ಸೋಮವಾರ, ಅಕ್ಟೋಬರ್ 21, 2019
25 °C

ಕೆಂಗಲ್ ಜಾತ್ರೆ: ಕಳೆ ತಂದ ದನಗಳ ಮಾರಾಟ ಭರಾಟೆ...

Published:
Updated:

ರಾಮನಗರ: ರಾಜ್ಯದ ಹಾಗೂ ಜಿಲ್ಲೆಯ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ಆಂಜನೇಯಸ್ವಾಮಿಯ ಜಾತ್ರಾ ಮಹೋತ್ಸವ ಭಾನುವಾರದಿಂದ ಇದೇ 22ರವರೆಗೆ ನಡೆಯಲಿದ್ದು, ಬ್ರಹ್ಮರಥೋತ್ಸವ ಮತ್ತು ದನಗಳ ಜಾತ್ರೆ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಮಾರ್ಗ ಮಧ್ಯ ಬರುವ ವಂದಾರಗುಪ್ಪೆ ಗ್ರಾಮದಲ್ಲಿ ಇರುವ ಈ ಐತಿಹಾಸಿಕ ದೇವಾಲಯದಲ್ಲಿ ವರ್ಷದಿಂದ ವರ್ಷಕ್ಕೆ ಅದ್ಧೂರಿಯಾಗಿ ಬ್ರಹ್ಮರಥೋತ್ಸವ ನಡೆಯುತ್ತಿದೆ. ಪ್ರತಿ ವರ್ಷ ಇಲ್ಲಿ ನಡೆಯುವ ದನಗಳ ಜಾತ್ರೆಗೆ ರಾಜ್ಯದ ನಾನಾ ಮೂಲೆಗಳಿಂದ ದನಗಳನ್ನು ರೈತರು ಇಲ್ಲಿಗೆ ಕರೆ ತರುತ್ತಾರೆ. ಅಲ್ಲದೆ ಇಲ್ಲಿಂದ ಸೂಕ್ತ ಬೆಲೆಗೆ ದನಗಳನ್ನು ಖರೀದಿಸಿ ತಮ್ಮೂರಿಗೆ ತೆಗೆದುಕೊಂಡು ಹೋಗುತ್ತಾರೆ.ದೇಸಿ ತಳಿಗಳು ಎಂದೇ ಪ್ರಸಿದ್ಧಿಯಾಗಿರುವ ಹಳ್ಳಿಕಾರ್, ಅಮೃತ್ ಮಹಲ್ ತಳಿಗಳಿಗೆ ಈ ಜಾತ್ರೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಭಾನುವಾರದಿಂದ ಆರಂಭವಾಗಲಿರುವ ದನಗಳ ಜಾತ್ರೆಯ ಪ್ರಯುಕ್ತ ಈಗಾಗಲೇ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮ ದನಗಳನ್ನು ಕೆಂಗಲ್‌ಗೆ ಕರೆತಂದಿದ್ದಾರೆ.ಇದರಿಂದ ದೇವಾಲಯದ ಆವರಣ ಸುತ್ತ ಮುತ್ತ ಎತ್ತ ನೋಡಿದರೂ ದನಗಳೇ ಕಾಣುತ್ತಿವೆ. ಇಲ್ಲಿನ ಜಾತ್ರೆಯ ದನಗಳನ್ನು ಖರೀದಿಸಲು ಗುಲ್ಬರ್ಗ, ರಾಯಚೂರು, ವಿಜಾಪುರ, ದಾವಣಗೆರೆಯಿಂದೆಲ್ಲ ರೈತರು ಆಗಮಿಸುತ್ತಾರೆ.

 

ಅಷ್ಟೇ ಅಲ್ಲ ತಮಿಳುನಾಡು, ಆಂಧ್ರ ಪ್ರದೇಶದಿಂದಲೂ ರೈತರು ಇಲ್ಲಿಂದ ದನಗಳನ್ನು ಖರೀದಿಸಿ ಕರೆದೊಯ್ಯುತ್ತಾರೆ. ಈ ಜಾತ್ರೆಯಲ್ಲಿ ಜತೆ ದನಗಳಿಗೆ ಒಂದೂವರೆ ಲಕ್ಷದಿಂದ ಎರಡು ಲಕ್ಷ ರೂಪಾಯಿ ಕೊಟ್ಟು ಖರೀದಿಸಿರುವ ಉದಾಹರಣೆಗಳು ಇವೆ ಎಂದು ದೇವಸ್ಥಾನದ ಪಾರುಪತ್ತೇದಾರರಾದ ಎಸ್.ಲಕ್ಷ್ಮಿನರಸಿಂಹನ್ `ಪ್ರಜಾವಾಣಿ~ಗೆ ತಿಳಿಸುತ್ತಾರೆ.ದೇವಾಲಯದ ಐತಿಹ್ಯ: ಪ್ರಕೃತಿಯಲ್ಲಿ ಸೃಷ್ಟಿಗೊಂಡಿರುವ ಬೃಹದಾಕಾರದ ಕೆಂಪು ಬಂಡೆಯಲ್ಲಿ ವ್ಯಾಸರಾಯರಿಂದ ಇಲ್ಲಿ ದೇವರ ಪ್ರತಿಷ್ಠಾಪನೆಯಾಗಿದೆ.  ಕ್ರಿ.ಶ 1446ರಲ್ಲಿ ವ್ಯಾಸರಿಂದ ಇಲ್ಲಿ ದೇವರ ಪ್ರತಿಷ್ಠಾಪನೆಯಾಗಿರಬಹುದು ಅಂದಾಜಿದೆ. ಇಲ್ಲಿನ ಆಂಜನೇಯ ಮೂರ್ತಿಯನ್ನು ಉದ್ಭವ ಮೂರ್ತಿ ಎಂದು ಹೇಳುವ ಪ್ರತೀತಿಯೂ ಇದೆ ಎಂದು ಅವರು ಮಾಹಿತಿ ನೀಡುತ್ತಾರೆ.ಈ ಪ್ರದೇಶವನ್ನು ಕಣ್ವ ಕ್ಷೇತ್ರ ಎಂದು ಕರೆಯಲಾಗುತ್ತದೆ. ಕೆಂಗಲ್‌ನಿಂದ 8 ಕಿ.ಮೀ ದೂರದಲ್ಲಿ ಕಣ್ವ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಲಾಗಿದೆ. ನದಿ ತೀರದಲ್ಲಿ ಕಣ್ವ ಮಹರ್ಷಿಗಳು ವಾಸವಾಗಿದ್ದರು. ಅವರು ಪ್ರತಿದಿನ ಕೆಂಗಲ್ ಆಂಜನೇಯ ಸ್ವಾಮಿಯನ್ನು ಆರಾಧಿಸಿ ಹೋಗುತ್ತಿದ್ದರು. ಹಾಗಾಗಿ ಈ ಪ್ರದೇಶವನ್ನು ಕಣ್ವ ಕ್ಷೇತ್ರ ಎಂದೂ ಕರೆಯಲಾಗುತ್ತದೆ. ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿ ಆದ ನಂತರ ಈ ದೇವಾಲಯವನ್ನು ಅಭಿವೃದ್ಧಿಪಡಿಸಿದರು. ದೇವಾಲಯದಲ್ಲಿ ನಡೆಯುತ್ತಿರುವ ದನಗಳ ಜಾತ್ರೆ ದೊಡ್ಡ ಪ್ರಮಾಣದಲ್ಲಿ ನಡೆಯುವಂತೆ ಮಾಡಿದವರೇ ಹನುಮಂತಯ್ಯ ಅವರು. 1940ರಿಂದ ಪ್ರತಿ ವರ್ಷ ದನಗಳ ಜಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ದಶಕದಿಂದ ಈಚೆಗೆ ಜಾತ್ರೆಗೆ ಆಗಮಿಸುವ ದನಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ರೈತರಲ್ಲಿ ಮತ್ತು ಖರೀದಿದಾರರಲ್ಲಿ ಅದೇ ಉತ್ಸಾಹ ಇದೆ ಎಂದು ಅವರು ಹೇಳುತ್ತಾರೆ.ರಥೋತ್ಸವ: ಭಾನುವಾರ ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಇಲ್ಲಿಂದ ಸಪ್ತದಿನದ ಜಾತ್ರೆ ಆರಂಭವಾಗುತ್ತದೆ. 16ರ ಬೆಳಿಗ್ಗೆ ಸುದರ್ಶನ ಹೋಮ, ಸಂಜೆ ವಿಷ್ಣುಸಹಸ್ರನಾಮ ಹೋಮ, ರಾತ್ರಿ ಗರುಡೋತ್ಸವ ಜರುಗಲಿದೆ. ಇದೇ 17ರಂದು ಬೆಳಿಗ್ಗೆ ಸಹಸ್ರನಾಮ ಹೋಮ, ಸಂಜೆ ಗಜೇಂದ್ರ ಮೋಕ್ಷ, ಪ್ರಹ್ಲಾದ ಪರಿಪಾಲನೆ ನಡೆಯಲಿದೆ. ಇದೇ 18ರಂದು ಬೆಳಿಗ್ಗೆ ಮಂಟಪೋತ್ಸವ, ನವಗ್ರಹ ಹೋಮ, ಮಧ್ಯಾಹ್ನ ಶೇಷಾವಾಹನೋತ್ಸವಸಂಜೆ ಲಕ್ಷ್ಮಿ ವೆಂಕಟೇಶ್ವರಸ್ವಾಮಿಯ ಕಲ್ಯಾಣೋತ್ಸವ ಕಾರ್ಯಕ್ರ ನಡೆಯಲಿದೆ ಎಂದು ಪ್ರಧಾನ ಅರ್ಚಕ ಜಿ. ರವೀಂದ್ರ ಕುಮಾರ್ ತಿಳಿಸುತ್ತಾರೆ.ಇದೇ 19ರಂದು ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯವರ ಬ್ರಹ್ಮ ರಥೋತ್ಸವ ಜರುಗಲಿದೆ. ದಿವಂಗತ ಕೆಂಗಲ್ ಹನುಮಂತಯ್ಯನವರ ಕುಟುಂಬದವರು ಈ ಸೇವೆ ನೆರವೇರಿಸಿಕೊಡುವರು. ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೀಶ್ವರ್ ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಪಾಲ್ಗೊಳ್ಳುವರು. ಇದೇ 20ರಂದು ವಸಂತೋತ್ಸವ, ಅಶ್ವವಾಹನೋತ್ಸವ, ಪುಷ್ಪಯಾಗ ನಡೆಯಲಿದೆ. ಇದೇ 21ರಂದು ಅಷ್ಟೋತ್ತರ ಶತ ಕುಂಬಾಭಿಷೇಕ, ಶಾಂತೋತ್ಸವ, ಶಯನೋತ್ಸವ ಜರುಗಲಿದೆ ಎಂದು ಅವರು ತಿಳಿಸುತ್ತಾರೆ.ಜಾತ್ರೆ ಮುಕ್ತಾಯ ಆಗುವವರೆಗೆ ದೇವಾಲಯದ ಆವರಣದಲ್ಲಿ ತಾತ್ಕಾಲಿಕವಾಗಿ ಪ್ರಾಥಮಿಕ ಆರೋಗ್ಯ ಘಟಕ, ಪಶು ವೈದ್ಯಾಲಯ, ಪೊಲೀಸ್ ಠಾಣೆ ಕಾರ್ಯ ನಿರ್ವಹಿಸಲಿದೆ ಎಂದು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಎಚ್.ರಾಮಪ್ಪ ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)