ಸೋಮವಾರ, ಜೂನ್ 21, 2021
29 °C

ಕೆ.ಆರ್.ಪುರ: 5 ಕೆರೆಗಳ ಅಭಿವೃದ್ಧಿಗೆ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: ಕೆ.ಆರ್.ಪುರ ವ್ಯಾಪ್ತಿಗೆ ಸೇರಿದ ಬಿ.ನಾರಾಯಣಪುರ, ದೊಡ್ಡನೆಕ್ಕುಂದಿ, ವಿಭೂತಿಪುರ, ಬೆನ್ನಿಗಾನಹಳ್ಳಿ ಮತ್ತು ಗಂಗಶೆಟ್ಟಿ ಕೆರೆಗಳನ್ನು ಸದ್ಯದಲ್ಲಿಯೇ ಅಭಿವೃದ್ಧಿಗೊಳಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಪಾಧಿಕಾರದ ಆಯುಕ್ತ ಭರತ್‌ಲಾಲ್ ಮೀನಾ ಭರವಸೆ ನೀಡಿದರು.ಐದು ಕೆರೆಗಳನ್ನು ಪರಿಶೀಲನೆ ನಡೆಸಿದ ನಂತರ ಸ್ಥಳೀಯ ಬಿಬಿಎಂಪಿ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಐದು ಕೆರೆಗಳಲ್ಲಿಯೂ ಹೂಳು ತುಂಬಿದ್ದು ಕಲುಷಿತ ನೀರಿನಿಂದ ಜೊಂಡು ಬೆಳೆದು ಸಾಂಕ್ರಾಮಿಕ ರೋಗಗಳ ಉಗಮ ಸ್ಥಾನವಾಗಿದೆ. ಕೆರೆಯ ಹೂಳು ತೆಗೆಸಿ ನೀರನ್ನು ಶುದ್ಧಗೊಳಿಸಿ ಕ್ರಮೇಣ ಹಂತ-ಹಂತವಾಗಿ ಸಾರ್ವಜನಿಕ ಬಳಕೆಯ ತಾಣವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಅವರು ಆಶ್ವಾಸನೆ ನೀಡಿದರು.  ಇದಕ್ಕೂ ಮುನ್ನ ಮಾತನಾಡಿದ ಶಾಸಕ ಎನ್.ಎಸ್.ನಂದೀಶರೆಡ್ಡಿ, ಕೆರೆಗಳ ಅಭಿವೃದ್ಧಿ ಸಮರೋಪಾದಿಯಲ್ಲಿ ನಡೆಯಬೇಕಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ವರ್ತುಲ ರಸ್ತೆಗಳಿಗೆ ಹೊಂದಿಕೊಂಡಂತಿರುವ ಕೆರೆಗಳಲ್ಲಿನ ಕಲುಷಿತ ನೀರಿನಿಂದ ಕೆಟ್ಟ ವಾಸನೆ ಬರುತ್ತಿದೆ. ಹೀಗಾಗಿ ಶುಚಿತ್ವ, ನೈರ್ಮಲ್ಯ ಕಾಣದೆ ಪರಿಸರದ ಮೇಲೆ ಮರಿಣಾಮ ಬೀರುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕೆ.ಆರ್.ಪುರ ರೈಲ್ವೆ ನಿಲ್ದಾಣದ ಬಳಿ ನಿತ್ಯ ಬೆಳಿಗ್ಗೆ 7 ಗಂಟೆಯಿಂದಲೇ ದಟ್ಟಣೆ ವಾಹನ ಸಂಚಾರ ಉಂಟಾಗಿ ಸಾರ್ವಜನಿಕರು ರಸ್ತೆ ದಾಟಲು ಪರದಾಡಬೇಕಿದೆ. ಹೀಗಾಗಿ 90 ಲಕ್ಷ ರೂಪಾಯಿ ವೆಚ್ಚದಲ್ಲಿ ಪಾದಚಾರಿ ಮೇಲ್ಸೇಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿಯುವ ಹಂತದಲ್ಲಿದೆ ಎಂದು ಅವರು ತಿಳಿಸಿದರು. ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ವೇಣುಗೋಪಾಲ್, ಪಾಲಿಕೆ ಸದಸ್ಯ ಎಸ್.ಎಸ್.ಪ್ರಸಾದ್, ಸುಕುಮಾರ್, ಎನ್.ವೀರಣ್ಣ ಸೇರಿದಂತೆ ಬಿಡಿಎ, ಜಲಮಂಡಳಿ ಇತರೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.