ಬುಧವಾರ, ನವೆಂಬರ್ 13, 2019
21 °C

ಕೆಂಪು ದೀಪದ ಕಾರು `ಸುಪ್ರೀಂ' ಕೆಂಗಣ್ಣು

Published:
Updated:
ಕೆಂಪು ದೀಪದ ಕಾರು `ಸುಪ್ರೀಂ' ಕೆಂಗಣ್ಣು

ನವದೆಹಲಿ: ಗಣ್ಯರು, ಜನಪ್ರತಿನಿಧಿಗಳ ಕಾರುಗಳ ಮೇಲೆ ಮನಸ್ವೇಚ್ಛೆ ಕೆಂಪು ದೀಪ ಅಳವಡಿಕೆ ಹಾಗೂ ಸೈರನ್ ಬಳಕೆಯನ್ನು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.ಸಾರ್ವಜನಿಕರ ನಿರಾತಂಕ ಸಂಚಾರದ ಹಕ್ಕಿಗೆ ಚ್ಯುತಿ ತರುವ ಈ `ಕಿರಿಕಿರಿ' ಕಾನೂನುಬಾಹೀರ. ಇದಕ್ಕಾಗಿ ದಂಡದ ಪ್ರಮಾಣ ಹೆಚ್ಚಿಸುವುದೂ ಸೇರಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಹಾಗೂ ಎಲ್ಲ ರಾಜ್ಯ ಸರ್ಕಾರಗಳಿಗೆ ಅದು ಸೂಚನೆ ನೀಡಿದೆ.ಗಣ್ಯರ ವಾಹನಗಳಿಗೆ ಕೆಂಪು ದೀಪ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಮೋಟಾರು ವಾಹನ ಕಾಯ್ದೆ 1988ಕ್ಕೆ ತಿದ್ದುಪಡಿ ತರುವುದು ಅನಿವಾರ್ಯವಾಗಿದೆ. ಕಾರಿನ ಮೇಲೆ ಕೆಂಪು ದೀಪ ಹಾಕಿಕೊಳ್ಳಲು ಯಾರ‌್ಯಾರಿಗೆ ಅವಕಾಶ ಇರಬೇಕು ಎಂಬುದನ್ನು ಸ್ಪಷ್ಟವಾಗಿ ನಿಗದಿಪಡಿಸಬೇಕು. ಅಲ್ಲದೆ ಇವರು ಅಧಿಕೃತ ಕರ್ತವ್ಯ ಬಿಟ್ಟು ಖಾಸಗಿ ಕೆಲಸದ ಮೇಲಿದ್ದಾಗ ಕೆಂಪು ದೀಪ ಬಳಸದಂತೆ ನಿರ್ಬಂಧಿಸಬೇಕು ಎಂದು ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಹಾಗೂ ಕುರಿಯನ್ ಜೋಸೆಫ್ ಅವರನ್ನು ಒಳಗೊಂಡ ಪೀಠ ಹೇಳಿದೆ.ಸೈರನ್‌ಗೆ ನಿರ್ಬಂಧ: `ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಯ ಸಾಂವಿಧಾನಿಕ ಮುಖ್ಯಸ್ಥರ ವಾಹನಗಳಿಗಷ್ಟೇ ಕೆಂಪು ದೀಪ ಅಳವಡಿಸಲು ಅನುಮತಿ ಇರಬೇಕು. ಆದರೆ ಪೊಲೀಸ್, ಆಂಬುಲೆನ್ಸ್, ಅಗ್ನಿಶಾಮಕ, ಸೇನೆಯ ವಾಹನಗಳು ಮತ್ತು ಮೋಟಾರು ವಾಹನ ಕಾಯ್ದೆಯ 119 (3) ವಿಧಿಯಲ್ಲಿನ ವಾಹನಗಳನ್ನು ಹೊರತುಪಡಿಸಿ ಉಳಿದ ಯಾವುದೇ ಗಣ್ಯರ ವಾಹನಗಳು ಸೈರನ್ ಬಳಸಕೂಡದು ಎಂದು ಪೀಠ ಸ್ಪಷ್ಟ ಸೂಚನೆ ನೀಡಿದೆ. ಈ ದಿಸೆಯಲ್ಲಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 108ಕ್ಕೆ ಸೂಕ್ತ ತಿದ್ದುಪಡಿ ತರುವಂತೆ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ಮಾಡಿದೆ.ಬೇಕಾಬಿಟ್ಟಿಯಾಗಿ ಕಂಡಕಂಡವರಿಗೆಲ್ಲ ವಾಹನಗಳ ಮೇಲೆ ಕೆಂಪು ದೀಪ ಹಾಗೂ ಸೈರನ್‌ಗಳನ್ನು ಅಳವಡಿಸಿಕೊಳ್ಳಲು ಅನುಮತಿ ನೀಡಿರುವ ಕೇಂದ್ರ, ರಾಜ್ಯ ಸರ್ಕಾರಗಳ ಧೋರಣೆಯನ್ನು ಟೀಕಿಸಿರುವ ಕೋರ್ಟ್, `ಯಾವ ಕಾನೂನಿನ ಅಡಿ ಇದಕ್ಕೆಲ್ಲ ಅನುಮತಿ ನೀಡಲಾಗಿದೆ' ಎಂದು ತರಾಟೆಗೆ ತೆಗೆದುಕೊಂಡಿದೆ.  ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ಆವರಣದಲ್ಲಿ ಕೆಂಪು ದೀಪದ ಸಾಕಷ್ಟು ವಾಹನಗಳು ಕಂಡು ಬರುತ್ತಿವೆ. ಇವಕ್ಕೆಲ್ಲ ಯಾವ ನಿಯಮದ ಅಡಿ ಅವಕಾಶ ನೀಡಲಾಗಿದೆ ಎಂದು ಖಾರವಾಗಿ ಪ್ರಶ್ನಿಸಿದೆ.ತಮ್ಮ ವಾಹನಗಳ ಮೇಲೆ ಕೆಂಪು ದೀಪ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿನ ಕೆಲವೇ ಕೆಲವರು ಬಹುಸಂಖ್ಯಾತ ಸಾಮಾನ್ಯ ಜನರಿಗಿಂತ ವಿಶೇಷ ಎಂದು ತೋರಿಸಿಕೊಳ್ಳುವ ಪ್ರವೃತ್ತಿಯನ್ನು ತಡೆಯಲು ಶಾಸನಸಭೆಗಳು ಅಗತ್ಯ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಮನಸ್ಸಿಗೆ ಬಂದಂತೆ ಕೆಂಪು ದೀಪ ಹಾಕಿಕೊಳ್ಳಲು ಅವಕಾಶ ನೀಡಿ ರಾಜ್ಯಗಳು ಅಧಿಸೂಚನೆ ಹೊರಡಿಸುವುದು ಇದರಿಂದ ಸಾಧ್ಯವಾಯಿತು. ಇನ್ನಾದರೂ ಜನರ ಹಕ್ಕಿಗೆ ಚ್ಯುತಿ ತರುವ `ಗಣ್ಯರ ವಾಹನಗಳ ಕೆಂಪು ದೀಪ ಬಳಕೆ' ಮೇಲೆ ನಿರ್ಬಂಧ ಹೇರುವುದು ಅನಿವಾರ್ಯ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.ಕೆಂಪು ದೀಪ ಬಳಸಲು ಅರ್ಹರಾದವರ ಸಂಖ್ಯೆಯನ್ನು ಮಿತಿಗೊಳಿಸಿದರೆ ಈ ಸಮಸ್ಯೆ ತಾನಾಗಿಯೇ ಪರಿಹಾರವಾಗಲಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು, `ನ್ಯಾಯಾಂಗ ಅಧಿಕಾರಿಗಳು ಕಾರಿನ ಮೇಲೆ ಕೆಂಪು ದೀಪ ಬಳಸದಂತೆ ನಿರ್ಬಂಧಿಸಿ' ರಾಜಸ್ತಾನ ಹೈಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸಿದ್ದಾರೆ.ಕೇಂದ್ರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರು, ಕೆಂಪು ದೀಪ ಮತ್ತು ಸರ್ಕಾರಿ ವಾಹನ ಎಂಬ ಫಲಕಗಳನ್ನು ಮರೆಮಾಚದೆ ನ್ಯಾಯಾಧೀಶರ ಕಾರುಗಳನ್ನು ಅವರ ಮಕ್ಕಳು, ಕುಟುಂಬ ವರ್ಗ ಬಳಸುತ್ತಿದ್ದು ಇಂತಹ ಪ್ರಕರಣಗಳಲ್ಲಿ ವಿಧಿಸಲಾದ ದಂಡ `ಅತ್ಯಲ್ಪ' ಎಂದು ಕೋರ್ಟ್‌ಗೆ ತಿಳಿಸಿದರು.ದೆಹಲಿ ಸೇರಿದಂತೆ ಹಲವು ರಾಜ್ಯಗಳ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಿದ್ಧಾರ್ಥ ಲೂಥ್ರಾ, ಕೆಂಪು ದೀಪಗಳ ಬಳಕೆ ನಿಯಮ ಉಲ್ಲಂಘಿಸಿದಲ್ಲಿ 100ರಿಂದ 300 ರೂಪಾಯಿ ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ ಎಂದರು.`1989ರ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ದಂಡದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳು ವಿವೇಕಯುತವಾಗಿ ನಡೆದುಕೊಳ್ಳಬೇಕಾಗಿದೆ' ಎಂದು ಕೋರ್ಟ್ ಹೇಳಿದೆ.

ದೊಡ್ಡವರಾಗುತ್ತಾರಾ

ಉತ್ತರ ಪ್ರದೇಶದಲ್ಲಿ ಕೆಂಪು ದೀಪ, ಸೈರನ್ ಅಳವಡಿಸಿಕೊಳ್ಳಲು ಮಿತಿಮೀರಿ ಅವಕಾಶ ಕೊಟ್ಟಿರುವುದರ ಬಗ್ಗೆ ಆ ರಾಜ್ಯದ ವಕೀಲ ಗೌರವ ಭಾಟಿಯಾ ಅವರನ್ನು ಕೋರ್ಟ್ ತೀವ್ರ ಪ್ರಶ್ನೆಗೆ ಒಳಪಡಿಸಿತು. ರಾಜ್ಯಪಾಲರು, ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ವಿಧಾನಮಂಡಲ ಸಭಾಧ್ಯಕ್ಷರು, ಲೋಕಾಯುಕ್ತರು ಮುಂತಾದವರು ಈ ಪಟ್ಟಿಯಲ್ಲಿದ್ದಾರೆ ಎಂದು ಭಾಟಿಯಾ ಹೇಳುತ್ತಿದ್ದಂತೆ ಅವರ ಮಾತು ಮೊಟಕು ಗೊಳಿಸಿದ ನ್ಯಾಯಪೀಠ, `ಲೋಕಾಯುಕ್ತರ ಕಾರಿಗೆ ಕೆಂಪು ದೀಪದ ಅಗತ್ಯವೇನಿದೆ? ಅವರದ್ದು ಬರೀ ಶಾಸನಬದ್ಧ ಹುದ್ದೆಯಲ್ಲವೇ? ಕೆಂಪು ದೀಪ ಹಾಕಿಕೊಂಡರೆ ಅವರ ಹುದ್ದೆಯ ಕಿಮ್ಮತ್ತು ಹೆಚ್ಚುತ್ತದೆಯೇನು?' ಎಂದು ಪ್ರಶ್ನಿಸಿತು.ಆಯಾ ರಾಜ್ಯಗಳ ಗಣ್ಯರು, ರಾಜಕಾರಣಿಗಳು ದೆಹಲಿಗೆ ಬರುವಾಗ ಜತೆಗೆ ಶಸ್ತ್ರಸಜ್ಜಿತ ಬೆಂಗಾವಲು ಸಿಬ್ಬಂದಿಯನ್ನು ಕರೆತಂದು ಜನಸಾಮಾನ್ಯರನ್ನು ಭಯಭೀತಗೊಳಿಸುವ ಅಸಹ್ಯಕರ ಪ್ರವೃತ್ತಿ ಬಗ್ಗೆ ಹೇಳಿಕೆ ಸಲ್ಲಿಸುವಂತೆ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ರಾಜಸ್ತಾನ ಮತ್ತು ದೆಹಲಿ ಸರ್ಕಾರಗಳಿಗೆ ತಾಕೀತು ಮಾಡಿದೆ.

ಪ್ರತಿಕ್ರಿಯಿಸಿ (+)