ಶನಿವಾರ, ಡಿಸೆಂಬರ್ 14, 2019
21 °C

ಕೆಂಪೇಗೌಡ ಬಡಾವಣೆ: ಮಾರ್ಚ್ ವೇಳೆಗೆ ಸಿದ್ಧ

ಶಿವರಾಂ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಪೇಗೌಡ ಬಡಾವಣೆ: ಮಾರ್ಚ್ ವೇಳೆಗೆ ಸಿದ್ಧ

ಬೆಂಗಳೂರು: ನೆತ್ತಿಯ ಮೇಲೊಂದು ಸೂರು ಕಲ್ಪಿಸಿಕೊಳ್ಳಲು ಕಾದು ಕುಳಿತಿರುವ ವಸತಿರಹಿತರಿಗೆ ನಿವೇಶನ ಅಥವಾ ವಸತಿ ಸಮುಚ್ಛಯ ನಿರ್ಮಿಸುವ ಉದ್ದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ರೂಪಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆ ರಚನೆ 2012ರ ಮಾರ್ಚ್ ವೇಳೆಗೆ ಅಂತಿಮ ರೂಪ ಪಡೆಯುವ ಸಾಧ್ಯತೆಯಿದೆ.ಮಾಗಡಿ ರಸ್ತೆ ಹಾಗೂ ಮೈಸೂರು ರಸ್ತೆ ಮಧ್ಯ ಭಾಗದಲ್ಲಿ ಬರುವಂತಹ 12 ಗ್ರಾಮಗಳ 4043.25 ಎಕರೆ ಜಮೀನನ್ನು ಈ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲು ಪ್ರಾಧಿಕಾರ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಜಮೀನು ನೀಡಲಿರುವ ರೈತರಿಗೆ ಈಗಾಗಲೇ ಭೂ ಪರಿಹಾರವನ್ನೂ ಘೋಷಿಸಿದೆ.ಅಂದಾಜು 2639 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬಡಾವಣೆ ನಿರ್ಮಿಸಲು ಬಿಡಿಎ ನಿರ್ಧರಿಸಿದ್ದು, ವಿವಿಧ ಅಳತೆಯ 60,879 ನಿವೇಶನಗಳನ್ನು ಹಂಚಿಕೆ ಮಾಡಲು ಉದ್ದೇಶಿಸಿದೆ. ಆದರೆ, ಈ ನಡುವೆ ನಿವೇಶನಗಳ ಜತೆಗೆ ವಸತಿ ಸಮುಚ್ಛಯಗಳನ್ನೂ ನಿರ್ಮಿಸಿ ಹಂಚಿಕೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಒಲವು ತೋರುತ್ತಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.ಕೆಂಗೇರಿ ವ್ಯಾಪ್ತಿಯ ಕೊಮ್ಮಘಟ್ಟ, ಕೃಷ್ಣಸಾಗರ, ಭೀಮನಕುಪ್ಪೆ, ರಾಮಸಾಗರ, ಸೂಲಿಕೆರೆ, ಕೆಂಚನಪುರ, ರಾಮಸಂದ್ರ, ಕೊಮ್ಮಘಟ್ಟ, ಚಳ್ಳಘಟ್ಟ, ಶೀಗೆಹಳ್ಳಿ, ಕನ್ನಹಳ್ಳಿ, ಕೊಡಿಗೆಹಳ್ಳಿ ಹಾಗೂ ಮಂಗನಹಳ್ಳಿ ಗ್ರಾಮಗಳಲ್ಲಿ 4043.27 ಎಕರೆ ಜಮೀನನ್ನು ಈ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಮಂಗನಹಳ್ಳಿಯಲ್ಲಿ ಮಾತ್ರ ಎಕರೆಗೆ ಒಂದು ಕೋಟಿ ರೂಪಾಯಿ ಪರಿಹಾರ ನಿಗದಿಪಡಿಸಿದ್ದರೆ, ಉಳಿದ ಗ್ರಾಮಗಳಲ್ಲಿ ಎಕರೆಗೆ 80 ಲಕ್ಷ ರೂಪಾಯಿ ಭೂ ಪರಿಹಾರ ಘೋಷಿಸಲಾಗಿದೆ.ಬಡಾವಣೆ ನಿರ್ಮಾಣಕ್ಕಾಗಿ 2008ರ ಮೇ 21ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಸುಮಾರು 11 ಸಾವಿರ ಆಕ್ಷೇಪಣಾ ಅರ್ಜಿಗಳು ಬಂದಿದ್ದವು. ಈ ಅರ್ಜಿಗಳ ಪರಿಶೀಲನೆ ನಂತರ 2010ರ ಫೆಬ್ರುವರಿ 18ರಂದು ಅಂತಿಮ ಅಧಿಸೂಚನೆ ಹೊರಡಿಸಲಾಯಿತು. ಬಹಳ ದಿನಗಳ ತರುವಾಯ ಬಿಡಿಎ ಭೂ ಪರಿಹಾರವನ್ನು ಘೋಷಿಸಿತು. ಇದೀಗ ರೈತರ ಒಪ್ಪಿಗೆ ಮೇರೆಗೆ ಜಮೀನು ನೀಡಲಿರುವವರಿಗೆ ಭೂ ಪರಿಹಾರ ನೀಡುವ ಪ್ರಕ್ರಿಯೆ ಆರಂಭಿಸಲು ಬಿಡಿಎ ಚಿಂತಿಸುತ್ತಿದೆ.ಆದರೆ, ರೈತರಿಗೆ ಅಧಿಕ ಪರಿಹಾರ ನೀಡಬೇಕಾಗಿರುವುದರಿಂದ ನಿವೇಶನರಹಿತರು ದುಬಾರಿ ಬೆಲೆ ತೆತ್ತು ನಿವೇಶನ ಅಥವಾ ವಸತಿ ಸಮುಚ್ಛಯ ಪಡೆಯುವುದು ಅನಿವಾರ್ಯವಾಗಲಿದೆ. ಇನ್ನು, ಸದ್ಯಕ್ಕೆ ಬಿಡಿಎ ಹಣಕಾಸಿನ ಪರಿಸ್ಥಿತಿಯೂ ಅಷ್ಟು ಉತ್ತಮ ಸ್ಥಿತಿಯಲ್ಲಿಲ್ಲ. ಇದೇ ಕಾರಣಕ್ಕೆ ಬೃಹತ್ ಮೊತ್ತದ ಭೂ ಪರಿಹಾರ ನೀಡಿ ಬಡಾವಣೆ ನಿರ್ಮಾಣ ಯೋಜನೆಯನ್ನು ಸಾಕಾರಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.ಶೇ 40ರಷ್ಟು ಭೂಮಿ ರೈತರಿಗೆ:  ಬಡಾವಣೆಗೆ ಭೂಮಿ ಹಸ್ತಾಂತರಿಸಲಿರುವ ರೈತರಿಗೆ ಶೇ 40ರಷ್ಟು ಅಭಿವೃದ್ಧಿಪಡಿಸಿದ ಜಾಗವನ್ನು ಮೀಸಲಿಡಲಾಗುತ್ತದೆ. ಒಂದು ಎಕರೆ ಜಮೀನು ನೀಡಲಿರುವ ರೈತರಿಗೆ ನಾಲ್ಕು ನಿವೇಶನಗಳನ್ನು ಉಚಿತವಾಗಿ ಬಿಟ್ಟುಕೊಡಲಾಗುತ್ತದೆ. ಈ ಒಪ್ಪಂದಕ್ಕೆ ಕೆಲವು ರೈತರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ರೈತರು ತಾವು ಜಮೀನು ನೀಡಲಿರುವ ಜಾಗದಲ್ಲಿಯೇ ನಿವೇಶನ ನೀಡುವಂತೆ ಪಟ್ಟು ಹಿಡಿದಿದ್ದಾರೆ.ಆದರೆ, ಈ ಹಿಂದೆ ಬೇರೊಂದು ಬಡಾವಣೆಗೆ ಜಮೀನು ಹಸ್ತಾಂತರಿಸಿದ ರೈತರು ಅಲ್ಲಿಯೇ ನಿವೇಶನ ಪಡೆದು ದುಬಾರಿ ಬೆಲೆಗೆ ಮಾರಾಟ ಮಾಡಿದ್ದಾರೆ. ಇದರಿಂದ ಪಾಠ ಕಲಿತಿರುವ ಬಿಡಿಎ ರೈತರ ಬೇಡಿಕೆಯನ್ನು ಒಪ್ಪುವ ಸ್ಥಿತಿಯಲ್ಲಿಲ್ಲ. ಬದಲಿಗೆ, ಮನವೊಲಿಕೆ ಮೂಲಕ ಭೂಮಿ ಪಡೆಯಲು ಪ್ರಯತ್ನಿಸುತ್ತಿದೆ. ರೈತರ ಮನವೊಲಿಕೆ, ಭೂ ಪರಿಹಾರ ವಿತರಣೆ ಬಳಿಕವಷ್ಟೇ ಬಡಾವಣೆ ರಚನೆಗೆ ಹಾದಿ ಸುಗಮವಾಗಲಿದೆ.ವಸತಿ ಸಮುಚ್ಛಯ ನಿರ್ಮಾಣಕ್ಕೆ ಸರ್ಕಾರದ ಚಿಂತನೆ: ಈ ನಡುವೆ, ನಿವೇಶನಗಳ ಜತೆಗೆ ಎತ್ತರದ ವಸತಿ ಸಮುಚ್ಛಯಗಳನ್ನು ನಿರ್ಮಿಸಿ ಹಂಚಿಕೆ ಮಾಡಲು ಸರ್ಕಾರ ಒಲವು ತೋರುತ್ತಿದೆ. ಆದರೆ, ಸಾರ್ವಜನಿಕರಿಂದ ನಿವೇಶನಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ. ಹೀಗಾಗಿ, ಎಷ್ಟು ನಿವೇಶನ ವಿಂಗಡಿಸಬೇಕು ಅಥವಾ ವಸತಿ ಸಮುಚ್ಛಯ ನಿರ್ಮಿಸಬೇಕು ಎಂಬುದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಿದೆ.ಬೆಂಗಳೂರಿನಲ್ಲಿ ಸುಮಾರು ಎರಡೂವರೆ ಲಕ್ಷ ನಿವೇಶನರಹಿತರು ಇರಬಹುದು ಎಂದು ಅಂದಾಜಿಸಿರುವ ಬಿಡಿಎ, ವಸತಿರಹಿತರಿಗಾಗಿ ರೂಪಿಸಿರುವ 2015ರ ಮಾಸ್ಟರ್ ಪ್ಲಾನ್ ಪ್ರಕಾರ ನಗರದ ಸುತ್ತಮುತ್ತ ಐದು ಹೊಸ ಬಡಾವಣೆಗಳನ್ನು ರಚಿಸಿ ನಿವೇಶನರಹಿತರಿಗೆ ನಿವೇಶನ ಅಥವಾ ವಸತಿ ಸಮುಚ್ಛಯ ಹಂಚಿಕೆ ಮಾಡಲು ಉದ್ದೇಶಿಸಿದೆ. ಭೂ ಮಾಲೀಕರ ಸಹಭಾಗಿತ್ವ ಹಾಗೂ ಸಹಕಾರದೊಂದಿಗೆ ಈ ಬಡಾವಣೆಗಳನ್ನು ಪರಿಸರ ಸ್ನೇಹಿಯಾಗಿ ನಿರ್ಮಿಸಲು ಉದ್ದೇಶಿಸಿದೆ. ಆದರೆ, ಸದ್ಯಕ್ಕೆ ಐದು ಹೊಸ ಬಡಾವಣೆಗಳ ಪೈಕಿ ನಾಡಪ್ರಭು ಕೆಂಪೇಗೌಡ ಬಡಾವಣೆ ರಚನೆಗೆ ಮಾತ್ರ ಸರ್ಕಾರ ಅನುಮೋದನೆ ನೀಡಿದೆ.

ಪ್ರತಿಕ್ರಿಯಿಸಿ (+)