ಬುಧವಾರ, ಏಪ್ರಿಲ್ 14, 2021
31 °C

ಕೆಂಪುತೋಟದಲ್ಲಿ ಅರಳಿದ ಪುಷ್ಪಲೋಕ:9ರಿಂದ 15ರ ವರೆಗೆ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಸ್ಯಕಾಶಿಯ ತುಂಬ ಹೂಬಿಟ್ಟು ನಿಂತ ಗಿಡಗಳು. ವಿವಿಧ ಪ್ರಾಣಿಗಳ ರೂಪ ತಾಳಿದ ಬಗೆ ಬಗೆಯ ಗಿಡ-ಲತೆಗಳು. ಗಾಜಿನಮನೆಯಲ್ಲಿ ಗುಂಪುಗೊಂಡ ಬಣ್ಣ ಬಣ್ಣದ ಪುಷ್ಪಲೋಕ. ಸ್ವಾತಂತ್ರ್ಯ ದಿನಾಚರಣೆಯ ನೆಪದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜುಗೊಂಡ ಕೆಂಪುತೋಟ.ಲಾಲ್‌ಬಾಗ್‌ನಲ್ಲಿ ಇದೇ 9ರಿಂದ 15ರ ವರೆಗೆ ತೋಟಗಾರಿಕಾ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘವು ಏಳುದಿನ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿದೆ. 65ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿರುವ ಫಲಪುಷ್ಟ ಪ್ರದರ್ಶನಕ್ಕಾಗಿ ಲಾಲ್‌ಬಾಗ್‌ನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ.ತರಕಾರಿಗಳ ಕೆತ್ತನೆ, ಥಾಯ್‌ಆರ್ಟ್, ಬೋನ್ಸಾಯ್, ಇಕೆಬಾನ, ಜಾನೂರು, ಕುಂಡಗಳಲ್ಲೇ ಬೆಳೆಸಿದ ತರಕಾರಿ ಬಿಟ್ಟ ಗಿಡಗಳು, ಆಂಥೋರಿಯಂ, ಆರ್ಕಿಡ್, ವಿಂಕಾ, ಇಂಪೇಷನ್ಸ್, ಸೈಕ್ಲೊಮನ್, ಪೆಟೂನಿಯಾ, ಪಾಯಿನ್ಸಿಟಿಯಾ, ಪೇಟೊನೂನಿಯಾ ಸೇರಿದಂತೆ 200ಕ್ಕೂ ಹೆಚ್ಚು ಅಪರೂಪದ ಜಾತಿಯ ಹೂ ಗಿಡಗಳು ಈ ಬಾರಿಯ ಪ್ರದರ್ಶನದಲ್ಲಿ ಕಾಣಸಿಗುತ್ತವೆ.ಈ ಬಾರಿಯ ಪ್ರದರ್ಶನವನ್ನು ವೀಕ್ಷಿಸಲು ಸುಮಾರು ಆರು ಲಕ್ಷ ಜನರು ಲಾಲ್‌ಬಾಗ್‌ನತ್ತ ಹರಿದು ಬರುವ ವಿಶ್ವಾಸವನ್ನು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ವ್ಯಕ್ತ ಪಡಿಸಿದ್ದಾರೆ.`ಫಲಪುಷ್ಪ ಪ್ರದರ್ಶನಕ್ಕಾಗಿ ಲಕ್ಷಾಂತರ ಸಂಖ್ಯೆಯ ಹೂ, ಹಣ್ಣು, ತರಕಾರಿ ಗಿಡಗಳನ್ನು ಬಳಸಿ ವಿವಿಧ ಬಗೆಯ ಕಲಾಕೃತಿಗಳನ್ನು ರಚಿಸಲಾಗಿದ್ದು, ಇವು ನೋಡುಗರ ಕಣ್ಮನ ಸೂರೆಗೊಳ್ಳಲಿವೆ. 9ರ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ~ ಎಂದು ತೋಟಗಾರಿಕಾ ಇಲಾಖೆಯ ನಿರ್ದೇಶಕ ಡಾ.ಕೆ.ಜಿ.ಜಗದೀಶ್ ಹೇಳಿದರು.`ಉದ್ಯಾನವನದೊಳಗೆ ಪ್ಲಾಸ್ಟಿಕ್ ಹಾವಳಿ ತಪ್ಪಿಸಲು ಎಲ್ಲ ರೀತಿಯ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ನಿಷೇಧಿಸಲಾಗಿದೆ. ಸಸ್ಯ ಪ್ರೇಮಿಗಳಿಗೆ ಉಪಯೋಗವಾಗುವಂತೆ ವಿವಿಧ ಬಗೆಯ ಗಿಡಗಳು ಹಾಗೂ ಕೈತೋಟದ ಉಪಕರಣಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಮರಳಿನಲ್ಲಿ ರಚಿಸಿದ ಕಲಾಕೃತಿಗಳು ಈ ಬಾರಿಯ ಪ್ರದರ್ಶನದ ವಿಶೇಷವಾಗಿದೆ. ಮಂಡ್ಯದ ಮರಳು ಶಿಲ್ಪಿ ಪ್ರಶಾಂತ್ ಕುಮಾರ್ ಮರಳಿನ ಕಲಾಕೃತಿಗಳನ್ನು ರಚಿಸಲಿದ್ದಾರೆ. ಭಾರತಾಂಬೆ, ಹಂಸಗಳು, ಶಿಲಾಬಾಲಿಕೆ, ಗಣೇಶ, ಹೂವಿನ ಬಳ್ಳಿ, ಮತ್ಸ್ಯಕನ್ಯೆ ಸೇರಿದಂತೆ ವಿವಿಧ ರೂಪಗಳು ಮರಳಿನಲ್ಲಿ ಅನಾವರಣಗೊಳ್ಳಲಿವೆ~ ಎಂದು ಅವರು ತಿಳಿಸಿದರು.`ಪ್ರದರ್ಶನದ ಅಂಗವಾಗಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸುಮಾರು 200 ಪೊಲೀಸ್ ಸಿಬ್ಬಂದಿಯನ್ನು ವಿಶೇಷ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಪೊಲೀಸರ ಜೊತೆಗೆ ಗೃಹ ರಕ್ಷಕದಳ, ಉದ್ಯಾನವನದ ಖಾಸಗಿ ಭದ್ರತಾ ಸಿಬ್ಬಂದಿಯೂ ಭದ್ರತಾ ಕಾರ್ಯದಲ್ಲಿ ತೊಡಗಲಿದ್ದಾರೆ. ಉದ್ಯಾನವನದ ಮುಖ್ಯ ಪ್ರವೇಶ ದ್ವಾರದ ಬಳಿ ವಿಶೇಷ ಪೊಲೀಸ್ ನಿಯಂತ್ರಣ ಕೊಠಡಿ ಹಾಗೂ ಎಲ್ಲ ಪ್ರವೇಶ ದ್ವಾರಗಳ ಬಳಿ ಪೊಲೀಸ್ ಚೌಕಿಗಳನ್ನು ತೆರೆಯಲಾಗಿದೆ.ಪ್ರವೇಶ ದ್ವಾರಗಳಲ್ಲಿ ಲೋಹ ಪರೀಕ್ಷಕಗಳ ಮೂಲಕವೇ ಸಾರ್ವಜನಿಕರು ಹಾದು ಹೋಗಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಉದ್ಯಾನವನದ ಹಲವು ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ~ ಎಂದು ಜಯನಗರ ಉಪ ವಿಭಾಗದ ಎಸಿಪಿ ಮಂಜುನಾಥ್ ಹೇಳಿದರು.

`ಟ್ರೀ ಹಟ್~ನ ಜೀವಲೋಕ

`ಹೂ, ಗಿಡ, ಹಣ್ಣು ತರಕಾರಿಗಳನ್ನು ಬಳಸಿ ವಿವಿಧ ಪ್ರಾಣಿಗಳನ್ನು ನಿರ್ಮಿಸಿರುವ `ಟ್ರೀ ಹಟ್~ ಈ ಬಾರಿಯ ಪ್ರದರ್ಶನದ ವಿಶೇಷ. ಉದ್ಯಾನವನದ ಗಾಜಿನಮನೆಯಲ್ಲಿ ಮನುಷ್ಯ, ವನ್ಯಜೀವಿ ಹಾಗೂ ಪರಿಸರದ ನಡುವಿನ ಸಂಬಂಧವನ್ನು ಈ ಬೃಹತ್ ಕಲಾಕೃತಿಯ ಮೂಲಕ ಅನಾವರಣಗೊಳಿಸಲು ಪ್ರಯತ್ನಿಸಲಾಗಿದೆ. ಸುಮಾರು 50 ಜನ ಸಿಬ್ಬಂದಿ ಎಂಟು ದಿನಗಳ ಕಾಲ ಕಲಾಕೃತಿಯ ನಿರ್ಮಾಣದಲ್ಲಿ ಪಾಲ್ಗೊಂಡಿದ್ದಾರೆ.ಸುಮಾರು 40 ಸಾವಿರ ಅಲ್‌ಸ್ಟ್ರೋಮೆರಿಯನ್ ಲಿಲ್ಲಿ ಹೂಗಳನ್ನು ಬಳಸಿ ಮರದ ಮೇಲಿನ ಅಟ್ಟಣಿಗೆಯನ್ನು ನಿರ್ಮಿಸಲಾಗಿದೆ. ಸುಮಾರು ಒಂದು ಲಕ್ಷ ವಿವಿಧ ಹೂಗಳಿಂದ ಪ್ರಾಣಿಗಳ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಶೀತವಲಯದಲ್ಲಿ ಬೆಳೆಯುವ ಈ ಹೂಗಳನ್ನು ಪ್ರದರ್ಶನಕ್ಕೆಂದು ವಿಶೇಷವಾಗಿ ಊಟಿಯಲ್ಲಿ ಬೆಳೆಸಿ ತರಿಸಲಾಗಿದೆ~

-ಡಾ.ಕೆ.ಜಿ.ಜಗದೀಶ್, ನಿರ್ದೇಶಕರು, ತೋಟಗಾರಿಕಾ ಇಲಾಖೆ ಹೆಚ್ಚುವರಿ ಕೌಂಟರ್‌ಗಳು

ಫಲಪುಷ್ಪ ಪ್ರದರ್ಶನಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ಟಿಕೆಟ್ ಕೌಂಟರ್‌ಗಳನ್ನು ತೆರೆಯಲಾಗುವುದು. ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯ ವರೆಗೆ ಮಾತ್ರ ಟಿಕೆಟ್‌ಗಳನ್ನು ವಿತರಿಸಲಾಗುವುದು. ಬೈಕ್‌ಗಳಲ್ಲಿ ಬರುವ ಸಾರ್ವಜನಿಕರು ಜೋಡಿ ರಸ್ತೆ ಹಾಗೂ ಡಾ.ಎಂ.ಎಚ್.ಮರೀಗೌಡ ರಸ್ತೆಯ ಪ್ರವೇಶಿಸಿ ಕೆಂಪೇಗೌಡ ಗೋಪುರದ ಬಳಿ ನಿಲುಗಡೆ ಮಾಡಬೇಕು.ಕಾರು ಹಾಗೂ ಇತರೆ ನಾಲ್ಕು ಚಕ್ರದ ವಾಹನಗಳಲ್ಲಿ ಬರುವವರು ಅಶೋಕ ಪಿಲ್ಲರ್ ಹಾಗೂ ಮಲ್ಲಿಗೆ ಆಸ್ಪತ್ರೆಯ ಕಡೆಯಿಂದ ಬಂದು ಸಿದ್ದಾಪುರ ಪ್ರವೇಶ ದ್ವಾರ (ಸೌತ್‌ಗೇಟ್)ದಿಂದ ಉದ್ಯಾನವನ ಪ್ರವೇಶಿಸಿ ಪ್ರವೇಶ ದ್ವಾರದ ಪಕ್ಕದಿಂದಲೇ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. 13ರಂದು ಬೆಳಿಗ್ಗೆ 8ರಿಂದ 12 ಗಂಟೆಯ ವರೆಗೆ ಹಾಗೂ15ರಂದು ಬೆಳಿಗ್ಗೆ 9ರಿಂದ 6 ಗಂಟೆಯ ವರೆಗೂ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ.

 

ಪ್ರವೇಶ ಶುಲ್ಕ ಮತ್ತೊಮ್ಮೆ ಹೆಚ್ಚಳ

ಈ ಬಾರಿಯ ಪ್ರದರ್ಶನದ ಪ್ರವೇಶ ಶುಲ್ಕವನ್ನು ರೂ 10 ಹೆಚ್ಚಿಸಲಾಗಿದೆ. ಕಳೆದ ಬಾರಿಯ ಪ್ರದರ್ಶನದ ಅವಧಿಯಲ್ಲಿ ರಜೆಯ ದಿನಗಳಲ್ಲಿ 40 ರೂಪಾಯಿ ಹಾಗೂ ಉಳಿದ ದಿನಗಳಲ್ಲಿ 30 ರೂಪಾಯಿ ಪ್ರವೇಶ ದರವನ್ನು ನಿಗದಿ ಪಡಿಸಲಾಗಿತ್ತು. ಈ ಬಾರಿ ಎಲ್ಲ ದಿನಗಳಿಗೂ 40 ರೂಪಾಯಿ ಶುಲ್ಕ ನಿಗದಿ ಪಡಿಸಲಾಗಿದೆ.`ಪ್ರದರ್ಶನದ ನಿರ್ವಹಣೆಗೆ ಹಣಕಾಸಿನ ಕೊರತೆ ಎದುರಾಗಿದ್ದು, ಈ ಬಾರಿ ಎಲ್ಲಾ ದಿನಗಳಲ್ಲೂ ಏಕರೂಪವಾಗಿ ರೂ 40 ದರ ನಿಗದಿ ಪಡಿಸಲಾಗಿದೆ. ಕಳೆದ ವರ್ಷದ ಪ್ರವೇಶ ಶುಲ್ಕದಿಂದ ಒಟ್ಟು ರೂ 1.19 ಕೋಟಿ ಸಂಗ್ರಹವಾಗಿದೆ. ಆದರೆ, ನಿರ್ವಹಣೆಯ ವಾರ್ಷಿಕ ಖರ್ಚು ಸುಮಾರು ರೂ 35 ಲಕ್ಷ ಹೆಚ್ಚಾಗಿದೆ.ಕೇಂದ್ರ ತೋಟಗಾರಿಕಾ ಸಂಶೋಧನಾ ಸಂಸ್ಥೆಯಿಂದ ಲಾಲ್‌ಬಾಗ್ ನಿರ್ವಹಣೆಗೆ ಬರುತ್ತಿರುವ ಹಣದಿಂದ ಪ್ರದರ್ಶನ ಹಾಗೂ ಉದ್ಯಾನವನದ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೊರತೆ ತುಂಬಲು ಶುಲ್ಕ ಹೆಚ್ಚಳ ಅನಿವಾರ್ಯವಾಗಿದೆ~ ಎಂದು  ಡಾ.ಕೆ.ಜಿ.ಜಗದೀಶ್ ತಿಳಿಸಿದರು.ಪ್ರವೇಶ ಶುಲ್ಕ (ರೂಗಳಲ್ಲಿ)

ವಯಸ್ಕರು 40

ಮಕ್ಕಳು 10

ಕಾರು, ಒಬ್ಬರಿಗೆ 90

ಕಾರು, ಇಬ್ಬರಿಗೆ 130

ಕಾರು, ಮೂವರಿಗೆ 170

ಕಾರು, ನಾಲ್ಕು ಜನರಿಗೆ 210

ಕಾರು, ಐದು ಜನರಿಗೆ 250

ಕಾರು, ಆರು ಜನರಿಗೆ 290

ಕಾರು, ಎಂಟು ಜನರಿಗೆ 370

ಟೆಂಪೊ ಟ್ರಾವಲರ್‌ಗೆ 500

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.