ಕೆಂಪಾದವೋ.....

7

ಕೆಂಪಾದವೋ.....

Published:
Updated:

ನಾಯಕನ ತುಟಿ ಮತ್ತು ಕಣ್ಣ ಬಳಿ ರಕ್ತದಂಥ ಬಣ್ಣ. ಖಳನಾಯಕನ ಕಣ್ಣಿನಲ್ಲಿ ಸುಡುಗೆಂಪು. ನೆತ್ತಿ ಸುಡುವ ಬಿಸಿಲಲ್ಲಿ ನಿಂತಿದ್ದ ಚಿತ್ರತಂಡದವರ ಮುಖದ ಮೇಲೆ ತಿಳಿಗೆಂಪು. ಇವುಗಳಿಗೆಲ್ಲಾ ಹೊಂದುವಂತೆ ಸಿನಿಮಾದ ಹೆಸರು `ರೆಡ್~.ಪೊಲೀಸ್ ಅಧಿಕಾರಿಯಿಂದ ಬಂಧಿತನಾಗಿ, ಏಟು ತಿಂದು ಬೆವರಿಳಿಸುತ್ತಾ ನಿಂತಿರುತ್ತಾನೆ ನಾಯಕ. ಆಗ ಧುತ್ತನೆ ಮೇಲಧಿಕಾರಿಯ ಆಗಮನವಾಗುತ್ತದೆ. `ರೆಡ್~ಗಾಗಿ ಇಂಥ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿದ್ದುದು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಇರುವ ಪೊಲೀಸ್ ಠಾಣೆ ಸೆಟ್‌ನಲ್ಲಿ.ಕಣ್ಣು ಮತ್ತು ತುಟಿಯ ಅಂಚಿನಲ್ಲಿ ರಕ್ತದ ಕಲೆ ಇರುವಂತೆ ಮೇಕಪ್ ಹಾಕಿಕೊಂಡಿದ್ದರು ನಾಯಕ ಪಂಕಜ್. ಅವರ ಎದುರು ಖಳನಾಗಿ ಅಬ್ಬರಿಸುತ್ತಿದ್ದರು ರವಿಶಂಕರ್.ಚಿತ್ರಕ್ಕೆ ಕತೆ ಬರೆದು ನಿರ್ದೇಶಿಸುತ್ತಿರುವವರು ಪ್ರಕಾಶ್ ಜಡೆಯಾ. ಅವರು ನಾಗತಿಹಳ್ಳಿ ಚಂದ್ರಶೇಖರ್ ಅವರ ಬಳಿ ಕೆಲಸ ಮಾಡಿದವರು. ಮೂರು ವರ್ಷ ಕುಳಿತು ಕತೆ ಬರೆದಿರುವ ಪ್ರಕಾಶ್, `ನನ್ನದು ವಿಶೇಷ ಕತೆಯೇನಲ್ಲ. ಆದರೆ ಜನರನ್ನು ಹಿಡಿದಿಡುವ ಹೊಸಪ್ರಯತ್ನ ಇದೆ. ಯಾವುದೇ ಉದ್ದೇಶವಿಲ್ಲದೆ ಬದುಕುವ ಆಸೆ ಹೊತ್ತು ಬೆಂಗಳೂರಿಗೆ ಬರುವ ಸಾಮಾನ್ಯ ಯುವಕನ ಕತೆ ಇದು. ನಾಯಕನ ಹೋರಾಟವೇ ಚಿತ್ರದ ಹೈಲೈಟ್~ ಎಂದರು.ನಾಯಕ ಪಂಕಜ್‌ಗೆ `ದುಷ್ಟ~ ಚಿತ್ರದ ನಂತರ ವಿಶ್ರಾಂತಿ ಪಡೆಯುವ ಮನಸ್ಸಾಗಿತ್ತಂತೆ. ಆದರೆ `ರಣ~ ಚಿತ್ರದ ಕತೆ ಅವರನ್ನು ನಟಿಸಲು ಪ್ರೇರೇಪಿಸಿತಂತೆ. ಅದರಂತೆ `ರಣ~ ಚಿತ್ರದ ನಂತರ ಅವರ ವಿಶ್ರಾಂತಿ ಪಡೆಯುವ ಯೋಚನೆಗೆ ಮತ್ತೆ ಬ್ರೇಕ್ ಹಾಕಿದ್ದು `ರೆಡ್~ ಚಿತ್ರದ ಕತೆ. `ಇದು ನಾಯಕ-ನಾಯಕಿಗೆ ಹೆಚ್ಚು ಪ್ರಾಮುಖ್ಯತೆ ಇರುವ ಚಿತ್ರವಲ್ಲ. ಪ್ರತಿಯೊಂದು ಪಾತ್ರಕ್ಕೂ ತೂಕ ಇದೆ. ಆಕ್ಷನ್, ಸೆಂಟಿಮೆಂಟ್, ಕಾಮಿಡಿ ಎಲ್ಲಾ ಮಿಶ್ರಣವಾಗಿದೆ~ ಎಂದಷ್ಟೇ ನುಡಿದರು ಪಂಕಜ್.`ಒಳ್ಳೆಯವನಾ? ಕೆಟ್ಟವನಾ? ಎಂದು ಪ್ರೇಕ್ಷಕರಲ್ಲಿ ಗೊಂದಲ ಹುಟ್ಟಿಸುವ ಪಾತ್ರ ತಮ್ಮದು~ ಎಂದರು ರವಿಶಂಕರ್. ಚಿತ್ರದ ಕೊನೆಯಲ್ಲಿ ಅವರ ಪಾತ್ರ ಬೇರೆಯದೇ ತಿರುವು ಪಡೆದುಕೊಳ್ಳುತ್ತದೆಯಂತೆ.ನಟ ಮುನಿ ಅವರಿಗೆ ಚಿತ್ರದಲ್ಲಿ ಮಾತು ಕಡಿಮೆ. ಭಾವಾಭಿನಯ ಜಾಸ್ತಿ ಇದೆಯಂತೆ. ನಿರ್ಮಾಪಕ ಶಿವಾನಂದ ಮಾದಶೆಟ್ಟಿ ತಮ್ಮ ಚಿತ್ರದ ಹೆಸರಿಗೆ ಕುಂಕುಮ ಅಥವಾ ರಕ್ತ ಹೀಗೆ ಯಾವ ಅರ್ಥ ಬೇಕಾದರೂ ಇರಬಹುದು ಎಂದು ಕುತೂಹಲ ಕಾಯ್ದುಕೊಳ್ಳಲು ಪ್ರಯತ್ನಿಸಿದರು.`ನನ್ನ ಕಚೇರಿಗೆ `ರಣ~ ಮತ್ತು `ರೆಡ್~ ಎರಡೂ ಚಿತ್ರದ ಕತೆಗಳು ಒಟ್ಟಿಗೆ ಬಂದವು. `ರಣ~ ಚಿತ್ರೀಕರಣ ಮುಗಿದ ನಂತರ `ರೆಡ್~ ಆರಂಭಿಸಿದೆ. ಈ ಕತೆಗೂ ಪಂಕಜ್ ಒಪ್ಪುತ್ತಾರೆ ಎನಿಸಿ ಅವರನ್ನೇ ನಾಯಕರನ್ನಾಗಿ ಆರಿಸಿದೆ~ ಎಂದರು.ಸೂಪರ್ 35 ಕ್ಯಾಮೆರಾ ಬಳಿಸಿ ಚಿತ್ರವನ್ನು ಸಿನಿಟೆಕ್ ಸೂರಿ ಚಿತ್ರೀಕರಿಸುತ್ತಿದ್ದಾರೆ. 40 ದಿನದಲ್ಲಿ ಚಿತ್ರೀಕರಣ ಮುಗಿಸುವ ಇರಾದೆ ಚಿತ್ರತಂಡದ್ದು. ಚಿತ್ರದ ನಾಯಕಿ ಅಂಜನಾ. ಚಿತ್ರಕ್ಕೆ ಸಾಧುಕೋಕಿಲ ಅಣ್ಣ ಲಯೇಂದ್ರ ಅವರ ಮಗ ಮ್ಯಾಥ್ಯೂಸ್ ಮನು ಸಂಗೀತ ನೀಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry