ಗುರುವಾರ , ನವೆಂಬರ್ 21, 2019
21 °C

ಕೃಷ್ಣ ಸೇರಿ ಆರು ಮಂದಿ ನಾಮಪತ್ರ ಸಲ್ಲಿಕೆ

Published:
Updated:

ಕೃಷ್ಣರಾಜಪೇಟೆ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದ ಬುಧವಾರ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಜೆಡಿಎಸ್, ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆಗೆ ಮೂವರು ಪಕ್ಷೇತರ ಅಭ್ಯರ್ಥಿಗಳು ಸೇರಿ ಆರು ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.ಬಿಜೆಪಿಯಿಂದ ಬಿ.ವರದರಾಜೇಗೌಡ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಈ ಹಿಂದೆ ಬಿಜೆಪಿ ಟಿಕೆಟ್ ಪಕ್ಷದ ತಾಲ್ಲೂಕು ಅಧ್ಯಕ್ಷ ಕೆ.ಶ್ರೀನಿವಾಸ್‌ರಿಗೆ ಘೋಷಣೆ ಯಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಪಕ್ಷದ ಹಿರಿಯ ಮುಖಂಡ ವರದರಾಜೇಗೌಡರಿಗೆ ಪಕ್ಷದ ಬಿ ಫಾರಂ ದೊರೆತಿದ್ದು, ಅವರು ನಾಮಪತ್ರ ಸಲ್ಲಿಸಿದರು. ಪತ್ನಿ ಪ್ರಮಿಳಾ ವರದರಾಜೇಗೌಡ, ಪಕ್ಷದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ಎನ್.ಕುಮಾರಸ್ವಾಮಿ, ಹಿರಿಯ ಮುಖಂಡರಾದ ಕೆ.ಟಿ.ಫಾಲಾಕ್ಷ, ಕೆ.ಎನ್.ಪರಮೇಶ್ವರ್, ಎಚ್.ಆರ್. ವಿಶ್ವನಾಥ್ ಉಪಸ್ಥಿತರಿದ್ದರು.ಜೆಡಿಎಸ್: ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಬಂದ ಕೆ.ಸಿ.ನಾರಾಯಣಗೌಡ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಪತ್ನಿ ದೇವಕಿ, ಮಾಜಿ ಶಾಸಕ ಬಿ.ಪ್ರಕಾಶ್, ಮೈಸೂರು ಲ್ಯಾಂಪ್ಸ್ ಮಾಜಿ ಅಧ್ಯಕ್ಷ ಬಿ.ಎಲ್. ದೇವರಾಜು, ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿ.ಮಂಜೇಗೌಡ,   ಕೆ.ಎಸ್.ಪ್ರಭಾಕರ್, ಪಕ್ಷದ ಮುಖಂಡರಾದ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ, ಜಾನಕೀರಾಂ ಮತ್ತಿತರರು ಜೊತೆಗಿದ್ದರು.ಬಿಎಸ್‌ಆರ್ ಕಾಂಗ್ರೆಸ್ : ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಯುವ ವಕೀಲ ಕೆ.ಕೇಶವ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಪಕ್ಷದ ಮುಖಂಡರಾದ ಸುಬ್ಬಣ್ಣ, ರಾಜು ಮತ್ತು ಕಾರ್ಯಕರ್ತರು ಜೊತೆಗಿದ್ದರು.ಪಕ್ಷೇತರ ಅಭ್ಯರ್ಥಿಗಳು: ವಿಧಾನಸಭೆ ಮಾಜಿ ಅಧ್ಯಕ್ಷ ಕೃಷ್ಣ ಜೆಡಿಎಸ್ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದ ಕೃಷ್ಣ ಚುನಾವಣಾಧಿಕಾರಿ ವೃಷಭರಾಜೇಂದ್ರ ಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಿದರು.ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ಶ್ರೀನಿವಾಸ್, ಕೆಜೆಪಿ ಮುಖಂಡರಾದ ಎಸ್.ಸಿ.ಅರವಿಂದ್, ತೋಟಪ್ಪಶೆಟ್ಟಿ, ಬಿ.ಜವರಾಯಿಗೌಡ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟ ಸುಬ್ಬೇಗೌಡ, ಮನ್‌ಮುಲ್ ಅಧ್ಯಕ್ಷ ಎಂ.ಬಿ.ಹರೀಶ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಮಾಜಿ ಸದಸ್ಯ ಎ.ಎಸ್. ಮಂಜುನಾಥ್, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಗಿರಿಗೌಡ ಮತ್ತಿತರರು ಉಪಸ್ಥಿತರಿದ್ದರು.ಇವರಲ್ಲದೆ ರಾಜ್ಯ ವರ್ತೂರು ಪ್ರಕಾಶ್ ಯುವಸೇನೆ ಜಿಲ್ಲಾಧ್ಯಕ್ಷ ವಿಜಯಶೇಖರ್, ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ನಾಯಕಿ ಕೊಟಗಹಳ್ಳಿ ಮಂಜುಳಮ್ಮ ಸಹ ಪಕ್ಷೇತರರಾಗಿ ತಮ್ಮ ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು.ರೈತ ಸಂಘದ ಬೆಂಬಲ ಇಲ್ಲ: ಮಾಜಿ ಸ್ಪೀಕರ್ ಕೃಷ್ಣ ಅವರಿಗೆ ರೈತಸಂಘ ಬೆಂಬಲ ನೀಡಿದೆ ಎಂಬ ಮಾಹಿತಿ ಸತ್ಯಕ್ಕೆ ದೂರವಾಗಿದೆ. ಪಕ್ಷದ ವರಿಷ್ಟರ ಆದೇಶದಂತೆ ಏಪ್ರಿಲ್ 25ರೊಳಗಾಗಿ ಎಲ್ಲ ಪಕ್ಷದ ಅಭ್ಯರ್ಥಿಗಳನ್ನು ಒಂದೇ ವೇದಿಕೆಗೆ ಸೇರಿಸಿ ಸಂವಾದ ಕಾರ್ಯಕ್ರಮ ಏರ್ಪಡಿಸುವ ಆಲೋಚನೆಯಿದೆ. ಅಲ್ಲಿ ಸಂಘಟನೆಗೆ ಸೂಕ್ತ ಎನಿಸುವ ಅಭ್ಯರ್ಥಿಯನ್ನು ಬೆಂಬಲ ಘೋಷಣೆ ಮಾಡಲಾಗುವುದು ಎಂದು ತಾಲ್ಲೂಕು ರೈತ ಸಂಘದ ಪ್ರಕಟಣೆ ತಿಳಿಸಿದೆ.ಬೃಹತ್ ಜನಸ್ತೋಮ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ಕ್ಷಣದಲ್ಲಿ ಎಲ್ಲ ಪಕ್ಷಗಳೂ ಸಿದ್ದತೆ ಮಾಡಿಕೊಂಡಿದ್ದರಿಂದ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಬುಧವಾರ ಅಪಾರ ಜನಸ್ತೋಮವೇ ನೆರೆದಿತ್ತು. ಎಲ್ಲ ಪಕ್ಷಗಳ ಕಾರ್ಯಕರ್ತರು, ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.ನಾಮಪತ್ರ ಸಲ್ಲಿಸುವ ಮಿನಿ ವಿಧಾನಸೌಧದ ಎದುರು ಅರೆಸೇನಾ ಪಡೆ, ಪೋಲೀಸ್ ಪಡೆ ನಿಯೋಜಿಸಿ ನೂಕುನುಗ್ಗಲನ್ನು ನಿಯಂತ್ರಿಸಲಾಯಿತು.

ಪ್ರತಿಕ್ರಿಯಿಸಿ (+)