ಮಂಗಳವಾರ, ಜೂನ್ 15, 2021
24 °C

ಕೆ.ಆರ್.ಪುರಂ: ನೀರಿಗಾಗಿ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: ಇಲ್ಲಿನ ಬಹುತೇಕ ಬಡಾವಣೆಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ತೀವ್ರ ಸಮಸ್ಯೆಯಿಂದಾಗಿ ನಾಗರಿಕರು ನಿತ್ಯ ಪರದಾಡುವಂತಾಗಿದೆ.ಜಲಮಂಡಳಿಯಿಂದ ವಾರಕ್ಕೆ ಎರಡು ಬಾರಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ನೀರು ಬಿಟ್ಟ ತಕ್ಷಣ ಆಜುಬಾಜಿನ ಬಡಾವಣೆಯವರೂ ಬಿಂದಿಗೆ ಹಿಡಿದು ಬರುತ್ತಾರೆ. ಹಾಗಾಗಿ ಮನೆಗೆ 3ರಿಂದ 4 ಬಿಂದಿಗೆ ಮಾತ್ರ ನೀರು ಸಿಗುತ್ತಿದೆ ಎಂದು ಸ್ಥಳೀಯ ನಿವಾಸಿ ಜಯಮ್ಮ ಅವರು ಅಳಲು ತೋಡಿಕೊಂಡರು. `ಉಚಿತ ಟ್ಯಾಂಕರ್ ನೀರು ಮರಿಚಿಕೆಯಾಗಿದೆ. ದೂರವಾಣಿ ಕರೆ ಮಾಡಿದ ನಂತರ ಯಾವುದೋ ವೇಳೆಯಲ್ಲಿ ಟ್ರ್ಯಾಕ್ಟರ್ ಬರುತ್ತಿದೆ. ಅದು ಕೂಡ ನಿಗದಿತ ಸ್ಥಳದಲ್ಲಿ ನಿಲ್ಲುವುದಿಲ್ಲ. ಅಂತಹ ಸಂದರ್ಭದಲ್ಲಿ ನೀರು ಸಿಗುವುದಿಲ್ಲ. ಒಂದು ಹಂತದಲ್ಲಿ ಗಲಾಟೆಯಾದ ಕ್ಷಣ ಟ್ರ್ಯಾಕ್ಟರ್ ಬಂದ ದಾರಿ ಹಿಡಿಯುತ್ತಿದೆ. ಒಂದು ಟ್ರ್ಯಾಕ್ಟರ್ ನೀರಿಗೆ 400ರಿಂದ 500ರೂಪಾಯಿ ಭರಿಸಿ ಖರೀದಿಸಲು ಕಷ್ಟ~ ಎಂದು ಶಾಂತಮ್ಮ ಹೇಳಿದರು.`ಐದಾರು ವರ್ಷಗಳ ಹಿಂದೆ ಐದು ಸಾವಿರ ರೂಪಾಯಿಗಳನ್ನು ಕಾವೇರಿ ನೀರು ಪೂರೈಕೆಗಾಗಿ ಜಲಮಂಡಳಿಗೆ ಪಾವತಿಸಿದ್ದೇವೆ. ಆದರೆ, ಹಣಕ್ಕೆ ಬಡ್ಡಿಯೂ ಇಲ್ಲ. ನೀರಿನ ಪೂರೈಕೆಯೂ ಇಲ್ಲ. ಕಂದಾಯ ಮಾತ್ರ ಕಾಲಕಾಲಕ್ಕೆ ಸಂದಾಯ ಮಾಡುತ್ತಿದ್ದೇವೆ~ ಎಂದು ರಾಮಯ್ಯರೆಡ್ಡಿ, ಕೃಷ್ಣಾರೆಡ್ಡಿ ಹಾಗೂ ರಾಮಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರ ಜತೆಗೆ, ಅದಾಲತ್‌ನಲ್ಲಿ ಭಾಗವಹಿಸಿ ಮನವಿ ಮಾಡಿದರೂ ಬೇಡಿಕೆ ಈಡೇರಿಲ್ಲ ಎಂದು ವಿಭೂತಿಪುರ, ರಮೇಶ್‌ನಗರ ಬಡಾವಣೆಗಳ ನಿವಾಸಿಗಳು ದೂರಿದ್ದಾರೆ.

ಆದರೆ, ನೀರಿನ ಸಮಸ್ಯೆಗೆ ಜನಪ್ರತಿನಿಧಿಗಳು ಹಾಗೂ ಜಲಮಂಡಳಿ ಅಧಿಕಾರಿಗಳು ನೀಡುವ ಉತ್ತರ ಒಂದೇ ರೀತಿಯಾಗಿದೆ. ಮೂರುವರೆ ಲಕ್ಷದಷ್ಟಿದ್ದ ಜನಸಂಖ್ಯೆ ಈಗ ಆರು ಲಕ್ಷಕ್ಕೆ ಏರಿದೆ.ಅಸಮರ್ಪಕ ನೀರು ಪೂರೈಕೆಯಿಂದ ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಉಚಿತ ಟ್ರ್ಯಾಕ್ಟರ್ ನೀರು ಪೂರೈಕೆಗೆ ಈಗಾಗಲೇ ಕ್ರಮಗೊಳ್ಳಲಾಗಿದೆ. ಒಂದು ವಾರ್ಡ್‌ನಲ್ಲಿ 8ರಿಂದ 10 ಕೊಳವೆ ಬಾವಿಗಳನ್ನು ಕೊರೆಸಲು ಪಾಲಿಕೆ ಸಭೆಯಲ್ಲಿ ಅನುಮತಿ ನೀಡಲಾಗಿದೆ. ಅಗತ್ಯ ಇರುವ ಕಡೆ ಕೊಳವೆ ಬಾವಿಗಳನ್ನು ಕೊರೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.