ಕೆಂಡದ ಕಾವಿನ ಬೆಣ್ಣೆ ದೋಸೆ

7

ಕೆಂಡದ ಕಾವಿನ ಬೆಣ್ಣೆ ದೋಸೆ

Published:
Updated:

ನಿಗಿನಿಗಿ ಕೆಂಡದ ಹಬೆಯಲ್ಲಿ ಅರ್ಧ ಬೆಂದ ದೋಸೆಗೆ ಸ್ಟೀಲ್ ಡಬ್ಬದಿಂದ ಚಟ್ನಿಪುಡಿ ಉದುರಿಸಿ ಮತ್ತೊಮ್ಮೆ ಬೆಣ್ಣೆ ಹಾಕಿ ರೋಸ್ಟ್ ಮಾಡಿದ ಓಪನ್ ದೋಸೆಯನ್ನು ತವಾಗೆ ಹಾಕಿ ಕೈಗಿಡುವುದರೊಳಗೆ ಮೂರ್‍್ನಾಲ್ಕು ಬಾರಿ ಜಿಹ್ವಾರಸ ನುಂಗಿಕೊಂಡರು ಆ ತಾತ.ಅವರ ಹಿಂದಿದ್ದ ನಾಲ್ಕೂ ಮಂದಿಯಿಂದ ಟೋಕನ್ ಪಡೆದುಕೊಂಡ ಪ್ರದೀಪ್ ಅಷ್ಟಗಲದ ತವಾದಲ್ಲಿ ಎರಡು ಬಗೆಯ ನಾಲ್ಕು ದೋಸೆ ಹುಯ್ದು ಹದಕ್ಕೆ ಬಂದಾಗ ಬೆಣ್ಣೆಯನ್ನು ಉಂಡುಂಡೆಯಾಗಿ ಉದುರಿಸಿ ಬೇಯಿಸಿದರು, ತಿರುವಿ ಹಾಕಿ ಮತ್ತೆ ಕಾಯಿಸಿದರು.ಕನಕಪುರ ರಸ್ತೆಯ ಸಾರಕ್ಕಿ ಗೇಟ್‌ನಿಂದ ಅನತಿ ದೂರದಲ್ಲಿರುವ ‘ಶ್ರೀ ರಾಘವೇಂದ್ರ ದಾವಣಗೆರೆ ಬೆಣ್ಣೆ ದೋಸೆ’ ಹೋಟೆಲ್‌ನಲ್ಲಿ ಬೆಳಿಗ್ಗೆ 7ರಿಂದ ರಾತ್ರಿ 10.30ರವರೆಗೂ ಆ ತವಾದಲ್ಲಿ ಬೇಯುವ, ರೋಸ್ಟ್ ಆಗಿ ಗ್ರಾಹಕರ ಹೊಟ್ಟೆ ಸೇರುವ ದೋಸೆಗಳ ಸಂಖ್ಯೆ 500ರಿಂದ 600! ಬೃಹತ್ ಬೆಂಗಳೂರಿನ ಮೂಲೆಮೂಲೆಯಿಂದ ಈ ಹೋಟೆಲ್‌ನ ಬೆಣ್ಣೆ ದೋಸೆ ಸವಿಯಲು ಬರುವ ಗ್ರಾಹಕರು ಅದೆಷ್ಟೋ. ವಾರಾಂತ್ಯದಲ್ಲಿ ಟೋಕನ್ ಸಿಗಬೇಕಾದರೂ ಕಾಯಲೇಬೇಕು!ಸ್ವಾಗತಿಸುವ ಸ್ವಾದ

ಇಲ್ಲಿನ ಬೆಣ್ಣೆ ದೋಸೆಯ ‘ಇತಿಹಾಸ’ 2002ರ ಜೂನ್‌ನಿಂದ ಶುರುವಾಗಿದ್ದು, ಮೊದಲ ದಿನದ ಅಸಲಿ ರುಚಿಯನ್ನೇ ಉಳಿಸಿಕೊಂಡಿರುವುದು ಮತ್ತು ವಿಶಿಷ್ಟವಾದ ಚಟ್ನಿಯೇ ಈ ಹೋಟೆಲ್‌ನ ಯಶಸ್ಸಿನ ಗುಟ್ಟು.ಒಂದೆರಡು ಉದಾಹರಣೆ ನೋಡಿ. ಕೇರಳದ ಸುಜಿತ್ ಕುಮಾರ್ ನೌಕರಿ ಸಿಗುವುದಕ್ಕೂ ಮುನ್ನ ಜರಗನಹಳ್ಳಿಯಲ್ಲಿದ್ದವರು. ಈಗ ಬನ್ನೇರುಘಟ್ಟ ರಸ್ತೆಯ ನಿವಾಸಿ. ಆದರೆ ಈಗಲೂ ಬೆಣ್ಣೆ ದೋಸೆ ತಿನ್ನಲು ಗೆಳತಿಯೊಂದಿಗೆ ಇಲ್ಲಿಗೆ ಬರುತ್ತಾರೆ. ‘ಒಂದೂವರೆ ವರ್ಷ ನಾನು ಪ್ರತಿದಿನ ಇಲ್ಲಿ ದೋಸೆ ತಿಂದವನು. ಆ ಸ್ವಾದ ನೆನಪಾದಾಗಲೆಲ್ಲ ಇಲ್ಲಿ ಬರುತ್ತೇನೆ’ ಎನ್ನುತ್ತಾರೆ ಸುಜಿತ್. ಹೋಟೆಲ್‌ನಿಂದ ಐದು ಕಿ.ಮೀ. ದೂರದಲ್ಲಿರುವ ಸೈಯದ್ ಅಸಾದುಲ್ಲ ಮನೆಯಲ್ಲಿ ಬೆಳಗ್ಗಿನ ಉಪಾಹಾರ ತಿಂದರೂ ಇಲ್ಲಿನ ಬೆಣ್ಣೆ ದೋಸೆ ಪಾರ್ಸೆಲ್ ಮನೆಗೊಯ್ದರೇ ಸಮಾಧಾನವಂತೆ. ‘ನಾನು ಈ ಹೋಟೆಲ್‌ನ ಸೀನಿಯರ್ ಕಸ್ಟಮರ್’ ಅಂತ ನಗುತ್ತಾರೆ ಅವರು.ಆಹಾ ಚಟ್ನಿ...

ಆ ಇಬ್ಬರು ಸ್ನೇಹಿತರು 2002ರಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿಯಿಂದ ಈ ಹೋಟೆಲ್‌ಗೆ ದೋಸೆ ತಿನ್ನಲು ಬರುತ್ತಿದ್ದರಂತೆ. ‘ದೋಸೆ ಸೂಪರ್. ಚಟ್ನಿ ಅಂತೂ ಸಖತ್ ಆಗಿರೋದು. ಎರಡೆರಡು ಸಲ ಚಟ್ನಿ ಹಾಕಿಸಿಕೊಂಡು ತಿನ್ನೋರು ನಾವು. ಚಟ್ನಿಯ ಖಡಕ್ ರುಚಿ ಎಷ್ಟೋ ಹೊತ್ತು ನಾಲಗೆ ಮೇಲೆ ಹಾಗೇ ಇರೋದು. ದೋಸೆಯ ಸುವಾಸನೆ ಕೈ-ಬಾಯಿಯಿಂದ ಹೋಗುತ್ತಿರಲಿಲ್ಲ’ ಎಂದು ಈಗಲೂ ನೆನಪಿಸಿಕೊಳ್ಳುತ್ತಾರೆ.‘ದೋಸೆಯಷ್ಟೇ ಚಟ್ನಿ ಮತ್ತು ಆಲೂ ಪಲ್ಯವೂ ನಮ್ಮ ವೈಶಿಷ್ಟ್ಯ. ಕಾಯಿ,-ಹಸಿಮೆಣಸು, ಉಪ್ಪು, ಸ್ವಲ್ಪ ನೀರು ಹಾಕಿ ಗ್ರೈಂಡರ್‌ನಲ್ಲಿ ಗಟ್ಟಿಯಾಗಿ ರುಬ್ಬಿ ಚಟ್ನಿ ತಯಾರಿಸುತ್ತೇವೆ. 2002ರಿಂದಲೂ ಈ ಕ್ರಮ ಬದಲಾಗಿಲ್ಲ’ ಎನ್ನುತ್ತಾರೆ ಗೋವರ್ಧನ್. ಚಟ್ನಿಗೂ ಆಲೂ ಪಲ್ಯಕ್ಕೂ ಒಗ್ಗರಣೆ ಹಾಕದಿರುವುದು ಇವರ ಮತ್ತೊಂದು ವಿಶೇಷ.ಹೀಗೆ ಬೆಣ್ಣೆ ದೋಸೆಗೆ ಬ್ರ್ಯಾಂಡ್‌ನೇಮ್ ಆಗಿ ಬೆಳೆಯುತ್ತಿದ್ದರೂ ಬೆಲೆ ಇತರೆಡೆಗಿಂತ ಕನಿಷ್ಠ ಐದು ರೂಪಾಯಿ ಕಡಿಮೆಯೇ ಇರುವುದು ಇಲ್ಲಿನ ಮತ್ತೊಂದು ವಿಶೇಷ. ಖಾಲಿ ದೋಸೆ 24, ಬೆಣ್ಣೆ ದೋಸೆ 32, ಬೆಣ್ಣೆ ಮಸಾಲೆ ದೋಸೆ/ಬೆಣ್ಣೆ ಖಾಲಿ 35, ಚಟ್ನಿ ಪುಡಿ ಉದುರಿಸಿ ಮಾಡುವ ಓಪನ್ ದೋಸೆ 36, ಈರುಳ್ಳಿ ದೋಸೆಗೆ ಈಗ 40, ದಾವಣಗೆರೆ ಸ್ಪೆಷಲ್ 40 ರೂಪಾಯಿ... ಹೀಗೆ ದುಬಾರಿಯಲ್ಲದ ದರದಲ್ಲಿ ತರಹೇವಾರಿ ದೋಸೆಗಳು ಇಲ್ಲಿ ಲಭ್ಯ. ಮೆಟ್ರೊ ರೈಲು ಮಾರ್ಗ ಮತ್ತು ನಿಲ್ದಾಣದ ಕಾಮಗಾರಿ ಶುರುವಾದಾಗಿನಿಂದ ಅಲ್ಲಿನ ಕಾರ್ಮಿಕರ ಬೇಡಿಕೆಯನ್ವಯ ವಿವಿಧ ಭಾತ್‌ಗಳು, ತಟ್ಟೆ ಇಡ್ಲಿ, ಪಡ್ಡು ಮಾಡಲು ಶುರು ಮಾಡಿದ್ದಾರೆ. ದಾವಣಗೆರೆ ಸೊಗಡಿನ ಮಂಡಕ್ಕಿ, ನರ್ಗಿಸ್ ಮಂಡಕ್ಕಿಯೂ ಸಂಜೆಯ ‘ಮೆನು’ವಿನಲ್ಲಿವೆ.ಪುರುಸೊತ್ತು ಇದ್ದರೆ ಸರ್ವಿಸ್ ಹಾಲ್‌ಗೆ ಹೋಗಬಹುದು. ತುರ್ತು ಇದ್ದರೆ ನಿಂತುಕೊಂಡೇ ತಿನ್ನಿ. ಇಲ್ಲವೇ ಪಾರ್ಸೆಲ್ ಕಟ್ಟಿಸಿಕೊಂಡು ನಿಮ್ಮ ಹಾದಿ ಹಿಡಿಯಿರಿ.

ದೋಸೆ ಕುಟುಂಬ! ಆರಂಭದಿಂದಲೂ ಅದೇ ರುಚಿ ಮತ್ತು ಸ್ವಾದ ಕಾಯ್ದುಕೊಂಡಿರುವ ಬಗೆ ಹೇಗೆ ಎಂದು ಕೇಳಿದರೆ, ಹೋಟೆಲ್‌ನ ಸಿಬ್ಬಂದಿ ವರ್ಗವನ್ನು ತೋರಿಸುತ್ತಾರೆ ಗೋವರ್ಧನ್.ದಾವಣಗೆರೆಯ ವೀರೇಶ್ ಬೆಣ್ಣೆ ದೋಸೆ ಎಕ್ಸ್‌ಪರ್ಟ್. ಅವರ ವೃತ್ತಿಕೌಶಲ ಕಂಡಿದ್ದ ಗೋವರ್ಧನ್ ಇಲ್ಲಿ ಹೋಟೆಲ್ ಶುರು ಮಾಡುವ ಹೊತ್ತಿನಲ್ಲಿ ಕರೆದುಕೊಂಡು ಬಂದರಂತೆ. 28 ವರ್ಷಗಳ ವೃತ್ತಿ ಅನುಭವ ವೀರೇಶ್ ಅವರದು. ಎರಡನೇ ಪಾಳಿಯ ದೋಸೆ ಮೇಕರ್ ಪ್ರದೀಪ್ ಎಂಟು ವರ್ಷಗಳಿಂದ ಇಲ್ಲಿದ್ದಾರೆ. ಹೋಟೆಲ್‌ನಲ್ಲೇ ರೂಪುಗೊಂಡ ದೋಸೆ ಕುಟುಂಬವದು. ಗೋವರ್ಧನ್ ಅವರ ಸಂಪರ್ಕಕ್ಕೆ: 98451 14198.

ಅಣ್ಣಾವ್ರ ಮೆಚ್ಚಿನ ದೋಸಾ ಅಡ್ಡಾ!

ಗಲ್ಲಾಪೆಟ್ಟಿಗೆ ಬಳಿ ದೇವರ ಚಿತ್ರಗಳ ಬಳಿ ಡಾ.ರಾಜ್‌ಕುಮಾರ್ ಅವರ ಭಾವಚಿತ್ರ ಗಮನ ಸೆಳೆಯುತ್ತದೆ. ‘ಅಣ್ಣಾವ್ರು ತಮ್ಮ 2005ರ ಹುಟ್ಟುಹಬ್ಬದಂದು ಇಲ್ಲಿಗೆ ಖುದ್ದು ಬಂದು ದೋಸೆ ಮಾಡೋದನ್ನು ನಿಂತು ನೋಡಿದ್ರು. ಬೆಣ್ಣೆ ದೋಸೆ, ಓಪನ್ ದೋಸೆ ತಿಂದ್ರು. 2003ರಿಂದಲೂ ಮನೆಗೆ ಪಾರ್ಸೆಲ್ ತರಿಸಿಕೊಳ್ಳೋರು. ಅಂದು ಮಾತ್ರ ನನ್ನ ಆಹ್ವಾನದ ಮೇರೆಗೆ ಬಂದೇಬಿಟ್ಟರು’ ಎಂದು ಗಲ್ಲಾಪೆಟ್ಟಿಗೆ ಬಳಿಯಿರುವ ಫೋಟೊ ತೋರಿಸಿದರು ಹೋಟೆಲ್ ಮಾಲೀಕ ಕೆ. ಗೋವರ್ಧನ್. ಆಚೆ ಗೋಡೆಯಲ್ಲಿ ಶಿವರಾಜ್, -ರಾಘವೇಂದ್ರ-ಪುನೀತ್ ರಾಜ್‌ಕುಮಾರ್, ಸಿಹಿಕಹಿ ಚಂದ್ರು, ರಾಮಲಿಂಗಾರೆಡ್ಡಿ (ಸಚಿವ), ಸುಷ್ಮಾ ವೀರ್ ಮುಂತಾದವರ ಫೋಟೊಗಳೂ ಇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry