ಕೆಂಪೇಗೌಡರ ಚರಿತ್ರೆ ಸೂಕ್ತವಾಗಿ ಬರೆದಿಲ್ಲ

ಶನಿವಾರ, ಜೂಲೈ 20, 2019
28 °C

ಕೆಂಪೇಗೌಡರ ಚರಿತ್ರೆ ಸೂಕ್ತವಾಗಿ ಬರೆದಿಲ್ಲ

Published:
Updated:

ಬೆಂಗಳೂರು: `ಜಾತಿವಾದಿ ಹಾಗೂ ಕೋಮುವಾದಿ ಇತಿಹಾಸಕಾರರು ನಾಡಪ್ರಭು ಕೆಂಪೇಗೌಡರ ಚರಿತ್ರೆಯನ್ನು ಸೂಕ್ತವಾಗಿ ಬರೆದಿಲ್ಲ. ಅವರ ಅದ್ಭುತ ಇತಿಹಾಸ ಚಿತ್ರಿಸುವ ಬದಲು ಕೈ ಕೊಟ್ಟಿದ್ದಾರೆ~ ಎಂದು `ರಾಜ್ಯ ಮಾನವ ಹಕ್ಕುಗಳ ಆಯೋಗ~ದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ನಾಯಕ್ ತೀವ್ರವಾಗಿ ಟೀಕಿಸಿದರು.`ಕನ್ನಡ ಪತ್ರಿಕಾ ಕಲಾ ಸಂಸ್ಕೃತಿ ವೇದಿಕೆ~ ಹಾಗೂ `ಭಾರತ ಯುವ ಕೇಂದ್ರ~ವು ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಕೆಂಪೇಗೌಡರ 500ನೇ ಜಯಂತ್ಯುತ್ಸವ ಅಂಗವಾಗಿ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, `ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯಕ್ಕೆ ಸ್ವಾಮಿನಿಷ್ಠರಾಗಿ ಆಡಳಿತ ನಡೆಸಿದರು. ವಿಜಯನಗರ ಸಾಮ್ರಾಜ್ಯದ ಅಂತ್ಯದಲ್ಲಿಯೂ ಸಹಾಯಕ್ಕೆ ಧಾವಿಸಿದ್ದರು. ನಾಡಪ್ರಭುಗಳಲ್ಲೇ ಶ್ರೇಷ್ಠರಾಗಿದ್ದ ಅವರಿಗೆ ಇತಿಹಾಸದಲ್ಲಿ ಸಿಗಬೇಕಾದ ಮಾನ್ಯತೆ ದೊರೆತಿಲ್ಲ~ ಎಂದು ಅವರು ವಿಷಾದಿಸಿದರು.`ಸುಂದರ ನಗರದ ನಿರ್ಮಾಣ ಕೆಂಪೇಗೌಡರ ಕನಸಾಗಿತ್ತು. ಆದರೆ ಇಂದಿನ ನಗರದ ಪರಿಸ್ಥಿತಿಗೂ 50 ವರ್ಷದ ಹಿಂದಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಾಗಿದೆ. ವಾಹನಗಳು ಉಗುಳುವ ಹೊಗೆ ಹಾಗೂ ರಸ್ತೆಯಲ್ಲಿ ಏಳುವ ದೂಳಿನಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಅಧಿಕಾರಶಾಹಿಗಳಿಗೆ ಎಲ್ಲವೂ ಸಿಗುತ್ತದೆ. ಆದರೆ ನಗರದ ಜನಸಾಮಾನ್ಯರಿಗೆ ಕುಡಿಯುವ ನೀರು ಇಂದಿಗೂ ಪೂರೈಸುವುದು ಸಾಧ್ಯವಾಗುತ್ತಿಲ್ಲ. ಹೀಗಾದರೆ ಯಾವ ಪುರುಷಾರ್ಥಕ್ಕೆ ಬೆಂಗಳೂರನ್ನು ಬೆಳೆಸಬೇಕು~ ಎಂದು ಆಕ್ರೋಶ ವ್ಯಕ್ತಪಡಿಸಿದರು.`ಒಂದು ಕಾಲಕ್ಕೆ ಬೆಂಗಳೂರು ಉದ್ಯಾನ ನಗರಿಯಾಗಿತ್ತು. ಆದರೆ ಇಂದು ಎಲ್ಲೆಲ್ಲಿಯೂ ಕಾಂಕ್ರೀಟ್ ಕಾಡು ತುಂಬಿಕೊಂಡಿವೆ. ಬಡಾವಣೆಗಳ ಮೇಲೆ ಬಡಾವಣೆಗಳು ಬೆಳೆಯುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆಯುತ್ತಾ ಹೋದರೆ ಬೆಂಗಳೂರಿನ ಬಡಾವಣೆಗಳು ತುಮಕೂರು ಜಿಲ್ಲೆಯ ತಿಪಟೂರು ತಲುಪಬಹುದು~ ಎಂದು ವ್ಯಂಗ್ಯವಾಡಿದರು.`ಗಾರ್ಡನ್ ಸಿಟಿ ಮಾಡುತ್ತೇವೆನ್ನುವ ಬೂಟಾಟಿಕೆಯ ಮಾತುಗಳು ಬೇಡ. ಅದನ್ನು ಸಾಧಿಸಿ ತೋರಿಸಬೇಕು~ ಎಂದು ಪುರಪಿತೃಗಳಿಗೆ ಸಲಹೆ ನೀಡಿದರು.ಹಿರಿಯ ಗಾಯಕಿ ಶ್ಯಾಮಲಾ ಜಿ.ಭಾವೆ, ಚಿತ್ರ ಸಾಹಿತಿ ಶಿವಶಂಕರ್ ಸೇರಿದಂತೆ ಹಲವು ಗಣ್ಯರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳನ್ನೂ ಪುರಸ್ಕರಿಸಲಾಯಿತು.

ಮೇಯರ್ ಪಿ.ಶಾರದಮ್ಮ, ದೂರದರ್ಶನ ವಾಹಿನಿಯ ಉಪ ಮಹಾನಿರ್ದೇಶಕ ಮಹೇಶ್ ಜೋಶಿ ಅವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry