ಶನಿವಾರ, ಏಪ್ರಿಲ್ 17, 2021
31 °C

ಕೆಂಪುತೋಟದ ಮರಳ ಮೇಲೆ ಗಣೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಪುತೋಟದ ಮರಳ ಮೇಲೆ ಗಣೇಶ

`ತಂದೆ ಮೇಸ್ತ್ರಿಯಾಗಿದ್ದರು. ಮನೆಯ ಮುಂದೆ ಸದಾ ಮರಳಿನ ರಾಶಿ ಇರುತ್ತಿತ್ತು. ಆಟಕ್ಕೆಂದು ಆರಂಭಿಸಿದ್ದು ಇಷ್ಟವಾಗತೊಡಗಿತು. ಟೀವಿ, ಪತ್ರಿಕೆಯಲ್ಲಿ ಬರುತ್ತಿದ್ದ ಸುದರ್ಶನ್ ಪಟ್ನಾಯಕ್ ಅವರ ಕಲಾಕೃತಿಗಳನ್ನು ಕಂಡಾಗ ನನಗೂ ಅಂತಹುದೇ ಮರಳಿನ ಮೂರ್ತಿಗಳನ್ನು ರಚಿಸಬೇಕೆಂಬ ಬಯಕೆಯಾಗುತ್ತಿತ್ತು.

 

ನನಗೆ ಯಾರೂ ಗುರುಗಳಿಲ್ಲ. ಯಾವ ಕಲಾಶಾಲೆಗೂ ಹೋಗಿ ಕಲಿತಿಲ್ಲ. ಸತತ ಆರು-ಏಳು ವರ್ಷಗಳ ಅಭ್ಯಾಸದಿಂದ ಈ ಹಿಡಿತ ಸಿಕ್ಕಿದೆ~ ಹೀಗೆ ತನ್ನ ಬಗ್ಗೆ ಹೇಳಿಕೊಂಡ ಮಂಡ್ಯದ ಪ್ರಶಾಂತ್ ತಮ್ಮ ಮುಂದಿದ್ದ ಮರಳಿನ ರಾಶಿಯ ಮೇಲೊಮ್ಮೆ ಕೈಯಾಡಿಸಿದರು.ಲಾಲ್‌ಬಾಗ್‌ನ ಪುಷ್ಪ ಪ್ರದರ್ಶನದಲ್ಲಿ ಇವರು ಭಾಗವಹಿಸಿದ್ದು ಇದು ಎರಡನೇ ಬಾರಿ. ಉಗ್ರರೂಪದ ರಾಕ್ಷಸ, ಮತ್ಸ್ಯಕನ್ಯೆ, ಶಿಲಾಬಾಲಿಕೆ ಹಾಗೂ ಅಗಲ ಕಿವಿಯ ಮುದ್ದು ಗಣಪನ ಕಲಾಕೃತಿಗಳು ಪ್ರದರ್ಶನದ ಎಂಟೂ ದಿನ ನೋಡುಗರ ಗಮನ ಸೆಳೆದವು.

`ಮರಳನ್ನು ಕೈಯಲ್ಲಿ ಹಿಡಿದಾಗಲೇ ಅದು ಮೂರ್ತಿ ರಚನೆಗೆ ಸೂಕ್ತ ಹೌದೋ ಇಲ್ಲವೋ ಎಂದು ತಿಳಿಯುತ್ತದೆ.

 

ಮುಷ್ಟಿಯಲ್ಲಿ ಮರಳು ಹಿಡಿದು ಸ್ಪಲ್ಪ ನೀರು ತಾಕಿಸಿ ಅದನ್ನು ಉಂಡೆಯಾಕಾರಕ್ಕೆ ತಂದು ಕೈಯಲ್ಲಿ ಆಡಿಸುತ್ತೇನೆ. ಒಂದು ನಿಮಿಷದ ಬಳಿಕವೂ ಆ ಉಂಡೆ ಒಡೆಯದೆ ಮೊದಲಿನ ರೂಪದಲ್ಲೇ ಇದ್ದರೆ ಅದು ಮೂರ್ತಿ ರಚಿಸಲು ಸೂಕ್ತ.

 

ಉತ್ತಮವಾದ ಮರಳು ಆಯ್ದುಕೊಳ್ಳುವುದೇ ಕಲಾವಿದನಿಗಿರುವ ಮೊದಲ ಸವಾಲು~ ಎನ್ನುವ ಪ್ರಶಾಂತ್ ಈಗಾಗಲೇ ಗೋವಾ, ಮಂಗಳೂರು, ಚೆನ್ನೈ ಬೀಚ್‌ಗಳಲ್ಲಿ ಕಲಾಕೃತಿಗಳನ್ನು ರಚಿಸಿದ್ದಾರೆ. ಬೀಚ್ ಹೊರತುಪಡಿಸಿ ಇತರ ಕಡೆಗಳಲ್ಲಿ ಪ್ರದರ್ಶನ ನಡೆಸುವಾಗ ಇವರೇ ಮರಳನ್ನೂ ಕೊಂಡೊಯ್ಯುತ್ತಾರಂತೆ.`ಬೀಚ್‌ನಲ್ಲಿ ಪ್ರತಿ 20 ಅಡಿಯ ಮರಳಿನ ಲಕ್ಷಣವೂ ಭಿನ್ನವಾಗಿರುತ್ತವೆ. ಅಲ್ಲಿ ಮೂರ್ತಿ ರಚಿಸುವ ಮೊದಲು ಸೂಕ್ತ ಮರಳು ಆಯ್ದುಕೊಳ್ಳುವುದೇ ಕಠಿಣ ಕೆಲಸ. ಎಲ್ಲಾ ಬೀಚ್‌ನ ಮರಳುಗಳೂ ಕಲಾಕೃತಿ ರಚನೆಗೆ ಸೂಕ್ತವಲ್ಲ~ ಎನ್ನುತ್ತಾ ಗಣಪನಿಗೆ ಅಂತಿಮ ಸ್ಪರ್ಶ ನೀಡಲಾರಂಭಿಸಿದರು.

 

ಮಂಡ್ಯ, ಮೈಸೂರು, ಶಿವಮೊಗ್ಗ ಮೊದಲಾದೆಡೆ ಪ್ರದರ್ಶನಗಳಿಗಾಗಿ ಮರಳಿನ ಆಕೃತಿ ತಯಾರಿಸಿರುವ ಪ್ರಶಾಂತ್ ಅವರಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಆಸಕ್ತಿಯಿಲ್ಲ. ಕಲಾಕೃತಿಗಳಿಗೆ ಬೆಲೆ ಕಟ್ಟುವುದು, ಇನ್ನೊಬ್ಬರ ಕಲಾಕೃತಿಯೊಂದಿಗೆ ತಮ್ಮದನ್ನು ಹೋಲಿಸಿಕೊಳ್ಳುವುದು ಕೂಡ ಅವರಿಗೆ ಬೇಸರದ ಸಂಗತಿಯಂತೆ.`ಸಣ್ಣ ಫ್ರೇಮ್‌ನೊಳಗೆ ಗಂಭೀರ ವಿಷಯಗಳನ್ನು ತುಂಬಿಡುವ ಚಿತ್ರಕಲಾವಿದನಿಗೂ ಹತ್ತಡಿ ಜಾಗದಲ್ಲಿ ಐದಡಿ ಎತ್ತರದ ಮರಳಿನ ಕಲಾಕೃತಿ ರಚಿಸುವ ಕಲಾವಿದನಿಗೂ ಹೆಚ್ಚು ವ್ಯತ್ಯಾಸವಿಲ್ಲ. ಸೃಜನಾತ್ಮಕ ಕಲೆ ಇಬ್ಬರಿಗೂ ಮುಖ್ಯ. ಆತ ಕುಂಚದಲ್ಲಿ ತನ್ನ ಭಾವನೆ ವ್ಯಕ್ತಪಡಿಸಿದರೆ ನಾನು ಕೈಯಲ್ಲೇ ಜೀವ ಕೊಡುತ್ತೇನೆ.ಯಾವುದೇ ಮೂರ್ತಿಯಾಗಲಿ ಅದಕ್ಕೆ ಭಾವನೆಗಳನ್ನು ತುಂಬದಿದ್ದರೆ ಅದು ನಿರ್ಜೀವವೇ. ಸದಾ ಪ್ರಯೋಗಗಳನ್ನು ನಡೆಸುವುದೆಂದರೆ ನನಗಿಷ್ಟ. ಹೆಚ್ಚಿನ ಕಲಾವಿದರು ಮರಳಿನ ಮೂರ್ತಿಗಳನ್ನು ನೆಲದ ಮೇಲೇ ಮಲಗಿಸುತ್ತಾರೆ. ನಾನು ಅದು ಮೇಲೆದ್ದು ನಿಲ್ಲುವಂತೆ ಮಾಡುತ್ತೇನೆ.ಐದಡಿ ಎತ್ತರದಲ್ಲಿ ಕಲಾಕೃತಿ ಎದ್ದು ನಿಂತರೆ, ನಡೆದು ಹೋಗುವ ಮಂದಿಯ ದೃಷ್ಟಿಗೆ ಅದು ಸಮಾನವಿದ್ದರೆ ಅದಕ್ಕಿರುವ ಮೌಲ್ಯವೇ ಬೇರೆ~ ಎನ್ನುವ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕೆಂಬ ಹಂಬಲವಿದೆ. ಕಲಾಕೃತಿ ರಚನೆಯನ್ನು ಹೇಳಿಕೊಡಿ ಎಂದು ಬಂದ ಮಂಡ್ಯದ ಹತ್ತಾರು ಹುಡುಗರಿಗೆ ಇವರು ಗುರುವೂ ಆಗಿದ್ದಾರೆ.ಲಾಲ್‌ಬಾಗ್‌ನಲ್ಲಿ ಅಷ್ಟೂ ದಿನ ಮುಂಜಾನೆ 4ಕ್ಕೆ ಎದ್ದು ಮರಳಿನೊಂದಿಗೆ ಕೈಯಾಡಿಸತೊಡಗಿದರೆ ಬೆಳಿಗ್ಗೆ 11ಕ್ಕೆ ಕಲಾಕೃತಿ ಎದ್ದು ನಿಲ್ಲುತ್ತಿತ್ತು. ವೀಕ್ಷಣೆಗೆ ಜನ ಬರುವ ಹೊತ್ತಿಗೆ ಇವರು ಮರೆಯಾಗಿರುತ್ತಾರಂತೆ.ನೋಡುವ ಮಂದಿಯ ಪ್ರತಿಕ್ರಿಯೆಯನ್ನು ಕದ್ದು ಕೇಳುವುದರಲ್ಲೇ ಸುಖವಿದೆ ಎನ್ನುವ ಪ್ರಶಾಂತ್ ಕಲಾಕೃತಿಯ ನಿರ್ಮಾಣಕ್ಕೆ ಯಾರೊಬ್ಬರ ಸಹಾಯವನ್ನೂ ಪಡೆದುಕೊಳ್ಳುವುದಿಲ್ಲ!

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.