ಶನಿವಾರ, ಜನವರಿ 18, 2020
20 °C
ಪೊಲೀಸ್‌, ಆಂಬುಲೆನ್ಸ್‌ ವಾಹನಕ್ಕೆ ನೀಲಿ ದೀಪ

ಕೆಂಪುದೀಪಕ್ಕೆ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ, ಐಎಎನ್‌ಎಸ್‌): ಸರ್ಕಾರಿ ವಾಹನಗಳ ಮೇಲೆ ಕೆಂಪು ದೀಪ, ಸೈರನ್‌ ಬಳಕೆಗೆ ಸಂಬಂಧಿಸಿದಂತೆ ಈ ಹಿಂದೆ ತಾನು ನೀಡಿದ್ದ ನಿರ್ದೇ­ಶನಗಳು  ಪಾಲನೆಯಾಗುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ ಮಂಗಳ­ವಾರ ಮತ್ತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.ಸಂವಿಧಾನಾತ್ಮಕ ಹುದ್ದೆಗಳಲ್ಲಿ ಇರುವ ಗಣ್ಯರ ವಾಹನಗಳ ಮೇಲೆ ಮಾತ್ರ ಕೆಂಪು ದೀಪ ಬಳಸಬಹುದು. ಪೊಲೀಸ್‌ ಮತ್ತು ತುರ್ತು ಸೇವೆಗಳ (ಅಗ್ನಿಶಾಮಕ, ಆಂಬುಲೆನ್ಸ್)  ವಾಹನಗಳು ನೀಲಿ ದೀಪ ಅಳವಡಿಸಿ­ಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.ವಾಹನಗಳ ಮೇಲಿನ ಕೆಂಪು ದೀಪ ದುರ್ಬಳಕೆಗೆ ಕಡಿವಾಣ ಹಾಕಲು ಕೋರ್ಟ್ ಈ ಹಿಂದೆ ಅನೇಕ ಸಲ  ನಿರ್ದೇಶನಗಳನ್ನು ನೀಡಿತ್ತು.

ಈಗ ಮತ್ತೆ ನ್ಯಾಯಮೂರ್ತಿ ಜಿ.ಎಸ್‌. ಸಿಂಘ್ವಿ ನೇತೃತ್ವದ ಪೀಠ, ಕೆಂಪು ದೀಪದ ವಾಹನಗಳನ್ನು ಬಳಸಲು ಅರ್ಹರಾದವರ ಪಟ್ಟಿಯನ್ನು ಹೊಸ­ದಾಗಿ ಸಿದ್ಧಪಡಿಸಬೇಕು ಹಾಗೂ ಈ ಕುರಿತ ಕಾನೂನುಗಳಿಗೆ  ಮೂರು ತಿಂಗಳ ಒಳಗಾಗಿ ತಿದ್ದುಪಡಿ ತರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ.ಗಣ್ಯರ ಕಾರುಗಳ ಮೇಲೆ ಕೆಂಪು ದೀಪ ಅಳವಡಿಕೆಗೆ ಅವಕಾಶ ಕೊಡುವ ವಿಷಯ­ದಲ್ಲಿ ರಾಜ್ಯ ಸರ್ಕಾರಗಳು ತಮ್ಮ ವಿವೇಚನೆಗೆ ಅನುಗುಣವಾಗಿ ನಡೆದು­ಕೊಳ್ಳು­ವಂತಿಲ್ಲ ಎಂದೂ ಕೋರ್ಟ್‌  ಸ್ಪಷ್ಟಪಡಿಸಿದೆ.ತುರ್ತು ಸಂದರ್ಭಗಳಲ್ಲಿ ಮಾತ್ರ ಪೊಲೀಸರು ತಮ್ಮ ವಾಹನಗಳಲ್ಲಿಯ ಸೈರನ್‌ ಬಳಸಬಹುದು. ಆದರೆ ಇದು ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಕರ್ಕಶವಾಗಿರಬಾರದು; ಮೋಟಾರು ವಾಹನ ಕಾಯ್ದೆಯನ್ನು ಪೊಲೀಸರು ಯಾವುದೇ ಭಯ ಇಲ್ಲದೆ ಅನುಷ್ಠಾನಕ್ಕೆ ತರಲು ಮುಂದಾಗಬೇಕು ಎಂದು ಪೀಠ ಹೇಳಿದೆ. ಈ ನಿರ್ದೇಶನಗಳನ್ನು ಉಲ್ಲಂಘಿ­ಸಿದಲ್ಲಿ ದಂಡ ವಿಧಿಸಲು ಅವಕಾಶವಿದೆ ಎಂದೂ  ಎಚ್ಚರಿಸಿದೆ.ಕೆಂಪು ದೀಪಗಳ ದುರ್ಬಳಕೆ­ಯಿಂದಾಗಿ ನಗರದ ರಸ್ತೆಗಳಲ್ಲಿ ಅದರಲ್ಲೂ ರಾಜಧಾನಿ ದೆಹಲಿಯಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗು­ತ್ತಿರುವ ಬಗ್ಗೆ ಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ. ಕೆಂಪು ದೀಪಗಳ ದುರ್ಬಳಕೆಗೆ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶದ ನಿವಾಸಿ ಅಭಯ್‌ ಸಿಂಗ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಪ್ರತಿಕ್ರಿಯಿಸಿ (+)