ಶನಿವಾರ, ಮೇ 28, 2022
30 °C

ಕೆಂಗಲ್ ಧೀಮಂತ ವ್ಯಕ್ತಿತ್ವದ ರಾಜಕಾರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜಾತಿಯತೆಯೇ ಪ್ರಧಾನವಾಗಿರುವ ಪ್ರಸ್ತುತ ರಾಜಕಾರಣದಲ್ಲಿ ಕೆಂಗಲ್ ಅಪರೂಪದ ರಾಜಕಾರಣಿಯಾಗಿದ್ದಾರೆ. ಅಧಿಕಾರ ಕಳೆದುಕೊಳ್ಳುವ ಸಂಭವವಿದ್ದರೂ ಏಕೀಕರಣದ ವಿಧೇಯಕ ಮಂಡಿಸಿದ ಧೀಮಂತ ವ್ಯಕ್ತಿತ್ವ ಅವರದಾಗಿತ್ತು’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎಸ್.ವಿ ದತ್ತ ತಿಳಿಸಿದರು. ಕೆಂಗಲ್ ಹನುಮಂತಯ್ಯ ಸ್ಮಾರಕ ಟ್ರಸ್ಟ್ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆಂಗಲ್ ಹನುಮಂತಯ್ಯ ಅವರ 103ನೇ ಜನ್ಮ ದಿನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಅಪಾರ ಪ್ರೀತಿ ಕಾಳಜಿಗಳಿಂದ ಅವರು ಬೆಳೆಸಿದರು. ಕುಮಾರವ್ಯಾಸ ಭಾರತವನ್ನು ಅತಿ ಕಡಿಮೆ ಬೆಲೆಗೆ ಪ್ರಕಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ವಿಧಾನಸೌಧ ನಿರ್ಮಾಣವಾದಾಗ ಎದುರಾಗಿದ್ದ ಭ್ರಷ್ಟಾಚಾರದ ಆರೋಪ ಅವರನ್ನು ಕಂಗೆಡಿಸಿತ್ತು. ಆದರೆ ಅವರು ಈ ವಿಚಾರದಲ್ಲಿ ಪ್ರಾಮಾಣಿಕರಾಗಿದ್ದರು ಎಂಬುದಕ್ಕೆ ವಿಧಾನಸಭೆಯಲ್ಲಿ ಅವರು ಮಾಡಿರುವ ಭಾಷಣವೇ ಸಾಕ್ಷಿ’ ಎಂದರು.‘ಅಧಿಕಾರ ವರ್ಗದವರನ್ನು ನಿಯಂತ್ರಣದಲ್ಲಿಡುವ ಕಲೆ ಅವರಿಗೆ ಒಲಿದಿತ್ತು. ನೆಹರು ಅವರಂತಹ ಉನ್ನತ ನಾಯಕರಿಗೆ ಕೂಡ ಅಂಜದೇ ಅವರು ಕೆಲಸ ಮಾಡಿದರು. ಕೆಪಿಸಿಸಿಯ ಸದಸ್ಯರು ಕೂಡ ಹೈಕಮಾಂಡ್‌ಗೆ ಹೆದರದೇ ನೇರ ನಡೆ ನುಡಿಗಳಿಂದ ಕಾರ್ಯ ನಿರ್ವಹಿಸಬೇಕಿದೆ’ ಎಂದು ಕಿವಿಮಾತು ಹೇಳಿದರು.ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಮಾತನಾಡುತ್ತಾ, ‘ನಾಡು ಕಂಡ ಅಪರೂಪದ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಹೆಸರಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸುವ ಅಗತ್ಯವಿದೆ. ಸಂಶೋಧನಾ ಕೇಂದ್ರದಲ್ಲಿ ಕೆಂಗಲ್ ಅವರ ಜೀವನ, ಆಡಳಿತದ ಬಗ್ಗೆ ಅಧ್ಯಯನ ನಡೆಯಬೇಕು. ಅವರ ಆಡಳಿತ ಶೈಲಿ, ಜೀವನ ಸೇರಿದಂತೆ ಸಮಗ್ರ ವ್ಯಕ್ತಿತ್ವವನ್ನು ಬಿಂಬಿಸುವ ಗ್ರಂಥಾಲಯವನ್ನು ಸ್ಥಾಪಿಸಬೇಕಿದೆ’ ಎಂದು ಹೇಳಿದರು.‘ಕೆಂಗಲ್ ಅವರು ಸಾಮಾನ್ಯ ರಾಜಕಾರಣಿಯಾಗಿರಲಿಲ್ಲ. ಆದರ್ಶಗಳಿಗಾಗಿ ಭಿನ್ನಾಭಿಪ್ರಾಯ ಕಟ್ಟಿಕೊಳ್ಳಲು ಕೂಡ ಅವರು ಅಂಜುತ್ತಿರಲಿಲ್ಲ. ವಿಧಾನಸೌಧ ನಿರ್ಮಾತೃ, ಏಕೀಕರಣದ ರೂವಾರಿ ಎಂಬ ಕಾರಣಕ್ಕೆ ಅವರ ಹೆಸರು ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮಾತನಾಡಿ ‘ರಾಜ್ಯದಲ್ಲಿ ಇಂದು ಅಧಿಕಾರಶಾಹಿ ರಾಜಕಾರಣಿಗಳ ಅಡಿಯಾಳಾಗಿದೆ. ಇಂತಹ ಸಂದರ್ಭದಲ್ಲಿ ಸುಧಾರಣೆ ನಿರೀಕ್ಷಿಸುವುದು ಅಸಾಧ್ಯ’ ಎಂದು ಸ್ಮರಿಸಿದರು.ಟ್ರಸ್ಟ್‌ನ ಅಧ್ಯಕ್ಷರಾಗಿರುವ ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ ‘ರೈತರು ಶೋಷಿತರ ಪರವಾಗಿ ದುಡಿದ ಕೆಂಗಲ್ ಅವರ ಹುಟ್ಟುಹಬ್ಬವನ್ನು ರೈತ ದಿನವಾಗಿ ಆಚರಿಸಬೇಕು. ರಜೆ ರಹಿತವಾಗಿ ಈ ದಿನಾಚರಣೆ ಅಸ್ತಿತ್ವಕ್ಕೆ ಬರಬೇಕು ಎಂಬುದು ಟ್ರಸ್ಟ್‌ನ ಬಯಕೆಯಾಗಿದೆ. ಕೆಂಗಲ್ ಜನ್ಮಶತಾಬ್ದಿ ಸ್ಮರಣಾರ್ಥ ಕೇಂದ್ರ ಸರ್ಕಾರ ಅವರ ಭಾವಚಿತ್ರ ಇರುವ ಅಂಚೆಚೀಟಿಯನ್ನು ಮುದ್ರಿಸಬೇಕು’ ಎಂದು ಮನವಿ ಮಾಡಿದರು.‘ಕೆಂಗಲ್ ಅವರದ್ದು ಹೋರಾಟದ ಜೀವನವಾಗಿತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಬಾರಿ ಜೈಲು ಸೇರಿದ ಅವರು ಪ್ರಜಾರಾಜ್ಯಕ್ಕಾಗಿ ಮೈಸೂರು ಅರಸರ ವಿರುದ್ಧವೂ ಹೋರಾಟ ನಡೆಸಿದರು. ಇಂತಹ ಧೀಮಂತ ವ್ಯಕ್ತಿಗಳು ಕಾಣೆಯಾಗುತ್ತಿರುವ ಅಸಹನೀಯ ಸಂದರ್ಭದಲ್ಲಿ ಮುಂದೊಂದು ದಿನ ಕ್ರಾಂತಿ ಸಂಭವಿಸಿದರೆ ಅಚ್ಚರಿ ಪಡಬೇಕಿಲ್ಲ’ ಎಂದು ಶಾಸಕ ದಿನೇಶ್ ಗುಂಡೂರಾವ್ ತಿಳಿಸಿದರು.ಶಾಸಕ ಕೃಷ್ಣ ಬೈರೇಗೌಡ ಮಾತನಾಡಿ ‘ಜನ ಪ್ರತಿನಿಧಿಗಳ ಜತೆಗೆ ಪ್ರಜಾಪ್ರಭುತ್ವವೂ ಕಲುಷಿತಗೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ಕೆಂಗಲ್ ಅವರಂತಹ ಆದರ್ಶ ರಾಜಕಾರಣಿಗಳ ಸುವರ್ಣ ಯುಗ ಮರುಕಳಿಸಬೇಕಿದೆ. ಅಂತಹವರು ಇಂದಿನ ರಾಜಕಾರಣಿಗಳಿಗೆ ಹಾಗೂ ಜನಸಮುದಾಯಕ್ಕೆ ದಾರಿದೀಪವಾಗಿದ್ದಾರೆ’ ಎಂದು ಹೇಳಿದರು. ಕೆಂಗಲ್ ಹನುಮಂತಯ್ಯ ಅವರ ಮೊಮ್ಮಗ ಶ್ರೀಪಾದ ಕೆಂಗಲ್ ಹನುಮಂತಯ್ಯ ಮಾತನಾಡಿ ‘ನನ್ನ ತಾತ ವೈಯಕ್ತಿಕ ನೆಲೆಯಲ್ಲಿ ಅತ್ಯಂತ ಸ್ನೇಹಪರ ಸ್ವಭಾವ ಹೊಂದಿದ್ದರು. ಅವರೊಂದಿಗಿನ ಒಡನಾಟ ಅವಿಸ್ಮರಣೀಯವಾದುದು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.