿ (+)