ಕೆ.ಆರ್.ಪುರ ವಿಶ್ವೇಶ್ವರ ಬಡಾವಣೆ; ಕನಸಾಗಿರುವ ಮೂಲಸೌಕರ್ಯ

7

ಕೆ.ಆರ್.ಪುರ ವಿಶ್ವೇಶ್ವರ ಬಡಾವಣೆ; ಕನಸಾಗಿರುವ ಮೂಲಸೌಕರ್ಯ

Published:
Updated:

ಕೃಷ್ಣರಾಜಪುರ: ವಾರ್ಡ್ 26 ರ ವ್ಯಾಪ್ತಿಯ ವಿಶ್ವೇಶ್ವರ ಬಡಾವಣೆಯಲ್ಲಿ ನಿವಾಸಿಗಳು ಕಾಲಕಾಲಕ್ಕೆ ಕಂದಾಯ ಪಾವತಿಸುತ್ತಿದ್ದರೂ ಮೂಲ ಸೌಕರ್ಯದ ಕೊರತೆಯಿಂದ ಅನಾರೋಗ್ಯಕರ ಪರಿಸರದಲ್ಲಿ ನೆಲೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಅಸಮರ್ಪಕ ರಸ್ತೆ, ಕುಡಿವ ನೀರಿನ ಕೊರತೆ, ಒಳ ಚರಂಡಿ ಅವ್ಯವಸ್ಥೆ, ಮೋರಿಗಳು ಸ್ವಚ್ಛತೆ ಕಾಣದೆ ಕೊಳಚೆ ನೀರು ಸರಿಯಾಗಿ ಹರಿಯದೆ ಸೊಳ್ಳೆಗಳ ಕಾಟ, ಮಳೆಗಾಲದಲ್ಲಿ ಮನೆಗಳೊಳಗೆ ಹರಿದು ಬರುವ ಹಾವುಗಳು.. ಇಂತಹ ದಾರುಣ ಪರಿಸ್ಥಿತಿಯಲ್ಲಿ ಜನತೆ ಬದುಕು ಸವೆಸಬೇಕಾದ ಪರಿಸ್ಥಿತಿ ತಲೆದೋರಿದೆ.ಇನ್ನು ರಸ್ತೆಗಳು ತಗ್ಗು- ದಿಣ್ಣೆ, ಹಳ್ಳ ಕೊಳ್ಳ ಹಾಗೂ ಹೊಂಡಗಳಿಂದ ಕೂಡಿದ್ದು, ವಯೋವೃದ್ಧರು ಬೀಳುವ ಸಂದರ್ಭಗಳೇ ಹೆಚ್ಚಾಗಿವೆ. ಕೆಲವರು ಆಯತಪ್ಪಿ ಮೊಣಕಾಲು ನೋವಿನಿಂದ ನರಳುತ್ತಿದ್ದಾರೆ. ಕುಡಿಯುವ ನೀರು ಪೂರೈಕೆಯಿಲ್ಲದೆ ಟ್ರ್ಯಾಕ್ಟರ್ ನೀರಿಗಾಗಿ 1600 ರೂಪಾಯಿ ಭರಿಸಬೇಕಾಗಿದೆ. ಉಚಿತ ಟ್ಯಾಂಕರ್ ನೀರು ಮರೀಚಿಕೆಯಾಗಿದೆ. ಈ ಬಗ್ಗೆ ಬಿಬಿಎಂಪಿಯ ಗಮನಸೆಳೆದು ಹಲವು ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶನ್ ಬೇಸರ ವ್ಯಕ್ತಪಡಿಸಿದರು.ಬಿಬಿಎಂಪಿಗೆ ಚುನಾವಣೆ ನಡೆದು 15 ತಿಂಗಳಾದರೂ ಪಾಲಿಕೆ ಸದಸ್ಯರು ಒಂದು ಬಾರಿಯೂ ಬಡಾವಣೆಗೆ ಬಂದಿಲ್ಲ. ಕಚೇರಿಗೆ ದೂರು ನೀಡಿದರೆ, ಅವರು ಅಭಿವೃದ್ಧಿಗೆ ಹಣ ಬಿಡುಗಡೆಯಾಗಿಲ್ಲ ಎನ್ನುತ್ತಾರೆ. ಆದರೆ, ಎಲ್ಲ ಬಡಾವಣೆಗಳು ಅಭಿವೃದ್ಧಿ ಕಾಣುತ್ತಿದ್ದರೂ ಈ ಬಡಾವಣೆ ಮಾತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಲಲಿತಮ್ಮ ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry