ಭಾನುವಾರ, ಡಿಸೆಂಬರ್ 8, 2019
24 °C

ಕೆಂಪೇಗೌಡನಿಗೆ ಜೀವದುಂಬುತ್ತ

Published:
Updated:
ಕೆಂಪೇಗೌಡನಿಗೆ ಜೀವದುಂಬುತ್ತ

ಬೆಂಗಳೂರಲ್ಲಿ ಸಾಕಷ್ಟು ಪ್ರತಿಮೆಗಳಿರುವಾಗ ಇನ್ನೊಂದು ಪ್ರತಿಮೆ ಬೇಕಿತ್ತೆ? ಆದರೆ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ಪರಿಚಯ ಬೇಡವೇ? ಇವೆರಡೂ ಪ್ರಶ್ನೆಗೆ ಉತ್ತರ ನೀಡುತ್ತಿದೆ ಕೆಂಪೇಗೌಡರ ಪ್ರತಿಮೆ.

ವೃತ್ತಕ್ಕೆ ಒಂದು ಪ್ರತಿಮೆ ಎಂದು ಕಡೆಗಣಿಸಿ ಹೋಗುವಂತಿಲ್ಲ. ಈ ಕಡೆ ಬಂದವರೆಲ್ಲ ಕತ್ತೆತ್ತಿ ನೋಡಿ ಹೋಗುವಂಥ ಪ್ರತಿಮೆ ನಿರ್ಮಿಸುತ್ತಿದ್ದೇನೆ. ನೋಡಿದವರೆಲ್ಲ ಮತ್ತೆ ಪ್ರತಿಮೆಗಾಗಿಯೇ ಇತ್ತ ಬರುವಂತೆ ಆಗುತ್ತದೆ ನೋಡುತ್ತಿರಿ ಎನ್ನುವ ಕಲಾವಿದ ಶಿವಕುಮಾರ್ ಧ್ವನಿಯಲ್ಲಿ ಆತ್ಮವಿಶ್ವಾಸ ತುಂಬಿದೆ. `ಆಕಾರ್~ ಸಂಸ್ಥೆಯ ಮುಖ್ಯಸ್ಥರಾಗಿರುವ ಶಿವಕುಮಾರ್ ಒಕ್ಕಲಿಗರ ಸಂಘದ ಬೇಡಿಕೆಗೆ ಸ್ಪಂದಿಸಿ ಈ ಪ್ರತಿಮೆ ನಿರ್ಮಾಣ ಕಾರ್ಯ ಕೈಗೊಂಡಿದ್ದಾರೆ.

ಅವರು ಹೇಳುವುದರಲ್ಲಿ ಅತಿರೇಕವೇನೂ ಇಲ್ಲ. ಅವರು ತಯಾರಿಸುತ್ತಿರುವುದು 14 ಅಡಿ ಎತ್ತರ, 3000 ಕೆ.ಜಿ ತೂಕದ ಪ್ರತಿಮೆ. ಕತ್ತಿ ಹಿಡಿದ ಕಠಾರಿ ವೀರ ಕೆಂಪೇಗೌಡನ ಪ್ರತಿಮೆ.

ಪ್ರತಿಮೆ, ವಿಗ್ರಹ ಅಥವಾ ಪುತ್ಥಳಿಗಳ ನಿರ್ಮಾಣಕ್ಕೆ ಅಮೋಘವಾದ ಇತಿಹಾಸವಿದೆ. ಸಾಮಾನ್ಯವಾಗಿ ಆರಾಧ್ಯ ದೈವಗಳನ್ನು ನಿರ್ಮಿಸುವುದು ರೂಢಿಯಲ್ಲಿತ್ತು. ದೇವರನ್ನು ಯಾರೂ ನೋಡದ ಕಾರಣ, ಕಲಾವಿದನ ಪರಿಕಲ್ಪನೆಯಲ್ಲಿಯೇ ದೇವರು ಮೂರ್ತರೂಪ ಕಂಡರು. ನಂತರ ಐತಿಹಾಸಿಕ ಪುರುಷರ ಪ್ರತಿಮೆಗಳನ್ನು ನಿರ್ಮಿಸ ತೊಡಗಿದರು. ಇದಕ್ಕೂ ವ್ಯಕ್ತಿ ಚಿತ್ರಗಳು ಲಭ್ಯವಿದ್ದವು. ಆದರೆ ಕೆಂಪೇಗೌಡರ ಪ್ರತಿಮೆ ಹೇಗೆ? ಅವರ ಮುಖಚರ್ಯೆಯನ್ನು ಹೇಗೆ ನಿರ್ಧರಿಸಿದಿರಿ ಎಂಬ ಪ್ರಶ್ನೆಗೆ ಶಿವಕುಮಾರ್ ಹೇಳಿದ್ದು ಅಚ್ಚರಿ ಮೂಡಿಸುತ್ತದೆ.

ಈ ಪ್ರತಿಮೆ ಕನ್ನಡದ ಮೇರುನಟ ರಾಜ್‌ಕುಮಾರ್ ಅವರನ್ನೂ ನೆನಪಿಸಬಹುದು. ಈ ತಲೆಮಾರಿನವರಿಗೆಲ್ಲ ರಾಜ ಎಂದೊಡನೆ ನೆನಪಾಗುವುದು ಡಾ.ರಾಜ್ ಕುಮಾರ್. ಅವರ ಪ್ರತಿಮೆಗಳಿಗೂ ಸಾಕಷ್ಟು ಬೇಡಿಕೆ ಇದೆ. ಆದರೆ ವಿಷಯ ಅದಲ್ಲ, ರಾಜ್ ಹೋಲಿಕೆ ಇರುವ ಮುಖಚರ್ಯೆಯನ್ನೇ ಕೆಂಪೇಗೌಡರ ಪ್ರತಿಮೆಗೂ ಬರಲಿದೆ ಎನ್ನುತ್ತಾರೆ ಅವರು.

ಬಾಲ್ಯದಿಂದಲೇ ಲಲಿತ ಕಲೆಗಳಲ್ಲಿ ಅಪಾರವಾದ ಆಸಕ್ತಿ ಇತ್ತು. ಈ ಶಿಲ್ಪಕಲೆಗೆ ಆ ಆಸಕ್ತಿಯೇ ಮೂಲಸೆಲೆಯಾಯಿತು. ಬಿ.ಕಾಂ ಪದವಿ ಮುಗಿಸಿದರೂ ಅದು ಅವರ ಕ್ಷೇತ್ರವಲ್ಲ ಎಂದು ಅವರಿಗೆ ಸ್ಪಷ್ಟವಾಗಿತ್ತು. ಅದಕ್ಕೆ ಆರ್ಟ್ ಅಂಡ್ ಪೇಂಟಿಂಗ್‌ನಲ್ಲಿ ಡಿಪ್ಲೊಮಾ ಪಡೆದರು.

ಇಲ್ಲಿಂದ ಅವರಿಗೆ ಅದೃಷ್ಟವೂ ಒಲಿಯಿತು. ಅಂತರರಾಷ್ಟ್ರೀಯ ಕಲಾವಿದ ಆರ್.ಎಂ.ಹಡಪದ್ ತರಬೇತಿಯ ಅವಕಾಶ ದೊರೆಯಿತು. ನಂತರ ಪ್ರಖ್ಯಾತ ಶಿಲ್ಪಿ ವೆಂಕಟಾಚಲಪತಿ ಅವರೊಂದಿಗೆ 4 ವರ್ಷ ಅಭ್ಯಾಸ ಮಾಡಿದರು. ಇವಿಷ್ಟೂ ಅವರ ಕೈ, ಬೆರಳುಗಳನ್ನು ತರಬೇತುಗೊಳಿಸಿದವು. ಕಲ್ಲನ್ನು ಉಳಿಪೆಟ್ಟಿನಿಂದ ಪ್ರತಿಮೆಯಾಗಿಸುವ ಸಹನೆ, ಸಂಯಮವನ್ನೂ ಗುರುಗಳ ಬಳಿ ಕಲಿತೆ ಎಂದು ಶಿವಕುಮಾರ್ ಹೇಳುತ್ತಾರೆ.

ಈಗ ಆ ಜ್ಞಾನದೊಂದಿಗೆ 15 ವರ್ಷಗಳ ಅನುಭವವೂ ಸೇರಿದೆ.

ಖುಷಿಯಿಂದ ಕೆಲಸ ಮಾಡಿದರೆ ಖಂಡಿತ ಕಲೆ ಸಾಕಾರಗೊಳ್ಳುತ್ತದೆ ಎನ್ನುವ ಅವರಿಗೆ ಪ್ರತಿಮೆ ಮಾಡುವುದು ಸವಾಲು ಇದ್ದಂತೆ. ಪ್ರತಿಸಲವೂ ಕೃತಿಯ ಪ್ರತಿ ಸೃಷ್ಟಿಸುವಾಗಲೂ ಒತ್ತಡ ಇದ್ದೇ ಇರುತ್ತದೆ. ನಂತರ ಸಾಕಾರಗೊಂಡಾಗ ಸಿಗುವ ಸಾರ್ಥಕ್ಯ ಭಾವ ಮಾತ್ರ ಅಪರಿಮಿತ ಎನ್ನುತ್ತಾರೆ ಶಿವಕುಮಾರ್.

ಪ್ರಖ್ಯಾತ ಕನ್ನಡ ಚಿತ್ರ ನಟ ಡಾ. ರಾಜ್‌ಕುಮಾರ್ ಅವರ ಅಭಿಮಾನಿಗಳು ಹೆಚ್ಚಿರುವುದರಿಂದ ಅವರ ಪ್ರತಿಮೆಗಳಿಗೆ ಬೇಡಿಕೆಯೂ ಹೆಚ್ಚಾಗಿದೆ ಎಂದು ಈ ವರ್ಷದ ಅತಿಹೆಚ್ಚು ಪ್ರತಿಮೆ ನಿರ್ಮಾಣವಾದ ಬಗ್ಗೆ ಹೇಳುತ್ತಾರೆ.

ಮೊದಲು ಮಣ್ಣಿನ ಕಲಾಕೃತಿ ಮಾಡಿ, ಪ್ಲಾಸ್ಟರ್ ಆಫ್ ಪಾರಿಸ್‌ನಿಂದ ಅಚ್ಚು ತೆಗೆದು ಅದಕ್ಕೆ ಫೈಬರ್ ಪ್ಲಾಸ್ಟಿಂಗ್ ಮಾಡಿ ತಯಾರಿಸಬೇಕಾದ ಈ ಕ್ರಿಯೆಯಲ್ಲಿ ಇನ್ನೂ ಅನೇಕ ತಾಂತ್ರಗಳು ಅಡಗಿರುತ್ತವೆ. ಒಟ್ಟಿನಲ್ಲಿ ಒಂದು ಪ್ರತಿಮೆ ತಯಾರಾಗಬೇಕೆಂದರೆ ಮೈಯ್ಯೆಲ್ಲಾ ಕಣ್ಣಾಗಿರಬೇಕಾಗುತ್ತದೆ.

ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ಹೊರ ತರುತ್ತಿರುವುದು ನಿಜಕ್ಕೂ ವಿಶೇಷ. ವ್ಯಕ್ತಿಯ ತದ್ರೂಪದಂತೆ ಪ್ರತಿಮೆ ಮಾಡುವುದರಲ್ಲಿ ಹೆಗ್ಗಳಿಕೆಯಿಲ್ಲ, ಜೀವಂತ ಪ್ರತಿಮೆಯೇನೊ ಎಂದು ನೋಡುಗರನ್ನು ನಿಬ್ಬೆರಗಾಗಿ ಮಾಡುವುದರಲ್ಲೇ ಕಲೆಯ ಸಾರ್ಥಕತೆ ಅಡಗಿದೆ ಆದ್ದರಿಂದ ಈ ನಿಟ್ಟಿನಲ್ಲಿ ಕೆಲಸ ಮಾಡುವುದಷ್ಟೇ ಕಲಾವಿದನ ಕರ್ತವ್ಯ ಎನ್ನುತ್ತಾರೆ.

ಮನುಷ್ಯನಿಗೆ ಹಣ ಮುಖ್ಯ ಅಲ್ಲ. ನಂಬಿಕೆ ಮುಖ್ಯ. ತನ್ನನ್ನು ತಾನು ಗುರುತಿಸಿಕೊಳ್ಳುವುದು ಮುಖ್ಯ. ಆದ್ದರಿಂದ ಅದನ್ನು ಉಳಿಸಿಕೊಳ್ಳುವತ್ತ ಶ್ರಮವಹಿಸಿ ಕಾಯಕ ಮಾಡಿದರೆ ಸಂತೋಷ, ಆತ್ಮತೃಪ್ತಿ ಎಲ್ಲವೂ ತಾನಾಗಿಯೇ ಒಲಿಯುತ್ತದೆ. ಆದ್ದರಿಂದ ಇಂತಹ ವ್ಯಕ್ತಿ, ಇಂತಹ ವಿನ್ಯಾಸದಲ್ಲಿ ಪ್ರತಿಮೆ ಬೇಕೆಂದು ಕೇಳಿ ಬಂದವರ ಅನುಕೂಲಕ್ಕೆ ತಕ್ಕಂತೆ, ಅವರ ಮೆಚ್ಚುಗೆಗೆ ತಕ್ಕಂತೆ ಪ್ರತಿಮೆಗಳನ್ನು ತಯಾರಿಸುವುದರಲ್ಲಿ ಸದಾ ಸಿದ್ಧ ಎನ್ನುತ್ತಾರೆ ಶಿವಕುಮಾರ್.

ಪ್ರತಿಕ್ರಿಯಿಸಿ (+)