ಭಾನುವಾರ, ಡಿಸೆಂಬರ್ 15, 2019
26 °C

ಕೆ.ಆರ್.ಮಾರುಕಟ್ಟೆಯಲ್ಲಿ ವಿದ್ಯಾರ್ಥಿಗಳ ಶ್ರಮದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್.ಮಾರುಕಟ್ಟೆಯಲ್ಲಿ ವಿದ್ಯಾರ್ಥಿಗಳ ಶ್ರಮದಾನ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಭಾನುವಾರ ಆಯೋಜಿಸಿದ್ದ `ಸ್ವಚ್ಛ ಬೆಂಗಳೂರು ಅಭಿಯಾನ'ದಲ್ಲಿ ಮಾತಾ ಅಮೃತಾನಂದಮಯಿ ಶಿಕ್ಷಣ ಸಂಸ್ಥೆಗಳ ಸುಮಾರು 800 ವಿದ್ಯಾರ್ಥಿಗಳು ಕೆ.ಆರ್. ಮಾರುಕಟ್ಟೆಯಲ್ಲಿ ಸಂಗ್ರಹವಾಗಿದ್ದ ಕಸವನ್ನು ತೆರವುಗೊಳಿಸಿದರು.ಬೆಳಿಗ್ಗೆ 8 ಗಂಟೆಗೆ ಸ್ವಚ್ಛತಾ ಕಾರ್ಯಕ್ರಮ ಆರಂಭಿಸಿದ ವಿದ್ಯಾರ್ಥಿಗಳು 11 ಗಂಟೆ ಸುಮಾರಿಗೆ 12 ಟ್ರಕ್‌ಗಳಷ್ಟು ಕಸವನ್ನು ತೆರವುಗೊಳಿಸಿದರು. ಮಾರುಕಟ್ಟೆಯ ಪ್ರವೇಶ ದ್ವಾರ, ಒಳಭಾಗ ಹಾಗೂ ಸಮೀಪದ ಮೇಲ್ಸೇತುವೆಯ ಕೆಳಭಾಗವನ್ನು ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು.ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್‌ರಾವ್ ಮಾರುಕಟ್ಟೆಗೆ ಭೇಟಿ ನೀಡಿದರು. ಈ ವೇಳೆ ಮಾರುಕಟ್ಟೆಯ ವ್ಯಾಪಾರಿಗಳು ಅಲ್ಲಿನ ಅವ್ಯವಸ್ಥೆ ಬಗ್ಗೆ ಅವರಿಗೆ ದೂರು ನೀಡಿದರು.`ಮಾರುಕಟ್ಟೆಯಲ್ಲಿ ವ್ಯವಸ್ಥಿತವಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಮಳೆ ಬಂದರೆ ಮಾರುಕಟ್ಟೆಯ ಒಳಭಾಗದಲ್ಲಿ ನೀರು ತುಂಬುತ್ತದೆ. ಈ ಬಗ್ಗೆ ಅನೇಕ ಬಾರಿ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪಾಲಿಕೆಯ ಮಾರುಕಟ್ಟೆ ವಿಭಾಗದ ಅಧಿಕಾರಿ ನಾಗರಾಜು ಮತ್ತು ಸಹಾಯಕ ಕಂದಾಯ ಅಧಿಕಾರಿ ಭಾರತಿ ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವರನ್ನು ಕೂಡಲೇ ಅಮಾನತು ಮಾಡಬೇಕು' ಎಂದು ವ್ಯಾಪಾರಿಗಳು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಭಾಸ್ಕರ್‌ರಾವ್, ಪಾಲಿಕೆಯ ಆಯುಕ್ತ ಲಕ್ಷ್ಮೀನಾರಾಯಣ ಅವರಿಗೆ ಸೂಚಿಸಿದರು.`ಮಾರುಕಟ್ಟೆಯ ಒಳಭಾಗದಲ್ಲಿರುವ 8 ಹಳೆಯ ಬಾವಿಗಳಲ್ಲಿ ನೀರು ತುಂಬಿ ಸಮಸ್ಯೆಯಾಗುತ್ತಿದೆ. ಈ ಬಾವಿಗಳಲ್ಲಿರುವ ಕಲುಷಿತ ನೀರನ್ನು ತೆಗೆದು ಆ ಬಾವಿಗಳನ್ನು ಮಳೆ ನೀರು ಸಂಗ್ರಹದ ಗುಂಡಿಗಳಾಗಿ ಪರಿವರ್ತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ತಿಳಿಸಿದರು.

ಪ್ರತಿಕ್ರಿಯಿಸಿ (+)